ರಕ್ತದಾನ ಮಹಾದಾನ ಶ್ರೇಷ್ಠ ದಾನ ,ಇದು ಮಾನವೀಯತೆಯ ಪ್ರತೀಕ ,ನಾವೆಲ್ಲಾ ಒಂದೇ ತಾಯಿಯ ಮಕ್ಕಳು ಎಂಬ ಸಂದೇಶ ಸಾರುತ್ತದೆ , ಅಸ್ತಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ಯುವವಾಹಿನಿ ಮಾಣಿ ಘಟಕದ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ಮಾಣಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಗೌರವಾಧ್ಯಕ್ಷರಾದ ಈಶ್ವರ ಪೂಜಾರಿ ತಿಳಿಸಿದರು.
ಯುವವಾಹಿನಿ (ರಿ) ಮಾಣಿ ಮತ್ತು ಬಂಟ್ವಾಳ ಘಟಕ, ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಇದರ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದ.ಕ.ಜಿಲ್ಲೆ ರಕ್ತನಿಧಿ, ಸರಕಾರಿ ಲೇಡಿಗೋಷನ್ ಆಸ್ಪತ್ರೆ, ಡೆಲ್ಟಾ ಕಣ್ಣಿನ ಆಸ್ಪತ್ರೆ, ಮಂಗಳೂರು ಇದರ ಸಹಯೋಗದೊಂದಿಗೆ ದಿನಾಂಕ 08.10.2017 ರಂದು ಮಾಣಿ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಜರುಗಿದ ರಕ್ತದಾನ ಮತ್ತು ಉಚಿತ ಕಣ್ಣು ಪರೀಕ್ಷಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷರಾದ ರಾಜೇಶ್ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಿರಳವಾಗಿ ಸಿಗುವ ನೆಗೆಟಿವ್ ರಕ್ತದ ಗುಂಪು ತನ್ನದು, ವರ್ಷಕ್ಕೆ ಎರಡು ಬಾರಿ ನಿರಂತರವಾಗಿ ರಕ್ತದಾನ ಮಾಡುತ್ತಿದ್ದೇನೆ. ಈಗಲೂ ಆರೋಗ್ಯವಾಗಿದ್ದೇನೆ. ಆದ್ದರಿಂದ ರಕ್ತದಾನದಿಂದ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷರಾದ ಲೋಕೇಶ್ ಪೂಜಾರಿ ಅಲೆತ್ತೂರು ತಿಳಿಸಿದರು.
ರಕ್ತ ಪಡೆಯಲು ಬದಲಿ ವ್ಯವಸ್ಥೆ ಇಲ್ಲ , ಮಾನವರ ದಾನದಿಂದಲೇ ರಕ್ತವನ್ನು ಪಡೆದು ಜೀವ ಉಳಿಸಬೇಕಾಗಿದೆ. ಆದ್ದರಿಂದ ವಿರಳವಾದ ರಕ್ತದ ಗುಂಪನ್ನು ಸರಳವಾಗಿ ಪಡೆಯುವುದೇ
ಇಂತಹ ಶಿಬಿರದ ಉದ್ದೇಶ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡೆಲ್ಟಾ ಕಣ್ಣಿನ ಆಸ್ಪತ್ರೆಯ ಬಾಲಚಂದ್ರ ತಿಳಿಸಿದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ, ಯುವವಾಹಿನಿ ಮಾಣಿ ಘಟಕದ ಸಲಹೆಗಾರರಾದ ದಯಾನಂದ ಕೊಡಾಜೆ, ಮಾಣಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷರಾದ ನಾರಾಯಣ ಸಾಲ್ಯಾನ್, ಯುವವಾಹಿನಿ ಮಾಣಿ ಘಟಕದ ಆರೋಗ್ಯ ನಿರ್ದೇಶಕರಾದ ಶಿವರಾಜ್, ಶಿಬಿರಕ್ಕೆ ಶುಭ ಹಾರೈಸಿದರು.
66 ಜನರು ರಕ್ತದಾನ ಮಾಡಿದರು ,160 ಜನರು ಕಣ್ಣು ಪರೀಕ್ಷಾ ಶಿಬಿರದ ಪ್ರಯೋಜನ ಪಡೆದರು ಹಾಗು ಉಚಿತ ಕನ್ನಡಕಗಳನ್ನು ವಿತರಿಸಲಾಯಿತು
ಯುವವಾಹಿನಿ ಮಾಣಿ ಘಟಕದ ಸಲಹೆಗಾರರಾದ ಪ್ರೇಮನಾಥ್ ಕೆ. ಪ್ರಾಸ್ತಾವಿಕ ಮಾತನಾಡಿದರು, ಯುವವಾಹಿನಿ ಬಂಟ್ವಾಳ ಘಟಕದ ಕಾರ್ಯದರ್ಶಿ ದಿನೇಶ್ ಸುವರ್ಣ ರಾಯಿ ಸ್ವಾಗತಿಸಿದರು, ಯುವವಾಹಿನಿ ಮಾಣಿ ಘಟಕದ ಕಾರ್ಯದರ್ಶಿ ಪ್ರಶಾಂತ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು
Veryniceprograme
Well done Mani chapter. Keep it up