ದೇಶವನ್ನು ಕಾಡುತ್ತಿರುವ ನಿರುದ್ಯೋಗ, ಬಡತನ, ಕಂದಾಚಾರ, ಮೂಢನಂಬಿಕೆ, ಹಾಗೂ ದುಂದುವೆಚ್ಚದ ಸಮಾರಂಭ ಮುಂತಾದ ಸಮಸ್ಯೆಗಳಿಂದ ಮುಕ್ತವಾದ ಸಮಾಜವೊಂದರ ನಿರ್ಮಾಣದ ಗುರುತರ ಹೊಣೆಗಾರಿಕೆ ಯುವ ಸಮುದಾಯದ ಮೇಲಿದ್ದು ಈ ಕಾರ್ಯಕ್ಕೆ ಶ್ರೀ ನಾರಾಯಣಗುರುಗಳ ಚಿಂತನೆಗಳನ್ನು ಪ್ರೇರಣೆಯಾಗಿ ಸ್ವೀಕರಿಸಿಕೊಂಡು ಕಾರ್ಯೋನ್ಮುಖರಾಗಬೇಕು ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮೀನ್ ಮಟ್ಟು ಅವರು ಹೇಳಿದರು
ನಾರಾಯಣಗುರು ವಿಚಾರ ಕಮ್ಮಟ (ನಾವಿಕ) ಮಂಗಳೂರು ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 163ನೇ ಜನ್ಮದಿನಾಚರಣೆ ಅಂಗವಾಗಿ ಯುವಜನರ ಗುರು ಮತ್ತು ಗುರಿ – ನಾರಾಯಣಗುರು ವಿಷಯದ ಕುರಿತು ಮಂಗಳೂರು ಸಂತ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ದಿನಾಂಕ 24.09.2017 ರಂದು ಆಯೋಜಿಸಿದ್ದ ದ.ಕ.ಜಿಲ್ಲಾ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಕೇರಳ ರಾಜ್ಯ ಇಂದು ಸಾಕ್ಷರತೆ ,ಉದ್ಯೋಗಶೀಲತೆ ಹಾಗೂ ಅಭಿವೃದ್ಧಿಯಲ್ಲಿ ಸಾಧಿಸಿದ ಪ್ರಗತಿಯ ಹಿಂದೆ ಶ್ರೀ ನಾರಾಯಣಗುರುಗಳು ಹುಟ್ಟು ಹಾಕಿರುವ ಸಾಮಾಜಿಕ ಚಳುವಳಿಯ ಕೊಡುಗೆ ಬಹಳ ಮಹತ್ವದ್ದಾಗಿದೆ ಎಂದವರು ಹೇಳಿದರು.
ಚಿತ್ರ ನಿರ್ಮಾಪಕ ಡಾ.ರಾಜಶೇಖರ್ ಕೋಟ್ಯಾನ್ ಅವರು ಮಾತನಾಡಿ ಬ್ರಹ್ಮಶ್ರೀ ನಾರಾಯಣಗುರುಗಳ ಚಿಂತನೆ ಸಂದೇಶಗಳಿಗೆ ಬದ್ದರಾಗಿ ನಡೆದಾಗ ಎಂದೂ ಸೋಲು ಕಾಣಲು ಸಾದ್ಯವಿಲ್ಲ ಎಂದರು.
ಕೆಎಂಸಿ ಪ್ರಾಧ್ಯಾಪಕ ಪ್ರೊ.ಎಂ.ಎಸ್.ಕೋಟ್ಯಾನ್ ಅವರು ವಿಚಾರ ಮಂಡನೆ ಮಾಡಿದರು. ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕ ಡಾ.ಗಣೇಶ್ ಅಮೀನ್ ಸಂಕಮಾರ್ ಹಾಗೂ ಮಂಗಳೂರು ವಿ.ವಿ.ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕರಾದ ಮುದ್ದು ಮೂಡುಬೆಳ್ಳೆ ಪ್ರತಿಕ್ರಿಯಿಸಿದರು. ನಾವಿಕದ ಗೌರವಾಧ್ಯಕ್ಷರಾದ ಯಶವಂತ ಮರೋಳಿ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಜಯಂತ ನಡುಬೈಲು, ಎಚ್.ರತೀಂದ್ರನಾಥ್, ರವಿ ಪೂಜಾರಿ ಚಿಲಿಂಬಿ ಉಪಸ್ಥಿತರಿದ್ದರು.
ಪೂಜಾರಿ ರಾಜಕೀಯ ತೊರೆದು ಸಮಾಜ ಸುಧಾರಣೆ ಮಾಡಲಿ:
ಶ್ರೀ ನಾರಾಯಣಗುರುಗಳ ಚಿಂತನೆ ಸಂದೇಶದ ಅಡಿಯಲ್ಲಿ ಸಾಮಾಜಿಕ ಸುಧಾರಣೆ ಕಾರ್ಯದ ನೇತ್ರತ್ವವನ್ನು ಜನಾರ್ದನ ಪೂಜಾರಿ ಅವರು ವಹಿಸಿಕೊಳ್ಳಬೇಕು ಅವರಿಗೆ ನಾನು ಸದಾ ಅತ್ಯಂತ ಗೌರವ ಕೊಡುತ್ತೇನೆ. ಕೆಲವು ಬಾರಿ ವಿರುದ್ದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆ. ಅಭಿಪ್ರಾಯ ಬೇಧಗಳಿದ್ದರೆ ಅದನ್ನು ವ್ಯಕ್ತಪಡಿಸುವುದು ಮೊದಲಿನಿಂದಲೂ ನಾನು ಅನುಸರಿಸಿಕೊಂಡು ಬಂದಿರುವ ಧೋರಣೆ , ಪೂಜಾರಿ ಅವರು ರಾಜಕೀಯದಿಂದ ವಿಮುಖರಾಗಿ ಸಮಾಜ ಸುಧಾರಣೆಯತ್ತ ಗಮನ ಹರಿಸಬೇಕು, ಈ ಕಾರ್ಯಕ್ಕೆ ಎಲ್ಲಾ ಯುವಜನತೆ ಅವರೊಂದಿಗೆ ಕೈ ಜೋಡಿಸಬೇಕು. ನಾನು ಕೂಡ ಅವರಿಗೆ ಜತೆ ನೀಡಲು ಸಿದ್ದ ಎಂದು ದಿನೇಶ್ ಅಮೀನ್ ಮಟ್ಟು ಹೇಳಿದರು
ಸಲಹೆಗಾರರಾದ ದೀಪಕ್ ಕೋಟ್ಯಾನ್ ಸ್ವಾಗತಿಸಿದರು, ಸುನೀಲ್ ಕುಮಾರ್ ಬಜಾಲ್ ಪ್ರಸ್ತಾವನೆಗೈದರು, ರಾಜೇಂದ್ರ ಚಿಲಿಂಬಿ ವಂದಿಸಿದರು, ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು
ಇಂತಹ ಕಾರ್ಯಕ್ರಮಗಳು ಮತ್ತಷ್ಟು ಮೂಡಿ ಬರಲಿ…