ಮಾಣಿ : ತುಳು ಬದುಕು ಎನ್ನುವುದು ಹಲವು ಆಯಾಮಗಳ ಒಟ್ಟು ಮೊತ್ತದ ಪ್ರತಿರೂಪ. ಇಲ್ಲಿನ ಸಂಸ್ಕ್ರತಿ , ಆಚರಣೆ, ವೈಶಿಷ್ಟಗಳು ಅನನ್ಯವಾದುದು. ದೈವಾರಾಧನೆಯಲ್ಲಿ ಬಳಕೆಯಾಗುವ ನುಡಿಗಟ್ಟುಗಳು ತುಳುವರ ಬದುಕಿನ ಶ್ರೀಮಂತಿಕೆಗೆ ಸಾಕ್ಷಿ. ಅವುಗಳ ಮರು ಪ್ರಸ್ತುತಿಯು ಆಟಿಡೊಂಜಿ ದಿನದಂತಹ ಕಾರ್ಯಕ್ರಮದಲ್ಲಿ ನಡೆದು ಬರುತ್ತಿರುವುದು ಸಮಂಜಸವಾಗಿದೆ ಎಂದು ಬಂಟ್ವಾಳ ಎಸ್.ವಿ.ಎಸ್ ಕಾಲೇಜಿನ ಉಪನ್ಯಾಸಕ ಚೇತನ್ ಮುಂಡಾಜೆ ನುಡಿದರು.
ಅವರು ಯುವವಾಹಿನಿ (ರಿ) ಮಾಣಿ ಘಟಕದ ವತಿಯಿಂದ ದಿನಾಂಕ: 29.07.2018ರ ಆದಿತ್ಯವಾರದಂದು ಮಾಣಿ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಜರುಗಿದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಆಟಿ ತಿಂಗಳು ಪರಂಪರೆಯಲ್ಲಿ ಸಂಕ್ರಮಣದ ಕಾಲಘಟ್ಟದ ಸಂಕೇತ. ಆ ಸಂದರ್ಭದಲ್ಲಿ ಬೇಕಾದ ಬದುಕಿನ ಕ್ರಮದ ಅನನ್ಯತೆ ಇದರ ವಿಶೇಷ. ಇಂದಿನ ಪೀಳಿಗೆಯ ಯುವ ಸಮೂಹ ಹಾಗೂ ಮಕ್ಕಳಿಗೆ ಅದರ ಪರಿಚಯದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಣಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಗೌರವಾಧ್ಯಕ್ಷರಾದ ಈಶ್ವರ ಪೂಜಾರಿಯವರು ನೆರವೇರಿಸಿದರು.
ಬಾಳೆಯ ದಿಂಡಿನಲ್ಲಿ ಹಣತೆಯನ್ನು ಬೆಳಗಿಸಿ ತುಳುವ ಚಾವಡಿಗೆ ಬಂದ ಆಟಿಕಳಂಜನಿಗೆ ಭತ್ತ ಕಾಣಿಕೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಶುಭಚಾಲನೆ ನೀಡಿಲಾಯಿತು. ಮುಖ್ಯ ಆಥಿತಿಗಳಾಗಿ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಟಿ. ಶಂಕರ್ ಸುವರ್ಣ, ಮಾಣಿ ಬಿಲ್ಲವ ಸಂಘದ ಅಧ್ಯಕ್ಷರಾದ ನಾರಾಯಣ ಸಾಲ್ಯಾನ್, ಮಾಣಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಸೋಮಪ್ಪ ಸುವರ್ಣ, ಕೇಂದ್ರ ಸಮಿತಿಯ ಸಲಹೆಗಾರರಾದ ಪ್ರೇಮನಾಥ ಕೆ., ಸಂಘಟನಾ ಕಾರ್ಯದರ್ಶಿ ಸತೀಶ್ ಬಾಯಿಲ, ದಯಾನಂದ ಕೊಡಾಜೆ, ಸಂಚಾಲಕರಾದ ಹರೀಶ್ ಬಾಕಿಲ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿವನಿ (ರಿ) ಮಾಣಿ ಘಟಕದ ಅಧ್ಯಕ್ಷರಾದ ರಾಜೇಶ್ ಪೂಜಾರಿ ಬಾಬನಕಟ್ಟೆ ವಹಿಸಿದ್ದರು. ರಮೇಶ್ ಮುಜಲ ಅಭಿನಂದಿತರ ಪಟ್ಟಿ ರಚಿಸಿದರು. ಯಶೋದರ ಮುಳಿಬೈಲು ಪ್ರಾರ್ಥಿಸಿದರು. ಕಾರ್ಯದರ್ಶಿ ಪ್ರಶಾಂತ್ ಅನಂತಾಡಿ ವಂದಿಸಿದರು.
ದೀಪಕ್ ಮಂಡಲ ಕಾರ್ಯಕ್ರಮ ನಿರೂಪಿಸಿದರು. ನಂತರ ಸ್ವರ್ಣಜ್ಯೋತ್ಸ್ನಾ ಮತ್ತು ತಂಡದವರಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು. ಮಧ್ಯಾಹ್ನದ ಭೋಜನದ ಆಟಿ ಅಟಿಲ್ ವಿಶೇಷತೆಯಲ್ಲಿ ಸುಮಾರು 22 ಬಗೆಯ ಆಟಿ ತಿಂಗಳ ನೆನಪನ್ನು ಸಾರುವ ತಿನಿಸುಗಳ ವ್ಯವಸ್ಥೆಯನ್ನು ಯುವವಾಹಿನಿ ಘಟಕದ ಸದಸ್ಯರು ಮಾಡಿಕೊಂಡಿದ್ದು ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾಯಿತು.