ಯಡ್ತಾಡಿ : ಸಂಘಟನೆಯನ್ನು ಬಲಪಡಿಸುವ ಸಲುವಾಗಿ ಆರಂಭಿಸಿದ ‘ನಮ್ಮ ನಡೆ’ಯ ಮೂರನೇ ಕಾರ್ಯಕ್ರಮವನ್ನು, ‘ವಿಶುಕುಮಾರ್ ನೆನಪಿಗಾಗಿ’ ಸೈಬ್ರಕಟ್ಟೆ ದಾಳಾಡಿಮನೆ ನರಸಿಂಹ ಪೂಜಾರಿಯವರ ಮನೆಯಲ್ಲಿ 20-1-2019 ರಂದು ನಡೆಸಲಾಯಿತು. ನರಸಿಂಹ ಪೂಜಾರಿಯವರು ನಾರಾಯಣ ಗುರುಗಳಿಗೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ರಾಜ್ಯ ವಿಪಕ್ಷ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿಯವರು ನೆರೆದ ಜನರಿಗೆ ಅರ್ಥವಾಗುವ ರೀತಿಯಲ್ಲಿ ಫೆಬ್ರುವರಿ ೩ನೇ ತಾರೀಕಿನಂದು ನಡೆಯಲಿರುವ ಬಿಲ್ಲವ ಸಮಾವೇಶದ ಅಗತ್ಯ ಹಾಗೂ ಔಚಿತ್ಯದ ಬಗ್ಗೆ ವಿವರವಾಗಿ ಮನವರಿಕೆ ಮಾಡಿದರು. ಅವರನ್ನು ಯುವವಾಹಿನಿ(ರಿ) ಯಡ್ತಾಡಿ ವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭದ ಮುಖ್ಯ ಅಂಗವಾದ ‘ವಿಶುಕುಮಾರ್ ಪರಿಚಯ’ ವನ್ನು ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ನರೇಶ್ ಕುಮಾರ್ ಸವಿಸ್ತಾರವಾಗಿ ಪ್ರತಿಯೊಬ್ಬರ ಮನಮುಟ್ಟುವಂತೆ ವರ್ಣಿಸಿದರು. ಸಾಹಿತ್ಯ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಕ್ಷೇತ್ರದಲ್ಲಿನ ಅವರ ಸಾಧನೆಯನ್ನು ರೋಚಕವಾಗಿ ವಿವರಿಸಿದರು. ವಿಶುಕುಮಾರ್ ರವರ ಸಾಧನೆಯನ್ನು ಜೀವಂತವಾಗಿರಿಸಿ ಮುಂದಿನ ತಲೆಮಾರಿಗೆ ತಲುಪಿಸುವ ಅಗತ್ಯವನ್ನು ಮನವರಿಕೆ ಮಾಡಿ ಆ ನಿಟ್ಟಿನಲ್ಲಿ ಮಾಡಬೇಕಾದ ಕಾರ್ಯಗಳ ಬಗ್ಗೆ ತಿಳಿಸಿದರು. ನಂತರ ಮಾತನಾಡಿದ ಟಿ. ಶಂಕರ್ ಸುವರ್ಣ ರವರು ವಿಶುಕುಮಾರ್ ರವರ ಅಸಾಮಾನ್ಯ ವ್ಯಕ್ತಿತ್ವದ ಪರಿಚಯ ಮಾಡಿಸಿದರು. ವಿಶುಕುಮಾರ್ ಪ್ರಶಸ್ತಿ ಪ್ರಧಾನ ಸಮಿತಿಯ ಸಂಚಾಲಕರಾದ ಪ್ರದೀಪ್ ಸಸಿಹಿತ್ಲು ಫೆಬ್ರುವರಿಯ ಕಾರ್ಯಕ್ರಮದ ಬಗ್ಗೆ ವಿವರವಾಗಿ ತಿಳಿಸಿ ಪ್ರತಿಯೊಬ್ಬರನ್ನೂ ಆಹ್ವಾನಿಸಿದರು. ವಿಶುಕುಮಾರ್ ಪಾತ್ರ ಪರಿಚಯದ ನಡುವೆ ಅವರ ನಿರ್ದೇಶನದ ಕೋಟಿ ಚೆನ್ನಯ್ಯ ಚಲನಚಿತ್ರ ಗೀತೆಗಳನ್ನು ನಿಶ್ಮಿತಾ ಮತ್ತು ಅನುಷಾರವರು ಹಾಡಿ ಜನರನ್ನು ರಂಜಿಸುವ ಜೊತೆ ಕಾರ್ಯಕ್ರಮವನ್ನು ಅರ್ಥವತ್ತಾಗಿಸಿದರು.
ತದನಂತರ ನೆರೆದ ಜನರನ್ನು ನಾಲ್ಕು ತಂಡಗಳಾಗಿಸಿ ರಸ ಪ್ರಶ್ನೆ ಹಾಗೂ ಮೂಕಾಭಿನಯದೊಂದಿಗೆ ಬಿಲ್ಲವ ಸಮಾಜದ ಅರಿವು ಮೂಡಿಸುವ ಜೊತೆ ಕೆಲವೊಂದು ಬಿಲ್ಲವ ಕೇಂದ್ರೀಕೃತ ಸಾಹಿತ್ಯದ ಪರಿಚಯ ಮಾಡಿಸುವ ಕೆಲಸವನ್ನೂ ಮಾಡಲಾಯಿತು. ರಸಪ್ರಶ್ನೆ ಕಾರ್ಯಕ್ರಮವನ್ನು ಸತೀಶ್ ವಡ್ಡರ್ಸೆಯವರು ಅರ್ಥವತ್ತಾಗಿ ನಿರೂಪಿಸಿದರು. ಚಿಕ್ಕ ಮಕ್ಕಳಾದ ಅರ್ಜುನ್, ಅನಿರುಧ್ ಭಾವಗೀತೆ ಹಾಡಿದರೆ, ಹಿರಿಯರಾದ ಸಾಕುವಕ್ಕ ಹಾಗು ನರಸಿಯಕ್ಕ ಬತ್ತ ಕುಟ್ಟುವ ಹಾಡಿನೊಂದಿಗೆ ಜನರನ್ನು ರಂಜಿಸಿದರು. ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ಯಡ್ತಾಡಿ ಘಟಕದ ಸಲಹೆಗಾರರಾದ ಸಂತೋಷ್ ಕುಮಾರ್ ಮಾತನಾಡಿ, ಅರ್ಥಪೂರ್ಣವಾಗಿ ಮೂಡಿಬಂದ ವಿಷು ಕುಮಾರ್ ನೆನಪಿನ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಸತೀಶ್ ಪೂಜಾರಿಯವರು ವಹಿಸಿದರೆ, ಅಜಿತ್ ಕುಮಾರ್ ನಿರೂಪಿಸಿದರು. ಸಸಿಹಿತ್ಲು ಘಟಕದ ಶೈಲೇಶ್, ಕೋಟ ಹೋಬಳಿ ಬಿಲ್ಲವ ಒಕ್ಕೂಟದ ಅಧ್ಯಕ್ಷ ಪ್ರಕಾಶ್ ಪೂಜಾರಿ, ನರೇಂದ್ರ ಕುಮಾರ್ ಕೋಟ ಹಾಗೂ ಕಾರ್ಯದರ್ಶಿಯಾದ ಚಂದ್ರ ಪಿ ಸಭೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಗೆ ಅತೀ ಹೆಚ್ಚು ಅಂಕಗಳಿಸಿದ ತಂಡಕ್ಕೆ ಬಹುಮಾನ ನೀಡಿ ಗೌರವಿಸಲಾಯಿತು. ಶರತ್ ಪೂಜಾರಿ ಹಾಗೂ ಸಹೋದರರು ವ್ಯವಸ್ಥಿತವಾಗಿ ಏನೂ ಲೋಪವಾಗದಂತೆ ಕಾರ್ಯಕ್ರಮದ ಮೊದಲಿಗೆ ಲಘು ಉಪಹಾರ ಹಾಗೂ ಕೊನೆಗೆ ಲಘು ಭೋಜನದ ವ್ಯವಸ್ಥೆ ಮಾಡಿದ್ದರು.