ಸಿಂಚನ ವಿಶೇಷಾಂಕ : 2017

ಅಂತಃಪಟದಾಚೆ

ಅನಿತಾ ಪಿ ಪೂಜಾರಿ ತಾಕೊಡೆ

ಅದೊಂದು ಸುಂದರವಾದ ಮಂದಿರ. ಯಾವ ದೇವರಿದ್ದಾರೆಂದು ಅಸ್ಪಷ್ಟವಾಗಿತ್ತು. ಸುತ್ತಲೂ ವಿಶಾಲವಾದ ಹೊರಾಂಗಣ. ಸದ್ದು ಗದ್ದಲಗಳಿರಲಿಲ್ಲ. ನಿತ್ಯ ನಿರ್ಮಲ ಪ್ರಶಾಂತವಾದ ವಾತಾವರಣದಲ್ಲಿ ಒಂದಷ್ಟು ಮಂದಿ ತಮ್ಮಷ್ಟಕ್ಕೆ ತಾವೆನುವಂತೆ ಆಚೀಚೆಗೆ ಓಡಾಡುತ್ತಿದ್ದರು. ಹಾಗಂತ ಅಲ್ಲಿ ಓಡಾಡುತ್ತಿದ್ದವರೆಲ್ಲಾ ಅಪರಿಚಿತರೆನ್ನುವಂತಿರಲಿಲ್ಲ. ಆದರೂ ಒಬ್ಬರಿಗೊಬ್ಬರು ಮುಖಗೊಟ್ಟು ಮಾತಾಡುವಂತಹ ಗೊಡವೆಯೂ ಅವರಲ್ಲಿರಲಿಲ್ಲ. ಶಿಲ್ಪ ಆವರಣದ ಒಂದು ಮೂಲೆಯಲ್ಲಿ ನಿಂತು ತನಗೆ ಕಾಣಿಸುವಷ್ಟೇ ದೂರದಲ್ಲಿ ಕುಳಿತಿದ್ದ ಸುಶಾಂತನನ್ನೇ ಗಮನಿಸುತ್ತಿದ್ದಳು. ಅವನು ಮಾತ್ರ ತನ್ನ ಆಪ್ತ ಸ್ನೇಹಿತ ಹೇಮಂತನೊಡನೆ, ಮೊಬೈಲ್ ನಲ್ಲಿರುವ ವಾಟ್ಸಪ್ ಚಾಟಿಂಗ್‍ನಲ್ಲಿ ನಿರತನಾಗಿದ್ದ.
ಹೌದು; ಸುಶ್ ತನ್ನ ಗೆಳೆಯನೊಡನೆ ವರದಿ ಒಪ್ಪಿಸುತ್ತಿರಬಹುದು. ತಮ್ಮಿಬ್ಬರ ಪ್ರೀತಿಯ ವಿಷಯವನ್ನೂ ತನ್ನ ಅತ್ಮೀಯನೊಡನೆ ಹಂಚಿಕೊಳ್ಳುತ್ತಿದ್ದಾನೆಯೆಂಬುದು ಶಿಲ್ಪಾಳಿಗೆ ಆಗಷ್ಟೇ ಅರಿವಿಗೆ ಬಂದಿತ್ತು. ಅಲ್ಲಿ ಹೋಗಿ ಬರುವವರಾರನ್ನೂ ಗಮನಿಸುವ ಸ್ಥಿತಿಯಲ್ಲಿಲ್ಲದ ಸುಶಾಂತ ಒಂದು ದೃಢವಾದ ನಿರ್ಧಾರಕ್ಕೆ ಬಂದವನಂತಿದ್ದ. ವಾಟ್ಸಪ್‍ನ ಮೆಸೇಜ್ ಮುಖಾಂತರ ಅವನೊಳಗಿನ ಎಲ್ಲಾ ವಿಚಾರಗಳೂ ಹೇಮಂತನಿಗೆ ರವಾನೆಯಾಗುತ್ತಿತ್ತು.
‘ಇನ್ನು ಈ ಪ್ರೀತಿಯೆಂಬ ನಾವೆಯಲ್ಲಿ ಸಾಗುವುದು ಸಾಧ್ಯವೇ ಇಲ್ಲ! ನಾಲ್ಕಾರು ವರ್ಷಗಳ ಕಾಲ ತಮ್ಮೊಳಗೆ ನವಿರಾಗಿ ಮೆಳೆದಿರುವ ಅತ್ಮೀಯವಾದ ಭಾವಕ್ಕೆ ಪ್ರೀತಿಯೆನ್ನುವ ಹಣೆಪಟ್ಟಿಯನ್ನು ಹಚ್ಚಿದರೂ, ಬೆರಳೆಣಿಕೆಯ ದಿನಗಳು ಕೂಡ ಅನ್ಯೋನ್ಯವಾಗಿರಲಿಲ್ಲ.’ ಮುಗಿಯದ ಜಗಳವೇ ಆಯಿತೆಂಬ ವಿಷಾದ ಭಾವ ಸುಶಾಂತನ ಮುಖಭಾವದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ಹೇಮಂತ ಹೇಗೆ ಪ್ರತಿಕ್ರಿಯಿಸುತ್ತಿದ್ದಾನೆಯೋ ಎಂಬುದನ್ನು ತಿಳಿಯುವ ಕುತೂಹಲದಿಂದ ಶಿಲ್ಪ, ಅತ್ತಲಿಂದ ಸುಶಾಂತನತ್ತ ದೃಷ್ಟಿ ನೆಟ್ಟಿದ್ದಳು. ಅದೇನು ಹೇಳಿದನೋ ಸುಮಾರು ಅರ್ಧ ತಾಸಿನ ಅವರ ವಾಟ್ಸಫ್ ಮಾತುಕತೆಯ ನಂತರ ಸುಶಾಂತ ತನ್ನ ಸ್ನೇಹಿತನ ಮಾತನ್ನು ಒಪ್ಪಿದಂತೆ ಶಾಂತ ಚಿತ್ತದವನಾದಂತೆ ಕಾಣಿಸತೊಡಗಿದ.
ಹೇಮಂತ ಏನಂದಿರಬಹುದು…….!
‘ಪ್ರೀತಿ ಅನ್ನೋದು ಅಮೂಲ್ಯವಾದುದು. ಈ ಪ್ರಪಂಚದಲ್ಲಿ ಅತ್ಯಂತ ದುಬಾರಿಯಾದುದೆಂದರೆ ಅದು ಪ್ರೀತಿ ಮಾತ್ರ. ಎಷ್ಟರಸಿದರೂ ಯಾರಿಗೂ ಸುಲಭವಾಗಿ ಸಿಗುವಂತದ್ದಲ್ಲ. ನೈಜ ಪ್ರೀತಿಗಾಗಿ ಹಂಬಲಿಸಿ ಅದು ಸಿಗದಾಗ ಹತಾಶರಾಗಿ ನೊಂದವರೇ ಹೆಚ್ಚು. ಇಷ್ಟೊಂದು ಗಾಢವಾಗಿ ಒಬ್ಬರನ್ನೊಬ್ಬರು ಪ್ರೀತಿಸಿದವರು ನೀವು. ನಿಮ್ಮಿಬ್ಬರ ಪ್ರೀತಿಯ ಆಳದೊರತೆಯನು ಬಲ್ಲವನಾಗಿದ್ದೇನೆ. ಯಾವೊದೋ ಒಂದು ಕ್ಷುಲ್ಲಕ ಕಾರಣಕ್ಕೆ ಪ್ರೀತಿಯನ್ನೇ ಬಲಿ ಕೊಡ್ತಾ ಇದ್ದೀರಾ’ ತಪ್ಪು ಸುಶಾಂತ್…..!
ಹೀಗೇನಾದರೂ ಹೇಮಂತ್ ಅಂದನೇ…….? ಇಲ್ಲವೆಂದರೆ ಸುಶಾಂತ್ ಇಷ್ಟು ತಣ್ಣಗಾಗಲು ಸಾಧ್ಯವೇ…..!
ಸುಶಾಂತ್ ಮೊಬೈಲನ್ನು ಜೇಬಿಗಿಳಿಸಿ ಮೆಲ್ಲನೆ ತನ್ನತ್ತ ನಡೆದುಕೊಂಡು ಬರುತ್ತಿರುವುದನ್ನು ಶಿಲ್ಪಾ ಗಮನಿಸಿದಳು.
********
ಇಲ್ಲ ಇನ್ನು ಮುಂದೆ ಜೊತೆಗಿರುವುದು ಸಾಧ್ಯವೇ ಇಲ್ಲ. ನಾವಿಬ್ಬರೂ ನಮ್ಮ ನಮ್ಮ ಪ್ರಪಂಚಕ್ಕೆ ವಾಪಸ್ಸು ಹೋಗಿಬಿಡೋಣವೆಂದು, ಪ್ರತಿಬಾರಿ ಮಾತಿನ ವರಸೆಯು ಮಿತಿ ಮೀರಿದಾಗ ಇಬ್ಬರೂ ನಿರ್ಧರಿಸಿಬಿಡುತ್ತಿದ್ದರು. ಮತ್ತೆ ಅಗಲಿರಲಾರದೆ ರಾಜಿಯಾಗಿಬಿಡುತ್ತಿದ್ದರು. ಹಾಗೆ ರಾಜಿಗೆ ಮುಂದಾಗುವುದು ಸುಶಾಂತನೇ. ತನ್ನ ತಪ್ಪಿದ್ದರೂ ಸುಲಭವಾಗಿ ಒಪ್ಪಿಕೊಳ್ಳದ ಶಿಲ್ಪಾಳ ಉದ್ಧಟತನದ ಸ್ವಭಾವ ಅದೆಷ್ಟೇ ಕಿರಿಕಿರಿ ಎನಿಸಿದರೂ ಸುಶಾಂತ್ ಸಹಿಸಿಕೊಂಡಿರುವ ಕಾರಣ, ಅವನ ಹೃದಯಾಂತರಾಳದಲ್ಲಿ ಗಾಢವಾಗಿ ಆವರಿಸಿಕೊಂಡಿರುವ ಶಿಲ್ಪಾಳ ಪ್ರೀತಿ.
‘ನೀನಿಲ್ಲದೇ ಬದುಕೇ ಇಲ್ಲ ಪುಟಾ ಈ ಪ್ರಪಂಚದಲ್ಲಿ ನಾನು ತುಂಬಾ ಇಷ್ಟ ಪಡುವ ಜೀವ ನೀನು. ಎಲ್ಲಾ ಇದ್ದರೂ ಯಾರೂ ಇಲ್ಲದ ಹಾಗಿರುವ ನನಗೆ ನಿನ್ನ ಒಡನಾಟ ಜೀವನಪ್ರೀತಿಯನ್ನು ಹುಟ್ಟಿಸಿದೆ. ನನ್ನ ಬದುಕಿನಲ್ಲಿ ಪ್ರೀತಿಯ ವಿಷಯದಲ್ಲಿ ನೀನೇ ಮೊದಲು. ಹಾಗೆಯೇ ಅಂತ್ಯವೂ ನೀನೇ. ನಿನ್ನ ಪ್ರೀತಿಗಾಗಿ ಹಂಬಲಿಸಿದಷ್ಟು ನಾನೀವರೆಗೆ ಯಾರಿಗೂ ತುಡಿದಿರಲಿಲ್ಲ. ನನ್ನುಸಿರಿರುವವರೆಗೂ ನೀನೆನಗೆ ಬೇಕು ಮುದ್ದು. ನನ್ನ ಅರ್ಥ ಮಾಡಿಕೋ. ನನ್ನ ಅಂಗಲಾಚುವಿಕೆಯನ್ನು ಯಾವತ್ತಿಗೂ ನನ್ನ ಬಲಹೀನತೆಯೆಂದು ತಪ್ಪಾಗಿ ತಿಳಿದುಕೊಳ್ಳಬೇಡ. ನಾನು ನಿನ್ನನ್ನು ಪ್ರೀತಿಸಿದಷ್ಟು ಈ ಪ್ರಪಂಚದಲ್ಲಿ ಯಾರೂ ನಿನ್ನನ್ನು ಪ್ರೀತಿಸುವುದಿಲ್ಲ ಈ ಮಾತು ನೆನಪಿರಲಿ’
ಅದೆಷ್ಟೋ ಬಾರಿ ಸುಶಾಂತ್ ಶಿಲ್ಪಾಳ ಬಳಿ ತನ್ನ ಮನದಾಳದ ಇಂಗಿತವನ್ನು ಸಮಜಾಯಿಷಿ ಹೇಳುತ್ತಿದ್ದ. ಆದರೆ ಒಂಚೂರೂ ಏರುಪೇರಾದರೂ ಸರಿ ಶಿಲ್ಪಾಳಿಗೆ ತಕ್ಷಣ ಬಂದೆರಗುವ ಕೋಪ ಎಲ್ಲವನ್ನೂ ಕ್ಷಣಮಾತ್ರದಲ್ಲಿ ಅಳಿಸಿಹಾಕುತ್ತಿತ್ತು.
ಸುಶಾಂತ್ ವಿಚಲಿತನಾಗಿ, ‘ನಿನ್ನಂತಹ ಕೋಪಿಷ್ಟೆ ದುರಹಂಕಾರಿಣಿಯ ಜೊತೆ ನನಗಿರೋಕೆ ಸಾಧ್ಯ ಇಲ್ಲ. ನಿನ್ನ ಪ್ರೀತಿಸಿದ ದಿನದಿಂದ ನನ್ನದು ನಾಯಿ ಪಾಡಾಗಿದೆ. ನಿನ್ನಂತಹ ಶುಷ್ಕ ಮನಸ್ಥಿತಿಯವಳಿಂದಾಗಿ ನನ್ನ ನೆಮ್ಮದಿ ಎಲ್ಲವನ್ನೂ ಕಳೆದುಕೊಂಡಂತಾಗಿದೆ. ಯಾಕಾಗಿ ನನ್ನ ಬದುಕಿನಲ್ಲಿ ಬಂದೆಯೋ…..! ಪ್ರೀತಿಯ ಅರ್ಥವೇ ಗೊತ್ತಿಲ್ಲದವಳು ನೀನು. ಛೆ….! ನಾನು ಮೋಹಿಸಿದ್ದು, ಪ್ರೀತಿಯ ಅರ್ಥವೇ ತಿಳಿಯದ ಕಟು ಮನಸ್ಸಿನವಳನ್ನೇ…..? ನನ್ನ ಬುದ್ಧಿಗೆ ಏನಾಗಿದೆಯೋ? ಸಾಕು ನಿನ್ನ ಸಹವಾಸ! ನೀನಿಲ್ಲವಾದರೆ ನಾನೇನು ಸಾಯಲ್ಲ ಕಣೇ ನೆನಪಿಟ್ಟುಕೊ……’
ಎಂದು ಶಿಲ್ಪಾಳ ಜೊತೆ ಪದೇ ಪದೇ ಆಗುವ ಮನಸ್ಥಾಪದ ಕಿಡಿಯನ್ನು ಸಹಿಸಿಕೊಳ್ಳಲಾಗದೆ ಏನೇನೋ ಒದರಿ ಗುಡ್ ಬೈ ಅಂದ್ಬಿಟ್ಟು ಒಂದೆರಡು ದಿನ ಮೌನಕ್ಕೆ ಶರಣಾಗುತ್ತಿದ್ದ. ಆದರೆ ಶಿಲ್ಪಾಳಿಂದ ದೂರವಿದ್ದ ಕ್ಷಣ ಕ್ಷಣಗಳನ್ನು ಕಳೆಯುವುದೂ ಸುಶಾಂತನಿಗೆ ದುಸ್ತರವೆನಿಸುತ್ತಿತ್ತು.
ಏನು ನನ್ನ ಕರ್ಮವೋ ಏನೋ ನೀನಿಲ್ಲದೆ ಈ ಬದುಕೇ ವ್ಯರ್ಥ ಅನ್ನೋ ತರ ನನ್ನ ಮೋಡಿ ಮಾಡಿದ್ದೀಯಾ. ಶಿಲ್ಪಾ ನನಗೆ ಮೋಸ ಮಾಡ್ಬೇಡ. ಹಾಗೇನಾದರೂ ಆದ್ರೆ ನಾನು ನಿನ್ನನ್ನು ಸುಮ್ನೆ ಬಿಡೋದಿಲ್ಲ. ನಿನ್ನನ್ನೂ ಸಾಯಿಸಿ ನಾನೂ ಸತ್ತೋಗ್ತೀನಿ. ಈ ಮಾತು ಸುಳ್ಳಲ್ಲ ನೆನಪಿಟ್ಟುಕೊ?
ತನ್ನ ಜೀವವನ್ನೇ ಹಿಂಡಿ ಬಿಡುವಂತಹ ವಿರಹವೇದನೆಯ ನೋವು ಸುಶಾಂತನನ್ನು ಈ ರೀತಿ ಮಾತನಾಡಲು ಪ್ರೇರೇಪಿಸುತ್ತಿತ್ತು.
ಇದ್ಯಾವ ಮಾತಿಗೂ ಶಿಲ್ಪಾ ಸಿಟ್ಟಾಗುತ್ತಿರಲಿಲ್ಲ ಯಾಕೆಂದರೆ ಅವನ ಈ ರೀತಿಯ ವರ್ತನೆಗೆ ಕಾರಣಳೂ ಅವಳೇ. ಶಿಲ್ಪಾಳ ಮೇಲೆ ಅವನಿಗಿರುವ ಅತಿಯಾದ ಪ್ರೀತಿ ಆಕ್ರೋಶದ ರೂಪದಲ್ಲಿ ಹೊರಬರುತ್ತಿದ್ದವಷ್ಟೇ. ಸಮಾಧಾನದ ಮಾತಿಗೆ ಮಣಿಯದ ಶಿಲ್ಪ, ಸುಶಾಂತ್ ಆಕ್ರೋಶಗೊಂಡಾಗ ಬೇಗನೇ ರಾಜಿಯಾಗುತ್ತಿದ್ದಳು. ಅದರರ್ಥ ಅವಳಿಗೆ ಭಯವೆಂದಲ್ಲ
‘ಇಷ್ಟು ನಿಷ್ಟುರವಾಗಿ ವರ್ತಿಸಿದರೂ ನನ್ನ ದೂರ ಮಾಡದೆ ಇಷ್ಟೊಂದು ಪ್ರೀತಿ ಮಾಡುತ್ತಿರುವನಲ್ಲಾ….!’ ಎಂದರಿತು ಅವಳ ಮನಸ್ಸು ಮೃದುವಾಗುತಿತ್ತು.
‘ನನ್ನ ಇಷ್ಟೊಂದು ಪ್ರೀತಿಸುವ ಜೀವದ ಜೊತೆ ನಾನ್ಯಾಕೆ ಕ್ಷುಲ್ಲಕ ಕಾರಣಗಳಿಗೆ ಜಗಳವಾಡುತ್ತಿರುವೆನೋ….. ಛೆ…..! ಸುಶ್‍ನ ಪ್ರೀತಿಯಾಳ ನನಗ್ಯಾಕೆ ಅರ್ಥವಾಗುತ್ತಿಲ್ಲ…..? ಎಲ್ಲಾ ಪುರುಷರ ಸಾಲಿನಲ್ಲಿ ನಾನು ಸುಶಾಂತನನ್ನೂ ಕಲ್ಪಿಸಿ ಇಷ್ಟು ಕೀಳಾಗಿ ವರ್ತಿಸುವುದು ಸರಿಯೇ…..? ಛೆ….! ನನ್ನ ಬುದ್ಧಿಗೇನಾಗಿದೆ ಎಲ್ಲರಂತಲ್ಲ ಸುಶ್ ನಯವಂಚಕನಲ್ಲ. ಮೋಸಗಾರನೂ ಅಲ್ಲ. ತನ್ನ ಸ್ವಾರ್ಥಕ್ಕೆ ಯಾವತ್ತೂ ಬಳಸಿಕೊಂಡವನಲ್ಲ. ಯಾವುದೇ ದುರುದ್ಧೇಶಗಳು ಅವನಲ್ಲಿಲ್ಲ. ನನ್ನೊಳಿತಿಗೇನಾದರೆಂದರೆ ಸಾಕು, ಮೈಮೇಲೆ ಬೆಂಕಿ ಬಿದ್ದ ಹಾಗಾಡುವ ನನ್ನಲ್ಲಿ ಇಷ್ಟು ಕಠೋರ ಮನಸ್ಸು ಏಕಿದೆಯೋ……!’
ಶಿಲ್ಪಾಳಿಗೆ ಒಂದೊಮ್ಮೆ ಹಾಗೆನಿಸಿದರೂ, ಅದು ಮತ್ತೆ ಪುನರಾವರ್ತನೆಯಾಗುತ್ತಲೇ ಇರುತ್ತಿತ್ತು. ಆದರೆ ಇಂದೇಕೋ ಮಿತಿ ಮೀರಿತ್ತು. ಇಬ್ಬರೂ ದೃಢ ನಿರ್ಧಾರ ಮಾಡಿಕೊಂಡು ಶಾಶ್ವತವಾಗಿ ದೂರವಾಗುವ ಮಟ್ಟಕ್ಕೆ ತಲುಪಿದ್ದರು.
‘ಒಂದೆರಡಲ್ಲ ನಮ್ಮೊಳಗಿರುವ ಹಲವಾರು ಭಿನ್ನಾಭಿಪ್ರಾಯಗಳು ನಮ್ಮ ಮಧುರ ಬಾಂಧವ್ಯಕ್ಕೆ ತಡೆಯಾಗಿವೆ. ಹಾಗಾಗಿ ಈ ಪವಿತ್ರವಾದ ಸಂಬಂಧವನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಿಲ್ಲ ಪುಟ್ಟಾ. ನಿನ್ನ ಮೇಲೆ ಪ್ರೀತಿಯಿಟ್ಟುಕೊಂಡೇ ನಾನು ನಿನ್ನಿಂದ ದೂರವಾಗುತ್ತಿದ್ದೇನೆ. ನಮ್ಮಿಬ್ಬರ ಈ ನಿರ್ಧಾರದಿಂದ ಒಳ್ಳೆಯದೇ ಆಗುವುದೆಂಬ ಭರವಸೆಯಿದೆ. ಓರ್ವ ಪ್ರಿಯಕರನಿಗೆ ಕೊಡಬೇಕಾದ ಪ್ರೀತಿಯನ್ನು ನೀನೂ ಮುಕ್ತವಾಗಿ ಕೊಟ್ಟೆ. ಆದರೆ ನಿನ್ನ ಇಗೋ, ಸುಪೀರ್ಯರಿಟಿ ಕಾಂಪ್ಲೆಕ್ಸ್, ರೋಷದಿಂದ ತೀರ ವಿಚಲಿತನಾಗಿದ್ದೇನೆ. ಇನ್ನು ಸಹಿಸೋಕೆ ಸಾಧ್ಯವೇ ಇಲ್ಲ ಅನ್ನೋ ಹಾಗಾಗಿದೆ. ಅದಕ್ಕಾಗಿಯೇ ಈ ನಿರ್ಧಾರ ಅನಿವಾರ್ಯವಾಗಿದೆ.? ಅಂದಾಗ ಸುಶಾಂತನ ಮುಖಭಾವದಲ್ಲಿ ಮತ್ತು ಮಾತಿನಲ್ಲಿ ದೃಢವಾದ ನಿಲುವಿತ್ತು.’
ಎಂದಿನಂತೆಯೇ ಶಿಲ್ಪಾಳ ನೀರಸ ಪ್ರತಿಕ್ರಿಯೆ, ಇಂದೂ ಹಾಗೆಯೇ ಇತ್ತು.
‘ಬೇಡ ಸುಶ್ ನೀನಿಲ್ಲದೆ ಇರೋಕ್ಕಾಗಲ್ಲ? ಹೀಗೆ ಒಂದ್ಮಾತು ಹೇಳಿದ್ದರೆ…..! ?ಹೋಗುವವರನ್ನು ನಿಲ್ಲು ಅನ್ನಲು ನಾನ್ಯಾರು ನಿನ್ನಿಷ್ಟ ಏನಾದ್ರೂ ಮಾಡ್ಕೋ.’
ಶಿಲ್ಪಾಳ ಈ ರೀತಿಯ ಉತ್ತರ ಸುಶಾಂತ್ ಇನ್ನಷ್ಟು ರೇಗಿಸಿ
ಛೆ! ನಾನು ಪ್ರೀತಿಸಿದ್ದು ನಿನ್ನಂತಹ ಹೆಮ್ಮಾರಿಯನ್ನ…..?? ಹೇಳಬೇಕೆನಿಸಿದರೂ ಸೈರಿಸಿಕೊಂಡು,
‘ನನ್ನ ಬದುಕಿನಲ್ಲಿ ಪ್ರೀತಿಗಾಗಿ ಹಂಬಲಿಸಿದಷ್ಟು ಅದು ನನ್ನನ್ನು ಸತಾಯಿಸಿದೆ. ದೂರವಾಗಿ ಕಾಡಿದೆ. ಹಾಗಾಗಿ ನಾನು ಇನ್ನು ಮುಂದೆ ಈ ಮರೀಚಿಕೆಯ ಹಿಂದೆ ಓಡುವುದಿಲ್ಲ. ಇದರಲ್ಲಿ ನಿನ್ನದೇನೂ ತಪ್ಪಿಲ್ಲ……! ಬೇಜಾರು ಮಾಡ್ಕೋಬೇಡ ನೀನು ಸಫರ್ ಆಗೋದೂ ಬೇಡ. ನಿನ್ನ ಇನ್ನು ಮುಂದಿನ ಜೀವನದಲ್ಲಾದರೂ ಖುಷಿಯಿಂದಿರು.’
ಮೌನವೇ ಸಮ್ಮತಿ ಲಕ್ಷಣ? ಎಂಬ ಗಾದೆ ಮಾತಿಗೆ ತನ್ನನ್ನು ಒಗ್ಗಿಸಿಕೊಂಡಿರುವಂತೆ, ಶಿಲ್ಪ ಉತ್ತರಿಸಲಿಲ್ಲ. ಮಧ್ಯಾಹ್ನದ ಹೊತ್ತು….. ಮನಸ್ಸು ಸರಿಯಿಲ್ಲದಿದ್ದರೆ ದೇಹಕ್ಕೂ ಜಡ ಆವರಿಸಿಬಿಡುತ್ತದೆಯೇನೋ……. ಅಲ್ಲೇ ಒರಗಿದ್ದಳು
***********
ಹೇಮಂತನೊಡನೆ ವಾಟ್ಸಪ್ ಚಾಟಿಂಗ್ ಮುಗಿಸಿ ಎದ್ದ ಸುಶಾಂತನ ಹೆಜ್ಜೆಗಳು ಶಿಲ್ಪಾಳ ಕಡೆಗಿತ್ತು. ಅವನು ಇನ್ನಷ್ಟು ಸನಿಹವಾಗುತ್ತಿದ್ದಾನೆ. ಶಿಲ್ಪಾಳಿಗೂ ದೂರಾಗುವ ಮನಸ್ಸಿಲ್ಲ. ಹಾಗಂತ ಸುಮ್ಮನೆ ಒಪ್ಪಿಕೊಳ್ಳುವುದೂ ಸಾಧ್ಯವಿಲ್ಲ. ಸುಶ್ ಯಾವಾಗಲೂ ಹೇಳುತ್ತಿರುವ ಹಾಗೆ, ಇಂದು ಅವಳೊಳಗಿನ ಇಗೋ ಅಡ್ಡ ಬಂದಿದ್ದಲ್ಲ. ಸುಶ್‍ನನ್ನು ಸ್ವಲ್ಪ ಸತಾಯಿಸುವ ಮನಸ್ಸಾಗಿ ಮುನಿಸಿರುವಂತೆ ನಟಿಸುತ್ತಾ ಮುಖ ತಿರುಗಿಸಿ ನಡೆಯುತ್ತಿದ್ದಳು. ಅವಳು ಹೋದ ಕಡೆಯಲ್ಲೆಲ್ಲಾ ಸುಶ್ ಹಿಂಬಾಲಿಸುತ್ತಿದ್ದ.
ಒಂದಷ್ಟು ದೂರ ನಡೆದಾಗ ಶಿಲ್ಪಾಳಿಗೆ, ತನ್ನನ್ನು ಯಾರೂ ಹಿಂಬಾಲಿಸುತ್ತಿಲ್ಲವೆಂದರಿವಿಗೆ ಬಂದು ಹಿಂತಿರುಗಿದಾಗ ಸುಶ್ ಕಾಣಿಸಲಿಲ್ಲ. ದೇವಾಲಯದ ಹೊರಾಂಗಣದ ಸುತ್ತೆಲ್ಲಾ ಹುಡುಕಾಡಿದರೂ ಊಹೂಂ ಎಲ್ಲೂ ಇಲ್ಲ. ?ಛೆ…..! ಸುಶ್ ಬಳಿ ಬಂದಾಗ ಯಾಕಾಗಿ ಅವಾಯ್ಡ್ ಮಾಡಿದೆನೋ? ಶಿಲ್ಪಾ ಆತಂಕಿತಳಾಗುತ್ತಾಳೆ.
ಸುಶ್ ತನ್ನಿಂದ ಬಲು ದೂರ ಹೋದನೇ…..! ಮತ್ತೆ ತಿರುಗಿ ಬಾರದೇ ಇದ್ದರೆ…!
ಶಿಲ್ಪಾಳಿಗೆ ಕಣ್ಣು ಕತ್ತಲು ಬಂದ ಹಾಗಾಗುತ್ತದೆ. ನಿಂತಲ್ಲೇ ಬೆವರುತ್ತಾಳೆ ಅಲ್ಲೇ ಕುಸಿಯುತ್ತಿದ್ದೇನೆಯೆನ್ನುವಷ್ಟರಲ್ಲಿ, ಏನೋ ದಡಬಡ ಸದ್ದಿಗೆ ಎಚ್ಚರಗೊಂಡು ಬಲವಂತವಾಗಿ ಕಣ್‍ರೆಪ್ಪೆ ತೆರೆಯುತ್ತಾಳೆ.
‘ಇಷ್ಟರವರೆಗೆ ಕಂಡಿದ್ದು ಕನಸೇ…..!’
ಹಾಗಂತ ನಮ್ಮೊಡನೆ ಮನಸ್ಥಾಪವಾಗಿ ದೂರವಾಗುವ ನಿರ್ಧಾರವೂ ಸುಳ್ಳಲ್ಲ. ಹಾಗಾದರೆ ಈ ಕನಸ್ಸಿನ ಅರ್ಥವೇನಿರಬಹುದು? ಮಧ್ಯವರ್ತಿಯಗಿ ಹೇಮಂತನು, ಸುಶ್ ನೊಡನೆ ವಾಟ್ಸಪ್ ನಲ್ಲಿ ಚಾಟ್ ಮಾಡಿ ಸಮಜಾಯಿಷಿದ್ದು ನಮ್ಮ ಪ್ರೇಮದಾಳದೊರತೆಯ ಅರಿವನ್ನು ಮೂಡಿಸುವ ಸಲುವಾಗಿಯೇ…….!
ಒಂದು ಗಂಟೆಯ ಮೊದಲು ಇದ್ದ ಮನಸ್ಸಿನೊಳಜಗಳ ಇದೀಗ ಶಾಂತವಾಗಿತ್ತು. ಮಲಗುವ ಮೊದಲು ಮೊಬೈಲ್ ಸೈಲೆಂಟ್ ಮೋಡ್ ನಲ್ಲಿಟ್ಟಿದ್ದನ್ನು ಜ್ಞಾಪಿಸಿಕೊಂಡು ಮೊಬೈಲ್ ಕೈಗೆತ್ತಿಕೊಂಡಾಗ ಸುಶಾಂತ್‍ನ ಮಿಸ್ ಕಾಲ್ ಇತ್ತು. ತಕ್ಷಣ ರಿಕಾಲ್ ಮಾಡಿದಾಗ ಸುಶ್ ರಿಸೀವ್ ಮಾಡಲಿಲ್ಲ. ಬಹುಶಃ ಬಿಜಿಯಿರಬೇಕೆಂದುಕೊಂಡು ವಾಟ್ಸಪ್ ನೋಡಿದಾಗ ಸುಶ್‍ನ ನಾಲ್ಕಾರು ಮೆಸೇಜ್ ಗಳಿತ್ತು.
‘ಶಿಲ್ಪಾ ಕೊನೆಯ ಬಾರಿ ನಿನ್ನಲ್ಲಿ ಮಾತಾಡ್ಬೇಕು. ಕಾಲ್ ಮಾಡಿದ್ದೆ, ಆದರೆ ನೀನು ರಿಸೀವ್ ಮಾಡಲಿಲ್ಲ. ಮಧ್ಯಾಹ್ನದ ಹೊತ್ತು, ಬಹುಶಃ ನೀನು ಮಲಗಿದ್ಯೇನೋ….. ಪರವಾಗಿಲ್ಲ ಮತ್ತೆ ಕಾಲ್ ಮಾಡ್ತೀನಿ. ಇವತ್ತು ದಿನವಿಡೀ ಮಾಡ್ತಲೇ ಇರ್ತೀನಿ. ಇವತ್ತೇನಾದರೂ ನೀನು ನನ್ನಲ್ಲಿ ಮಾತಾಡದಿದ್ರೆ ಜೀವಮಾನದಲ್ಲಿ ಯಾವತ್ತೂ ನಿನ್ನ ಮುಖ ಮತ್ತೆ ನೋಡುವುದಿಲ್ಲ’
ಸುಶಾಂತ್‍ನ ಕಡೆಯಿಂದ ಕಾಲ್ ಬರುವವರೆಗೆ ಕಾಯುವ ತಾಳ್ಮೆ ಶಿಲ್ಪಾಳಿಗಿರಲಿಲ್ಲ. ಅವಳೇ ಮತ್ತೆ ಫೆÇೀನಾಯಿಸಿದಾಗ ರಿಸೀವ್ ಮಾಡಿ, ಈಗ ಎರಡೇ ನಿಮಿಷದಲ್ಲಿ ಕಾಲ್ ಮಾಡ್ತೀನಿ ಅಂದ್ಬಿಟ್ಟು ಕಟ್ ಮಾಡ್ಬಿಟ್ಟ.
‘ಯಾರೋ ಫ್ರೆಂಡ್ಸ್ ಜೊತೆ ಇದ್ದಿರ್ಬೇಕು…..! ವಿಷ್ಯಾನೂ ತುಂಬಾ ಸೀರಯಸ್ಸಾಗಿದೆ? ಅಂತ ಅವನಾಡಿದ ದಾಟಿಯಲ್ಲಿಯೇ ಸ್ಪಷ್ಟವಾಗಿತ್ತು. ಶಿಲ್ಪಾಳಿಗೆ ಒಳಗೊಳಗೆ ಅಳುಕು ಬೇರೆ ?ಈಗೇನು ಕಾದಿದೆಯೋ….! ತಪ್ಪು ನನ್ನದೂ ಇದ್ಯಲ್ಲಾ……!’
ಸುಶ್ ಮಧ್ಯಾಹ್ನ ಹೇಳಿದ ಮಾತುಗಳು ಶಿಲ್ಪಾಳ ಮನದಾಳದಲ್ಲಿ ಮತ್ತೆ ಸುಳಿಯತೊಡಗಿದವು.
‘ನಾನ್ಯಾವತ್ತೂ ಯಾರನ್ನೂ ದ್ವೇಷಿಸಿದವನಲ್ಲ. ನನ್ನೊಳಗೆ ಕೋಪ ಜಾಸ್ತಿ ದಿನ ಉಳಿಯುವುದೂ ಇಲ್ಲ. ಹಾಗಿರುವಾಗ ಪ್ರೀತಿಯನ್ನೇ ಮೊಗೆದು ಕೊಟ್ಟಿರುವ ನಿನ್ನನ್ನು ನಾನು ಹೇಗೆ ತಾನೆ ದ್ವೇಷಿಸಲಿ? ಹೇಗೂ ಪ್ರೀತಿಯನ್ನು ಹಂಚಿಕೊಂಡವರು ನಾವು ಪ್ರೀತಿಯಿಂದಲೇ ದೂರಾಗೋಣ’
‘ಹೇಳುವುದೆಲ್ಲವನ್ನೂ ಸುಶ್ ಹೇಳಿಯಾಗಿದೆ. ತಾನೂ ಒಪ್ಪಿಕೊಂಡಾಗಿದೆ. ಪದೇ ಪದೇ ಕಚ್ಚಾಡುವುದಕ್ಕಿಂತ ದೂರವಿದ್ದುಬಿಡುವುದೇ ಒಳಿತೆಂಬ ತೀರ್ಮಾನವನ್ನು ಇಬ್ಬರೂ ಒಪ್ಪಿಯಾಗಿದೆ. ಮತ್ತೇನು ಬಾಕಿ ಉಳಿದಿದೆಯೋ……!’ ಶಿಲ್ಪಾಳ ಮನಸ್ಸು ಕಳವಳಿಸುತ್ತಿತ್ತು.
ಅಷ್ಟರಲ್ಲಿ ಮೊಬೈಲ್ ರಿಂಗಣಿಸಿತು. ಸುಶ್ ಕಾಲ್ ಮಾಡಿದ್ದ. ರಿಸೀವ್ ಮಾಡಿ ಹಲೋ ಅಂದಳಷ್ಟೆ.
ಆ ಕಡೆಯಿಂದ ಒಂದೇ ಸಮನೆ ಬಿಸಿ ಕೆಂಡದುಂಡೆಗಳು ರಾಚಿದಂತೆ ಒಡಲಾಳದೊಳಗಿನ ಕಿಡಿ ಬುಗಿದೇಳುತ್ತಿರುವಂತೆ ಶಿಲ್ಪಾಳ ಕಿವಿಗಪ್ಪಳಿಸುತ್ತಿತ್ತು. ?ಅದೇನಾದರೂ ಸುಶ್‍ಗೆ ತನ್ನಿಂದ ದೂರವಾಗಲು ಸಾಧ್ಯವಿಲ್ಲ? ಎಂದು ಅವನ ಆಕ್ರೋಶದಲ್ಲಿಯೇ ವ್ಯಕ್ತವಾಗುತ್ತಿತ್ತು. ಶಿಲ್ಪಾ ತುಟಿ ಪಿಟಕ್ಕನ್ನದೆ ಆಲಿಸುತ್ತಿದಳು.
ಮೆಸೇಜ್‍ನಲ್ಲಿ ಇಷ್ಟುದ್ದದ ಭಾಷಣ ಮಾಡುವವಳು ಈಗ್ಯಾಕೆ ಸುಮ್ಮನಿದ್ದೀಯಾ…..! ಮಾತಾಡು ಅನ್ನುತ್ತಲೇ ಬಡಬಡಿಸುತ್ತಿದ್ದ. ಸುಮಾರು ಅರ್ಧ ಗಂಟೆಯ ನಂತರ ಸುಶ್‍ನೊಳಗಿನ ಬೇಗುದಿಯ ಕಾವು ಸ್ವಲ್ಪ ತಣ್ಣಗಾದಂತಿತ್ತು.
ಶಿಲ್ಪಾ ಸತ್ಯ ಹೇಳು ನಾನು ನಿನಗೆ ಇಷ್ಟವಿಲ್ವಾ? ನೀ ಎಲ್ಲೇ ಇರು ನನಗಂತೂ ನೀನೇ ಪ್ರೀತಿಯ ಜೀವ. ಜೀವಮಾನದಲ್ಲಿ ನಿನ್ನಷ್ಟು ಯಾರೂ ನನ್ನನ್ನು ಕಾಡಿರಲಿಲ್ಲ. ನಿನಗಾಗಿ ಹಂಬಲಿಸಿದಷ್ಟು ನಾನ್ಯಾರಿಗೂ ತುಡಿಯಲಿಲ್ಲ. ನಿನಗೆ ಇಷ್ಟವಿಲ್ಲವಾದರೆ ಖಂಡಿತಾ ತೊಂದರೆ ಕೊಡಲಾರೆ. ಮಾತಾಡು ಪ್ಲೀಜ್…..
‘ಸುಶ್ ನನಗೊಂದು ಕನಸು ಬಿದ್ದಿತ್ತು’
‘ಏನಂತ…!?’
ಶಿಲ್ಪಾ ವಿವರಿಸಿದಳು. ಸುಶ್‍ನ ಕಾಣದೆ ಗಾಬರಿಗೊಂಡಿದ್ದು. ಎಚ್ಚೆತ್ತಾಗ ಅವಳ ಮನಸ್ಸು ಬದಲಾಗಿದ್ದು…… ಎಲ್ಲವನ್ನೂ ಆಲಿಸಿದ ಸುಶಾಂತ್,
ಹತ್ತಿರ ಬಂದಾಗ ದೂರ ತಳ್ತೀಯಾ….. ದೂರ ಹೋದಾಗ ಮತ್ತೆ ಹಂಬಲಿಸ್ತೀಯಾ…. ಇದೇ ತಾನೆ ವಾಸ್ತವದಲ್ಲೂ ನೀನು ಮಾಡ್ತಿರೋದು…..!
ನಿನ್ನಿಂದ ಶಾಶ್ವತವಾಗಿ ದೂರಾದೆನೆಂಬ ಹತಾಶಾಭಾವದಿಂದ ಬೆಡ್ ಮೇಲೆ ಬಿದ್ದಿದ್ದ ನನಗೂ ಕನಸು ಬಿದ್ದಿತ್ತು. ಅಲ್ಲೂ ನನಗೆ ನಿನ್ನ ಹುಡುಕಾಟವೇ. ನನ್ನ ಜೀವಮಾನದಲ್ಲಿ ಇಷ್ಟರವರೆಗೆ ಪದೇ ಪದೇ ಕನಸಿನಲ್ಲಿ ಬಂದು ಕಾಡಿದ ಹೆಣ್ಣು ನೀನು ಮಾತ್ರ. ಯಾಕೆ ಪುಟ್ಟಾ ನನ್ನ ಪ್ರೀತಿನೇ ನಿನಗೆ ಅರ್ಥ ಆಗ್ತಾ ಇಲ್ಲ…..! ನನ್ನ ಮುಂದಿನ ಜೀವನನೇ ನೀನು ಕಣೇ. ನೀನಿಲ್ಲದೆ ಈ ಬದುಕೇ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ನಾನು ಬಂದು ನಿಂತಿದ್ದೇನೆ.?
ತನ್ನ ಮೇಲೆ ಜೀವವೇ ಇಟ್ಟುಕೊಂಡಿರುವ ಸುಶಾಂತ್‍ನ ಹೃದಯಾಂತರಾಳದ ತುಡಿತದೊಳಗೆ ಮಿಡಿದು ಬಂದ ಪದಗಳನಾಲಿಸಿದ ಶಿಲ್ಪಾ ತನ್ನ ವರ್ತನೆಗೆ ತಾನೇ ಅಸಹ್ಯಪಟ್ಟುಕೊಂಡಿದ್ದಳು.
‘ನನ್ನಿಂದಾಗಿ ಒಂದು ಜೀವವನ್ನು ನರಳಿಸಿದ್ದು ಸಾಕು. ಪಾಪ ಇನ್ನಾದರೂ ನೆಮ್ಮದಿಯಾಗಿರಲಿ. ಯಾವತ್ತಿಗೂ ಬದಲಾಗದವಳು ನಾನು, ಪಾಪ ಅವನೇನು ಮಾಡಿಯಾನು? ಸೈಲೆಂಟ್ ಆಗಿ ಬಿಡಲೇ……! ಹಾಗೇನಾದ್ರೂ ಮಾಡಿದ್ರೆ ಸುಶ್ ಖುಷಿಯಾರ್ತಾನೆಂಬ ನನ್ನ ಯೋಚನೆ ಸರಿಯೇ….! ಸುಶ್‍ನ ಮರೆತು ನಾನಾದ್ರೂ ಹೇಗಿರಲಿ…..! ಸಿಡುಕಿಯಾದರೂ ನನ್ನೊಳಗೂ ಅಗಾಧವಾದ ಪ್ರೀತಿಯಿದೆ. ಆದರೆ ಅದನ್ನು ವ್ಯಕ್ತಪಡಿಸಲು ಸುಶ್ ಹೇಳುವಂತೆ ನನ್ನೊಳಗಿನ ಇಗೋ ಬಿಡುತ್ತಿಲ್ಲವೋ…..!’
ಸುಶ್‍ನ ನಿರ್ಮಲ ಭಾವದ ಪ್ರೇಮಾಲಾಪನೆಯೆದುರು ಶಿಲ್ಪಾಳಿಗೆ ತಾನು ತೀರ ಕುಬ್ಜಳು ಅಂತ ಅನಿಸಲಾರಂಭಿಸಿತು. ಆದರೂ ಏನಾದರೂ ಮಾತಾಡಲೇ ಬೇಕು. ಇಲ್ಲವಾದರೆ ಇಂದು ಸುಶ್‍ನ ಪ್ರೀತಿಯನ್ನು ಕಳೆದುಕೊಳ್ಳುವೆನೆಂಬ ಆತಂಕದ ಛಾಯೆ ಶಿಲ್ಪಾಳನ್ನು ಆವರಿಸಲಾರಂಭಿಸಿತು.
ಸುಶ್ ನಿನ್ನ ಬಿಟ್ಟು ಇರೋಕಾಗಲ್ಲ ನಿನ್ನಷ್ಟು ಪ್ರೀತಿಯಿಂದ ಮುದ್ದಾದ ಮಾತುಗಳನ್ನಾಡೋಕೆ ನನ್ನಿಂದೇಕೋ ಸಾಧ್ಯವಾಗ್ತಾ ಇಲ್ಲ. ಆದ್ರೆ, ನಾನೂ……
ಶಿಲ್ಪಾಳಿಗೆ ಮತ್ತೇನು ಹೇಳಲಾಗದಂತೆ ಗಂಟಲು ಬಿಗಿದುಗೊಂಡಿತು. ಉಮ್ಮಳಿಸಿ ಬರುತ್ತಿದ್ದ ಅಳುವನ್ನು ಬಲವಂತವಾಗಿ ತಡೆಯಲು ಪ್ರಯತ್ನಿಸುತ್ತಿದ್ದಳು.
ಶಿಲ್ಪಾಳ ಉಸಿರಾಟದ ಏರಿಳಿತದಲ್ಲಿಯೇ ಎಲ್ಲವನ್ನೂ ಅರ್ಥೈಸಿಕೊಂಡ ಸುಶ್, ?ಗೊತ್ತು ಪುಟ್ಟಾ ನೀ ಹೇಗಿದ್ರೂ ನನ್ನ ಜೀವ ಕಣೇ. ಇನ್ಯಾವತ್ತಿಗೂ ನನ್ನಿಂದ ದೂರಾಗೋ ಮಾತಾಡುವುದಿಲ್ಲವೆಂದು ಭಾಷೆ ಕೊಡ್ತೀಯಾ??
‘ಸುಶ್ ನೀನ್ಯಾಕೆ ಈ ಕಲ್ಲು ಮನಸ್ಸಿನವಳನ್ನು ಪ್ರೀತಿಸ್ತೀಯಾ?’
ನೀನು ಕಲ್ಲಲ್ಲ ‘ಶಿಲ್ಪಾ’, ಕಲ್ಲು ಶಿಲೆಯಾಗಬೇಕಾದರೆ ಎಲ್ಲವನ್ನೂ ಸಹಿಸ್ಕೋಬೇಕು ಮೂರು ಕಲ್ಲಿನ ಕಥೆ ಕೇಳಿದ್ಯಾ…….?
ಶಿಲ್ಪಿ ಒಂದನೇ ಕಲ್ಲನ್ನು ಕೆತ್ತಲು ಬಂದಾಗ ಅದು ಜೋರಾಗಿ ಅತ್ತುಬಿಟ್ಟಿತೆಂದು ಅದನ್ನು ಬಿಟ್ಬಿಟ್ಟ. ಎರಡನೇ ಕಲ್ಲನ್ನು ಕೆತ್ತಲು ಶುರು ಮಾಡಿದ ಅದು ಅರ್ಧ ಮಾತ್ರ ಸಹಿಸ್ಕೊಂಡಿತು. ಮತ್ತೆ ಅಳೋಕೆ ಶುರು ಮಾಡಿತು. ಅದನ್ನೂ ಬಿಟ್ಟು, ಮೂರನೇ ಕಲ್ಲನ್ನು ಕೆತ್ತಲು ಶುರು ಮಾಡಿದ. ಅದು ಅಳಲಿಲ್ಲ ಎಲ್ಲವನ್ನೂ ಸಹಿಸ್ಕೊಂಡಿತು. ಶಿಲೆಯಾಗಿ ದೇವರ ಗುಡಿ ಸೇರಿತು. ಅರ್ಧ ಸಹಿಸ್ಕೊಂಡಿದ್ದು ಮೆಟ್ಟಿಲಾಯಿತು. ಮೊದಲಿನದ್ದು ಬರೀ ಕಲ್ಲಾಗಿ ಉಳಿಯಿತು. ಹಾಗೇ ನೀನು ಕೊಟ್ಟ ಎಲ್ಲಾ ಏಟು ಸಹಿಸ್ಕೊಂಡಿದ್ದಕ್ಕೆ ತಾನೆ ಈ ಶಿಲ್ಪ ನನ್ನವಳಾಗಿದ್ದು. ಈ ಸಿಟ್ಟಿನ ಸಿಡುಕಿ ಬೇಡ ಅಂತ ಹೋಗ್ತಿದ್ರೆ….! ನೋಡು….. ನಾನೆಷ್ಟು ಗ್ರೇಟ್ ಅಂತ.
ಓಯಿ…… ಸಾಕು ನಿನ್ನ ನೀನು ಹೊಗಳೋದು ನಿಲ್ಸು, ತೆಗ್ದು ಬಿಟ್ಟೆ ಅಂದ್ರೆ ……!
‘ಮಮ್ಮೀ ನಿದ್ರೆಯಲ್ಲಿ ಯಾರ ಜೊತೆ ಫೈಟ್ ಮಾಡ್ತಾ ಇದ್ದೀಯಾ? ಗಂಟೆ ಏಳಾಯ್ತು ಬೇಗ ಏಳು. ಅಪ್ಪ ಇವತ್ತು ನಿನಗಾಗಿ ಸ್ಪೆಷ್ಯಲ್ ಬ್ರೇಕ್ಫಾಸ್ಟ್ ಮಾಡಿದ್ದಾರೆ. ವಾಹ್…..! ಸೂಪರ್ ಟೇಸ್ಟ್’
ಶಿಲ್ಪಾ ದಡಕ್ಕನೆ ಎದ್ದು ಕೂತವಳೇ ಮೊಬೈಲ್ ನೋಡಿದಾಗ ಗಂಟೆ ಏಳಾಗಿತ್ತು.
‘ಛೆ…! ಒಂದು ಗಂಟೆ ಜಾಸ್ತಿನೇ ಮಲಗ್ಬಿಟ್ಟೆ. ಈ ಡಬ್ಬಲ್ ಕನಸು ಇಷ್ಟೊತ್ತು ಮಲಗಿಸಿತಾ? ಪೂರ್ತಿಯಾಗಿ ಕನಸು ಕಾಣಲಂತಾನೇ ಅಲರಾಮ್ ಕೂಡ ಇವತ್ತೇ ಹಾಳಾಗ್ಬೇಕಾ?’
ಅವಸರವಸರವಾಗಿ ಒಳಗಡೆ ಬಂದಾಗ, ಸುಶ್ ಬ್ರೇಕ್ಫಾಸ್ಟ್ ಗೆ ರೆಡಿ ಮಾಡಿಟ್ಟಿದ್ದ. ಶಿಲ್ಪಾಳನ್ನು ಕಂಡ ಕೂಡಲೇ……
‘ತಗೋ ಮೇಡಮ್ ಕಾಫಿ’ ಅಂದಾಗ,
‘ಅರೆ; ಇವತ್ತೇನು ಸ್ಪೆಷ್ಯಲ್? ಯಾವತ್ತೂ ಅಡುಗೆ ಮನೆ ಕಡೆ ಸುಳಿಯದವನು ಯಾವ ದೇವರು ಬುದ್ಧಿ ಕೊಟ್ರು?’
ಇವತ್ತು ಉಮೆನ್ಸ್ ಡೇ ಅಲ್ವಾ ಹಾಗೆ ನಿನಗೆ ಸರ್ಪ್ರೈಸ್ ಕೊಡೋಣ ಅಂತ ನಾನೂ ಪೃಥ್ವಿ ಪ್ಲ್ಯಾನ್ ಮಾಡಿದ್ವಿ. ಅಲರಾಮನ್ನು ನಾನೇ ಆಫ್ ಮಾಡಿಟ್ಟಿದ್ದೆ? ಎಂದು ನಗುತ್ತಾ ಅಂದಾಗ,
‘ಸುಶ್ ನಿನ್ನ ತುಂಟಾಟ ಇನ್ನೂ ಬಿಟ್ಟಿಲ್ವಲ್ಲಾ…..!’
‘ಪುಟ್ಟಾ ನಾನು ಹೀಗೆ ಇರೋದು ನಿನಗಿಷ್ಟವಿಲ್ವಾ….. ನಿನ್ನಂತ ಶೂರ್ಪನಖಿಯನ್ನು ಹಿಡಂಬಿಯನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ ರಾಕ್ಷಸಿಯನ್ನು ಸುಕೋಮಲೆಯನ್ನಾಗಿ ಮಾಡಿದ್ದು ನನ್ನ ಈ ತರದ ಸ್ವಭಾವವೇ ತಾನೇ?’
‘ಸುಶ್ ಸಾಕು ಮಾಡು ಇಲ್ಲಾಂದ್ರೆ ನಾನೂ ನಿನಗೆ ಮೊದಲು ಬೈತಿದ್ದ ಹಾಗೆ ಬ್ಯಾಡ್ ವರ್ಡ್ ಯೂಸ್ ಮಾಡ್ತೀನಿ? ಅಂದಾಗ ಸುಶ್ ಶಿಲ್ಪಾಳನ್ನು ಬಳಿಸೆಳೆದು…….,’
‘ಅದೆಲ್ಲಾ ಬೇಡ ಕಣೇ ಈವಾಗೇನಿದ್ರೂ ಬರೀ ಪ್ರೀತಿ ಮುದ್ದು ಮಾತು ಅಷ್ಟೇ’ ಅಂದಾಗ,
‘ಸಾಕು ಸುಮ್ನಿರು; ಅಲ್ಲಿ ಪೃಥ್ವಿ ನಮ್ಮನ್ನೇ ನೋಡ್ತಿದ್ದಾಳೆ. ನಿನ್ನ ಹಾಗೆ ಬಲು ತುಂಟಿ, ನಿನ್ಮಗಳು ತಾನೇ…..’ ಅನ್ನುತ್ತಾ ಸುಶ್‍ನ ತೋಳಸೆರೆಯಿಂದ ಬಿಡಿಸಿಕೊಂಡು ದೂರ ಸರಿಯಲೆತ್ನಿಸುತ್ತಿದ್ದಾಗ……
‘ಮಮ್ಮೀ ನನಗೇನೂ ಕೇಳಿಸ್ಲಿಲ್ಲ ನಿಮ್ಮತ್ತ ನೋಡ್ತಾನೂ ಇಲ್ಲ. ನಾನು ಉಮೆನ್ಸ್ ಡೇ ಗ್ರೀಟಿಂಗ್ಸ್ ಮಾಡ್ತಾ ಇದ್ದೀನಿ. ನೀವು ಮುಂದುವರಿಸಿ.’
‘ನೋಡಿದ್ರಾ ನಿಮ್ಮಗಳು ಏನಂತಿದ್ದಾಳೆ……! ಓಹ್ ನಾನು ಮರ್ತೇ ಬಿಟ್ಟಿದ್ದೆ. ಲೇಟಾಯ್ತು ಆಫೀಸಿಗೆ ಹೊರಡಿ..!’
‘ಇಲ್ಲ ಪುಟ್ಟಾ ಇವತ್ತು ರಜೆ ಮಾಡಿದ್ದೀನಿ. ಹೇಮಂತನನ್ನೂ ನಮ್ಮ ಜೊತೆ ಬರಹೇಳಿದ್ದೀನಿ. ಲಾಂಗ್ ಡ್ರೈವ್ ಹೋಗೋಣ. ಫುಲ್ ಎಂಜಾಯ್ ಮಾಡೋಣ. ನಮ್ಮಿಬ್ಬರಿಗಾಗಿ ಕ್ಷಣ ಕ್ಷಣ ಮಿಡಿಯುವ ಜೀವ, ನಮ್ಮ ಖುಷಿಯಲ್ಲಿಯೇ ತೃಪ್ತಿ ಕಾಣುವ, ನನ್ನ ಜೀವದ ಉಸಿರು ನನ್ನೊಲವಿನ ಪಾರಿಜಾತ ನೀನು, ನಿನಗಾಗಿ ಇಷ್ಟೂ ಮಾಡದಿದ್ರೆ ಹೇಗೆ ಪುಟ್ಟಾ…..’
ವಾಸ್ತವದಲ್ಲಿ ಜೊತೆಯಾಗಿ ಈ ಬದುಕಿಗೊಂದು ಅರ್ಥ ಕಲ್ಪಿಸಿದವನೇ ಕನಸಿನಲ್ಲಿಯೂ ಬಂದು ಪರಿಪರಿಯಾಗಿ ಕಾಡಿ ಅಂದಿನ ದಿನಗಳಿಗೆ ಮತ್ತೆ ತಾಜಾತನದುಸಿರು ನೀಡಿದ ಸುಶ್‍ನ ಕುಡಿಕಣ್ಣ ನೋಟದಿಂದ ತಪ್ಪಿಸಲೆಂದು ಶಿಲ್ಪ ಮನೆಯಂಗಳಕ್ಕೆ ದೃಷ್ಟಿ ಹೊರಳಿಸಿದಾಗ, ನಕ್ಕ ಪಾರಿಜಾತ ಮೆಲ್ಲನುರುಳುತಿತ್ತು.

2 thoughts on “ಅಂತಃಪಟದಾಚೆ

  1. ಅತೃಪ್ತ ಮನಸ್ಸು,ಸ್ಪಷ್ಟತೆಯಿಲ್ಲದ ಯೋಚನಾ ಲಹರಿ , ತಾನೇನು ಮಾಡುತ್ತಿದ್ದೇನೆಂಬ ಅರಿವಿಲ್ಲದ ಜೀವನ… ಇವೆಲ್ಲಾ ಇರುವಾಗ ಕೆಟ್ಟ ಕನಸು ಸಾಮಾನ್ಯ.‌…..

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 16-11-2024
ಸ್ಥಳ : ಯುವವಾಹಿನಿ ಸಭಾಂಗಣ 3ನೇ ಮಹಡಿ, ರಘು ಬಿಲ್ಡಿಂಗ್ ಊರ್ವ ಸ್ಟೋರ್, ಮಂಗಳೂರು

ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕ

ದಿನಾಂಕ : 15-11-2024
ಸ್ಥಳ : ಸಿ. ಎಸ್. ಐ. ಬಾಲಿಕಾಶ್ರಮ, ಮೂಲ್ಕಿ

ಯುವವಾಹಿನಿ (ರಿ.) ಮೂಲ್ಕಿ ಘಟಕ

ದಿನಾಂಕ : 23-11-2024
ಸ್ಥಳ : ಸಂಪಿಗೆ ನಗರ, ಉದ್ಯಾವರ ಉಡುಪಿ

ಯುವವಾಹಿನಿ (ರಿ) ಉಡುಪಿ ಘಟಕ

ದಿನಾಂಕ : 24-11-2024
ಸ್ಥಳ : ನಾಗಪ್ಪ ಕಾಂಪ್ಲೆಕ್ಸ್ , ಎನ್ .ಹೆಚ್-66, ಬಲಾಯಿಪಾದೆ, ಉಡುಪಿ

ಯುವವಾಹಿನಿ (ರಿ) ಉಡುಪಿ ಘಟಕ

ದಿನಾಂಕ : 17-11-2024
ಸ್ಥಳ : ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ಹೆಜಮಾಡಿ

ಯುವವಾಹಿನಿ (ರಿ) ಪಡುಬಿದ್ರಿ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
error: Content is protected !!