ತುಳುನಾಡಿನ ಪರಂಪರೆ, ದೈವಾರಾಧನೆಯ ಬಗ್ಗೆ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 88 ನೇ ಪುಣ್ಯತಿಥಿಯ ಅಂಗವಾಗಿ ಪಡುಬಿದ್ರಿ ಬಿಲ್ಲವ ಸಂಘ ಮತ್ತು ಯುವವಾಹಿನಿ ಪಡುಬಿದ್ರಿ ಘಟಕವು ಜಂಟಿಯಾಗಿ ನಡೆಸಿದ ಕೊಡಿಯಡಿತ ಸತ್ಯೊಲು ಎಂಬ ವಿಚಾರಗೋಷ್ಟಿಯನ್ನು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿ ಉದ್ಘಾಟಿಸಿ ಶುಭಹಾರೈಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಹಿರಿಯ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಮಾತನಾಡಿ ಪುರಾತನ ಕಾಲದಲ್ಲಿ ಕೂಡು ಕುಟುಂಬದಲ್ಲಿ ಮಹಿಳೆಯರೇ ದೈವಗಳಿಗೆ ದೀಪವಿಡುವ ಪರಿಕ್ರಮವಿದ್ದು ಕಾಲಾನಂತರ ಮಹಿಳೆಯರನ್ನು ಹಲವಾರು ಕಾರಣ ನೀಡಿ ದೂರವಿರಿಸಲಾಯಿತು. ದೈವಗಳನ್ನೂ ಪೂಜಿಸುವುದು ಮಹಿಳೆಯರ ಹಕ್ಕಾಗಿದ್ದು ಇದಕ್ಕೆ ಬದ್ಧರಾಗಿರಬೇಕು. ವೈದಿಕತೆಯ ಪ್ರಭಾವದಿಂದಾಗಿ ದೈವಾರಾಧನೆಯಲ್ಲಿ ಕೆಲವೊಂದು ಬದಲಾವಣೆಗಳಾದವು. ದೈವಗಳಿಗೆ ಆಡಂಭರದ ಬದಲು ಭಕ್ತಿ ಮುಖ್ಯ ಎಂದರು.
ಜಾನಪದ ಸಂಶೋಧಕ ಡಾ. ವೈ.ಎನ್. ಶೆಟ್ಟಿ ಮಾತನಾಡಿ ದೈವಾರಾಧನೆಯು ಅಗೆದಷ್ಟು ಆಳವಾದ ವಿಷಯವಾಗಿದ್ದು ಅಲ್ಲಿ ಆಚರಣೆಯ ನಿಯಮವನ್ನು ಮೀರದೆ ಹಿರಿಯರು ನಂಬಿ ಬಂದ ಕಟ್ಟು ಪಾಡುಗಳ ಅರ್ಥ, ಉದ್ದೇಶ ತಿಳಿಯಬೇಕಾಗಿದೆ. ಜನರ ಭಾವನೆಗಳು ಚಂಚಲ ರಹಿತವಾಗಿರಬೇಕು ಸಸ್ಯಾಹಾರ, ಮಾಂಸಾಹಾರದ ಪ್ರಶ್ನೆಯು ಅವರವರಿಗೆ ಬಿಟ್ಟದ್ದು. ಆದರೆ ಯಾವುದೇ ನಿರ್ಧಾರಕ್ಕೆ ನಾವು ಬದ್ದರಾಗಿರಬೇಕು ಎಂದರು.
ಪುತ್ತೂರು ದೈವಾರಾಧಕರ ಸಂಘದ ಸಂಚಾಲಕ, ಜುಮಾದಿ(ಧೂಮಾವತಿ) ದೈವದ ಬಗೆಗೆ ಸಂಶೋಧನೆ ಮಾಡಿ ಪದವಿ ಗಳಿಸಿದ ಡಾ. ನವೀನ್ ಕುಮಾರ್ ಮರಿಕೆ ಜುಮಾದಿ ದೈವದ ಬಗೆಗೆ ಹಾಗೆಯೇ ತುಳುನಾಡಿನ ಮೂಲ ಜನಪದವು ಬಾಯಿಯಿಂದ ಬಾಯಿಗೆ ಬಂದಂತಹ ಮಾಹಿತಿಗಳು. ಇಂದು ಪ್ರತಿಯೊಂದು ದೈವದ ಬಗೆಗೆ ತಿಳಿಯಲು ನಮಗೆ ಸಾಕಷ್ಟು ಸಂಶೋಧನಾ ಆಧಾರಗಳಿವೆ ಅದರ ಉಪಯೋಗ ಪಡೆಯಬೇಕಾಗಿದೆ ಎಂದರು.
ಸಮಾರಂಭದಲ್ಲಿ ಪಡುಬಿದ್ರಿ ಬಿಲ್ಲವ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್, ಯುವವಾಹಿನಿ ಪಡುಬಿದ್ರಿ ಘಟಕದ ಅಧ್ಯಕ್ಷ ವೀರೇಂದ್ರ ಎನ್., ಘಟಕದ ನಾರಾಯಣಗುರು ತತ್ವ ಪ್ರಚಾರ ನಿರ್ದೇಶಕ ಶಾಶ್ವತ್ ಪೂಜಾರಿ, ಸಂಘದ ಅರ್ಚಕ ಚಂದ್ರಶೇಖರ ಶಾಂತಿ, ದೈವಾರಾಧಕರು, ದೈವದ ಅರ್ಚಕರು, ದೈವ ನರ್ತಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಪಡುಬಿದ್ರಿ ಬಿಲ್ಲವ ಸಂಘದ ಅರ್ಚಕ ಚಂದ್ರಶೇಖರ ಶಾಂತಿ ಪ್ರಾಸ್ತಾವನೆಗೈದರು. ಘಟಕದ ಕಾರ್ಯದರ್ಶಿ ಯಶೋಧ ವಂದಿಸಿದರು. ಕಾರ್ಯಕ್ರಮವನ್ನು ರವಿರಾಜ್ ಎನ್. ಕೋಟ್ಯಾನ್ ಮತ್ತು ಚೈತ್ರ ನಿರೂಪಿಸಿದರು.
Ea super