ಮಂಗಳೂರು : ವ್ಯಕ್ತಿತ್ವ ಎಂಬುದು ಅನೇಕ ಶಕ್ತಿಗಳ ಸಂಗಮ. ಆದರ್ಶ,ಸದಾಚಾರ, ಶ್ರದ್ಧೆ, ನಿಷ್ಠೆ, ದಕ್ಷತೆ, ಎಚ್ಚರ-ಸನ್ನಿವೇಶಗಳೊಡನೆ ಹೊಂದಿಕೊಳ್ಳುವ ಸಾಮರ್ಥ್ಯ, ವೃತ್ತಿ ಪ್ರೀಯತೆ , ಪರೋಪಕಾರ ಬುದ್ಧಿ, ಪ್ರಾಮಾಣಿಕತೆಗಳು ವ್ಯಕ್ತಿತ್ವ ನಿರ್ಮಿಸುವ ಶಕ್ತಿಗಳು. ಈ ನಿಟ್ಟಿನಲ್ಲಿ ನೋಡಿದಾಗ ನಮಗೆ ವ್ಯಕ್ತಿ ಮುಖ್ಯವಲ್ಲ ವ್ಯಕ್ತಿತ್ವ ಮುಖ್ಯ ಎಂಬುದು ಅರ್ಥವಾಗುತ್ತದೆ. ಹೂವಿಗೆ ಪರಿಮಳವಿದ್ದಂತೆ, ಮಾನವರಿಗೆ ವ್ಯಕ್ತಿತ್ವ ಅಷ್ಟೇ ಮುಖ್ಯ. ಪ್ರತಿಯೊಬ್ಬರ ಜೀವನದ ಒಳಿತು ಕೆಡಕುಗಳಿಗೆ ಅವರೇ ಶಿಲ್ಪಿಗಳಾಗಿರುತ್ತಾರೆ. ಮನುಷ್ಯ ತನ್ನ ಜೀವನವನ್ನು ತನ್ನಿಷ್ಟದಂತೆ ರೂಪಿಸಿಕೊಳ್ಳುತ್ತಾನೆ, ಅಂದರೆ ತನ್ನೆಲ್ಲ ಆಲೋಚನೆಗಳ ವಸ್ತುರೂಪವೇ ಮಾನವನಾಗಿರುತ್ತಾನೆ. ವ್ಯಕ್ತಿತ್ವವೆಂಬುದು ಹುಟ್ಟಿನಿಂದ ಸಾವಿನವರೆಗೆ ರೂಪುಗೊಳ್ಳುತ್ತಿರುತ್ತದೆ.ಈ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ಮಂಗಳಾದೇವಿ ಹಾಗೂ ಯುವವಾಹಿನಿ ಹಮ್ಮಿಕೊಂಡಿರುವ ಚತುರ್ಮುಖ ಒಂದು ಹೊಸ ಮತ್ತು ಉತ್ತಮ ಪ್ರಯತ್ನ, ಇಲ್ಲಿ ವ್ಯಕ್ತಿತ್ವ ರೂಪಿಸುವ ಶಕ್ತಿಗಳಿಗೆ ಪ್ರೇರಣೆ ನೀಡಿದೆ ಎಂದು ಲಯನ್ಸ್ ಜಿಲ್ಲೆ 317 ಡಿ ಇದರ ಜಿಲ್ಲಾ ರಾಜ್ಯಪಾಲರಾದ ಲಯನ್ ದೇವದಾಸ್ ಭಂಡಾರಿ ತಿಳಿಸಿದರು.
ಅವರು ದಿನಾಂಕ ೧೨. ೦೨. ೨೦೧೯ ರಂದು ಲಯನ್ಸ್ ಕ್ಲಬ್ ಮಂಗಳೂರು ಮಂಗಳಾದೇವಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಜಂಟಿ ಆಶ್ರಯದಲ್ಲಿ ಜರುಗಿದ ಕಾನೂನು, ರಾಜಕೀಯ, ವಿಚಾರವಾದ ಮತ್ತು ಮನಶಾಸ್ತ್ರದ ಜೊತೆ ವಿದ್ಯಾರ್ಥಿಗಳ ಮುಖಾಮುಖಿ ಸಂವಾದ ಕಾರ್ಯಕ್ರಮ ಚತುರ್ಮುಖವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಮೂರು ಮುಖ್ಯ ಧ್ಯೇಯದೊಂದಿಗೆ ಸಾಮಾಜಿಕ ಸೇವೆಯಲ್ಲಿ ೩೧ ಸಂವತ್ಸರಗಳನ್ನು ಸಾರ್ಥಕದಿಂದ ಕಳೆದು ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಯುವವಾಹಿನಿ ಮಂಗಳೂರು ಘಟಕದ ಕಾರ್ಯ ಶ್ಲಾಘನೀಯ ಎಂದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಯುವವಾಹಿನಿ(ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲ್ ತಿಳಿಸಿದರು.
ಜಿಲ್ಲಾ ಲಯನ್ಸ್ ಕಾರ್ಡಿನೇಟರ್ ಲಯನ್ ರಾಮ್ ಮೋಹನ್ ಆಳ್ವ , ಯುವವಾಹಿನಿ (ರಿ) ಮಂಗಳೂರು ಘಟಕದ ಉಪಾಧ್ಯಕ್ಷ ಚಂದ್ರಶೇಖರ್ ಕರ್ಕೇರ, ಲಯನ್ಸ್ ಕ್ಲಬ್ ಮಂಗಳೂರು ಮಂಗಳಾದೇವಿ ಉಪಾಧ್ಯಕ್ಷ ಸಂಜೋತಿ ಶೇಖ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಮಾನಸಿಕ ತುಮುಲಗಳಿಗೆ ಉತ್ತರ ಕಂಡುಕೊಳ್ಳಲಾಗದೆ ನಲುಗುತ್ತಿರುವ ಯುವ ಸಮುದಾಯಕ್ಕೆ, ಬುದ್ದಿಗೆ ಕೆಲಸ ಕೊಡದೆ ಆತುರದ ನಿರ್ಧಾರದಿಂದ ಸಮಸ್ಯೆಯ ಸುಳಿಯೊಳಗೆ ಸಿಲುಕುತ್ತಿರುವ ಯುವ ಸಮುದಾಯದ ಜೊತೆಗೆ ನೇರಾ ನೇರಾ ಮಾತುಕತೆಗೆ ವೇದಿಕೆಯನ್ನು ಸಿದ್ಧಗೊಳಿಸಲಾಗಿತ್ತು. ರಾಜಕೀಯ ಸಂವಾದದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಹಾಗೂ ದ .ಕ.ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಕಾನೂನು ವಿಭಾಗದ ಸಂವಾದದಲ್ಲಿ ಪೊಲೀಸ್ ಉಪ ಆಯುಕ್ತರಾದ ಉಮಾ ಪ್ರಶಾಂತ್ ಹಾಗೂ ಸಂಚಾರ ಪೊಲೀಸ್ ಸಹಾಯಕ ಆಯುಕ್ತರಾದ ಮಂಜುನಾಥ ಶೆಟ್ಟಿ, ವಿಚಾರವಾದ ವಿಭಾಗದ ಸಂವಾದದಲ್ಲಿ ಏನ್. ಐ. ಟಿ. ಕೆ. ನಿವೃತ್ತ ಪ್ರಾಧ್ಯಾಪಕರಾದ ಡಾ. ರಾಜೇಂದ್ರ ಉಡುಪ ಹಾಗೂ ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಪ್ರಾಧ್ಯಾಪಕರಾದ ಪಟ್ಟಾಭಿರಾಮ ಸೋಮಯಾಜಿ , ಮನಶಾಸ್ತ್ರ ವಿಭಾಗದ ಸಂವಾದದಲ್ಲಿ ಮನೋವೈದ್ಯರಾದ ಡಾ. ರವೀಶ್ ತುಂಗಾ ಹಾಗೂ ಡಾ.ಅರುಣಾ ಯಡಿಯಾಳ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದರು.
ಲಯನ್ಸ್ ಕ್ಲಬ್ ಮಂಗಳೂರು ಮಂಗಳಾದೇವಿ ಅಧ್ಯಕ್ಷ ಯಶವಂತ ಪೂಜಾರಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಯುವವಾಹಿನಿ (ರಿ) ಮಂಗಳೂರು ಘಟಕದ ಅಧ್ಯಕ್ಷ ಲಕ್ಷ್ಮೀ ನಾರಾಯಣ್ ಧನ್ಯವಾದ ನೀಡಿದರು. ಲಯನ್ಸ್ ಕ್ಲಬ್ ಮಂಗಳೂರು ಮಂಗಳಾದೇವಿ ಕಾರ್ಯದರ್ಶಿ ನರೇಶ್ ಕುಮಾರ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.