ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮಟ್ಟಿಗೆ ಅಪೂರ್ವವಾದ, ಬಿಲ್ಲವ ಸಮಾಜದ ’ವಧೂವರರ ಸಮಾವೇಶ’ ಬಿಲ್ಲವ ಸಮಾಜ ಬಾಂಧವರ ಅಭೂತಪೂರ್ವ ಸ್ಪಂದನೆಯೊಂದಿಗೆ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. ಯುವವಾಹಿನಿ ಮಹಿಳಾ ಘಟಕದ ಸಾಮಾಜಿಕ ಕಳಕಳಿಯ ವೈಶಿಷ್ಟ್ಯಪೂರ್ಣ ಪರಿಕಲ್ಪನೆಯೊಂದಿಗೆ ಯುವವಾಹಿನಿ (ರಿ) ಕೇಂದ್ರ ಸಮಿತಿ ಮತ್ತು ಇತರ ಘಟಕಗಳ ಸಹಕಾರದೊಂದಿಗೆ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿಯ ಸಹಯೋಗದೊಂದಿಗೆ ದಿನಾಂಕ 18-12-2016 ರಂದು ಜರಗಿದ ಸಮಾವೇಶವು ಯುವವಾಹಿನಿಯ ಚಟುವಟಿಕೆಗಳಲ್ಲಿ ಒಂದು ಮೈಲುಗಲ್ಲಾಗಿ ಇತಿಹಾಸ ನಿರ್ಮಿಸಿತು.
ಒಂದು ಮಹತ್ವಪೂರ್ಣ ಯೋಚನೆ, ಯೋಜನೆಯೊಂದಿಗೆ ಬಹಳಷ್ಟು ಪೂರ್ವಾಲೋಚನೆ, ಸಮಾಲೋಚನೆಗಳೊಂದಿಗೆ ಸಮಾವೇಶದ ತಯಾರಿ ನಡೆಸಲಾಗಿತ್ತು. ಇದಕ್ಕೆ ರಾತ್ರಿಹಗಲೆನ್ನದೆ ಯುವವಾಹಿನಿಯ ಮಹಿಳಾ ತಂಡ ದುಡಿದಿತ್ತು. ಬೆಂಬಲವಾಗಿ ಯುವವಾಹಿನಿಯ ಕಾರ್ಯಕರ್ತರಿದ್ದರು. ಪ್ರೋತ್ಸಾಹಕರಾಗಿ ಸಮಾಜ ಬಾಂಧವರಿದ್ದರು. ಕುದ್ರೋಳಿ ಕ್ಷೇತ್ರದ ಸಂಪೂರ್ಣ ಸಹಕಾರವಿತ್ತು. ಕೊನೆಗೂ ಆ ಬಹುನಿರೀಕ್ಷಿತ ದಿನ ಕುದ್ರೋಳಿ ಕ್ಷೇತ್ರದಲ್ಲಿ ಮರೆಯಲಾಗದ ದಿನವಾಗಿ ಪರಿಣಮಿಸಿತ್ತು.
ಶ್ರೀ ಕ್ಷೇತ್ರದ ಕೊರಗಪ್ಪ ಕಲ್ಯಾಣ ಮಂಟಪದಲ್ಲಿ ಜರಗಿದ ನಯನ ಮನೋಹರ ಸಮಾರಂಭದಲ್ಲಿ ಸುಮಾರು 450 ಕ್ಕೂ ಮಿಕ್ಕಿದ ವಧುವರರು ನೋಂದಾಯಿಸಿ ಕೊಂಡು ಭಾಗವಹಿಸಿದ್ದು ಸಾವಿರಕ್ಕೂ ಮಿಕ್ಕಿದ ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮದಿಂದ ಸಮಾವೇಶ ಕಳೆಗಟ್ಟಿತ್ತು.
ಅಂದು ಬೆಳಿಗ್ಗೆ ನಿಗದಿತ ಸಮಯಕ್ಕೆ ಸರಿಯಾಗಿ ಜರಗಿದ ಉದ್ಘಾಟನಾ ಸಮಾ ರಂಭದಲ್ಲಿ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣರವರು ಸಮಾವೇಶವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಶ್ರೀಯುತರು ಯುವವಾಹಿನಿಯ ಈ ಕಾರ್ಯಕ್ರಮ ಬಹಳ ಉತ್ತಮವಾಗಿದ್ದು, ಸಮಾಜದ ಯುವಜನರಿಗೆ ಅತ್ಯಗತ್ಯವಾಗಿದೆ. ತಮ್ಮ ಬಾಳಸಂಗಾತಿಗಳ ಹುಡುಕಾಟದಲ್ಲಿರುವ ಯುವಜನತೆಗೆ ಬಹಳ ಅನುಕೂಲಕರವಾಗಿರುವ ಇಂತಹ ಕೆಲಸ ಕಾರ್ಯಗಳು ಇನ್ನಷ್ಟು ನಡೆಯಬೇಕು. ಇಂತಹ ಕಾರ್ಯಗಳನ್ನು ನಾವೆಲ್ಲಾ ಸಂಪೂರ್ಣವಾಗಿ ಬೆಂಬಲಿಸಬೇಕು ಎಂದು ಶುಭ ಹಾರೈಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಗುರು ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀಮತಿ ಗೀತಾ ದಿವಾಕರ್ ಅಮೀನ್ ಭಾಗವಹಿಸಿ ಯುವವಾಹಿನಿಯ ಇಂತಹ ಸಮಾಜ ಮುಖಿ ಕಾರ್ಯಗಳು ಶ್ಲಾಘನೀಯ, ಅವುಗಳನ್ನು ಮುಂದುವರೆಸಿಕೊಂಡು ಹೋಗುವುದು ಅಗತ್ಯ ಎಂದು ನುಡಿದರು. ಮಹಿಳಾ ಘಟಕದ ಸದಸ್ಯೆಯರಾದ ಶ್ರೀಮತಿ ಉಮಾ ಶ್ರೀಕಾಂತ್, ಶ್ರೀಮತಿ ಅಮಿತ ಗಣೇಶ್ ಮತ್ತು ಕುಮಾರಿ ರೋಹಿಣಿ ಪ್ರಾರ್ಥಿಸಿದರು. ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ವಿದ್ಯಾರಾಕೇಶ್ ಅಧ್ಯಕ್ಷತೆ ವಹಿಸಿದ್ದು, ಸ್ವಾಗತ ಭಾಷಣ ಮಾಡಿದರು. ಯುವವಾಹಿನಿ ಮಹಿಳಾ ಸಂಘಟನಾ ನಿರ್ದೇಶಕಿ ಶ್ರೀಮತಿ ಗುಣವತಿ ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿ, ಮಹಿಳಾ ಘಟಕದ ಸಲಹೆಗಾರರಾದ ಅಶೋಕ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳಾ ಘಟಕದ ಕಾರ್ಯದರ್ಶಿ ಶ್ರೀಮತಿ ರೇಖಾ ಗೋಪಾಲ್ ವಂದಿಸಿದರು. ಶ್ರೀಮತಿ ಶುಭ ರಾಜೇಂದ್ರ ಕಾರ್ಯಕ್ರಮ ನಿರೂಪಿಸಿದರು. ನೆರೆದ ಸಮಾಜ ಬಾಂಧವರಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಸಭಾಂಗಣದಲ್ಲಿ ಅಳವಡಿಸ ಲಾಗಿದ್ದ ಎರಡು ದೊಡ್ಡ ಎಲ್‌ಇಡಿ ಪರದೆಗಳಲ್ಲಿ ಪ್ರತ್ಯೇಕವಾಗಿ ವಧುಗಳು ಮತ್ತು ವರರ ಭಾವ ಚಿತ್ರಗಳೊಂದಿಗೆ ಅವರಿಗೆ ಸಂಬಂಧಪಟ್ಟ ವಿವರಗಳನ್ನು ಆಸಕ್ತರ ಅವಗಾಹನೆಗಾಗಿ ಪ್ರದರ್ಶಿಸಲಾಯಿತು. ಜೊತೆಗೆ ಸಂಬಂಧಪಟ್ಟ ವಿವರಗಳನ್ನು ಧ್ವನಿವರ್ಧಕದ ಮೂಲಕ ಪ್ರಕಟಿಸ ಲಾಯಿತು. ಪ್ರತಿಯೊಬ್ಬರಿಗೂ ಪ್ರತ್ಯೇಕ ಗುರುತಿನ ಸಂಖ್ಯೆಗಳನ್ನು ನೀಡ ಲಾಗಿದ್ದು, ಮೆಚ್ಚುಗೆಯಾದ ವರ ಯಾ ವಧುವಿನ ಗುರುತಿನ ಸಂಖ್ಯೆಗಳನ್ನು ದಾಖಲಿಸಿಕೊಂಡು ಮುಂದೆ ಪ್ರೊಫೈಲ್ ಫಾರ್ಮ್ಯಾಟ್ ಪರಿಶೀಲನೆಗಾಗಿ ಅವಕಾಶ ಮಾಡಿಕೊಡಲಾಗಿತ್ತು. ಸುಮಾರು ೩ ಗಂಟೆಗಳ ಕಾಲ ನಡೆದ ಈ ವಧು ವರಾನ್ವೇಷಣಾ ಕಾರ್ಯಕ್ರಮದ ಬಳಿಕ ಸಮಾರೋಪ ಸಮಾರಂಭವನ್ನು ಏರ್ಪಡಿಲಾಗಿತ್ತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಗೋಕರ್ಣನಾಥ ಕ್ಷೇತ್ರದ ಖಜಾಂಚಿ ಪದ್ಮರಾಜ್, ನಮ್ಮ ಕುಡ್ಲ ವಾರ್ತಾವಾಹಿನಿಯ ಆಡಳಿತ ನಿರ್ದೇಶಕ ಲೀಲಾಕ್ಷ ಕರ್ಕೇರ, ಉಪ್ಪಿ ನಂಗಡಿಯ ದಂತ ವೈದ್ಯೆ ಡಾ| ಶ್ವೇತಾ ಅಶಿತ್ ಭಾಗವಹಿಸಿದ್ದರು. ಯುವ ವಾಹಿನಿಯ ವಧು ವರಾನ್ವೇಷಣಾ ಕಾರ್ಯಕ್ರಮವನ್ನು ತುಂಬು ಹೃದಯದಿಂದ ಶ್ಲಾಘಿಸಿದ ಅತಿಥಿಗಳು ಈ ದಿಶೆಯಲ್ಲಿ ಮುಂದುವರಿಯುವಂತೆ ಪ್ರೋತ್ಸಾಹಿಸಿದರಲ್ಲದೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಉಚಿತ, ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವುದಾದರೆ ಶ್ರೀ ಕ್ಷೇತ್ರದ ಸಂಪೂರ್ಣ ಸಹಕಾರವನ್ನು ಪದ್ಮರಾಜ್ ಘೋಷಿಸಿದರು. ಸಮಾ ರಂಭದಲ್ಲಿ ಮಾತನಾಡಿದ ಘಟಕದ ಅಧ್ಯಕ್ಷೆ ಶ್ರೀಮತಿ ವಿದ್ಯಾ ರಾಕೇಶ್ ಕಾರ್ಯಕ್ರಮದ ತಯಾರಿಯಲ್ಲಿ ಎದುರಾದ ಎಡರುತೊಡರುಗಳು, ದೊರೆತ ಅನುಭವ, ಜನರ ಪ್ರೋತ್ಸಾಹ, ಬೆಂಬಲಗಳನ್ನು ಸ್ಮರಿಸಿದರಲ್ಲದೆ ಕಾರ್ಯಕ್ರಮದ ತಯಾರಿ ಹಂತದಲ್ಲಿಯೇ ಸಂಬಂಧ ಕುದುರಿದ ಆರು ಜೋಡಿಗಳನ್ನು ಸಭೆಗೆ ಪರಿಚಯಿಸಿದರು. ಮಾತ್ರವಲ್ಲದೆ ಫಲಾನು ಭವಿಗಳು ತಮ್ಮ ಮನದಾಳದ ಮಾತುಗಳನ್ನು ಸಭೆಯ ಮುಂದಿಟ್ಟರು. ಸಮಾವೇಶದಲ್ಲಿ ಸಂಬಂಧ ಕುದುರಿದ ಓರ್ವ ಬಡ ಹೆಣ್ಣು ಮಗಳಿಗೆ ಯುವವಾಹಿನಿಯ ವತಿಯಿಂದ ಸರಳ ಮದುವೆ ಏರ್ಪಡಿಸುವ ಬಗ್ಗೆ ಸಮಾರಂಭದಲ್ಲಿ ತಿಳಿಸಲಾಯಿತು. ಮಹಿಳಾ ಘಟಕದ ಇನ್ನೋರ್ವ ಸಲಹೆಗಾರರಾದ ಟಿ. ಶಂಕರ್ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಿಳಾ ಘಟಕದ ಉಪಾಧ್ಯಕ್ಷೆ ಶ್ರೀಮತಿ ಲೋಲಾಕ್ಷಿ ಸ್ವಾಗತಿಸಿದ್ದು, ಕ್ರೀಡಾ ಮತ್ತು ಆರೋಗ್ಯ ನಿರ್ದೇಶಕಿ ರಶ್ಮಿ ಚಂದ್ರಶೇಖರ್ ವಂದಿಸಿದರು. ಶ್ರೀಮತಿ ಚಿತ್ರಾಕ್ಷಿ ಮನೋಜ್ ಮತ್ತು ಶ್ರೀ ರಾಕೇಶ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ಸಮಾರಂಭದಲ್ಲಿ ಎಲ್ಲಾ ಮಹಿಳಾ ಸಂಚಾಲಕರು ಮತ್ತು ಮಹಿಳಾ ಘಟಕದ ಸದಸ್ಯರು ಓಣಂ ಸೀರೆಯಲ್ಲಿ ಕಂಗೊಳಿಸಿದ್ದು ಬಹಳ ಶಿಸ್ತಿನಿಂದ ಕೆಲಸ ಮಾಡಿದರು. ಇತರ ಘಟಕದ ಸದಸ್ಯರು ಅತಿಥಿ ಸತ್ಕಾರ ಮತ್ತಿತರ ಕೆಲಸಗಳನ್ನು ವ್ಯವಸ್ಥಿತವಾಗಿ ನೆರವೇರಿಸಿದರು.
ಸಮಾವೇಶದಂದು ಜನಸಂದಣಿಯಿಂದಾಗಿ ಪರಿಶೀಲನೆಗೆ ತೊಂದರೆಯುಂಟಾದವರಿಗೆ ಮುಂದಿನ ಒಂದೆರಡು ತಿಂಗಳುಗಳ ಕಾಲ ಯುವವಾಹಿನಿಯ ಕೇಂದ್ರ ಕಚೇರಿಯಲ್ಲಿ ಪರಿಶೀಲನೆಗಾಗಿ ಅವಕಾಶವನ್ನು ಒದಗಿಸಲಾಗಿದ್ದು ಸಂಬಂಧ ಪಟ್ಟವರು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ.