ಜಗತ್ತಿನ ಸಕಲ ಜೀವಚರಗಳಿಗಿಂತ ಮನುಷ್ಯ ಹೆಚ್ಚು ಬುದ್ದಿವಂತ ಎಣಿಸಿಕೊಳ್ಳುತ್ತಾನೆ ಎಂದರೆ ಅದಕ್ಕೆ ಮುಖ್ಯ ಕಾರಣ ಆತ ವಿದ್ಯಾವಂತ ಜ್ಞಾನದ ಮೂಲಕ ಮನಸ್ಸು ಪರಿವರ್ತನೆಗೊಳಿಸಿ ಆ ಮೂಲಕ ಪ್ರಗತಿಯನ್ನು ಕಾಣುವ ಕಾರಣದಿಂದಲೇ ಮನುಷ್ಯ ಭಿನ್ನ ಎಣಿಸಿಕೊಳ್ಳುತ್ತಾನೆ. ಶೀಲ ಮತ್ತು ಸಚ್ಚಾರಿತ್ರ್ಯವನ್ನು ಹುಟ್ಟುಹಾಕದ ಶಿಕ್ಷಣ ಶಿಕ್ಷಣವೇ ಅಲ್ಲ ಎನ್ನುತ್ತಾರೆ ಜಗತ್ತಿನ ತತ್ವಜ್ಞಾನಿಗಳು. ಅದೇ ಮಾತನ್ನು ಬ್ರಹ್ಮಶ್ರೀ ನಾರಾಯಣ ಗುರುಗಳೂ “ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ ಬಲಯುತರಾಗಿರಿ” ಎನ್ನುವ ಮಾತುಗಳಿಂದ ಪುನರುಚ್ಚರಿಸಿದ್ದಾರೆ. ವಿದ್ಯೆ ನಮ್ಮನ್ನು ಸ್ವತಂತ್ರರನ್ನಾಗಿಸಬೇಕು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಸಂಸಾರ ಜಂಜಾಟ ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ನೋವಿನ ಸ್ವರ ಹೊರ ಬರಬಾರದು ಎನ್ನುವ ಉದಾತ್ತ ಚಿಂತನೆಯನ್ನು ಇರಿಸಿಕೊಂಡು ನಮ್ಮ ಸಮಾಜದಲ್ಲಿ ಅಂಚಿಗೆ ತಳ್ಳಲ್ಪಟ್ಟ, ಶೋಷಿತರ, ಧಮನಿತರ ನೋವಿಗೆ ಸ್ಪಂದನ ನೀಡಬೇಕು, ಕಲಿಯುತ್ತೇವೆ ಎನ್ನುವ ಹಠದಲ್ಲಿ ಇದ್ದು ಆರ್ಥಿಕತೆಯ ಸಂಕಷ್ಟದಲ್ಲಿ ಬಳಲುತ್ತಿರುವುವವರನ್ನು ಗುರುತಿಸಿ, ಸಹಕರಿಸಿ ಮೇಲೆತ್ತಿ ಅವರನ್ನು ಸಮಾಜದಲ್ಲಿ ಉನ್ನತೀಕರಿಸಬೇಕು ಎನ್ನುವ ಸಂಕಲ್ಪವನ್ನು ನಮ್ಮ ಸಂಸ್ಥೆ 1987ರಲ್ಲೇ ಚಿಂತಿಸಿತ್ತು.
ಈ ಕಾರಣದಿಂದಲೇ ವಿದ್ಯೆಯನ್ನೇ ತನ್ನ ಮೊದಲ ಧ್ಯೇಯವಾಗಿಸಿತು. ಇಂದಿಗೆ 27 ವರುಷ ಸಂದು ಹೋಗಿದೆ, ಯುವವಾಹಿನಿ ಪ್ರತಿ ವರುಷವೂ ಬಡ ವಿದ್ಯಾರ್ಥಿಗಳ ಸಮೂಹವನ್ನು ಕಟ್ಟಿ ಅವರ ಶಿಕ್ಷಣಕ್ಕೆ ನೆರವು ನೀಡುತ್ತಿದೆ ಮಾತ್ರವಲ್ಲದೆ ಶೀಲ ಸಚ್ಚಾರಿತ್ರ್ಯ, ಮಾನವ ವ್ಯಕ್ತಿತ್ವದ ರೂಪುಗೊಳಿಸುವಿಕೆಯ ಬಗ್ಗೆ ಪ್ರೇರಣಾ ಶಿಬಿರವನ್ನೂ ನಡೆಸುತ್ತಿದೆ. ನಮ್ಮಲ್ಲಿ ಪ್ರತಿಫಲಾಪೇಕ್ಷೆಯ ಗುಣ ಇಲ್ಲ, ಆದರೆ ನಮ್ಮಿಂದ ಸಹಾಯ ಪಡೆದು ಕಲಿತು ಉನ್ನತ ಉದ್ಯೋಗ ಪಡೆದವರು ಮುಂದೆ ತಮ್ಮಂತಹ ಒಂದಿಬ್ಬರಿಗಾದರೂ ನೆರವು ನೀಡಿದರೆ ನಮ್ಮ ಶ್ರಮವೂ ಸಾರ್ಥಕ ಅದೇ ರೀತಿ ಕಲಿಯುವ ಹರೆಯದಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಒಂದೆರಡು ಪ್ರತಿಭೆಗಳಾದರೂ ಶಿಕ್ಷಣ ಪಡೆದರೆ ನಮಗದೆ ತೃಪ್ತಿ ಎನ್ನುತ್ತಾ 27 ವರುಷದಿಂದ ವಿದ್ಯಾನಿಧಿ ಸೇವೆ ನೀಡುತ್ತಾ ಬಂದಿದೆ. ನಮ್ಮ ಆಶಯ ಪ್ರತಿ ವರುಷವೂ ಕೈಗೂಡುತ್ತಿದೆ ಎನ್ನುವ ತೃಪ್ತಿ ನಮಗಿದೆ. ಈ ಪೈಕಿ ಬಹುತೇಕ ಮಂದಿ ತಮ್ಮಂತಿರುವ ಮತ್ತೆ ಹತ್ತಾರು ಮಂದಿಗೆ ನೆರವು ನೀಡುತ್ತಿದ್ದಾರೆ. ಒಂದು ರೀತಿಯ ಚಕ್ರದಂತೆ ನಮ್ಮ ಕೆಲಸ ನಡೆಯುತ್ತಿದೆ. ವರುಷ ವರುಷವೂ ಒಂದಷ್ಟು ದಾನಿಗಳು ಕರೆದು ನಮಗೆ ನೆರವು ನೀಡುತ್ತಿದ್ದಾರೆ. ಅವರೆಲ್ಲರನ್ನೂ ನಾವೆಂದೂ ಮರೆಯಲಾರೆವು.
ಕಳೆದ ಇಪ್ಪತ್ತೊಂದು ವರುಷದಿಂದ ನಡೆಸುತ್ತಾ ಬಂದಿದ್ದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಮತ್ತು ಪ್ರೇರಣಾ ಶಿಬಿರ ಕಾರ್ಯಕ್ರಮವು ಕಳೆದ ವರುಷ ದಿ. 28-07-2013ರಂದು ಹೆಜಮಾಡಿ ಬಿಲ್ಲವರ ಸಂಘದ ಸಭಾಗೃಹದಲ್ಲಿ ಜರಗಿತು.
ಅಂದು ನಡೆದ ಕಾರ್ಯಕ್ರಮವನ್ನು ಶ್ರೀ ದೊಂಬ ಕೆ. ಪೂಜಾರಿ (ಅಧ್ಯಕ್ಷರು ಹೆಜಮಾಡಿ ಬಿಲ್ಲವರ ಸಂಘ) ರವರು ದೀಪ ಬೆಳಗಿಸಿ ಉದ್ಘಾಟಿಸಿದರು.
ತದ ನಂತರ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರವನ್ನು ಶ್ರೀ ಕೇಶವ ಬಂಗೇರ (ಉಪನ್ಯಾಸಕರು ಶ್ರೀ ನಾರಾಯಣಗುರು ಕಾಲೇಜು ಮಂಗಳೂರು) ಹಾಗೂ ಶ್ರೀ ಟಿ. ಶಂಕರ ಸುವರ್ಣ (ಮಾಜಿ ಅಧ್ಯಕ್ಷರು, ಯುವವಾಹಿನಿ (ರಿ) ಕೇಂದ್ರ ಸಮಿತಿ) ಮತ್ತು ಶ್ರೀಮತಿ ಗುಣವತಿ ರಮೇಶ್ ಸುರತ್ಕಲ್‍ರವರು ನಡೆಸಿಕೊಟ್ಟರು.
ನಂತರದ ಸಹಾಯಧನ ವಿತರಣೆಯನ್ನು ಶ್ರೀ ಪದ್ಮನಾಭ ಮರೋಳಿ (ಉಪಾಧ್ಯಕ್ಷರು ಯುವವಾಹಿನಿ (ರಿ) ಕೇಂದ್ರ ಸಮಿತಿ)ರವರ ಅಧ್ಯಕ್ಷತೆÀಯಲ್ಲಿ ಶ್ರೀ ಟಿ. ನಾರಾಯಣ ಪೂಜಾರಿ (ವಕೀಲರು) ಮಂಗಳೂರು, ಶ್ರೀ ದಾಮೋದರ ಬಂಗೇರ ಹೆಜಮಾಡಿ, ಶ್ರೀ ಯೋಗೀಶ್ ಕೋಟ್ಯಾನ್ ಚಿತ್ರಾಪು, ಶ್ರೀ ಕಿರಣ್ ಕುಮಾರ್ ಸುರತ್ಕಲ್, ಶ್ರೀ ಬೂಬಾ ಅಂಚನ್ ಸುರತ್ಕಲ್ ಇವರು ನಡೆಸಿಕೊಟ್ಟರು. ಅಂದು 75 ವಿದ್ಯಾರ್ಥಿಗಳಿಗೆ ಸುಮಾರು ರೂ.2.00 ಲಕ್ಷವನ್ನು ವಿತರಿಸಲಾಯಿತು.
ವಿದ್ಯಾನಿಧಿಯಿಂದ ಸಹಾಯ ಪಡೆದ ವಿದ್ಯಾರ್ಥಿಗಳು ಇಂದು ಉತ್ತಮ ವಿದ್ಯಾಭ್ಯಾಸವನ್ನು ಪಡೆದು ಸಮಾಜದಲ್ಲಿ ಉತ್ತಮ ಸ್ಥಿತಿಯಲ್ಲಿದ್ದಾರೆ. ಉದ್ಯೋಗವನ್ನು ಪಡೆದ ವಿದ್ಯಾರ್ಥಿಗಳು ವಿದ್ಯಾನಿಧಿಗೆ ಆರ್ಥಿಕ ಸಹಾಯವನ್ನು ನೀಡುತ್ತಾ ಬಂದಿದ್ದಾರೆ. ನಮ್ಮ ಸೇವೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲುಪಿದೆ ಹಾಗೂ ಅದು ಫಲಪ್ರದವಾಗಿದೆ ಎಂಬ ತೃಪ್ತಿ ನಮಗಿದೆ.
ಕಳೆದ ಇಪ್ಪತ್ತೊಂದು ವರುಷಗಳಿಂದ ವಿತರಿಸಲಾದ ವಿದ್ಯಾರ್ಥಿ ವೇತನದ ವಿವರ ಈ ರೀತಿ ಇದೆ.
ವರ್ಷ ವಿದ್ಯಾರ್ಥಿಗಳು ಮೊತ್ತ
1993-2005 428 1,88,100.00
2005-2006 8 25,000.00
2006-2007 38 1,00,000.00
2007-2008 71 2,00,000.00
2008-2009 64 1,30,000.00
2009-2010 59 1,50,000.00
2010-2011 40 80,000.00
2011-2012 80 1,30,000.00
2012-2013 72 2,00,000.00
2013-2014 85 2,30,000.00
ಯುವವಾಹಿನಿ ಕೇಂದ್ರ ಸಮಿತಿಯ ವತಿಯಿಂದ ಅಲ್ಲದೆ, ನಮ್ಮ ಹೆಚ್ಚಿನ ಘಟಕಗಳು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ, ಪ್ರೇರಣಾ ಶಿಬಿರ, ದತ್ತು ಸ್ವೀಕಾರ, ಪುಸ್ತಕ ವಿತರಣೆ ಕಾರ್ಯಕ್ರಮಗಳನ್ನು ಕೇಂದ್ರ ಸಮಿತಿಯ ಮಾರ್ಗದರ್ಶನದಲ್ಲಿ ನಡೆಸುತ್ತಾ ಬಂದಿವೆÉ.
ಈ ವರ್ಷದ ವಿದ್ಯಾನಿಧಿ ಸಮಿತಿಯಲ್ಲಿ ಶ್ರೀ ರವಿಚಂದ್ರ ಅಧ್ಯಕ್ಷರಾಗಿ, ಶ್ರೀ ವಿಜಯ ಕುಮಾರ್ ಕುಬೆವೂರು ಸಂಚಾಲಕರಾಗಿ, ಶ್ರೀ ರಾಮಚಂದ್ರ ಟಿ. ಕೋಟ್ಯಾನ್ ಕೋಶಾಧಿಕಾರಿಯಾಗಿ, ಶ್ರೀ ಸತೀಶ್ ಕುಮಾರ್ ಆಂತರಿಕ ಲೆಕ್ಕ ಪರಿಶೋಧಕರಾಗಿ, ಶ್ರೀ ಮಾಧವ ಕೋಟ್ಯಾನ್ ಮಂಗಳೂರು, ಶ್ರೀ ಪ್ರೇಮನಾಥ್ ಬಂಟ್ವಾಳ ಸದಸ್ಯರಾಗಿ ಶ್ರೀ ಚಂದ್ರಶೇಖರ ಸುವರ್ಣ ಸುರತ್ಕಲ್ ಸಲಹೆಗಾರರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಮುಂದೆಯೂ ತಮ್ಮಂತಹ ಸಹೃದಯಿ ಹಿತಚಿಂತಕರ ಸಲಹೆ, ಮಾರ್ಗದರ್ಶನ ಮತ್ತು ಸಹಕಾರದಿಂದ ಸಮಾಜದ ಅಭಿವೃದ್ಧಿಯಲ್ಲಿ ನಮ್ಮ ಸಂಸ್ಥೆಯು ದುಡಿಯುವುದೆಂಬ ಆಶಯದೊಂದಿಗೆ ವಿದ್ಯಾನಿಧಿಗೆ ಸಹಕರಿಸಿದ ಪ್ರತಿಯೋರ್ವ ದಾನಿಗಳಿಗೆ, ಸಲಹೆಗಾರರಿಗೆ, ಮಾಜಿ ಅಧ್ಯಕ್ಷರುಗಳಿಗೆ, ಸದಸ್ಯರುಗಳಿಗೆ, ವಿವಿಧ ಘಟಕಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾ ಮುಂದೆಯೂ ತಮ್ಮ ಸಹಕಾರ ಇರಲೆಂದು ಆಶಿಸುತ್ತಾ ವರದಿಯನ್ನು ಮುಕ್ತಾಯಗೊಳಿಸುತ್ತೇನೆ.