ಮಂಗಳೂರು : ದ. ಕ. ಜಿಲ್ಲಾಡಳಿತ, ದ. ಕ. ಜಿಲ್ಲಾ ಪಂಚಾಯತು, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಇದರ ಸಂಯುಕ್ತ ಆಶ್ರಯದಲ್ಲಿ ಕುದ್ರೋಳಿ ಶ್ರೀ ಗೋಕರ್ಣಾನಾಥ ಕ್ಷೇತ್ರದ ಸಹಯೋಗದೊಂದಿಗೆ ದಿನಾಂಕ 27 ಅಗೋಸ್ಟ್ 2018 ರಂದು ಬ್ರಹ್ಮಶ್ರೀ ನಾರಾಯಣ ಗುರುಗಳ 164ನೇ ಜನ್ಮ ದಿನಾಚರಣೆಯ ಅಂಗವಾಗಿ ಯುವವಾಹಿನಿ (ರಿ) ಮಂಗಳೂರು ಘಟಕದ ವಾಹನ ಜಾಥಾ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು. ‘ಶ್ರೀ ನಾರಾಯಣಗುರು ಸಂದೇಶಯಾತ್ರೆ’ ವಾಹನ ಜಾಥಾ ಮೆರವಣಿಗೆಯನ್ನು ಮಂಗಳೂರಿನ ಉರ್ವಾಸ್ಟೋರ್ ನಲ್ಲಿರುವ ಯುವವಾಹಿನಿ ಕಛೇರಿಯ ಮುಂಭಾಗದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್. ಎಸ್ . ಸಾಯಿರಾಮ್ ಗುರುಗಳ ಭಾವಚಿತ್ರಯಿರುವ ರಥಕ್ಕೆ ಚಾಲನೆ ನೀಡುವ ಮೂಲಕ ಉದ್ಘಾಟಿಸಿದರು.
ಬಳಿಕ ಅವರು ಮಾತನಾಡಿ, ಜಾತೀಯತೆ, ಅಸ್ಪ್ರಶ್ಯತೆ ಎಂಬ ಕೊಳಕಿನಿಂದ ಸಮಾಜ ಕೊಳೆಯುತ್ತಿರುವಾಗ ಬ್ರಹ್ಮಶ್ರೀ ನಾರಾಯಣ ಗುರುಗಳು ಅವತಾರ ಪುರುಷರಂತೆ ಜನಿಸಿದರು. ನಾರಾಯಣ ಗುರುಗಳು ಕೇವಲ ಈಳವ ಜಾತಿಯವರಲ್ಲದೆ ಸಮಸ್ತ ಅಸ್ಪ್ರಶ್ಯ ವರ್ಗದವರನ್ನು ಎಲ್ಲಾ ಸ್ತರಗಳಲ್ಲಿ ಮೇಲೆ ತರಲು ಮಾಡಿದ ಪ್ರಯತ್ನ ಉಲ್ಲೇಖನೀಯ ಎಂದು ನುಡಿದರು.
ಗುರು ಸಂದೇಶ ಯಾತ್ರೆಯು ಸಂಚಾಲಕ ಶ್ರೀಕಾಂತ್ ರವರ ನೇತೃತ್ವದಲ್ಲಿ ಲೇಡಿಹಿಲ್, ಲಾಲ್‍ಭಾಗ್, ಪಿವಿಎಸ್, ಡೊಂಗರಕೇರಿ, ಚಿತ್ರಾಟಾಕೀಸು ಮಾರ್ಗವಾಗಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸಮಾಪನಗೊಂಡಿತು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಪ್ರಮುಖರಾದ ಡಾ. ಬಿ. ಜಿ. ಸುವರ್ಣ, ಶೇಖರ ಪೂಜಾರಿ, ರವಿ ಪೂಜಾರಿ ಚಿಲಿಂಬಿ ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ಪ್ರದಾನ ಕಾರ್ಯದರ್ಶಿ ಸುನೀಲ್ ಕೆ. ಅಂಚನ್, ಯುವವಾಹಿನಿ ಮಂಗಳೂರು ಘಟಕದ ಅಧ್ಯಕ್ಷ ನವೀನ್‍ಚಂದ್ರ, ಉಪಾಧ್ಯಕ್ಷ ಲಕ್ಷ್ಮೀನಾರಾಯಣ, ಕಾರ್ಯದರ್ಶಿ ರಾಜೇಶ್ ಅಮೀನ್, ಮಾಜಿ ಅಧ್ಯಕ್ಷರುಗಳಾದ ಪರಮೇಶ್ವರ ಪೂಜಾರಿ, ಸಾಧು ಪೂಜಾರಿ, ಮಾಧವ ಕೋಟ್ಯಾನ್, ಕಿಶೋರ್. ಕೆ. ಬಿಜೈ , ನೇಮಿರಾಜ್, ರಾಕೇಶ್, ಅಶೋಕ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.