ಕೊಲ್ಯ: ವಿಶುಕುಮಾರ್ ಈ ನಾಡು ಕಂಡ ಮತ್ತು ನಮ್ಮ ಸಮಾಜದಲ್ಲಿ ಹುಟ್ಟಿಬೆಳೆದ ಓರ್ವ ಶ್ರೇಷ್ಠ ಕಾದಂಬರಿಕಾರ, ನಟ ,ನಿರ್ಮಾಪಕ ,ನಿರ್ದೇಶಕ ,ಪತ್ರಕರ್ತ ಮತ್ತು ಉತ್ತಮ ನಾಟಕಕಾರರಾಗಿದ್ದರು. ತಮ್ಮ ವೃತ್ತಿ ಜೀವನದಲ್ಲಿ ನೇರ ನಡೆ – ನುಡಿ ,ಪ್ರಾಮಾಣಿಕತೆ ಮತ್ತು ಶಿಸ್ತನ್ನು ಅಳವಡಿಸಿಕೊಂಡಿದ್ದ ಇವರು ,ಭ್ರಷ್ಟಾಚಾರದಿಂದ ಬೇಸತ್ತು, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಹುದ್ದೆಯನ್ನು ಅರ್ಧದಲ್ಲೇ ತೊರೆದು, ಅನ್ಯಾಯದ ವಿರುದ್ದ ಬಂಡಾಯದ ಬಾವುಟ ಹಾರಿಸಿದ ಓರ್ವ ಅಸಾಮನ್ಯ ವ್ಯಕ್ತಿ,ಇಂದು ಸತ್ತ ನಂತರವೂ ನಮ್ಮೆದುರು ಜೀವಂತವಿರುವ ‘ಮಹಾನ್ ಆತ್ಮ’ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲುರವರು ಮಾತನಾಡಿ ಬಣ್ಣಿಸಿದರು.
ಯುವವಾಹಿನಿ (ರಿ) ಕೇಂದ್ರ ಸಮಿತಿ, ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ) ಕೊಲ್ಯ ಘಟಕದ ಆತಿಥ್ಯದಲ್ಲಿ ದಿನಾಂಕ 5-12-2018ರಂದು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಕೊಲ್ಯದಲ್ಲಿ ವಿಶುಕುಮಾರ್ ವ್ಯಕ್ತಿ ಪರಿಚಯ- ಐದನೇಯ ಮಾಲಿಕೆಯ ಸರಣಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ವಿಶುಕುಮಾರ್ ವ್ಯಕ್ತಿ ಪರಿಚಯವನ್ನು ಅನಾವರಣಗೊಳಿಸಿದರು.
ವಿಶುಕುಮಾರ್ ಪ್ರಶಸ್ತಿ ಪ್ರಧಾನ ಸಮಿತಿಯ ಸಂಚಾಲಕರಾದ ಪ್ರದೀಪ್ ಎಸ್ ಆರ್ ರವರು ಮಾತನಾಡಿ, ವಿಶುಕುಮಾರ್ ರವರ ಕಾದಂಬರಿಗಳನ್ನು ಪ್ರತಿಯೊಬ್ಬರು ಓದಿಕೊಂಡು ಅದರಲ್ಲಿನ ಮೌಲ್ಯಯುತ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವಿಶುಕುಮಾರ್ ಪ್ರಶಸ್ತಿ ಪ್ರಧಾನ ಸಮಿತಿಯ ಮಾಜಿ ಸಂಚಾಲಕರಾದ ಟಿ.ಶಂಕರ್ ಸುವರ್ಣರವರು ಕಾರ್ಯಕ್ರಮದ ಆಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿ,ಮುಂದಿನ ದಿನಗಳಲ್ಲಿ ನಡೆಯಲಿರುವ ವಿಶುಕುಮಾರ್ ಸಂಸ್ಮರಣಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದರು. ಈ ಸಂದರ್ಭದಲ್ಲಿ ಕಥೆ ,ಚಿತ್ರಕತೆ,ಲೇಖಕ ಮತ್ತು ಕಿರುಚಿತ್ರಗಳಲ್ಲಿ ಅಭಿನಯಿಸಿರುವ ಬಿ.ಎಸ್ ಪೂಜಾರಿಯವರನ್ನು ಹೊಸ ಸದಸ್ಯರಾಗಿ ಘಟಕಕ್ಕೆ ಸೇರ್ಪಡೆಗೊಳಿಸಲಾಯಿತು.
ಯುವವಾಹಿನಿ (ರಿ) ಕೊಲ್ಯ ಘಟಕದ ಅಧ್ಯಕ್ಷರಾದ ಕುಸುಮಾಕರ್ ಕುಂಪಲರವರು ಸ್ವಾಗತಿಸಿದರು , ಘಟಕದ ಕಾರ್ಯದರ್ಶಿ ಲತೀಶ್ ಪಾಪುದಡಿ ಮಾಡೂರುರವರು ಧನ್ಯವಾದ ನೀಡಿದರು.