ಮಂಗಳೂರು : ಭಜನೆಯಿಂದ ಪ್ರಗತಿ, ಕ್ಷಮತೆ, ಶಿಸ್ತು, ಕ್ರಿಯಾಶೀಲತೆ, ಕೌಶಲ, ಸಾಧನೆ ಹೆಚ್ಚಾಗುತ್ತದೆ. ಭಕ್ತಿಯ ಅಂತರಗಂಗೆ ಭಜನೆ ಮೂಲಕ ಜಲಪಾತವಾಗಿ ಧುಮುಕುತ್ತದೆ. ನಿಷ್ಕಲ್ಮಶ ಪ್ರೀತಿಯಿಂದ, ಮುಗ್ದ ಭಕ್ತಿಯಿಂದ ಭಜನೆ ಹಾಡಿದರೆ ಪರಮಾತ್ಮನ ಸಾಕ್ಷಾತ್ಕಾರವಾಗುತ್ತದೆ. ಭಜನಾ ಸಂಸ್ಕೃತಿಯ ಪುನರುತ್ಥಾನದೊಂದಿಗೆ ಭಜಕರು ನವಭಾರತ ನಿರ್ಮಾಣದ ಶಿಲ್ಪಿಗಳಾಗಬೇಕು , ಭಜನೆ ಆತ್ಮ ಶುದ್ಧೀಕರಣದ ಸನ್ಮಾರ್ಗ ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು.
ಅವರು ದಿನಾಂಕ 23.09.2018 ರಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಆತಿಥ್ಯದಲ್ಲಿ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಇದರ ಸಹಯೋಗದೊಂದಿಗೆ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಸಭಾಂಗಣದಲ್ಲಿ ಜರುಗಿದ ಯುವವಾಹಿನಿ ಅಂತರ್ ಘಟಕ ಕುಣಿತ ಭಜನಾ ಸ್ಪರ್ಧೆಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಭಜನೆ ಒಲಿಯಬೇಕಾದರೆ ಆಧ್ಯಾತ್ಮ ಚಿಂತನೆ, ಸಹನೆ, ತಾಳ್ಮೆ, ಆಸಕ್ತಿ ಇರಬೇಕು. ಸಮಾಜದ ಪರಿವರ್ತನೆ ಭಜನೆಯ ಮೂಲಕ ಭಜಕರಿಂದ ಸಾಧ್ಯ
ಆತ್ಮ ಶುದ್ಧಿಕರಣವಾದರೆ ಸಮಾಜ ಶುದ್ಧಿಕರಣವಾಗಲು ಸಾಧ್ಯ. ನೈತಿಕ ಶಿಕ್ಷಣ ಇಂದಿನ ದಿನಗಳಲ್ಲಿ ಅಗತ್ಯವಾಗಿದೆ. ಮಾನವರನ್ನು ಪ್ರೀತಿಯಿಂದ ಕಾಣುವ ಸೌಹಾರ್ದತೆಯ ಬದುಕನ್ನು ನಡೆಸುವ ಕಾರ್ಯ ಆಗಬೇಕಾಗಿದೆ. ಪಾಮರನಿಗೆ ಭಗವಂತನನ್ನು ನೆನೆಯಲು ಭಜನೆ ಸಹಕಾರಿ. ಭಜನೆಯ ಮೂಲಕ ಅನಕ್ಷರಸ್ಥನಿಗೂ ಭಗವಂತ ಒಲಿದಿದ್ದಾನೆ. ಆತ್ಮಶುದ್ಧಿ, ಮನಃಶಾಂತಿಗಾಗಿ ಭಜನೆ ಪ್ರಯೋಜನಕಾರಿ. ಭಜನಾ ತರಬೇತಿಯಿಂದ ಸಮಾಜವನ್ನು ಒಗ್ಗೂಡಿಸುವ ಕಾರ್ಯವೂ ಸಾಧ್ಯ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಆರ್.ಪದ್ಮಾರಾಜ್ ತಿಳಿಸಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್.ಎಸ್.ಸಾಯಿರಾಮ್ ಕಾರ್ಯಕ್ರಮ ಉದ್ಘಾಟಿಸಿದರು.ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ ನಡುಬೈಲು ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಎಂ.ಶಶಿಧರ ಹೆಗ್ಡೆ, ಎಲ್.ಐ.ಸಿ ಯ ನಿವೃತ್ತ ಅಸಿಸ್ಟೆಂಟ್ ಡಿವಿಜನಲ್ ಮೆನೇಜರ್ ಚಂದ್ರಕಾಂತ್, ಮಂಗಳೂರಿನ ಎಸ್.ಕೆ.ಬಿಲ್ಡರ್ಸ್ ಮಾಲಕ ಸಂತೋಷ್ ಕುಮಾರ್, ಮಂಗಳೂರು ಮಂಗಳಾದೇವಿ ಲಯನ್ಸ್ ಕ್ಲಬ್ ಅಧ್ಯಕ್ಷ ಯಶವಂತ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಪರಮೇಶ್ವರ ಪೂಜಾರಿ, ಜಿತೇಂದ್ರ ಜೆ.ಸುವರ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ.ಸಿ.ಕರ್ಕೇರ ಸ್ವಾಗತಿಸಿದರು. ಕಾರ್ಯಕ್ರಮ ಸಂಚಾಲಕಿ ಶುಭಾ ರಾಜೇಂದ್ರ ಪ್ರಸ್ತಾವನೆ ಮಾಡಿದರು. ಕಾರ್ಯದರ್ಶಿ ರವಿಕಲಾ ವಂದಿಸಿದರು. ನರೇಶ್ ಕುಮಾರ್ ಸಸಿಹಿತ್ಲು ಹಾಗೂ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.ಯುವವಾಹಿನಿ ಅಂತರ್ ಘಟಕ ಭಜನಾ ಸ್ಪರ್ಧೆಯಲ್ಲಿ ಬಜಪೆ ಘಟಕ ಪ್ರಥಮ, ಉಡುಪಿ ಘಟಕ ದ್ವಿತೀಯ ಹಾಗೂ ಮುಲ್ಕಿ ಘಟಕ ತೃತೀಯ ಬಹುಮಾನ ಪಡೆದರು, ಬಂಟ್ವಾಳ ಘಟಕ ಸಸಿಹಿತ್ಲು, ಮಂಗಳೂರು, ಉಪ್ಪಿನಂಗಡಿ ಘಟಕ, ಕೂಳೂರು ಘಟಕ, ಸುರತ್ಕಲ್ ಘಟಕಗಳು ಪ್ರೋತ್ಸಾಹಕ ಬಹುಮಾನ ಪಡೆದರು. ರಮೇಶ್ ಕಲ್ಮಾಡಿ ಹಾಗೂ ವಿಜಯಲಕ್ಷ್ಮಿ ಕಟೀಲ್ ತೀರ್ಪುಗಾರರಾಗಿ ಭಾಗವಹಿಸಿದ್ದರು. ಸುವರ್ಣ ಆರ್ಟ್ಸ್ ಮುಲ್ಕಿ ಇವರ ಕಲಾಕೌಶಲ್ಯದಲ್ಲಿ ನಿರ್ಮಾಣಗೊಂಡ ಆಕರ್ಷಕ ವೇದಿಕೆ ಎಲ್ಲರ ಮನಸೂರೆಗೊಂಡಿತು.