ಸಖ್ಯ ಸುಖಕೆ ಪರಿಧಿ ಇದೆಯೇ? ಅಂತರಂಗದಲಿ ತಣ್ಣಗೆ ಹರಿದಾಡಿ ಮುದಗೊಳಿಸಿ,ಹಿತಾನುಭವ ಜೊತೆಜೊತೆಗೆ ಭದ್ರತೆಯ ಭಾವ ಉಣಿಸಿ ಸಮೃದ್ಧಗೊಳಿಸುವುದು.ಅಂತೇ ಸಖಿ- ಸಖ ಪದಗಳು ಪಂಚೇಂದ್ರಿಯಗಳ ಮುಟ್ಟಿದರೆ ಉಲ್ಲಾಸ. ತಂಗಾಳಿ ಸ್ಪರ್ಶಿಸಿದಂತೆ.
ಈ ಭಾವ ನೆನಕೆಗೆ ದಿನಾಂಕ08.04.2018 ರಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ ಆತಿಥ್ಯದಲ್ಲಿ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ ನಲ್ಲಿ ವಿಶ್ವ ಮಹಿಳಾ ದಿನಾಚರಣೆಯ ನೆನಪಿನಲ್ಲಿ ” ಸಖೀ ಸಂವಾದ” ಅರಳಿಸುವ ಜವಾಬ್ದಾರಿಯನ್ನ ನಿಭಾಯಿಸಿತ್ತು.
ಹೆಸರಿನಲ್ಲೇ ಹೂವಿನಲಿ ಅಡಗಿಹ ಗಂಧದ ಸೆಳೆತ ..ಕರೆದವರು ಸಖೀ ಅಮಿತ. ವೇದಿಕೆಯಲ್ಲಿ ಸಂವಾದ, ಮಾತು, ಹರಟೆ, ಕನಸು ಎನ್ನುತ್ತ ನನ್ನ ಅಕ್ಕ ಪಕ್ಕ ಕೂತು ಹೆಣ್ಣಿನ ಸಮಸ್ಯೆ, ಜವಾಬ್ದಾರಿ, ಮನಸ್ಸು ಯೋಚನೆ..ಆಕೆಯ ಸಮಾಜಮುಖಿ ನಡೆ, ಗೌರವಿಸಲ್ಪಡುವ- ಘಾಸಿಗೊಳ್ಳುವ ಹೆಣ್ತನ, ಆಕೆಯ ವೃತ್ತಿ- ಪೃವೃತ್ತಿ..ಹೀಗೆ ತಮ್ಮೊಳಗನ್ನ ಹರವಿ ಸಂವಾದದ ಬೆಡಗನ್ನೂ ಹೆಚ್ಚಿಸಿ ನಿಜ ಅರ್ಥದಲ್ಲಿ ಪರಿಪೂರ್ಣಗೊಳಿಸಿದವರು ಈ ಸಾಧಕಿಯರು.
ಸುಮಾರು 3 ತಾಸುಗಳ ಕಾಲ ಅಂತರಂಗದ ರಿಂಗುಣಿತ ನಾದ ವೀಕ್ಷಕ,ಪ್ರೇಕ್ಷಕರನ್ನು ಹೊರಹೋಗದಂತೆ ತಡೆದು ಕೂರಿಸಿತು. ಭಾವ ನಶೆ, ವಾಸ್ತವದ ಸಜೀವ ಚಿತ್ರ ಚಿತ್ರಿಸುತ್ತ ..ಪ್ರತಿಸ್ಪಂದನವನ್ನೂ ಜೊತೆಜೊತೆಗೆ ಆಯುತ್ತ ನಡೆದ ನಡೆ ಇದಾಗಿತ್ತು. ಇದು ವಾದ- ಪ್ರತಿವಾದದ ಅಂಗಣವಾಗಿರಲಿಲ್ಲ. ಯಾವುದೋ ಸುಂದರ ಗೀತೆಯ ನೆನಪಿಸುತ್ತಾ ಗುನುಗುತ್ತಾ..ದಡದಲ್ಲಿರುವವರನ್ನೂ ತನ್ನಜೊತೆ ಕರೆದೊಯ್ಯುವ ನನ್ನೂರ ಹೊಳೆ ನೆನಪಾಯಿತು. ಇಲ್ಲೂ ಒಂದಿಷ್ಟು ಸಾತ್ವಿಕ ಆಕ್ರೋಶದ ಕಿಡಿ, ಅಸಾಯಕತೆಗಳು ಜೊತೆಜೊತೆಗೆ ಭರವಸೆ, ಬುಟ್ಟಿ ಪ್ರೀತಿ,ವಾತ್ಸಲ್ಯಗಳನ್ನೂ ಮನಸುಗಳಿಗೆ ರವಾನಿಸುವ ಕಾರ್ಯ ನಡೆದಿತ್ತು. ಬೆಳಕ ಉಂಡು, ಬೆಳಕು ತುಂಬುವ ಅನುಭಾವದ ಹೊಳಹು.
ವೇದಿಕೆಯಲ್ಲಿ ವೃತ್ತಿ ಗಾಂಭೀರ್ಯ ಉಟ್ಟು ಸಮವಸ್ತೃದಲ್ಲಿ ಪೋಲಿಸ್ ಠಾಣಾಧಿಕಾರಿ ಮುಕ್ತಾ, ಕಲಾವಿದೆ ಗೆಳತಿ ಮಾನಸಿ ಸುಧೀರ್, ಉಪನ್ಯಾಸಕಿ ಸಾಹಿತ್ಯದ ಎಳೆಎಳೆ ಬಿಡಿಸಿಡುವ ಸುಧಾರಾಣಿ, ಆಪ್ತ ಸಮಾಲೋಚಕಿ ಶಿಲ್ಪಾ ಜೋಷಿ, ಕನಸುಗಳನ್ನ ಕನಸುಗಳಾಗಿಯೇ ಇರಿಸದಿರಿ ಎನ್ನುತ್ತ ನಾಯಕತ್ವದ ಮಂತ್ರವನು ಮಹಿಳೆಯರಲಿ ತುಂಬುವ ಉದ್ಯಮಿ ರೇಣು ಜಯರಾಮ್ ಇವರೆಲ್ಲರೂ ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾದರು. ಎಲ್ಲರೂ ವ್ಯಕ್ತಿತ್ವವನು ಸುಂದರವಾಗಿ ಅರಳಿಸಿಕೊಂಡವರು . ಇವರ ನಡುವಿನಲಿ ಸಮನ್ವಯಕಾರಳಾಗಿ ನಾನು ಕೂತಿದ್ದು ….ನನ್ನ ಕೂರಿಸಿದ್ದು ಗೆಳತಿಯರಾದ ಸಂಧ್ಯಾ ಹಾಗೂ ಅಮಿತ. ಅವರಿಬ್ಬರಿಗೂ ಅಮಿತ ವಂದನೆಗಳು.
ಇದು ಸುಂದರವಾದ ಭಾವದೊಡ್ಡೋಲಗ..ನೆನಪಿನ ತೇರು ಸಾಗುತ್ತಲೇ ಇದೆ…ಮನಸಿಗಂಟಿರುವ ಪರಿಮಳ ಅಳಿಸಲಾಗದು.
ಎಲ್ಲ ಸಖಿಯರಿಗೆ ಹೃದಯ ಭಾಷೆಯಲಿ ವಂದನೆ.