ಆತ್ಮೀಯ ಓದುಗ ಬಾಂಧವರೇ,
ಮಾನವ ತನ್ನ ಸುತ್ತ ತಾನೇ ನಿರ್ಮಿಸಿಕೊಂಡಿರುವ, ಅಜ್ಞಾನ, ಅಂಧಕಾರ, ಮೂಢನಂಬಿಕೆಗಳ ಕೋಟೆಯನ್ನು ಒಡೆದು, ಆಕರ್ಷಕ ವ್ಯಕ್ತಿತ್ವವನ್ನು ಹೊಂದಿ ಪರಿಪೂರ್ಣತೆಯನ್ನು ಹೊಂದುವುದಕ್ಕೆ ಸಾಧ್ಯವಿದೆ ಎಂಬ ಸತ್ಯವನ್ನು ಹಲವಾರು ಮಂದಿ ಯುಗಪುರುಷರು ನಮಗೆ ಸಾಧಿಸಿ, ತೋರಿಸಿಕೊಟ್ಟಿರುತ್ತಾರೆ. ಅಂತಹ ಮಹತ್ತರವಾದ ದಿವ್ಯ ಪಥವನ್ನು ತಮ್ಮ ಕೃತಿಯಿಂದ ಮತ್ತು ಸಾಧನೆಗಳಿಂದ ನಮಗೆ ತೋರಿಸಿಕೊಟ್ಟು ನಮ್ಮ ಸಮಾಜಕ್ಕೆ ಅಂಟಿದ್ದ ಅಸ್ಪ್ರಶ್ಯತೆ ಶಾಪವನ್ನು ತೊಡೆದು ಹಾಕಿ, ಸನ್ಮಾರ್ಗದತ್ತ ನಮಗೆ ಬೆಳಕು ತೋರಿದವರು ಬ್ರಹ್ಮಶ್ರೀ ನಾರಾಯಣಗುರುಗಳು. ಅವರು ಸಾರಿದ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ತತ್ವದ ಬೆಳಕಿನಲ್ಲಿ, ವಿದ್ಯೆ-ಉದ್ಯೋಗ-ಸಂಪರ್ಕವನ್ನು ಮೂಲ ಧ್ಯೇಯವನ್ನಾಗಿರಿಸಿಕೊಂಡು ಜನ್ಮ ತಾಳಿದ ಸಂಸ್ಥೆ ಯುವವಾಹಿನಿ.
ಯುವವಾಹಿನಿ ಹುಟ್ಟಿ 29 ವರ್ಷಗಳು ಕಳೆದು 30ನೇ ವರ್ಷಕ್ಕೆ ಪಾದಾರ್ಪಣೆಗೈಯುವ ಈ ಸಂದರ್ಭದಲ್ಲಿ ಯುವವಾಹಿನಿಯ ಮುಖವಾಣಿ ‘ಯುವಸಿಂಚನ’ದ ವಾರ್ಷಿಕ ವಿಶೇಷಾಂಕ ವಿನೂತನ ರೂಪದೊಂದಿಗೆ ನಿಮ್ಮ ಕೈ ಸೇರಿದೆ. 1988ರಿಂದ ಈವರೆಗೆ ಅಧ್ಯಕ್ಷರುಗಳಾಗಿ ಸಮರ್ಥವಾಗಿ ಯುವವಾಹಿನಿಯನ್ನು ಮುನ್ನಡೆಸಿ ಯುವವಾಹಿನಿಯ ಬೆಳವಣಿಗೆಗೆ ಕಾರಣಕರ್ತರಾದ ಮಾಜಿ ಅಧ್ಯಕ್ಷರುಗಳು, ಹಿಂದಿನ ವರ್ಷಗಳಲ್ಲಿ ಸಿಂಚನ ಪತ್ರಿಕೆಯ ಸಂಪಾದಕರಾಗಿ ಕೆಲಸ ನಿರ್ವಹಿಸಿ, ಯುವವಾಹಿನಿಯ ಕಾರ್ಯಕ್ರಮಗಳನ್ನು ತಮ್ಮ ಮನೆ ಬಾಗಿಲಿಗೆ ತಲುಪಿಸಲು ಕಾರಣಕರ್ತರಾದ ಮಾಜಿ ಸಂಪಾದಕ ಮಿತ್ರರು, ಯಾವುದೇ ಸಂದರ್ಭದಲ್ಲಿ ಅಗತ್ಯ ಬಿದ್ದರೆ ಪರ್ವತವನ್ನೇ ಹೊತ್ತು ತಂದು ನಮ್ಮ ಬಳಿ ಇರಿಸಬಲ್ಲಂತಹ ಆತ್ಮವಿಶ್ವಾಸವನ್ನು ಹೊಂದಿದ ಉತ್ಸಾಹಿ ಸದಸ್ಯರುಗಳು, ಪ್ರತಿ ಬಾರಿಯೂ ಸಿಂಚನ ಪತ್ರಿಕೆಯ ವಿಶೇಷಾಂಕವನ್ನು ಓದಿ, ಪ್ರಾಮಾಣಿಕ ಸಲಹೆ, ಸೂಚನೆಗಳನ್ನು ನೀಡಿ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಸಹೃದಯ ಓದುಗರು, ನಾವು ಕೇಳಿದಾಕ್ಷಣ ತಮ್ಮ ಅಮೂಲ್ಯವಾದ ಲೇಖನಗಳ ಧಾರೆಯನ್ನೇ ಹರಿಸಿ ನಮ್ಮನ್ನು ಹರಸುವ ಲೇಖಕ ಮಿತ್ರರು ಈ ಎಲ್ಲರ ಸಹಕಾರದಿಂದಾಗಿ “ಯುವ ಸಿಂಚನ” ನಿಮ್ಮ ಕೈ ಸೇರುವಂತಾಗಿದೆ.
ನಮ್ಮ ಈ ಸಂಚಿಕೆ ಸಂಗ್ರಹಯೋಗ್ಯ ಆಗಲಿದೆ ಎಂಬ ವಿಶ್ವಾಸ ನಮ್ಮ ಸಂಪಾದಕೀಯ ಮಂಡಳಿಯದ್ದು. ಹಿರಿಯ-ಕಿರಿಯ ಲೇಖಕರ ಲೇಖನಗಳು, ಮಾಹಿತಿಗಳ ಸಂಗ್ರಹ, ಮುಖ್ಯವಾಗಿ ಯುವವಾಹಿನಿಯ ಎಲ್ಲಾ ಆಯಾಮಗಳಿಗೆ ಬೆಳಕು ಚೆಲ್ಲಿದ್ದೇವೆ. ಸಮಾಜ ಕೈಗನ್ನಡಿಯಾಗಿ ನಮ್ಮ “ಯುವ ಸಿಂಚನ” ಮೂಡಿ ಬಂದಿದೆ ಎಂದಾದರೆ ಅದು ನಮ್ಮ ಶ್ರಮಕ್ಕೆ ನಿಮ್ಮ ಸಹಕಾರಕ್ಕೆ ಸಂದ ಫಲ ಎಂದಾಗುತ್ತದೆ. ಈ ಬಾರಿಯ ಯುವಸಿಂಚನ ವಿಶೇಷಾಂಕದಲ್ಲಿಯೂ ಆಶಯ. ಅವಲೋಕನ, ಕೆಲವೊಂದು ವೈಚಾರಿಕ, ವಿಡಂಬನೆ, ಕಾಳಜಿ, ಚಿಂತನೆ, ಚಿಂತನಾಶೀಲ ದಿಕ್ಸೂಚಿ ಬರಹ, ಸಾಂಸ್ಕ್ರತಿಕ , ಧಾರ್ಮಿಕ ಲೇಖನಗಳು, ಕಲೆ, ಸಾಹಿತ್ಯ, ಜಾನಪದಕ್ಕೆ ಸಂಬಂಧಿಸಿದ ಬರಹಗಳು, ಪ್ರವಾಸ ಕಥನಗಳು ಕಥೆ-ಕವನ ಚುಟುಕುಗಳು ಮುಂತಾದ ವೈವಿಧ್ಯಮಯ ಬರಹಗಳು ಜೋಡಿಸಲ್ಪಟ್ಟಿವೆ. ಇವುಗಳು ಯುವಸಿಂಚನ ವಿಶೇಷಾಂಕಕ್ಕೆ ಒಂದು ಹೊಸ ಮೆರುಗನ್ನು ತಂದು ಕೊಟ್ಟಿದೆ.
ಈ ವಿಶೇಷಾಂಕವನ್ನು ಹೊರತರಲು ನನ್ನ ಜೊತೆ ಸಹಕಾರವನ್ನು ನೀಡಿದ ನನ್ನ ಸಂಪಾದಕ ಬಳಗದ ಪತ್ರಿಕಾ ಕಾರ್ಯದರ್ಶಿ ಶ್ರೀಧರ ಪೂಜಾರಿ, ಸದಸ್ಯರಾದ ಪ್ರಚಾರ ನಿರ್ದೇಶಕರಾದ ಮಾಧವ ಕೋಟ್ಯಾನ್, ಉದಯ ಅಮೀನ್ ಮಟ್ಟು ಮುಲ್ಕಿ, ನಾಗೇಶ್ ಬಲ್ನಾಡ್ ಪುತ್ತೂರು, ಕೇಂದ್ರ ಸಮಿತಿಯ ಗೌರವಾನ್ವಿತ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಯವರು, ಮಾಜಿ ಅಧ್ಯಕ್ಷರಾದ ಸಾಧು ಪೂಜಾರಿ, ರಾಜೀವ ಪೂಜಾರಿ, ವಿಶೇಷವಾಗಿ ಸದ್ದಿಲ್ಲದೆ ಎಲ್ಲಾ ರೀತಿಯಲ್ಲೂ ಸಹಕರಿಸುತ್ತಿದ್ದ ರವಿಚಂದ್ರರವರು ಎಲ್ಲಾ ಘಟಕದ ಅಧ್ಯಕ್ಷ, ಕಾರ್ಯದರ್ಶಿಗಳು ಇವರೆಲ್ಲರಿಗೂ ನಾನು ಆಭಾರಿ. ನನಗೆ ಅತ್ಯಂತ ಖುಷಿ ತಂದಿರುವ ಸಂಗತಿಯೆಂದರೆ ಯುವವಾಹಿನಿಯ ಕೆಲಸ ಕಾರ್ಯಗಳ ವರದಿಗಳು ಜಾಲತಾಣದಲ್ಲಿ ಜಗಜ್ಜಾಹೀರುಗೊಳಿಸಿ ಸಂಸ್ಥೆಯನ್ನು ವಿಶ್ವದೆಲ್ಲೆಡೆ ಪರಿಚಯಿಸಿದ ಜಾಲತಾಣ ಸಂಪಾದಕರಾದ ರಾಜೇಶ್ ಬಂಟ್ವಾಳ ಮತ್ತು ಇದರ ಸದಸ್ಯರು, ಕಾಲಕಾಲಕ್ಕೆ ಮಾರ್ಗ ದರ್ಶನ ನೀಡಿದ ಸಲಹೆಗಾರರಾದ ಶ್ರೀ ಬಿ. ತಮ್ಮಯ, ಶ್ರೀ ಚಂದ್ರ ಶೇಖರ ಸುವರ್ಣ, ಶ್ರೀ ಲೋಕಯ್ಯ ಪೂಜಾರಿ, ನಮ್ಮ ಹಿತಚಿಂತಕರಾದ ಶ್ರೀ ಮುದ್ದುಮೂಡುಬೆಳ್ಳೆ, ಯುವ ಸಿಂಚನವು ಅಂದಚಂದಗಳಿಂದ ಕಂಗೊಳಿಸುವಂತೆ ಮೂಡಿಬರಲು ತನ್ನ ಯಾವುದೇ ಸಮಸ್ಯೆಗಳನ್ನು ಬದಿಗೊತ್ತಿ ಪ್ರತಿ ಪುಟವನ್ನು ವಿನ್ಯಾಸಗೊಳಿಸಿರುವ ಶ್ರೀ ದಿನಕರ ಡಿ. ಬಂಗೇರ, ಡಿ.ಟಿ.ಪಿ.ಯಲ್ಲಿ ಸಹಕರಿಸಿದ ಶ್ರೀಮತಿ ಸರಿತಾ ಅನಿಲ್ ಹಾಗೂ ನಮ್ಮ ಮನದಿಚ್ಛೆಯನ್ನು ಅರಿತುಕೊಂಡು ವಿಶೇಷಾಂಕವನ್ನು ವಿಶೇಷ ಕಾಳಜಿ ವಹಿಸಿ ಮುದ್ರಿಸಿಕೊಟ್ಟ ಹಾನಾ ಪಬ್ಲಿಷರ್ಸ್‍ನ ಶ್ರೀ ಎಂ.ಎಂ. ನಾಸರ್, ವಿಶೇಷಾಂಕವು ಅಲಂಕೃತವಾಗಿ ಮೂಡಿಬರಲು, ಆರ್ಥಿಕವಾಗಿ ಆಧಾರ ಸ್ತಂಭವಾಗಿರುವ ಜಾಹೀರಾತುದಾರರಿಗೂ, ಪ್ರೋತ್ಸಾಹ ನೀಡಿದ ಮಹನೀಯರಿಗೂ, ಜಾಹೀರಾತು ಸಂಚಾಲಕರಾದ ಹರೀಶ್ ಪಚ್ಚನಾಡಿ ಇವರೆಲ್ಲರಿಗೂ ಮನದಾಳದ ಕೃತಜ್ಞತೆಯನ್ನು ಅರ್ಪಿಸುತ್ತ ಕೈ ಮುಗಿದು ವಂದಿಸುತ್ತೇನೆ. ತಮ್ಮೆಲ್ಲರ ಸಹಕಾರವು ಇನ್ನು ಮುಂದೆಯೂ ಸಹಾ ನಮಗಿರಲಿ ಎಂದು ಆಶಿಸುತ್ತೇನೆ.
ಧನ್ಯವಾದಗಳು
NICE one. GUD work