ಪ್ರೀತಿಯ ಸ್ನೇಹಿತರೇ,
ಪ್ರತಿ ದಿನ ನಿಮ್ಮ ಬೆರಳಂಚಿಗೆ ಬಂದು ನಿಮ್ಮೆಲ್ಲರ ಗಮನವನ್ನು ನನ್ನಡೆಗೆ ಸೆಳೆದು ಹೋಗುತ್ತಿದ್ದೇನೆ, ನಿಮ್ಮೆಲ್ಲರ ಮೊಬೈಲ್‍ನಲ್ಲಿ ನಮ್ಮ ಸಂಸ್ಥೆಯು ನೆಲೆ ಕಂಡುಕೊಂಡಿರುವಾಗ ಮತ್ತೆ ನನ್ನ ಮಾತಿನ ಅವಶ್ಯಕತೆ ಇಲ್ಲ ಎಂದುಕೊಳ್ಳುತ್ತೇನೆ. ಹೀಗಿದ್ದರೂ ಔಪಚಾರಿಕ ನೆಲೆಗಟ್ಟಿನಲ್ಲಿ ನಮ್ಮ ಆಕರ ಗ್ರಂಥ ಸಾಕಾರಗೊಳ್ಳುತ್ತಿರುವ ಹೊತ್ತಿನಲ್ಲಿ ದಾಖಲೀಕರಣದ ನೆಲೆಯಲ್ಲಿ ಎರಡಕ್ಷರ ಬರೆಯಲೇ ಬೇಕಿದೆ.
ಸುದೀರ್ಘ ಮೂವತ್ತು ವರುಷಗಳ ಸಾರ್ಥಕ ನಡೆಯನ್ನು ತಪಸ್ಸಿನಂತೆ ಕಳೆದಿರುವ ಯುವವಾಹಿನಿಯು, ಸಾಮಾಜಿಕವಾಗಿ ಬದಲಾವಣೆಯ ಪ್ರಬಲ ಕ್ರಾಂತಿಯನ್ನೇ ಹುಟ್ಟುಹಾಕಿದೆ .ಯಾವ ಸಮಯದಲ್ಲಿ ಏನು ಆಗಬೇಕಿದೆಯೋ ಅದು ಆಗಿಯೇ ತೀರುತ್ತದೆ ಎನ್ನುವುದು ಯುವವಾಹಿನಿಯ ಕಾರ್ಯಕಲಾಪದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಒಂದು ಕಾಲದಲ್ಲಿ ಸಭೆಗೊಸ್ಕರ ಬಾಡಿಗೆ ಕಟ್ಟಡ ಪಡೆಯುತ್ತಿದ್ದ ನಾವು ನಂತರದ ದಿನದಲ್ಲಿ ಸ್ವಂತ ಸೂರಿಗೆ ಹೋದೆವು. ಇದೀಗ ಅಲ್ಲಿಂದ ಮತ್ತೊಂದು ಸುಸಜ್ಜಿತ ಮನೆಯಲ್ಲಿ ನೆಲೆ ಕಂಡುಕೊಂಡಿದ್ದೇವೆ. ಒಂದು ದಶಕದಿಂದ ಯುವವಾಹಿನಿಯ ವೆಬ್‍ಸೈಟ್‍ಗಾಗಿ ಪ್ರಯತ್ನ ನಡೆಸುತ್ತಿದ್ದ ನಾವು ಕೊನೆಗೂ ಅದರಲ್ಲೂ ಯಶಸ್ಸು ಕಂಡುಕೊಂಡು ಉತ್ತಮ ಜಾಲಾತಾಣವನ್ನು ಹೊಂದಿಕೊಂಡಿದ್ದೇವೆ. 2017 ಫೆಬ್ರವರಿ 24ರ ಶಿವರಾತ್ರಿಯ ಶುಭ ಶುಕ್ರವಾರದಂದು www.yuvavahini.in ಜಾಲತಾಣ ಅಸ್ತಿತ್ವಕ್ಕೆ ಬಂದು ಕೇವಲ ಆರು ತಿಂಗಳ ಅವಧಿಯಲ್ಲಿ 40 ಸಾವಿರ ವೀಕ್ಷಕರನ್ನು ಹೊಂದಿದ ಹಿರಿಮೆ ನಮ್ಮ ವೆಬ್‍ಸೈಟ್‍ಗಿದೆ. ಇದೇನು ದೊಡ್ಡ ಸಂಖ್ಯೆ ಅಲ್ಲ ಎಂಬುವುದು ಗೊತ್ತು. ಸಮುದ್ರದಲ್ಲಿ ಸಣ್ಣ ಮೀನಿನಂತಿರುವ ಯುವವಾಹಿನಿ ಜಾಲತಾಣ ಇತರ ಜಾಲತಾಣಗಳಿಗೆ ಹೋಲಿಸಿದರೆ ನಮ್ಮದು ಅಂಬೆಗಾಲಿಡುತ್ತಿರುವ ಮಗು. ಪ್ರತಿಯೊಂದು ಘಟಕವೂ ನಡೆಸುವ ಕಾರ್ಯಕ್ರಮಗಳನ್ನು ಹೊಸ ಹೊಸ ಮಾಹಿತಿಗಳನ್ನು ಕ್ಷಣ ಮಾತ್ರದಲ್ಲಿ ನಮ್ಮ ಬೆರಳ ತುದಿಯಿಂದ ತೆರೆದಿಡುವ ಶಕ್ತಿ ನಮ್ಮ ವೆಬ್‍ಸೈಟ್‍ಗಿದೆ. ಇದು ಯುವವಾಹಿನಿಯ ಯಶಸ್ಸಿನ ಪಯಣದಲ್ಲಿ ಹೊಸ ಮೈಲುಗಲ್ಲು ಎಂದುಕೊಳ್ಳುತ್ತೇನೆ.
ಬಂಧುಗಳೇ, ನಾನು ತುಂಬಾ ಸಲ ಯೋಚಿಸುತ್ತೇನೆ ನಮ್ಮದು ಯಾಂತ್ರೀಕೃತ ಬದುಕೇ..? ಎಂದು, ಹೌದು ಎನ್ನುವ ಉತ್ತರವೇ ತುಂಬಾ ಸಲ ಮನಸ್ಸಲ್ಲಿ ಸುಳಿದಾಡುತ್ತವೆ. ನಾಳೆಯ ಬಗ್ಗೆ ಅಗಾಧವಾದ ನಂಬಿಕೆ ಯನ್ನು ಇಟ್ಟುಕೊಂಡಿರುವ ನಾವು ಇಂದಿನ ಎಷ್ಟೋ ಕೆಲಸಗಳನ್ನು ನಾಳೆಗೆ ಉಳಿಸಿಕೊಂಡು ಇಂದಿನ ದಿನವನ್ನು ಒಂದಷ್ಟು ಆಲಸ್ಯದಿಂದ ಕಳೆಯುತ್ತೇವೆ. ಇಂದಿನ ದಿನ ಏನೆಂದು, ಇಂದು ಮಾಡುವ ಕೆಲಸ ಏನು? ಎನ್ನುವುದನ್ನು ತಿಳಿಯದೇ ಮುಂಜಾನೆ ಸೂರ್ಯ ಮೂಡುವ ಹೊತ್ತಿಗೆ ಎಂದಿನಂತೆ ಏಳುತ್ತೇವೆ, ಎಂದಿನ ಜಿಡ್ಡುತನಕ್ಕೆ ಮೈ ಒಡ್ಡುತ್ತೇವೆ, ಅದೇ ಬ್ರಷ್, ಅದೇ ಪೇಸ್ಟ್, ಅದೇ ಟೇಸ್ಟ್ ಫುಡ್, ಅದೇ ಬಸ್, ಅದೇ ಆಫೀಸ್ ಮತ್ತೇ ಎಂದಿನಂತೆ ಸಂಜೆ ಅದೇ ಗೆಳೆಯರ ಜೊತೆ ವಾಕ್, ಟಾಕ್, ಬಾರಲ್ಲಿ ಚೀಯರ್ಸ್, ಬಾಯಲ್ಲಿ ಸುರುಳಿ ಹೊಗೆ, ಹೆಂಡತಿಗೆ ಜಾಗರಣೆ, ತಾಯಿಗೆ ಭಯ, ನಮಗೋ ಜಸ್ಟ್ ಎಂಜಾಯ್…
ಜೀವನ ಅನ್ನೋದು ಇಷ್ಟೇ ಅಲ್ಲವೇ, ನಮಗೆ ಇಂದಿನ ಬಗ್ಗೆ ಗೊತ್ತಿಲ್ಲ, ನಾಳಿನ ಚಿಂತೆ ಇಲ್ಲ, ಪರರ ಬಗ್ಗೆ ಕಾಳಜಿ ಇಲ್ಲ, ಬದುಕು ಅನ್ನೋದು ಶಾಶ್ವತ ಅಲ್ಲ ಎಂದು ತಿಳಿದಿದ್ದರೂ ಹೋರಾಡುತ್ತೇವೆ ಹೋರಾಡುತ್ತಲೇ ಇರುತ್ತೇವೆ ಸ್ವಾರ್ಥಕ್ಕಾಗಿ, ಮಾನ ಮರ್ಯಾದೆ ಬಿಟ್ಟು ಹೋರಾಡುತ್ತೇವೆ. ಯಾಕೆ ಗೊತ್ತಾ? ನಮಗೆ ಅಷ್ಟೊಂದು ನಂಬಿಕೆ. ನಾನು ಉಳಿಸಿದ್ದನ್ನು ದುಡಿದು, ತಲೆ ಒಡೆದು ಗಳಿಸಿದ್ದನ್ನು ಹೋಗುವಾಗಲೂ ಕೊಂಡೋಗುತ್ತೇನೆ ಎನ್ನುವ ಭ್ರಮೆಯ ನಂಬಿಕೆ. ಆದರೆ ಯಾರಿಗೂ ಗೊತ್ತಿಲ್ಲ ನಾವು ಗಳಿಸಿದ ಹಣ, ಆಸ್ತಿ, ಮನೆ ಮಠ, ಹೆಂಡತಿ ಮಕ್ಕಳು ಅಷ್ಟೇ ಏಕೆ ನಾವು ಗಳಿಸಿದ ಹೆಸರನ್ನೂ ನಾವು ಬಿಟ್ಟು ಹೋಗುತ್ತೇವೆ. ಹೀಗಿದ್ದರೂ ನಾಳಿನ ಬಗ್ಗೆ ನಮಗೆ ಅದೇನೋ ನಂಬಿಕೆ ಅದಕ್ಕೇ ಅಲ್ಲವೇ ನಾಳೆ ನಾವು ಇರುತ್ತೇವೆಯೋ ಇಲ್ಲವೋ ಎನ್ನವುದು ತಿಳಿಯದಿದ್ದರೂ ಇಡ್ಲಿಗೆ ಇಂದೇ ಅಕ್ಕಿ ನೆನೆಸಿಡುತ್ತೇವೆ.
ಹೌದಾ….? ಅಥವಾ ಇವನದೊಂದು ಹುಚ್ಚು ಎಂದು ನೀವಂದುಕೊಳ್ಳ ಬಹುದು ಆದರೆ ನನ್ನ ಕಾಳಜಿ ಬೇರೆ, ದೇವರು ನಮಗೊಂದು ಜನ್ಮ ನೀಡಿದ್ದಾನೆ ಸಮಾಜದ ಒಳಿತಿನ ಜವಬ್ದಾರಿ ಭಗವಂತ ನೀಡಿದ್ದಾನೆ. ಎಲ್ಲರಿಗೂ ಒಂದೇ ರೀತಿಯ ಸಮಯವನ್ನೂ ನೀಡಿದ್ದಾನೆ. ನಮ್ಮ ಮಿತಿಯೊಳಗೆ ಈ ಸಮಯವನ್ನು ಸಂಯೋಜಿಸಿ ಸಮಾಜಕ್ಕೆ ನೆರವಾಗೋಣ. ನೊಂದು ಬೆಂದು ಬಸವಳಿದಿರುವ ನೂರಾರು ಜೀವಗಳಿವೆ, ಅವರಿವರ ದಾಸ್ಯಕ್ಕೆ ಸಿಲುಕಿ ನಲುಗಿರುವ ದೇಹಗಳಿವೆ, ಮೊಂಡು ಧೈರ್ಯವ ಪ್ರದರ್ಶಿಸಿ ಜೈಲು ಸೇರಿದವರಿದ್ದಾರೆ, ಕ್ಷಣಿಕ ಆಸೆಗೆ ಬಲಿಯಾಗಿ ಮನೆಯಿಂದ ದೂರವಾದವರು ಇದ್ದಾರೆ. ಪರಿವರ್ತನೆ ಜಗದ ನಿಯಮಎಂದು ಶ್ರೀ ಕೃಷ್ಣ ಹೇಳಿದ್ದಾನೆ. ಆ ಪರಿವರ್ತನೆಗೆ ನಾವು ಮೆಟ್ಟಿಲು ಆಗೋಣ. ಕೊಡುವಷ್ಟು ಸಾರ್ಮಥ್ಯ ಇಲ್ಲದೇ ಇರಬಹುದು ಅದರೆ ಕೈ ಜೋಡಿಸುವ ಶಕ್ತಿ ಖಂಡಿತಾ ನಮ್ಮಲ್ಲಿ ಇದೆ. 2ಯುವವಾಹಿನಿ ನಿಮ್ಮತ್ತ ಕೈ ಚಾಚಿದೆ, ಬನ್ನಿ ಜೊತೆಯಾಗಿ ಸಾಗೋಣ ಯುವವಾಹಿನಿಯ ಮೂಲಕ ಸಮಾಜದ ಉನ್ನತೀರಣದತ್ತ. ಸಲಹೆ ಸೂಚನೆ ನೀಡುತ್ತಾ ಹುರಿದುಂಬಿಸುತ್ತಿರುವ, ತೆರೆಮರೆಯಲ್ಲಿ ನನ್ನನ್ನು ಪ್ರೋತ್ಸಾಹಿಸುತ್ತಿರುವ ಹಿರಿಯ ಕಿರಿಯ ಮಾರ್ಗದರ್ಶಿಗಳಿಗೆ ವೈಯಕ್ತಿಕವಾಗಿ ಋಣಿಯಾಗಿದ್ದೇನೆ. ಅಂದವಾಗಿ ವೆಬ್ ವಿನ್ಯಾಸಗೊಳಿಸಿದ ಅಕ್ಷರೋದ್ಯಮದ ಸುನಿಲ್ ಕುಲಕರ್ಣಿ ಇವರಿಗೆ ಹಾಗೂ ಇದುವರೆಗೆ ನನ್ನೊಂದಿಗೆ ಸಾಥ್ ನೀಡುತ್ತಿರುವ ಯುವವಾಹಿನಿಯ ಕೇಂದ್ರ ಸಮಿತಿಯ ಅಧ್ಯಕ್ಷರು, ಮಾಜಿ ಅಧ್ಯಕ್ಷರುಗಳಿಗೆ, ಸಲಹೆಗಾರರಿಗೆ, ಗೆಳೆಯರಾದ ನರೇಶ್ ಕುಮಾರ್ ಸಸಿಹಿತ್ಲು ಮತ್ತು ದಿನಕರ ಡಿ. ಬಂಗೇರ ಇವರಿಗೆ ವಿಶೇಷವಾದ ಧನ್ಯವಾದಗಳು.
Nice