ಸೂರ್ಯ ನಸುನಗುತ್ತಾ ಮೂಡಿ ತುಸು ಹೊತ್ತು ಕಳೆದಿತ್ತಷ್ಟೇ, ಪೂರ್ವ ದಿಗಂತದಲ್ಲಿ ಕೆಂಬಣ್ಣ ಇನ್ನೂ ಮಾಸಿರಲಿಲ್ಲ, ಕರಗಿದ ಮೋಡ ಇಬ್ಬನಿಯಾಗಿ ಹಸಿರೆಲೆಯ ಮೇಲೆ ಇನ್ನೂ ಜಿನುಗುತ್ತಲೇ ಇತ್ತು. ಹಾಡು ಹಕ್ಕಿಗಳ ಕೂಗು ಕೇಳುತ್ತಲೇ ಇನ್ನೂ ನಿಂತಿರಲಿಲ್ಲ. ಆದರೆ ಉಡುಪಿಯ ಪುರಭವನ ಅಷ್ಟರಲ್ಲಿಯೇ ತುಂಬಿ ತುಳುಕುತ್ತಿದ್ದವು. ಬೆಳ್ತಂಗಡಿ, ಪುತ್ತೂರು, ಉಪ್ಪಿನಂಗಡಿ, ಬಂಟ್ವಾಳ ಮತ್ತು ಮಂಗಳೂರು ಹೀಗೆ ದೂರದೂರಿನಿಂದ ಬಂದಿದ್ದ ಯುವವಾಹಿನಿಯ ಬಂಧುಗಳು ಅದಾಗಲೇ ಪುರಭವನಕ್ಕೆ ರಂಗು ತಂದಿದ್ದರು. ಯುವವಾಹಿನಿಯ 29 ವರುಷಗಳ ಭವ್ಯ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ನಿಗದಿತ ಸಮಯದಲ್ಲಿ ಸದಸ್ಯರು ತಮ್ಮ ಇರುವಿಕೆಯನ್ನು ತೋರ್ಪಡಿಸಿದ್ದರು. ಅಚ್ಚುಕಟ್ಟಾದ ವೇದಿಕೆ, ತಂಪು ನೀಡುತ್ತಿದ್ದ ಸಭಾಂಗಣ, ಶಿಸ್ತು ಬದ್ಧ ಕೌಂಟರ್‌ಗಳು, ಶುಚಿ ರುಚಿಯಾದ ಊಟ ಉಪಹಾರ, ಪ್ರೀತಿ ಮತ್ತು ಗೌರವದ ಆತಿಥ್ಯ, ಅದ್ಭುತ ಎನ್ನುವ ಕಾರ್ಯಕ್ರಮ ಸಂಯೋಜನೆ. ಇದಕ್ಕೆಲ್ಲ ಸಾಕ್ಷಿಯಾಗಿದ್ದು ತಾ. 31-7-2016 ರಂದು ಉಡುಪಿ ಯುವವಾಹಿನಿ ಘಟಕದ ಆತಿಥ್ಯದಲ್ಲಿ ನಡೆದ ಯುವವಾಹಿನಿಯ 29 ನೇ ವಾರ್ಷಿಕ ಸಮಾವೇಶ.
ಯುವವಾಹಿನಿ ಇಂದು ಜನ ಮಾನಸದಲ್ಲಿ ಉಳಿದಿದೆ ಎಂದರೆ ಮತ್ತು ಯುವ ವಾಹಿನಿ ಇಷ್ಟು ಎತ್ತರಕ್ಕೆ ಬೆಳೆದಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಸಂಸ್ಥೆಯ ಶಿಸ್ತು ಮತ್ತು ಅವರಲ್ಲಿರುವ ಕಾಳಜಿ, ಸಮಾಜದ ಬಗೆಗಿನ ಅಭಿಮಾನ. ಒಂದು ಪುಟ್ಟ ಕೆಲಸವನ್ನೇ ಮಾಡುವುದಾದರೂ ಅದಕ್ಕೊಂದು ಯೋಜನೆ ರೂಪಿಸಿ ಅದರ ಮುಂದಿನ ಪರಿಣಾಮಗಳನ್ನು ಆಲೋ ಚಿಸಿ ಅದನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವವರೆಗೆ ಅದರ ಹಿಂದೆ ದುಡಿಯುವ ಅವರ ಶ್ರದ್ಧೆ ಅಭಿನಂದನೀಯ. ಹೀಗಾಗಿಯೇ ಸಮುದಾಯದಲ್ಲಿ ಎಷ್ಟೋ ಸಂಘಟನೆಗಳಿದ್ದರೂ ಯುವವಾಹಿನಿ ಇದೆಲ್ಲಕ್ಕಿಂತ ಭಿನ್ನವಾಗಿ ನಿಲ್ಲುತ್ತದೆ ಎಂದು 29 ನೇ ವಾರ್ಷಿಕ ಸಮಾವೇಶವನ್ನು ಉದ್ಘಾಟಿಸಿದ ಉಡುಪಿ ನಗರ ಸಭೆಯ ಅಧ್ಯಕ್ಷೆ ಶ್ರೀಮತಿ ಮಾಧವ ಬನ್ನಂಜೆ ತಿಳಿಸಿದರು.
ನಾವು ಬದಲಾಗಬೇಕು ಎಂದುಕೊಳ್ಳುವುದಾದರೆ ನಾವು ಯುವವಾಹಿನಿಗೆ ಸೇರೊಣ ನಾವು ನಮ್ಮಿಂದ ನಮ್ಮ ಸಮಾಜವನ್ನು ಪರಿವರ್ತಿಸೋಣ ಎಂದವರು ಕರೆ ನೀಡಿದರು.
ತುಡಾರ ಕಂಬದಲ್ಲಿ ದೀಪ ಹಚ್ಚುವ ಮೂಲಕ ಯುವವಾಹಿನಿಯ 29ನೇ ವಾರ್ಷಿಕ ಸಮಾವೇಶಕ್ಕೆ ಚಾಲನೆ ನೀಡಿ ಸಂಸ್ಥೆಯ ಬಗ್ಗೆ ಅಭಿಮಾನದ ಮಾತುಗಳನ್ನಾಡಿದರು.
ನಮ್ಮ ಸಮಾಜದಲ್ಲಿ ಸಾಕಷ್ಟು ಸಂಘಟನೆಗಳಿವೆ, ಎಲ್ಲವೂ ಸಮಾಜಕ್ಕಾಗಿ ಕೆಲಸ ಮಾಡುತ್ತಿವೆ, ಆದರೆ ಇವೆಲ್ಲದರ ಸಾಲಿನಲ್ಲಿ ಯುವವಾಹಿನಿ ಅಗ್ರ ಪಂಕ್ತಿಯಲ್ಲಿದೆ, ನಾನು ಯುವವಾಹಿನಿಯ ಜೊತೆ ಒಂದೆರಡು ದಶಕದಿಂದ ಸಂಪರ್ಕದಲ್ಲಿದ್ದೇನೆ ಯುವವಾಹಿನಿಯ ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ ಅವರ ಕೆಲಸಗಳು, ಯೋಜನೆಗಳು ತುಂಬಾ ಪರಿಪಕ್ವವಾಗಿದೆ. ಆ ಕಾರಣದಿಂದ ಯುವವಾಹಿನಿ ಸೋತಿಲ್ಲ ಇಂದಿಗೂ ಮುನ್ನಡೆಯುತ್ತಲೇ ಇದೆ, ಯುವವಾಹಿನಿಯು ಬದಲಾವಣೆಯ ಹರಿಕಾರ ಸಂಸ್ಥೆ. ನಮ್ಮಲ್ಲಿ ಇಚ್ಚಾ ಶಕ್ತಿಯ ಕೊರತೆ ಇದೆ, ಸಾಂಘಿಕ ಮನೋಬಲವೂ ಇಲ್ಲವಾಗಿ ಹೀಗಾಗಿ ಇಂದಿಗೂ ನಮ್ಮಲ್ಲಿ ಒಡೆದು ಆಳುವ ಯತ್ನ ನಡೆಯುತ್ತಿದೆ ಎಂದು ಮಾಜಿ ಸಚಿವರೂ, ಹಾಲಿ ಶಾಸಕರೂ ಆಗಿರುವ ವಿನಯ್ ಕುಮಾರ್ ಸೊರಕೆ ತಿಳಿಸಿದರು.
ಅವರು ಯುವವಾಹಿನಿಯ ಮುಖವಾಣಿ ’ಸಿಂಚನ’ ವಾರ್ಷಿಕ ವಿಶೇಷಾಂಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಸಮಾಜದ ಅಭಿವೃದ್ಧಿಗಾಗಿ ಶ್ರಮಿಸು ತ್ತಿರುವ ಸಮುದಾಯ ಸಂಘಟನೆಗೆ ಯುವ ವಾಹಿನಿಯು ಪ್ರತಿ ವರುಷ ’ಯುವವಾಹಿನಿ ಸಾಧನ ಶ್ರೇಷ್ಠ’ ಪ್ರಶಸ್ತಿಯನ್ನು ನೀಡುತ್ತಾ ಬರುತ್ತಿದ್ದು ಈ ಬಾರಿ ಈ ಪ್ರಶಸ್ತಿಯನ್ನು ಬಿಲ್ಲವರ ಅಸೋಸಿಯೇಷನ್ ಬೆಂಗಳೂರು ಇವರಿಗೆ ನೀಡಲಾಯಿತು. ಕಳೆದೊಂದು ದಶಕದಿಂದ ಅಸೋಷಿಯೇಷನ್ ಮಾಡುತ್ತಿರುವ ಸಾಮಾಜಿಕ ಕಾರ್ಯವನ್ನು ಗಮನಿಸಿ ಆಯ್ಕೆ ಸಮಿತಿಯು ಸಂಘಟನೆಯನ್ನು ಆಯ್ಕೆ ಮಾಡಿತ್ತು. ಅದೇ ರೀತಿ ಸಾಮಾಜಿಕವಾಗಿ ಸಮಾಜದಲ್ಲಿ ಅಂಚಿಗೆ ತಳ್ಳಲ್ಪಟ್ಟವರ ಅಭ್ಯುದಯಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಓರ್ವರಿಗೆ ’ಯುವವಾಹಿನಿ ಸಾಧನಶ್ರೀ’ ಪ್ರಶಸ್ತಿಯನ್ನು ನೀಡುತ್ತಿದ್ದು ಈ ಬಾರಿ ಈ ಪ್ರಶಸ್ತಿಯನ್ನು ಎಸ್‌ಆರ್‌ಆರ್ ಇಂಡಸ್ಟ್ರೀಸ್ ಇಂಡಿಯಾ ಪ್ರೈ.ಲಿ. ಇದರ ಮಾಲಕರಾದ ಶೈಲೇಂದ್ರ ವೈ. ಸುವರ್ಣ ಅವರಿಗೆ ನೀಡಲಾಯಿತು. ಪ್ರಶಸ್ತಿಯನ್ನು ಪ್ರದಾನಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿಯವರು, ನಮ್ಮಲ್ಲಿ ಎಲ್ಲವೂ ಇದೆ, ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಹಿತ್ಯಿಕ ವಾಗಿ, ಸಾಂಸ್ಕ್ರತಿಕವಾಗಿ ನಾವು ಬೆಳೆದಿದ್ದೇವೆ, ಸಂಘಟನೆಗಳಿಗೂ ನಮ್ಮಲ್ಲಿ ಕೊರತೆ ಇಲ್ಲ, ಆದರೆ ನಾವು ಸಂಘಟಿತರಾಗುತ್ತಿಲ್ಲ, ನಮ್ಮ ಪ್ರಾಮಾಣಿಕತೆಯನ್ನು ದೌರ್ಬಲ್ಯ ಎಂದುಕೊಂಡು ನಮ್ಮ ಮೇಲೆ ಸವಾರಿ ಮಾಡುವ ಕೆಲಸ ಹಿಂದಿನಿಂದಲೂ ನಡೆಯುತ್ತಾ ಬಂದಿದೆ ಈಗಲೂ ಅದು ಮುಂದುವರಿದಿದೆ, ಸಮುದಾಯದ ವಿಚಾರ ಬಂದಾಗ ನಮ್ಮ ಬಂಧು ವಾತ್ಸಲ್ಯ ಅನಾವರಣ ವಾಗಬೇಕು, ಅದು ನಮ್ಮನ್ನು ಒಂದುಗೂಡಿಸಬೇಕು ಎಂದರು.
ಸಮಾರಂಭದಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ನಮ್ಮ ಸಮಾಜದ ಆರು ಮಂದಿ ಸಾಧಕರನ್ನು ಅಭಿನಂದಿಸಲಾಯಿತು. ಅಲ್ಲದೆ ಸಾಧನೆ ತೋರಿದ ಐದು ಮಂದಿ ಯುವ ಸಾಧಕರಿಗೆ ’ಯುವವಾಹಿನಿ ಯುವ ಸಾಧನ ಪ್ರಶಸ್ತಿ’, ವಿದ್ಯಾರ್ಥಿಗಳಿಗೆ ’ಅಕ್ಷರ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಅಲ್ಲದೆ ಕಳೆದ ಒಂದು ವರುಷದ ಅವಧಿಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಯುವವಾಹಿನಿಯ ಎಲ್ಲಾ ಘಟಕಗಳನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. 2016-17 ನೇ ಸಾಲಿನಲ್ಲಿ ಯುವವಾಹಿನಿಯನ್ನು ಮುನ್ನಡೆಸಲಿರುವ ನೂತನ ತಂಡವನ್ನು ಚುನಾವಣಾಧಿಕಾರಿ ಕೆ. ಪ್ರೇಮನಾಥ್ ಬಂಟ್ವಾಳ್ ಅವರು ಸಭೆಗೆ ಪರಿಚಯಿಸಿದರು. ನೂತನ ಅಧ್ಯಕ್ಷರಾದ ಪದ್ಮನಾಭ ಮರೋಳಿ ಮತ್ತವರ ತಂಡ ಪ್ರಮಾಣವಚನ ಸ್ವೀಕರಿಸಿದ್ದು, ಕೇಂದ್ರ ಸಮಿತಿಯ ಅಧ್ಯಕ್ಷರಾದ ಸಂತೋಷ್ ಕುಮಾರ್ ಉಡುಪಿ ಅವರು ಪ್ರಮಾನ ವಚನ ಭೋಧಿಸಿದರು.
ಬಳಿಕ ನೂತನ ಅಧ್ಯಕ್ಷರಾದ ಪದ್ಮನಾಭ ಮರೋಳಿ ಅವರು ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದ್ದು ಎಲ್ಲರ ಸಹಕಾರದಿಂದ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸುವುದಾಗಿ ತಿಳಿಸಿದರು. ಬಳಿಕ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಸಂತೋಷ್ ಕುಮಾರ್ ಅವರು ಮಾತನಾಡಿ, ತಾಯಿ ತನ್ನ ಮಗುವನ್ನು ಕೈ ಹಿಡಿದು ಮುನ್ನಡೆಸುವಂತೆ ಯುವವಾಹಿನಿಯ ಬಂಧುಗಳು ನನ್ನನ್ನು ಮುನ್ನಡೆಸಿದ್ದಾರೆ. ನಾನು ಅಧ್ಯಕ್ಷ ಆಗಿದ್ದರೂ ಎಲ್ಲರೂ ನನಗಿಂತ ಹೆಚ್ಚು ಮುತುವರ್ಜಿಯಿಂದ ಕೆಲಸಮಾಡಿದ್ದಾರೆ. ನಾನು ಸಾಕಷ್ಟು ಸಾಧಿಸಿದ್ದೇನೆ ಎಂದಲ್ಲ, ಆದರೆ ಮಾಡಿದ ಕೆಲಸದಲ್ಲಿ ನನಗೆ ತೃಪ್ತಿ ಇದೆ ಎಂದರು. ಅಲ್ಲದೆ ತನಗೆ ಸಹಕಾರ ನೀಡಿದ ಎಲ್ಲರಿಗೂ ಸ್ಮರಣಿಕೆ ನೀಡಿ ಗೌರವಿಸಿದರು. ಸಮಾರಂಭದಲ್ಲಿ ನವೀನ್ ಕುಮಾರ್ ಮರಿಕೆ ಪ್ರಧಾನ ಭಾಷಣ ನೆರವೇರಿಸಿದ್ದು, ಮುಂಬಯಿಯ ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಇಂಡಸ್ಟ್ರೀಯ ಚಯರ್‌ಮೆನ್ ಹಾಗೂ ಬಿಲ್ಲವ ಜಾಗೃತಿ ಬಳಗ ಮುಂಬಯಿ ಇದರ ಅಧ್ಯಕ್ಷ ಎನ್.ಟಿ. ಪೂಜಾರಿ, ಉಡುಪಿಯ ಉದ್ಯಮಿ ಸತೀಶ್ ಉಗ್ಗೆಲ್‌ಬೆಟ್ಟು, ನಾವುಂದದ ಸುಭೋಧ ಸ್ಕೂಲ್ ಇದರ ಸಂಸ್ಥಾಪಕರಾದ ಎನ್.ಕೆ. ಬಿಲ್ಲವ ಮೊದಲಾದವರು ಮುಖ್ಯ ಅತಿಥಿಗಳಾಗಿದ್ದರು. ಸಮಾವೇಶದ ನಿರ್ದೇಶಕರಾದ ಪ್ರವೀಣ್ ಕುಮಾರ್ ಉಡುಪಿ ಸ್ವಾಗತಿಸಿದ್ದು, ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ರವಿರಾಜ್ ಉಡುಪಿ ಪ್ರಾಸ್ತವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಕೇಶವ ಸುವರ್ಣರವರು ವರದಿ ವಾಚಿಸಿದ್ದು, ಸಮಾವೇಶದ ಸಂಚಾಲಕರಾದ ಗಣೇಶ್ ಕುಮಾರ್‌ರವರು ವಂದನಾರ್ಪಣೆ ನೇರವೇರಿಸಿದರು. ನರೇಶ್ ಕುಮಾರ್ ಸಸಿಹಿತ್ಲು ಮತ್ತು ದಯಾನಂದ್ ಕಾರ್ಯಕ್ರಮ ನಿರೂಪಿಸಿದರು.
Good program ……..