ಶ್ರೀಮತಿ ಎಂ. ಜಾನಕಿ ಬ್ರಹ್ಮಾವರ
ಕನ್ನಡ ಮತ್ತು ತುಳು ಭಾಷೆಯಲ್ಲಿ ತಮ್ಮ ಚಾತುರ್ಯವನ್ನು ಮೆರೆಸಿದ ಮೇರು ಸಾಹಿತಿಗಳಲ್ಲಿ ಶ್ರೀಮತಿ ಜಾನಕಿ ಬ್ರಹ್ಮಾವರ ಅವರೂ ಒಬ್ಬರು. ಭಾಷೆ, ಬರಹ ಮತ್ತು ಕಥಾ ಅಭಿವಕ್ತಿಯಲ್ಲಿ ಆಳಕ್ಕೆ ಇಳಿದು ಓದುಗನ ಮನಸ್ಸನ್ನು ಮುಟ್ಟುವಂತೆ, ತಟ್ಟುವಂತೆ ಮಾಡಿ ತನ್ನ ಬರಹದ ಮೂಲಕವೇ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿರುವ ಶ್ರೀಮತಿ ಎಂ. ಜಾನಕಿ ಬ್ರಹ್ಮಾವರ ಅವರು ಈ ನಾಡುಕಂಡ ಅಪೂರ್ವ ಸಾಹಿತಿಗಳಲ್ಲಿ ಅಗ್ರ ಪಂಕ್ತಿಯಲ್ಲಿ ಬರುವವರು.
ಎಂ.ಎ., ಬಿ.ಎಡ್. ಪದವೀಧರರಾಗಿದ್ದು ಬ್ರಹ್ಮಾವರದ ಎಸ್.ಎಮ್.ಎಸ್. ಪದವಿಪೂರ್ವ ಕಾಲೇಜಿನಲ್ಲಿ ಪ್ರಾಧ್ಯಾ ಪಕರಾಗಿದ್ದು ಇದೀಗ ನಿವೃತ್ತರಾಗಿರುವ ಜಾನಕಿಯವರು ಕನ್ನಡ ಮತ್ತು ತುಳು ಭಾಷೆಗಳಲ್ಲೆರಡರಲ್ಲೂ ಕೃಷಿ ಮಾಡಿದ್ದು ಕಂಬಳ, ತಿರುಗಾಟದ ತಿರುಳು, ಯುಗಾಂತರದಲ್ಲಿ, ಪ್ರಾರ್ಥನಾ ಗೀತೆಗಳು, ಸಮಾಜಮುಖಿ, ಸಂಶೋಧಕಿ ಡಾ| ಸುಶೀಲ ಉಪಾಧ್ಯಾಯ, ಸಮಾಜಮುಖಿ ಸಾಧಕಿ ಸರಳಾ ಬಿ.ಕಾಂಚನ್, ಹೀಗೆ ಕನ್ನಡದಲ್ಲಿ ಹತ್ತಾರು ಸಾಹಿತ್ಯ ಪ್ರಕಾರಗಳನ್ನು ರಚಿಸಿರುವರು. ಅಲ್ಲದೆ ಅವರು ಆಕಾಶವಾಣಿಗಾಗಿ, ಎರಡು ರೂಪಕವನ್ನು ರಚಿಸಿದ್ದಾರೆ. ‘ಕನ್ನಡದ ಓಜ ಪಂಜೆ ಮಂಗೇಶರಾಯರು’ ಮತ್ತು ‘ಬಾರೆಲೆ ಹಕ್ಕಿ ಬಣ್ಣದ ಹಕ್ಕಿ’ ಈ ಎರಡು ರೂಪಕ ಆಕಾಶವಾಣಿಯಲ್ಲಿ ಪ್ರಸಾರಗೊಂಡಿದೆ.ಕುದುರುದ ಕೇದಗೆ, ಕಪ್ಪುಗಿಡಿ, ಯುಗಮಗ್‍ರ್ನಗ, ರುಕ್ಕು ಇದು ಬ್ರಹ್ಮಾವರ ಅವರ ತುಳು ಕೃತಿಗಳು, ತಿರ್ಗಾಟದ ತಿರ್ಲ್ ಇವರ ತುಳು ವಿನ ಮೊದಲ ಪ್ರವಾಸ ಕಥನವಾಗಿದೆ. ಇವರ ಕುದು ರುದ ಕೇದಗೆ ಕೃತಿ ಇಂಗ್ಲೀಷ್‍ಗೂ ಭಾಷಾಂತರಗೊಂಡಿದೆ.
ಕೋರ್ಟ್ ಮಾರ್ಷಲ್, ಏಕಲವ್ಯ, ರಕ್ತಾಕ್ಷಿ, ಮಾಯಾಮೃಗ ಮೊದಲಾದ ನಾಟಕ ಕೃತಿಗಳನ್ನು ಇವರು ತುಳುವಿಗೆ ಭಾಷಾಂತರಗೊಳಿಸಿದ್ದಾರೆ. ಅದಲ್ಲದೆ ‘ಅಮರ್ ಬೈದೆರ್ಲ್’, ‘ತುಳುನಾಡ್‍ದ ಬೊಳ್ಳಿಲು’ ‘ಶ್ಮಶಾನ ಕುರುಕ್ಷೇತ್ರ’, ‘ಶೂದ್ರ ತಪಸ್ವಿ’ ಎನ್ನುವ ನಾಟಕಗಳನ್ನೂ ಇವರು ರಚಿಸಿದ್ದಾರೆ.
ಶ್ರೀಮತಿ ಜಾನಕಿ ಬ್ರಹ್ಮಾವರ ಇವರು ಪಣಿಯಾಡಿ ತುಳು ಕಾದಂಬರಿ 2 ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪುಸ್ತಕ ಪುರಸ್ಕಾರ, ಅವಿಭಜಿತ ದಕ್ಷಿಣ ಕನ್ನಡ ಮಕ್ಕಳ ಸಾಹಿತ್ಯ ಸಂಗಮ ಪುರಸ್ಕಾರ ಪಡೆದವರು. ಇಷ್ಟು ಮಾತ್ರ ಅಲ್ಲದೆ ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಮಂಗಳೂರಿನ ಸಂದೇಶ ಸಾಹಿತ್ಯ ಪ್ರತಿಷ್ಠಾನವು ಇವರಿಗೆ ‘ಸಂದೇಶ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ. ಕರ್ನಾಟಕ ಸರಕಾರ ಕೊಡಮಾಡುವ ‘ರಾಣಿ ಅಬ್ಬಕ್ಕ’ ಸಾಹಿತ್ಯ ಪ್ರಶಸ್ತಿ, ‘ರಾಣಿ ಚೆನ್ನಮ್ಮ’ ಸಾಹಿತ್ಯ ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ. ‘ದೇಶ ಸುತ್ತು, ಕೋಶ ಓದು’ ಎಂಬಂತೆ ತಿರುಗಾಟದ ಹವ್ಯಾಸವನ್ನು ಹೊಂದಿದ ಇವರು 15 ದೇಶಗಳನ್ನು ಈಗಾಗಲೇ ಸುತ್ತಿ ಅದರ ಅನುಭವಗಳನ್ನು ತಿರ್ಗಾಟದ ತಿರ್ಲ್, ತಿರ್ಗಾಟದ ಮರ್ಲ್, ತಿರ್ಗಾಟದ ಪೊರ್ಲು, ತಿರುಗಾಟದ ಸೊಗಸು ಮುಂತಾದ ಕೃತಿಗಳಲ್ಲಿ ದಾಖಲಿಸಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಇವರ ಸಾಧನೆಯನ್ನು ಗುರುತಿಸಿರುವ ಕರ್ನಾಟಕ ಸರಕಾರ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಸ್ಥಾನವನ್ನೂ ನೀಡಿ ಗೌರವಿಸಿದೆ. ಅಧಿಕಾರವನ್ನು ಎಂದಿಗೂ ಬಯಸದೆ ಅಧಿಕಾರದ ಹಿಂದೆ ಬೀಳದೆ, ಸಾಹಿತ್ಯ ಅಕಾಡೆಮಿಯ ಪ್ರಸ್ತುತ ಅಧ್ಯಕ್ಷರಾಗಿರುವ ಅವರು ಅಧ್ಯಕ್ಷರಾದ ಅಲ್ಪ ಅವಧಿಯಲ್ಲೇ ತುಳು ಸಾಹಿತ್ಯಕ್ಕೆ ಸಂಬಂಧಿಸಿ ಹತ್ತಾರು ಉತ್ತಮ ಕೆಲಸ ಮಾಡಿದ್ದಾರೆ.
ಇನ್ನಷ್ಟು ಸಾಹಿತ್ಯ ಸೇವೆ ನಡೆಸಬೇಕು ಎನ್ನುವ ತುಡಿತದಲ್ಲಿರುವ ಜಾನಕಿ ಬ್ರಹ್ಮಾವರ ಅವರು ಈಗಾಗಲೇ ಮತ್ತೊಂದಷ್ಟು ಸಾಹಿತ್ಯ ಕೃತಿಗಳನ್ನು ಕೈಗೆತ್ತಿ ಕೊಂಡಿದ್ದಾರೆ. ಇವರ ಸಾಹಿತ್ಯ ಸೇವೆ ಹೀಗೆ ನಿರಂತರವಾಗಿರಲಿ ಎನ್ನುವ ಆಶಯದೊಂದಿಗೆ ಅವರ ಸಾಹಿತ್ಯ ಸೇವೆಯನ್ನು ಗುರುತಿಸಿ ಸನ್ಮಾನಿಸಲು ಯುವವಾಹಿನಿಯು ಸಂತೋಷ ಪಡುತ್ತಿದೆ.