ಅಡ್ವೆ: ಹಿಂದಿನ ಕಾಲದ ಪದ್ದತಿಯನ್ನು ಇಂದಿನ ಜನಾಂಗಕ್ಕೆ ಪರಿಚಯಿಸುವ ಸಲುವಾಗಿ ಆಟಿಡೊಂಜಿ ದಿನ ದಂತಹ ಕಾರ್ಯಕ್ರಮಗಳು ಇದೀಗ ಆಟಿ ತಿಂಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸುತ್ತಿದೆ. ಈಗಿನ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಇಂತಹ ಕಾರ್ಯಕ್ರಮಗಳು ತುಳುನಾಡಿನ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ಜೀವ ತುಂಬುತ್ತಿದ್ದು, ಮುಂದಿನ ಪೀಳಿಗೆಗಳು ನಮ್ಮ ಕೃಷಿ ಬದುಕನ್ನು ಟಿವಿ ಪರದೆ ಮೇಲೆ ನೋಡುವಂತಾಗದಿರಲಿ ಎಂದು ಸಾಹಿತಿ, ಹೆಜಮಾಡಿ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ವಾಮನ ಕೋಟ್ಯಾನ್ ನಡಿಕುದ್ರು ನುಡಿದರು. ಅವರು ಯುವವಾಹಿನಿ (ರಿ.) ಅಡ್ವೆ ಘಟಕದ ವತಿಯಿಂದ ದಿನಾಂಕ 12-08-2018 ರಂದು ಅಡ್ವೆ “ಆನಂದಿ ಸಭಾ ಭವನ” ದಲ್ಲಿ ನಡೆದ “ಆಟಿಡೊಂಜಿ ದಿನ” ಕಾರ್ಯಕ್ರಮದಲ್ಲಿ “ಆಟಿದ ಮದಿಪು” ನೀಡುತ್ತಾ ಈ ಮಾತುಗಳನ್ನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಅಡ್ವೆ ಶ್ರೀ ಬ್ರಹ್ಮ ಬೈದರ್ಕಳ ಸೇವಾ ಸಮಿತಿ ಇದರ ಅಧ್ಯಕ್ಷರಾದ ಶ್ರೀ ಸುಂದರ ಯು. ಸುವರ್ಣರವರು “ತುಪ್ಪೆಗೆ ಸಿರಿ ಜೋಡಿಸುವುದರ” ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಉಪಾಧ್ಯಕ್ಷರಾದ ಶ್ರೀ ನರೇಶ್ ಕುಮಾರ್ ಸಸಿಹಿತ್ಲು ಮಾತನಾಡಿ “ಇಂತಹ ಕಾರ್ಯಕ್ರಮದ ನೆಪದಲ್ಲಾದರು ನಾವೆಲ್ಲ ಒಂದಾಗುತ್ತಿದ್ದು, ಎಲ್ಲಾ ಮನೆಗಳ ಅಡುಗೆ ಪದಾರ್ಥಗಳು ಒಟ್ಟಿಗೆ ಸೇರಿಸಿ ಎಲ್ಲರೂ ಒಂದೇ ಮನೆಯವರ ತರಹ ಊಟ ಮಾಡುವುದೇ ಒಂದು ಖುಷಿಯ ಸಂಗತಿ” ಎಂದು ನುಡಿದರು.
ಈ ವರ್ಷದ “ಆಟಿದ ತಮ್ಮನ” ದ ಗೌರವವನ್ನು ಬ್ರಹ್ಮಶ್ರೀ ನಾರಯಣ ಗುರು ಮಂದಿರ ಪಡುಬಿದ್ರಿ ಇದರ ಅರ್ಚಕರಾದ ಶ್ರೀ ಚಂದ್ರಶೇಖರ ಶಾಂತಿ ಇವರಿಗೆ ನೀಡಲಾಯಿತು. ಗೌರವವನ್ನು ಸ್ವೀಕರಿಸಿದ ಶ್ರೀಯುತರು, ಇಂದಿನ ಕಾಲದಲ್ಲಿ ಆಯುರ್ವೇದ ಪದ್ದತಿಯು ನಶಿಸುತ್ತಿದ್ದು, ಆಯುರ್ವೇದ ಗಿಡಗಳ ಪರಿಚಯದ ಅಗತ್ಯತೆಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮೆಸ್ಕಾಂ ಕಾಪು ಇದರ ಸಹಾಯಕ ಇಂಜಿನಿಯರ್ ಶ್ರೀಮತಿ ಜಯಸ್ಮಿತಾ, ಎ.ಪಿ.ಎಂ.ಸಿ. ಸದಸ್ಯರಾದ ಶ್ರೀ ನವೀನ್ ಚಂದ್ರ ಸುವರ್ಣ, ಶ್ರೀ ನವೀನ್ ಜೆ. ಕರ್ಕೇರ ಭಾರತ್ ಬ್ಯಾಂಕ್ ಮುಂಬಯಿ, ಶ್ರೀ ಸದಾಶಿವ ಕೋಟ್ಯಾನ್ ಭ್ಯಾಂಕ್ ಆಫ್ ಬರೋಡ ಮಂಗಳೂರು ಇವರುಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪರಿಸರದ ವಿವಿಧ ಶಾಲೆಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು. ಅಲ್ಲದೇ ಕಳೆದ ಸುಮಾರು ವರ್ಷಗಳಿಂದ ಎಷ್ಟೋ ಕಾರ್ಯಕ್ರಮಗಳಿಗೆ ಹುಲಿ ವೇಷ ಹಾಗೂ ಮರಗಾಲು ಸೇವೆ ಮಾಡುತ್ತಿರುವ ಶ್ರೀ ಅಶೋಕ್ ಪೂಜಾರಿ ಮತ್ತು ಸುಮಾರು ವರ್ಷಗಳಿಂದ ಪೋಸ್ಟ್ ಮ್ಯಾನ್ ವೃತ್ತಿ ಮಾಡುತ್ತಿರುವ ಶ್ರೀ ವಿಠ್ಠಲ ಪೂಜಾರಿಯವರನ್ನು ಗುರುತಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ವಿವಿಧ ಬಗೆಯ ಆಯುರ್ವೇದ ಗಿಡಗಳನ್ನು ಜೋಡಿಸಿದ್ದು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತ್ತು. ಕಾರ್ಯಕ್ರಮದ ಸಂಚಾಲಕರಾದ ಶ್ರೀ ಲಕ್ಷ್ಮಣ್ ಕೋಟ್ಯಾನ್ ಮತ್ತು ಶ್ರೀಮತಿ ಅಮಿತಾ ಶ್ರೀಧರ್ ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷರಾದ ಶ್ರೀ ಜಿತೇಶ್ ಜೆ. ಕರ್ಕೇರ ಸ್ವಾಗತಿಸಿ, ಮಾಜಿ ಅಧ್ಯಕ್ಷ ಶ್ರೀ ಪ್ರವೀಣ್ ಕುಮಾರ್ ಪ್ರಸ್ತಾವಿಸಿದರು. ಕಾರ್ಯದರ್ಶಿ ಶ್ರೀ ಪ್ರಸನ್ನ ಕುಮಾರ್ ವಂದಿಸಿದರು. ಶ್ರೀ ವಿನೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ತದ ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಸಭಾ ಕಾರ್ಯಕ್ರಮದ ಮುನ್ನ “ಶ್ರೀ ಅಮೃತವರ್ಷಿಣಿ ಮಹಿಳಾ ವೃಂದ” ಅಡ್ವೆ ಇವರಿಂದ ಭಜನಾ ಕಾರ್ಯಕ್ರಮ ನಡೆದಿತ್ತು. ಮಧ್ಯಾಹ್ನದ ಊಟಕ್ಕೆ ಘಟಕದ ಸದಸ್ಯರು ಹಾಗೂ ಊರಿನ ಮಹಿಳೆಯರು ತಯಾರಿಸಿದ ಒಟ್ಟು 27 ಬಗೆಯ ಖಾದ್ಯಗಳನ್ನು ಬಡಿಸಲಾಗಿತ್ತು.