ಏಕಾಗ್ರತೆ ಮತ್ತು ದೈಹಿಕ ಕ್ಷಮತೆಯ ಕ್ಷೇತ್ರವಾಗಿರುವ ಪವರ್‍ಲಿಫ್ಟಿಂಗ್ ವಿಭಾಗದ , ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಹತ್ತಕ್ಕೂ ಅಧಿಕ ಚಿನ್ನದ ಪದಕವನ್ನು ಪಡೆದು ರಾಷ್ಟ್ರಕ್ಕೆ ಮತ್ತು ಸಮಾಜಕ್ಕೆ ಕೀರ್ತಿ ತಂದಿರುವ ಒಬ್ಬ ಅಪೂರ್ವ ಸಾಧಕ ಶ್ರೀ ವಿನೋದ್ ರಾಜ್‍ಇವರು, ವಾಮಂಜೂರು ನಿವಾಸಿ ವಿಠಲ ಇವರ ಸುಪುತ್ರರಾಗಿರುವ ವಿನೋದ್ ರಾಜ್ ಬಿ.ಕಾಂ ಪದವೀಧರರು. ಶಿಕ್ಷಣದ ಜೊತೆ ಜೊತೆ ಇವರನ್ನು ಬಹುವಾಗಿ ಆಕರ್ಷಿಸಿದ ಮತ್ತೊಂದು ಕ್ಷೇತ್ರ ಎಂದರೆ ಅದು ಪವರ್‍ಲಿಫ್ಟಿಂಗ್.ಕೇವಲ 25ರಹರೆಯದ ಯುವಕ ಇಂದು ಹತ್ತಕ್ಕೂ ಅಧಿಕ ಅಂತರಾಷ್ಟ್ರೀಯ ಚಿನ್ನದ ಪದಕ ಪಡೆದ ಅಪೂರ್ವ ಸಾಧಕ.
2009 ರಿಂದ ಆರಂಭಗೊಂಡಿರುವ ಇವರ ಬಂಗಾರದ ಬೇಟೆ ಅದು ಇಂದಿಗೂ ನಿಂತ್ತಿಲ್ಲ. 2009 ರಲ್ಲಿ ಪಾಂಡಿಚೇರಿಯಲ್ಲಿ ನಡೆದ ಸೌತ್‍ಇಂಡಿಯಾ ಪವರ್‍ಲಿಫ್ಟಿಂಗ್‍ನಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆಯುವ ಮೂಲಕ ಆರಂಭಗೊಂಡ ಇವರ ವಿಜಯ ನಡಿಗೆ ಇಂದಿಗೂ ವಿರಮಿಸದೆ ಸಾಗುತ್ತಿದೆ. ಮೊದಲ ಬಾರಿಗೆ ಬೆಳ್ಳಿಯ ಪದಕ ಪಡೆದ ಇವರು ಮರು ವರುಷದಲ್ಲಿ ತಮಿಳುನಾಡಿನಲ್ಲಿ ನಡೆದ ಸೌತ್‍ಇಂಡಿಯಾ ಪವರ್‍ಲಿಫ್ಟಿಂಗ್‍ನಲ್ಲಿ ಹಿಂದಿನ ಸಾಧನೆಯನ್ನು ಮುರಿದು ಚಿನ್ನದ ಪದಕವನ್ನು ಪಡೆದಿದ್ದರು. ಇವರು ಮತ್ತೆಂದು ಹಿಂದಿರುಗಿ ನೋಡಲೇ ಇಲ್ಲ. ಪ್ರತಿ ವರುಷವೂ ಬಿರುಸು ಪಡೆಯುತ್ತಿದ್ದ ಇವರ ನಡಿಗೆಗೆ ಇಂದು ಹತ್ತು ಚಿನ್ನದ ಪದಕ, ನಾಲ್ಕು ಬೆಳ್ಳಿಯ ಪದಕ ಪಡೆಯಲು ಕಾರಣವಾಗಿದೆ.
ದೇಶದ ಬೇರೆ ಬೇರೆ ರಾಜ್ಯ ಮಾತ್ರವಲ್ಲದೆ ದೇಶದಾಚೆಗಿನ ನಾಡಿನಲ್ಲೂ ತನ್ನ ಪ್ರೌಢಿಮೆ ಮೆರೆದಿರುವ ಶ್ರೀ ವಿನೋದ್ ರಾಜ್ ಇವರನ್ನು ಯುವವಾಹಿನಿಯ 27ನೇ ವಾರ್ಷಿಕ ಸಮಾವೇಶದಲ್ಲಿ 2014ನೇ ಸಾಲಿನ ಯುವವಾಹಿನಿ ‘ಯುವ ಸಾಧನ ಪ್ರಶಸ್ತಿ’ಯನ್ನು ನೀಡಿ ಗೌರವಿಸಲು ಯುವವಾಹಿನಿಯು ಸಂತೋಷ ಪಡುತ್ತಿದೆ.