ವಿಶ್ವ ತಾಯಂದಿರ ದಿನದ ಪ್ರಯುಕ್ತ ಮಾತೃ ಸಂಹಿತ ಕಾರ್ಯಕ್ರಮ

ತಾಯಿ ಮನುಕುಲದ ಶಾಲೆಗೆ ಗುರು : ಕೇಶವ ಎಚ್

ಮಂಗಳೂರು : ತಾಯಿ ಮನುಕುಲದ ಶಾಲೆಗೆ ಗುರುವಾಗಿದ್ದಾಳೆ, ಮನೆ ಎಂಬ ಪಾಠಶಾಲೆ ಹಾಗೂ ಪಾಕಶಾಲೆಗೆ ಶೋಧನೆ, ಸಂಶೋಧನೆಯ ಜ್ಞಾನಿ ವಿಜ್ಞಾನಿಯಾಗಿರುತ್ತಾಳೆ, ಪ್ರೀತಿಯ ಮುತ್ತಿಟ್ಟು, ಅನ್ನದ ತುತ್ತಿಟ್ಟು ಉಣಿಸಿ ತಣಿಸುವ ಅನ್ನಪೂರ್ಣೆ, ನಿದ್ದೆಗೆ ಲಾಲಿ ಜೋಗುಳ ಹಾಡಿ ಮಲಗಿಸುವ ಸಂಗೀತಗಾರ್ತಿ ಅಮ್ಮ, ಹೀಗೆ ಸಮಗ್ರ ಶಕ್ತಿಗೆ ಚೇತನದ ಅಮೃತದ ಸೆಲೆಯಾಗಿ ಸರ್ವರ ಹೃದಯದ ಆರಾಧನಾ ಮೂರ್ತಿಯಾಗಿರುತ್ತಾಳೆ ಎಂದು ಮುಲ್ಕಿ ನಾರಾಯಣಗುರು ಕಾಲೇಜಿನ ಉಪನ್ಯಾಸಕರಾದ ಕೇಶವ ಎಚ್ ತಿಳಿಸಿದರು.

ಅವರು ದಿನಾಂಕ‌ 27.05.2018 ರಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ) ಸುರತ್ಕಲ್ ಘಟಕದ ಆತಿಥ್ಯದಲ್ಲಿ ಮಂಗಳೂರು ಯುವವಾಹಿನಿ ಸಭಾಂಗಣದಲ್ಲಿ ವಿಶ್ವ ತಾಯಂದಿರ ದಿನದ ಪ್ರಯುಕ್ತ ಜರುಗಿದ ಮಾತೃಸಂಹಿತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕರಾವಳಿ ಲೇಖಕಿಯರ, ವಾಚಕಿಯರ ಸಂಘದ ಅದ್ಯಕ್ಷೆ ಶಶಿಲೇಖಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವವಾಹಿನಿಯ ಯುವಕರಲ್ಲಿ ಗುರುಹಿರಿಯರ ಬಗ್ಗೆ ಇರುವ ಅಪಾರ ಕಾಳಜಿ‌ ಶ್ಲಾಘನೀಯ ಎಂದರು.

ಸುರತ್ಕಲ್ ಅಗರಿ ಎಂಟರ್ ಪ್ರೈಸಸ್ ನ ಮಾಲಕ ಅಗರಿ ರಾಘವೇಂದ್ರ ರಾವ್ ಯುವವಾಹಿನಿ ಸುರತ್ಕಲ್ ಘಟಕದ ಸಲಹೆಗಾರರಾದ ಸಾಧು ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ಅಡುಗೆ ಸ್ಪರ್ಧೆ

ವಿಶ್ವ ತಾಯಂದಿರ ದಿನದ ಪ್ರಯುಕ್ತ ಯುವವಾಹಿನಿ ಅಂತರ್ ಘಟಕ ಮಹಿಳೆಯರ ಬೆಂಕಿ ರಹಿತ ಅಡುಗೆ ಸ್ಪರ್ದೆ ಏರ್ಪಡಿಸಲಾಗಿತ್ತು. ಯುವವಾಹಿನಿಯ 12 ಘಟಕಗಳ ನೂರಕ್ಕೂ ಹೆಚ್ಚು ವೈವಿಧ್ಯಮಯ , ರುಚಿಕರ ತಿಂಡಿ ತಿನಿಸುಗಳು ಎಲ್ಲರ ಆಕರ್ಷಣೆಯ ಕೇಂದ್ರವಾಯಿತು.

ಪಡುಬಿದ್ರೆ  ಘಟಕ ಪ್ರಥಮ , ಕೆಂಜಾರು ಕರಂಬಾರು ಘಟಕ ದ್ವಿತೀಯ ಬಹುಮಾನ ಪಡೆದರು, ಮಂಗಳೂರು ಮಹಿಳಾ ಘಟಕ, ಬಂಟ್ವಾಳ ಘಟಕ ಹಾಗೂ ಬಜಪೆ ಘಟಕಗಳು‌ ತೀರ್ಪುಗಾರರ ಮೆಚ್ಚುಗೆ ಪಡೆದವು. ಮೂಡಬಿದ್ರೆ ಘಟಕ ಹಾಗೂ ಪಡುಬಿದ್ರೆ ಘಟಕ ಉತ್ತಮ‌ ಪ್ರಸ್ತುತಿ ಬಹುಮಾನ‌ ಗಳಿಸಿತು.
ಜೋಯ್ಸ್  ಡಿಸೋಜ, ಭಾರತಿ ಶರತ್ , ಗುಣವತಿ ರಮೇಶ್ ತೀರ್ಪುಗಾರರಾಗಿ ಭಾಗವಹಿಸಿದ್ದರು.

ಯುವವಾಹಿನಿ ಸುರತ್ಕಲ್ ಘಟಕದ ಅಧ್ಯಕ್ಷ ಅಶೋಕ್ ಸುವರ್ಣ ಸ್ವಾಗತಿಸಿದರು, ಕಾರ್ಯಕ್ರಮದ ಸಂಚಾಲಕರಾದ ಗುಣವತಿ ರಮೇಶ್ ಪ್ರಾಸ್ತಾವಿಕ ಮಾತಾಡಿದರು, ಕಾರ್ಯದರ್ಶಿ ರಂಜಿತ್ ಕುಮಾರ್ ಧನ್ಯವಾದ ನೀಡಿದರು, ವಿವೇಕ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು

One thought on “ತಾಯಿ ಮನುಕುಲದ ಶಾಲೆಗೆ ಗುರು : ಕೇಶವ ಎಚ್

Leave a Reply

Your email address will not be published. Required fields are marked *

error: Content is protected !!