ಮಂಗಳೂರು : ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ(ರಿ) ಮಂಗಳೂರು ಮಹಿಳಾ ಘಟಕದ ಆತಿಥ್ಯದಲ್ಲಿ ದಿನಾಂಕ 03.06.2018 ರಂದು ಮಂಗಳೂರು ಯುವವಾಹಿನಿ ಸಭಾಂಗಣದಲ್ಲಿ ಜರುಗಿದ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸಾಹಿತಿ ವಿಮರ್ಶಕಿ ಬಿ.ಎಮ್.ರೋಹಿಣಿ ಅವರಿಗೆ 2017 ರ ವಿಶುಕುಮಾರ್ ಪ್ರಶಸ್ತಿ ಪ್ರದಾನಿಸಲಾಯಿತು.
ಪ್ರಶಸ್ತಿ ಪ್ರದಾನಿಸಿದ ಹಿರಿಯ ಸಂಘಟಕಿ ಕೆ.ಎ.ರೋಹಿಣಿಯವರು ಮಾತನಾಡಿ ಬಿ.ಎಮ್.ರೋಹಿಣಿಯವರ ಸಾಧನೆಗೆ ಅರ್ಹವಾಗಿ ವಿಶುಕುಮಾರ್ ಪ್ರಶಸ್ತಿ ದೊರೆತಿದೆ ಎಂದರು.
ಛಲವಾದಿಯಾಗಿರುವ ಅವರು ಸಾಹಿತ್ಯ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡವರು. 74 ರ ಇಳಿ ವಯಸ್ಸಿನಲ್ಲೂ ಬಿಲ್ಲವರ ಗುತ್ತಿನ ಮನೆಗಳ ಬಗ್ಗೆ ಕ್ಷೇತ್ರ ಕಾರ್ಯ ನಡೆಸಿ ಸಂಶೋಧನೆ ನಡೆಸುತ್ತಿರುವುದು ಸಾಹಿತ್ಯಕ ಕೆಲಸಗಳ ಬಗ್ಗೆ ಅವರಲ್ಲಿರುವ ತುಡಿತವನ್ನು ತೋರುಸುತ್ತದೆ ಎಂದು ಕೆ.ಎ.ರೋಹಿಣಿ ಶ್ಲಾಘಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಿ.ಎಮ್.ರೋಹಿಣಿ ಅವರು ವಿಶುಕುಮಾರ್ ಕತೆಗಾರ ಕಾದಂಬರಿಕಾರ, ನಟ, ನಿರ್ದೇಶಕ, ಪತ್ರಕರ್ತರಾಗಿ ವಿವಿಧ ವಿಭಾಗಗಳಲ್ಲಿ ಪ್ರಸಿದ್ಧಿ ಪಡೆದವರು, ಅವರ ಹಲವು ಕಾದಂಬರಿ ಮತ್ತು ಕೃತಿಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ, ಅವುಗಳನ್ನು ಮರುಮುದ್ರಿಸಬೇಕಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ.ಭಂಡಾರಿ ಮಾತನಾಡಿ ವಿಶುಕುಮಾರ್ ಅವರ ಕಾದಂಬರಿಗಳನ್ನು ಮರುಮುದ್ರಣ ಗೊಳಿಸುವ ಕಾರ್ಯವನ್ನು ಮಾಡಲು ಯುವವಾಹಿನಿಯ ಜತೆ ತುಳು ಸಾಹಿತ್ಯ ಅಕಾಡೆಮಿ ಕೈಜೋಡಿಸಲು ಸದಾ ಸಿದ್ದವಿದೆ ಎಂದರು.
ಇದೇ ಸಂದರ್ಭದಲ್ಲಿ ಯುವ ಸಾಹಿತಿ, ರಂಗ ನಿರ್ದೇಶಕ ಸ್ಮಿತೇಶ್ ಎಸ್.ಬಾರ್ಯ ಇವರಿಗೆ ಪ್ರಭಾಕರ ನೀರುಮಾರ್ಗ ಯುವವಾಹಿನಿ ಯುವ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಖ್ಯಾತ ರಂಗಕರ್ಮಿ ವಿ.ಜಿ.ಪಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿಶುಕುಮಾರ್ ಪ್ರಶಸ್ತಿ ಪುರಸ್ಕೃತ ಬಿ.ಎಮ್. ರೋಹಿಣಿ ಅವರು ಯುವವಾಹಿನಿ ವಿದ್ಯಾನಿಧಿಗೆ ರೂ.25,000/- ಧನಸಹಾಯ ನೀಡಿದರು. ಮಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ.ಸಿ.ಕರ್ಕೇರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು,
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ಸ್ವಾಗತಿಸಿದರು, ಮಾಜಿ ಅಧ್ಯಕ್ಷ ಸಾಧು ಪೂಜಾರಿ ಪ್ರಸ್ತಾವನೆ ಮಾಡಿದರು, ಯುವವಾಹಿನಿ ಮುಲ್ಕಿ ಘಟಕದ ಸದಸ್ಯರು ನಾಡ ಗೀತೆ ಹಾಡಿದರು, ವಿಶುಕುಮಾರ್ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯ ಪ್ರಭಾಕರ ನೀರುಮರ್ಗ ಆಯ್ಕೆ ಸಮಿತಿಯ ಸದಸ್ಯರ ಪರವಾಗಿ ಪುರಸ್ಕೃತರ ಬಗ್ಗೆ ಮಾತನಾಡಿದರು ಯುವಸಿಂಚನ ಪತ್ರಿಕೆಯ ಸಂಪಾದಕಿ ಶುಭಾ ರಾಜೇಂದ್ರ ಹಾಗೂ ಉಪಸಂಪಾದಕ ರಾಜೇಶ್ ಸುವರ್ಣ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು.
ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಸಂಚಾಲಕ ಟಿ.ಶಂಕರ ಸುವರ್ಣ ಧನ್ಯವಾದ ನೀಡಿದರು, ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.
ಪ್ರಶಸ್ತಿ ಪ್ರದಾನ ಸಮಾರಂಭ ಮುನ್ನ ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
MEMORABLE EVENT, WELL ORGANIZED