ಮಕ್ಕಳಿಗೆ ಸಣ್ಣ ಪ್ರಾಯದಲ್ಲಿ ಅವರ ಪ್ರತಿಭೆಗಳನ್ನು ಗುರುತಿಸಲು ಸಾಂಸ್ಕೃತಿಕ ವೇದಿಕೆಗಳು ಅನಿವಾರ್ಯ. ಇಂತಹ ವೇದಿಕೆಗಳ ಮೂಲಕ ಪ್ರತಿಭೆಯ ಜೊತೆಗೆ, ಆತ್ಮವಿಶ್ವಾಸ ಮೂಡಲು ಸಹಕಾರಿಯಾಗಿದೆ. ಇಂದು ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗೆ ಹೆತ್ತವರು ಮತ್ತು ಶಿಕ್ಷಕರು ಗಮನಹರಿಸುತ್ತಿರುವುದು ಅನಿವಾರ್ಯವಾಗಿದೆ ಎಂದು ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿತೇಂದ್ರ ಪುರ್ಟಾಡೋ ಹೇಳಿದರು.
ಅವರು ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಆಶ್ರಯದಲ್ಲಿ ದಿನಾಂಕ 19.11.2017 ರಂದು ನಂದಿಕೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ವೆ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಂದಿಕೂರು, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂದಿಕೂರು, ಶ್ರೀ ವೆಂಕಟರಮಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅವರಾಲು ಮಕ್ಕಳಿಗಾಗಿ ನಡೆದ ಸಾಂಸ್ಕೃತಿಕ ಸ್ಪರ್ಧೆ ‘ಮಕ್ಕಳ ಹಬ್ಬ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಕ್ಕಳ ಮನಸ್ಥಿತಿಗೆ ಪೂರಕವಾದ ಪರಿಜ್ಞಾನವನ್ನು ರೂಪಿಸುವ ಜೊತೆಗೆ ಸಾಂಸ್ಕೃತಿಕ ಪರಂಪರೆಯನ್ನು ಸಣ್ಣ ವಯಸ್ಸಿನಲ್ಲಿಯೇ ಮೂಡಿಸುವ ಕಾಯಕವನ್ನು ಮಾಡುತ್ತಿರುವ ಪಡುಬಿದ್ರಿ ಯುವವಾಹಿನಿಯ ಕಾರ್ಯ ಮಹತ್ತರ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ಮತ್ತು ಪಡುಬಿದ್ರಿ ಘಟಕದ ಸಲಹೆಗಾರರಾದ ರಾಜೀವ ಪೂಜಾರಿ ತಿಳಿಸಿದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ಮಾತನಾಡಿ ಪಡುಬಿದ್ರಿ ಘಟಕದ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆಯ ಜೊತೆಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಲಿ ಎಂದು ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಪಡುಬಿದ್ರಿ ಘಟಕದ ಅಧ್ಯಕ್ಷರಾದ ಸಂತೋಷ್ ಎಸ್. ಪೂಜಾರಿ ವಹಿಸಿದ್ದರು.
ಕಲಾಶ್ರೀ ಮತ್ತು ಕಲಾರತ್ನ ಪ್ರಶಸ್ತಿ ಪ್ರದಾನ :
ಸ್ಪರ್ಧೆಗಳಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಾದ ಸಮೀಕ್ಷ ‘ಕಲಾಶ್ರೀ’ ಮತ್ತು ಹರ್ಷ ಪಿ. ಆಚಾರ್ಯಗೆ ‘ಕಲಾರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ನಂದಿಕೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ವಸಂತಿಬಾಯಿಯವರನ್ನು ಸಮ್ಮಾನಿಸಲಾಯಿತು. ವೇದಿಕೆಯಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ, ನಂದಿಕೂರು ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವಿಮಲಾ, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಪದ್ಮನಾಭ ಆಚಾರ್ಯ, ಕಾರ್ಯಕ್ರಮ ಸಂಚಾಲಕರಾದ ಶಾಶ್ವತ್ ಎಸ್. ಸಾಲ್ಯಾನ್, ಘಟಕದ ಕಾರ್ಯದರ್ಶಿ ನಿಶ್ಮಿತ ಪಿ. ಎಚ್. ಉಪಸ್ಥಿತರಿದ್ದರು. ಚೈತ್ರ, ಸುಷ್ಮ ಮತ್ತು ಯಶೋಧ ಕಾರ್ಯಕ್ರಮ ನಿರ್ವಹಿಸಿದರು. ಮಕ್ಕಳ ಹಬ್ಬದ ಸಂಚಾಲಕರಾದ ಶಾಶ್ವತ್ ಎಸ್. ಸಾಲ್ಯಾನ್ ಸ್ವಾಗತಿಸಿ, ಘಟಕದ ಕಾರ್ಯದರ್ಶಿ ನಿಶ್ಮಿತ ಪಿ. ಎಚ್ ವಂದಿಸಿದರು.