ಪಣಂಬೂರು ಕುಳಾಯಿ : ಬಿಲ್ಲವ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವ ಯುವವಾಹಿಯಂತಹ ಸಂಘಟನೆಗಳು ಬಿಲ್ಲವರ ಸ್ವಾಭಿಮಾನ, ಆತ್ಮಸ್ಥೈರ್ಯಗಳಿಗಾಗಿ ಕೋಟಿ ಚೆನ್ನಯ ಕಾಂತಾಬಾರೆ ಬೂದಾಬಾರೆಯಂತಹ ವೀರ ಪುರುಷರ ಸಾಧನೆಯನ್ನು , ಬ್ರಹ್ಮಶ್ರೀ ನಾರಾಯಣಗುರುವರ್ಯರ ಸಾಮಾಜಿಕ, ಧಾರ್ಮಿಕ ಕ್ರಾಂತಿಯನ್ನು, ಸಾಹುಕಾರ್ ಕೊರಗಪ್ಪ, ದಾಮೋದರ ಮಾಸ್ತರ್ ರಂತಹ ಸಾಮಾಜಿಕ ಸೇವೆಯನ್ನು, ಬಂಗಾರಪ್ಪ, ದಾಮೋದರ ಮುಲ್ಕಿ ಹಾಗೇ ನಮ್ಮ ನಡುವೆಯೇ ಇರುವ ಜನಾರ್ದನ ಪೂಜಾರಿಯಂತಹ ರಾಜಕೀಯ ಕ್ಷೇತ್ರದ ಸಾಧನೆಯನ್ನು ಆದರ್ಶವಾಗಿ ತೆಗೆದುಕೊಳ್ಳುತ್ತೇವೆ.
ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರ ಸಾಧನೆಗಳನ್ನು ಮಾಡಿದ ದಿ.ವಿಶುಕುಮಾರ್ ಕೂಡಾ ನಮಗೆ ಈ ನಿಟ್ಟಿನಲ್ಲಿ ಸ್ಪೂರ್ತಿಯ ಸೆಲೆಯಾಗುತ್ತಾರೆ. ಎಂದು ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಸಾದು ಪೂಜಾರಿ ಅಭಿಪ್ರಾಯ ಪಟ್ಟರು.
ಅವರು ದಿನಾಂಕ 03.12.2018 ರಂದು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು, ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿ ಇದರ ಆಶ್ರಯದಲ್ಲಿ ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ವಿಶುಕುಮಾರ್ ಪರಿಚಯ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಓರ್ವ ಶ್ರೇಷ್ಠ ಕತೆಗಾರರಾಗಿ, ಕಾದಂಬರಿಕಾರರಾಗಿ, ನಟರಾಗಿ, ನಾಟಕಕಾರರಾಗಿ, ಪತ್ರಕರ್ತರಾಗಿ, ಸಿನೇಮಾ ನಟರಾಗಿ, ನಿರ್ದೇಶಕರಾಗಿ, ರಾಜಕಾರಣಿಯಾಗಿ ತಮ್ಮ ಐದು ದಶಕಗಳ ಕಲಾ ಸೇವೆ, ಸಾಹಿತ್ಯ ಸೇವೆ ಮಾಡಿ ತನ್ನ ಅಲ್ಪ ಆಯುಷ್ಯದಲ್ಲೇ ಸಂದು ಹೋದ ವಿಶುಕುಮಾರ್ ರವರ ಬದುಕು ಬರಹ ನಮಗೆ ಅನುಕರಣೀಯವಾದುದು.
ಬಹುಮುಖ ಪ್ರತಿಭಾಶಾಲಿ ವಿಶುಕುಮಾರ್ ಜೀವಿತದ 49 ವರ್ಷದಲ್ಲಿ ಅಪಾರವಾದ ಸಾಧನೆಯನ್ನು ಮಾಡಿ ಜನಮಾನಸದಲ್ಲಿ ಅಚ್ಚಳಿಯದೆ ಇರುವ ಛಾಪನ್ನು ಮೂಡಿಸಿದ್ದಾರೆ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಣಂಬೂರು ಘಟಕದ ಅಧ್ಯಕ್ಷರಾದ ಜಗದೀಶ್ ಸುವರ್ಣ ವಹಿಸಿಕೊಂಡಿದ್ದರು. ಸಮಿತಿ ಸಂಚಾಲಕರು ಪ್ರದೀಪ್ ಎಸ್. ಕಾರ್ಯದರ್ಶಿ ದಿನೇಶ್ ಸುವರ್ಣ, ಕೋಶಾಧಿಕಾರಿ ವಿವೇಕ್ ಕೋಟ್ಯಾನ್, ನಿಕಟಪೂರ್ವ ಅಧ್ಯಕ್ಷ ಉದಯ್ ಕುಮಾರ್ , ಘಟಕದ ಕಾರ್ಯದರ್ಶಿ ರಾಜೇಶ್ ಉಪಸ್ಥಿತರಿದ್ದರು.