ಮಂಗಳೂರು : ಕೌಟುಂಬಿಕ ವಲಯದಲ್ಲಿರುವ ವ್ಯಕ್ತಿಗಳಿಗೆ ಹೆಣ್ಣು ಆಸಕ್ತಿಯ, ಆತ್ಮ ಸಂಗಾತದ ವಿಷಯ. ತಾಯಿಯಾಗಿ, ತಂಗಿಯಾಗಿ, ಅಕ್ಕನಾಗಿ, ಹೆಂಡತಿಯಾಗಿ, ನಾದಿನಿಯಾಗಿ, ಅತ್ತಿಗೆಯಾಗಿ, ಅತ್ತೆಯಾಗಿ, ಗೆಳತಿಯಾಗಿ, ಪ್ರೇಮಿಯಾಗಿ ಆಕೆ ನಿರ್ವಹಿಸುವ ಪಾತ್ರಗಳು ಅದ್ಬುತ, ವರ್ಣನಾತೀತ. ಏಕೆಂದರೆ ಸ್ತ್ರೀ ಒಂದು ಸಮುದಾಯವನ್ನು ಸಮರ್ಥವಾಗಿ ಪ್ರತಿನಿಧಿಸುವ ಸಾಮರ್ಥ್ಯ ಹೊಂದಿರುವಂತಹವಳು. ಕೌಟುಂಬಿಕ ವಲಯದ ಸ್ತ್ರೀ ಕುಟುಂಬದ ಕಟ್ಟುಪಾಡುಗಳಿಗೆ ಒಳಗಾಗಿ ಜೀವನ ನಡೆಸುತ್ತಿದ್ದಾಳೆ ಹಾಗೂ ಆಕೆ ತನ್ನ ಕುಟುಂಕ್ಕಾಗಿ ಎಲ್ಲಾ ತ್ಯಾಗಕ್ಕೂ ಸಿದ್ದಳಾಗಿರುತ್ತಾಳೆ ಎಂದು ಅನುಪಮಾ ಮಹಿಳಾ ಮಾಸಿಕ ಪತ್ರಿಕೆಯ ಸಂಪಾದಕರು, ಹಾಗೂ ಸಾಹಿತಿ ಶಹನಾಝ್ .ಎಮ್ .ಪಾಂಡೇಶ್ವರ್ ತಿಳಿಸಿದರು.
ಅವರು ದಿನಾಂಕ 05.05.2018 ರಂದು ಮಂಗಳೂರು ಉರ್ವಾಸ್ಟೋರ್ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ಜರುಗಿದ ಸಂತೃಪ್ತ ಮಹಿಳೆ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು
ಹೆಣ್ಣು ಗಂಡು ಇಬ್ಬರೂ ಬದುಕಿನ ಬಂಡಿಯ ಎರಡು ಚಕ್ರಗಳಿದ್ದಂತೆ, ಪ್ರಸ್ತುತ ದಿನಗಳಲ್ಲಿ ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರೂ ಆಕೆಯ ಮೇಲಿನ ದೌರ್ಜನ್ಯ ಕಡಿಮೆಯಾಗಿಲ್ಲ. ಸ್ತ್ರೀ ನಾಲ್ಕು ಗೋಡೆಗಳ ನಡುವೆ ಕಾಲಕಳೆಯುವ ಕಾಲವೀಗ ಕಣ್ಮರೆಯಾಗಿ, ಪುರುಷಪ್ರಧಾನ ಸಮಾಜದಲ್ಲಿ ಪುರುಷರಷ್ಟೇ ಧೀಮಂತಿಕೆಯಿಂದ ಬದುಕಲು ಸಾಧ್ಯವಿದೆಯೆಂದು ಹಲವಾರು ರೀತಿಯ ಸಾಧನೆಗಳನ್ನು ಮಾಡುವುದರ ಮೂಲಕ ತೋರಿಸಿ ಕೊಟ್ಟಿದ್ದಾಳೆ. ಎಲ್ಲಾ ಕ್ಷೇತ್ರದಲ್ಲೂ ಮುನ್ನಡೆಯುತ್ತಾ ಜಗತ್ತಿನ ದೃಷ್ಟಿಯನ್ನು ತನ್ನೆಡೆ ಸೆಳೆದಿದ್ದಾಳೆ. ಪ್ರತಿಭೆ, ಕಲೆ ,ಕ್ರೀಡೆ , ಸಾಹಿತ್ಯ, ಸಾಹಸ ಪ್ರವೃತ್ತಿಯಂತಹ ಸಾಧನೆಯಲ್ಲಿ ತೊಡಗಿ ವಿಶ್ವದ ಗೌರವಕ್ಕೆ ಪಾತ್ರಳಾಗಿದ್ದಾಳೆ ತನ್ನ ಹಲವಾರು ಉತ್ತಮ ಗುಣ, ನಡತೆಗಳಿಂದ ಸರ್ವಸಂಪನ್ನಳೆನಿಸಿ ಪೂಜನೀಯಳು ಆಗಿದ್ದಾಳೆ. ಇಂದಿನ ಸ್ತ್ರೀ ತನ್ನ ಮೇಲಾಗುತ್ತಿರುವ ಅನ್ಯಾಯ, ಅನಾಚಾರ, ಅತ್ಯಾಚಾರ ತಡೆಯುವಲ್ಲಿ ವಿಫಲಳಾಗುತ್ತಿದ್ದಾಳೆ. ದೇಶದೆಲ್ಲೆಡೆ ನಡೆಯುತ್ತಿರುವ ಸ್ತ್ರೀ ದೌರ್ಜನ್ಯವನ್ನು ತಡೆಯುವ ದಾರಿ ಕಾಣದೆ ಅಸಹಾಯಕಳಾಗಿದ್ದಾಳೆ. ತಾನಿರುವ ವಲಯಗಳಲ್ಲಿ ನಡೆಯುವ ಶೋಷಣೆಗೆ ಸಿಲುಕಿ ಜರ್ಝರಿತಳಾಗಿದ್ದಾಳೆ. ಪ್ರೀತಿ, ಸ್ನೇಹ, ಆತ್ಮವಿಶ್ವಾಸದ ಬದುಕು ಈಗೀಗ ದುಸ್ತರವಾಗುತ್ತಿದೆ. ಕಾನೂನು ಸ್ತ್ರೀಯರ ಪರವಾಗಿದ್ದರೂ, ತನಗಿರುವ ಮಿತಿಗಳಿಂದ ಹೊರಬಾರಲಾರದೆ ಮನದೊಳಗೆ ಕುಗ್ಗುತ್ತಿದ್ದಾಳೆ.ಎಂದು ಸಾಹಿತಿ ಶಹನಾಝ್ .ಎಮ್ .ಪಾಂಡೇಶ್ವರ್ ಅಭಿಪ್ರಾಯ ಪಟ್ಟರು .
ಯುವವಾಹಿನಿ(ರಿ) ಕೇಂದ್ರಸಮಿತಿ ಅಧ್ಯಕ್ಷರಾದ ಯಶವಂತ್ ಪೂಜಾರಿ ದೀಪ ಬೆಳಗಿಸಿ ಕಾರ್ಯಕ್ರಮದ ಉದ್ಘಾಟಿಸಿದರು. ಯುವವಾಹಿನಿ(ರಿ) ಮಂಗಳೂರು ಮಹಿಳಾ ಘಟಕದ ಅಧ್ಯಕ್ಷರಾದ ರಶ್ಮಿ ಸಿ. ಕರ್ಕೇರಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು .
ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಮಾಜಿ ಅಧ್ಯಕ್ಷರಾದ ವಿದ್ಯಾ ರಾಕೇಶ್ ಪ್ರಾಸ್ತಾವಿಕ ಮಾತುಗಳ ಮೂಲಕ ಸ್ವಾಗತಿಸಿದರು . ಕಾರ್ಯದರ್ಶಿ ರವಿಕಲಾ ವಂದಿಸಿದರು . ಉಪಾಧ್ಯಕ್ಷರಾದ ಉಮಾಶ್ರಿಕಾಂತ್ ಕಾರ್ಯಕ್ರಮ ನಿರೂಪಿಸಿದರು