ಮಾಣಿ : ಕಳೆದೆರಡು ವರ್ಷಗಳಿಂದ ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮಹಾಕಾಳಿ ಬೆಟ್ಟು , ಬರಿಮಾರು ಗ್ರಾಮದ ನಿವಾಸಿ ದಯಾನಂದ ಪೂಜಾರಿ ಇವರ ಚಿಕಿತ್ಸೆಗಾಗಿ ನಾರಾಯಣ ಗುರು ಸೇವಾ ಸಂಘ ಮಾಣಿ ಮತ್ತು ಯುವವಾಹಿನಿ (ರಿ.)ಮಾಣಿ ಘಟಕದ ಸ್ಪಂದನ ಯೋಜನೆಯ ವತಿಯಿಂದ ಜಂಟಿಯಾಗಿ ಹತ್ತು ಸಾವಿರ ಮೊತ್ತದ ಚೆಕ್ ನೀಡಲಾಯಿತು.ನಾರಾಯಣಗುರು ಸೇವಾ ಮಾಣಿ ಇದರ ಅಧ್ಯಕ್ಷರಾದ ನಾರಾಯಣ್ ಸಾಲ್ಯಾನ್, ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷರಾದ ಹರೀಶ್ ಪೂಜಾರಿ ಬಾಕಿಲ, ಉಪಾಧ್ಯಕ್ಷರು ರಮೇಶ್ ಮುಜಲ, ಬರಿಮಾರು ಗಾಂ.ಪಂ ಅಧ್ಯಕ್ಷರಾದ ವಸಂತ್ ಪೂಜಾರಿ ಮತ್ತು ಮಾಣಿ ಘಟಕದ ಸದಸ್ಯರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
ಎಲೆಕ್ಟ್ರಿಷಿಯನ್ ಆಗಿ ದಿನಕೆಲಸ ಮಾಡುತ್ತಿದ್ದ ದಯಾನಂದ್ ಅವರು ತಮ್ಮ ಮನೆಯ ಆಧಾರ ಸ್ತಂಭವಾಗಿ ಇದ್ದರು. ಆದರೆ ತಮ್ಮ ಎರಡೂ ಕಿಡ್ನಿಯ ವೈಫಲ್ಯದಿಂದ ಇದೀಗ ಕೆಲಸಕ್ಕೂ ಹೋಗಲು ಆಗದೆ ಕಷ್ಟವನ್ನು ಅನುಭವಿಸುತ್ತಿದ್ದಾರೆ. ತಂದೆ ತಾಯಿಗೆ ಒಬ್ಬನೇ ಮಗನಾಗಿ ಸಂಸಾರ ನಡೆಸುತ್ತಿದ್ದ ಇವರು ಕಳೆದ ಐದು ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟು 4 ವರ್ಷದ ಮಗುವನ್ನು ಹೊಂದಿರುತ್ತಾರೆ. ತಂದೆ ತಾಯಿಯ ಅನಾರೋಗ್ಯದೊಂದಿಗೆ ತಮ್ಮ ಈ ಕಿಡ್ನಿ ವೈಫಲ್ಯದ ಬಗ್ಗೆ ತೀವ್ರ ಮನನೊಂದಿರುವ ಈ ಕುಟುಂಬಕ್ಕೆ ಸಹಾಯ ಮಾಡುವ ಕರ್ತವ್ಯ ಈಗ ಸಮಾಜದ್ದಾಗಿದೆ.
ತನ್ನ ಗಂಡನ ಎರಡೂ ಕಿಡ್ನಿಯ ವೈಫಲ್ಯದಿಂದ ನೊಂದಿರುವ ಅವರ ಧರ್ಮಪತ್ನಿ ತನ್ನ ಒಂದು ಕಿಡ್ನಿಯನ್ನು ನೀಡಲು ಮುಂದಾಗಿರುತ್ತಾರೆ. ಆದರೆ ಈ ಕಿಡ್ನಿ ವರ್ಗಾವಣೆಗೆ ಸುಮಾರು ಹತ್ತು ಲಕ್ಷಕ್ಕಿಂತಲೂ ಅಧಿಕ ಹಣ ಖರ್ಚಾಗುತ್ತದೆ ಎಂದು ವೈದ್ಯರು ತಿಳಿಸಿರುವುದರಿಂದ ಸಹೃದಯ ದಾನಿಗಳ ನೆರವನ್ನು ಈ ಬಡ ಕುಟುಂಬದ ನಿರೀಕ್ಷಿಸುತ್ತದೆ.
ಎರಡೂ ಕಿಡ್ನಿ ವೈಫಲ್ಯದಿಂದ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಹಾಗೂ ಔಷಧಿಯ ಹಣಕ್ಕೆ ತುಂಬಾ ಕಷ್ಟ ಪಡುತ್ತಿದ್ದ ಕುಟುಂಬಕ್ಕೆ ಬರಿಮಾರು ಊರಿನ ಜನರು ಸಾಕಷ್ಟು ಸಹಾಯ ಮಾಡಿರುತ್ತಾರೆ, ಆದರೆ ಚಿಕಿತ್ಸೆಗೆ ಹತ್ತು ಲಕ್ಷಕ್ಕೂ ಅಧಿಕ ಹಣ ಬೇಕಾಗಿರುವುದರಿಂದ ಸಮಾಜದ ಜನರು ಹೆಚ್ಚಿನ ಸಹಾಯ ಮಾಡಬೇಕಾಗಿ ವಿನಂತಿ.
ದಾನಿಗಳು ಆರ್ಥಿಕ ಸಹಾಯ ಮಾಡಿದರೆ ಅವರ ಧರ್ಮಪತ್ನಿಯ ಒಂದು ಕಿಡ್ನಿಯನ್ನಾದರೂ ಜೋಡಣೆ ಮಾಡಿಸಿ ಅವರ ಮತ್ತು ಅವರ ಕುಟುಂಬದ ಜೀವನ ನಿರ್ವಹಣೆ ಮಾಡಲು ದಯಾನಂದ್ ಅವರನ್ನು ಶಕ್ತರನ್ನಾಗಿಸಬಹುದು.