ಪ್ರಧಾನ ಕಾರ್ಯದರ್ಶಿ ಹುದ್ದೆ ನಿರ್ವಹಣೆಯ ಸಂತೃಪ್ತಿಯೊಂದಿಗೆ ಸ್ವಲ್ಪ ವಿಶ್ರಾಂತಿ ಪಡೆಯೋಣ ಅಂದುಕೊಂಡಿದ್ದೆ. ಆದರೆ ಎಲ್ಲರ ಒತ್ತಾಸೆ ಮತ್ತೊಂದು ಬಹುದೊಡ್ಡ ಜವಬ್ದಾರಿ ಹೆಗಲೇರಿದೆ. ಒತ್ತಡದ ವೃತ್ತಿ ಬದುಕಿನ ನಡುವೆ ಈ ಕೆಲಸ ತುಸು ಕಷ್ಟ ಅನಿಸಿದರೂ ಇದರಲ್ಲೊಂದು ಸಂತೃಪ್ತಿ ಇದೆ. ಬಿಟ್ಟರೂ ಬಿಡದಿ ಮಾಯೆ ಎಂಬಂತೆ ಮತ್ತೆ ಮತ್ತೆ ನಿಮ್ಮ ಜೊತೆ ನನ್ನ ನಿರಂತರ ಸಂಪರ್ಕಕ್ಕೆ ಸಿಕ್ಕ ಅವಕಾಶ ಅಂದುಕೊಂಡಿದ್ದೇನೆ. ಪ್ರಧಾನ ಕಾರ್ಯದರ್ಶಿ ಆಗಿದ್ದ ಸಮಯದಲ್ಲಿ ನನ್ನೆಲ್ಲ ಘಟಕಗಳೂ ಮತ್ತು ಸದಸ್ಯರ ಜೊತೆ ನಿಕಟ ಸಂಪರ್ಕ ಹೊಂದಿದ್ದೆ, ಹುದ್ದೆ ಬದಲಾದ ಬಳಿಕ ನಿರಂತರ ಸಂಪರ್ಕ ಕಷ್ಟ ಅನಿಸಿತ್ತು. ಆದರೆ ಅ ಗುರುಗಳ ಅನುಗ್ರಹದಿಂದ ನನಗೆ ಸಿಕ್ಕ ಅವಕಾಶ ಮತ್ತೊಂದು ವರುಷ ನಾನು ನಿಮ್ಮ ಜೊತೆ ನಿಕಟ ಸಂಪರ್ಕ ಇರಿಸಿಕೊಳ್ಳಲು ಸಾಧ್ಯವಾಗಿದೆ. ಕಳೆದ ಅವಧಿಯ ಆತ್ಮೀಯತೇ ಈ ವರುಷದ ನನ್ನ ಕೆಲಸಕಕ್ಕೆ ಸಹಕಾರಿ ಆದಿತು ಎನ್ನುವುದು ನನ್ನ ನಂಬಿಕೆ.
ಶ್ರೀ ಕೃಷ್ಣ ಪರಮಾತ್ಮ ಹೇಳಿದಂತೆ ಬದಲಾವಣೆ ಜಗದ ನಿಯಮ, ನಾವು ಬದಲಾವಣೆಗೆ ಒಗ್ಗಿದರೆ ಮಾತ್ರ, ಎಲ್ಲರಿಗಿಂತ ಭಿನ್ನರಾಗಲು ಸಾಧ್ಯ. ಯುವ ಸಿಂಚನದಲ್ಲಿ ಕಳೆದ ಅವಧಿಯ ಬದಲಾವಣೆ ಯುವವಾಹಿನಿಯಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತ್ತು. ಇತರ ಜಾತಿ ಸಂಘಟನೆಗಳೂ ಮೂಗಿನ ಮೇಲೆ ಬೆರಳಿರಿಸಿಕೊಳ್ಳುವಂತಾಗಿತ್ತು. ಇದಾಗಿ ವರುಷ ಉರುಳಿತು ಮತ್ತೊಂದು ಹೊಸ ಬದಲಾವಣೆಗೆ ಸಿದ್ದರಾಗುವ ಅಗತ್ಯತೆ ಇದೆ ಎನ್ನುವುದು ನನ್ನ ನಂಬಿಕೆ. ಈ ನಿಟ್ಟಿನಲ್ಲಿ ಒಂದಷ್ಟು ಭಿನ್ನತೆಯೊಂದಿಗೆ ಯುವ ಸಿಂಚನವನ್ನು ನಿಮ್ಮ ಕೈಗಿತ್ತಿದ್ದೀನಿ. ಮತ್ತೆ ಬದಲಾವಣೆ ಬೇಕೆ? ಎನ್ನುವುದು ನಿಮ್ಮ ಅಭಿಪ್ರಾಯ. ನಮ್ಮೆಲ್ಲರ ಉದ್ದೇಶ ಒಂದೇ ಯುವವಾಹಿನಿ ಸ್ಥಿರಸ್ಥಾಯಿ ಆಗಬೇಕು, ಇಲ್ಲಿ ಎಲ್ಲರ ಆಟವೂ ವರುಷವೊಂದು ಮಾತ್ರ ಮತ್ತೆ ಹೊಸ ಆಟ ಶುರು ಆಗಲೇ ಬೇಕು, ಆದರೆ ಪ್ರತಿಯೊಬ್ಬರ ಆಟವೂ ಒಂದು ಭಿನ್ನತೆಯನ್ನು ಉಂಟುಮಾಡುತ್ತದೆ ಎನ್ನುವುದು ಸತ್ಯ. ಈ ಸಂಚಿಕೆ ಅತೀ ಹೆಚ್ಚು ಸುದ್ದಿ, ಲೇಖನ, ಅಭಿಪ್ರಾಯಗಳಿಂದ ಪೋಣಿಸಲ್ಪಟ್ಟಿದೆ, ಎಲ್ಲಾ ಘಟಕಗಳ ಮಾಹಿತಿಯನ್ನೂ ಇಲ್ಲಿ ದಾಖಲೀಕರಿಸಿದ್ದೇವೆ ಕೇಳಿದಾಗ ನೆಪ ಹೇಳದೆ ಘಟಕಗಳ ವರದಿ ನೀಡಿದ, ಲೇಖನ, ಕವನ ನೀಡಿದ ಪ್ರತಿಯೊಬ್ಬರಿಗೂ ನನ್ನ ನಮನಗಳು. ತಪ್ಪು ಒಪ್ಪು ಸಹಜ ಅದನ್ನು ತಿದ್ದುವ ಅವಕಾಶ ಇದೆ, ನಿಮ್ಮ ಅಭಿಪ್ರಾಯ ಏನೇ ಇದ್ದರೂ ತಿಳಿಸಿ. ಯುವ ಸಿಂಚನದ ಹೊಸ ಪ್ರಯತ್ನ ಯುವವಾಹಿನಿ ಸದಸ್ಯರ ಮುದ್ದು ಕೃಷ್ಣ ಪೋಟೋ ಸ್ಪರ್ಧೆಗೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ಬಂದಿದೆ, ನಿಮ್ಮ ಉತ್ಸಾಹ ನಮ್ಮಲ್ಲೂ ಹೊಸ ಚೈತನ್ಯ ಉಂಟು ಮಾಡಿದೆ. ಹೀಗಾಗಿ ಮುಂದಿನ ಸಂಚಿಕೆ ಮತ್ತೊಂದು ಸ್ಪರ್ಧೆಯೊಂದಿಗೆ ಮೂಡಿ ಬರಲಿದೆ, ಭಾಗವಹಿಸಿದ ಪುಟಾಣಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ.