ಕಾಪು : ಸಮಾಜದ ಯುವಕರನ್ನು ಸಂಘಟಿಸುವಲ್ಲಿ ಯುವವಾಹಿನಿಯ ಪಾತ್ರ ಮಹತ್ವದ್ದಾಗಿದೆ ಸಮಾಜದ ಯುವಕರೊಳಗಿನ ಒಗ್ಗಟ್ಟು ಎಲ್ಲಾ ಸಮಯಗಳಲ್ಲೂ ಮುಂದುವರಿಯ ಬೇಕು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಕಾಪುವಿನಲ್ಲಿ 18.11.2018 ರಂದು ಯುವವಾಹಿನಿ (ರಿ) ಘಟಕದ ಕಾಪು ಘಟಕದ ವತಿಯಿಂದ ಬಿಲ್ಲವ ಸಮಾಜದ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬಿಲ್ಲವ ಯುವಕ ಯುವತಿಯರಿಗಾಗಿ ಆಯೋಜಿಸಲಾಗಿದ್ದ ಕ್ರೀಡಾ ಸ್ನೇಹ ಸಮ್ಮಿಲನ – ಬ್ರಹ್ಮಶ್ರೀ ನಾರಾಯಣಗುರು ಕ್ರೀಡೋತ್ಸವ-2018 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲು ಮಾತನಾಡಿ, 31 ವರ್ಷದ ಹಿಂದೆ ಪ್ರಾರಂಭಗೊಂಡಿದ್ದ ಯುವವಾಹಿನಿ ಸಂಸ್ಥೆಯು ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲೆಡೆ ಒಟ್ಟು 33 ಘಟಕಗಳ ಮೂಲಕ ಕಾರ್ಯಾಚರಿಸುತ್ತಿದೆ. ವಿದ್ಯೆ, ಉದ್ಯೋಗ ಮತ್ತು ಸಂಪರ್ಕ ಎಂಬ ಮೂರು ಮುಖ್ಯ ಉದ್ದೇಶದೊಂದಿಗೆ ಸಂಘಟನೆಯ ಮೂಲಕ ಸಾವಿರಾರು ಯುವಕ – ಯುವತಿಯರು ಪ್ರಚಾರಕ್ಕೆ ಬರುವಂತಾಗಿದೆ. ಇನ್ನಷ್ಟು ಯುವಜನರನ್ನು ಸಂಘಟಿತರನ್ನಾಗಿಸುವುದು ನಮ್ಮ ಅಭಿಲಾಷೆ ಯಾಗಿದೆ’ ಎಂದರು.
‘ನಮ್ಮನ್ನು ನಾವು ಬಿಲ್ಲವ ಸಮಾಜದವರೆಂದು ಹೇಳಿಕೊಳ್ಳಲು ಅತ್ಯಂತ ಹೆಮ್ಮೆಯಾಗುತ್ತಿದೆ. ಸಾಧಕನಾಗಿ ಮೂಡಿ ಬಂದಾಗ, ಇನ್ಯಾವುದೋ ಕಾರಣಗಳಿಂದಾಗಿ ಕುಗ್ಗಿದಾಗ ಎರಡೂ ಸಂದರ್ಭಗಳಲ್ಲೂ ಸಮಾಜ ನಮ್ಮ ಬೆನ್ನ ಹಿಂದೆ ಇರುತ್ತದೆ’ ಎಂದು ಚಲನಚಿತ್ರ ನಟ ಅರವಿಂದ ಬೋಳಾರ್ ಹೇಳಿದರು.
ಕಾಪು ಬ್ಲಾಕ್ ಕಾಂಗ್ರೆಸ್ (ದ) ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಉಡುಪಿ ಜಿಲ್ಲಾ ಬಿಲ್ಲವರ ಪರಿಷತ್ತಿನ ಅಧ್ಯಕ್ಷ ಶೇಖರ್ ಕರ್ಕೇರ ಹೆಜಮಾಡಿ, ಪಡುಬಿದ್ರಿ ಬಿಲ್ಲರ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್, ಕಾಪು ಬಿಲ್ಲವರ ಸಂಘದ ಗೌರವಾಧ್ಯಕ್ಷ ಪ್ರಭಾಕರ ಪೂಜಾರಿ, ನಟಿ ಚಿರಶ್ರೀ ಅಂಚನ್, ತೆಂಕ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರತ್ನಾಕರ ಕೋಟ್ಯಾನ್, ಎಸ್‌ಕೆಪಿಎ ಕಾಪು ವಲಯ ಘಟಕದ ಅಧ್ಯಕ್ಷ ವಿರೇಂದ್ರ ಎಸ್. ಪೂಜಾರಿ, ಯುವವಾಹಿನಿ ಪದಾಧಿಕಾರಿಗಳಾದ ಶಶಿಧರ್ ಸುವರ್ಣ, ಸುಖೇಶ್ ಕುಮಾರ್ ಎರ್ಮಾಳ್, ಯೋಗೀಶ್ ಕೋಟ್ಯಾನ್, ಸೂರ್ಯ ನಾರಾಯಣ್, ದಿನಕರ್, ಸಚಿನ್ ಕುಮಾರ್ ಉಪಸ್ಥಿತರಿದ್ದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲು , ತುಳು ರಂಗಭೂಮಿ ಹಾಗೂ ಚಲನಚಿತ್ರ ನಟ ಅರವಿಂದ ಬೋಳಾರ್, ಚಿತ್ರ ನಟಿ ಚಿರಶ್ರೀ ಅಂಚನ್ ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಇವರನ್ನು ಅಭಿನಂದಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ ಕಾಪು ಘಟಕದ ಅಧ್ಯಕ್ಷ ದೀಪಕ್ ಕುಮಾರ್ ಎರ್ಮಾಳ್ ಸ್ವಾಗತಿಸಿದರು. ಸಲಹಾ ಸಮಿತಿ ಸದಸ್ಯ ನಾಗೇಶ್ ಸುವರ್ಣ ವಂದಿಸಿದರು. ಸತೀಶ್ ಹೊಸ್ಮಾರು ನಿರೂಪಿಸಿದರು.