ಪ್ರೀತಿಯ ವಾಚಕರೇ,
ಸಮಯ ಸಂದರ್ಭಗಳು ಒಂದೇ ರೀತಿ ಇರುವುದಿಲ್ಲ. ಬದಲಾಗುತ್ತಿರುವ ಈ ಕಾಲದಲ್ಲಿ ಅದೆಷ್ಟೋ ಬಾರಿ ನಾವು ಮಾಡುವ ಕಾರ್ಯದಲ್ಲಿ ನಮಗೆ ವಿರುದ್ಧವಾಗಿ ನಡೆಯಬಹುದು. ಅಂತಹ ಪರಿಸ್ಥಿತಿ ಬಂದಾಗ ದುಃಖಿಸುತ್ತಾ ಇರುವ ಬದಲು, ಎದುರಾದ ಪರಿಸ್ಥಿತಿಯನ್ನು ತನ್ನ ಕಡೆ ಪರಿವರ್ತನೆ ಮಾಡಿಸಿಕೊಳ್ಳುವವನೆ ನಿಜವಾದ ಜಾಣ. ಎಷ್ಟೇ ಗಂಭೀರವಾದ ಸೋಲನ್ನು ಗೆಲುವಾಗಿ ದಕ್ಕಿಸಿಕೊಂಡಿರುವ ಅಗ್ರಗಣ್ಯರು ಈ ಪ್ರಪಂಚದಲ್ಲಿ ತುಂಬಾ ಜನ ಇದ್ದಾರೆ. ಅಂತಹವರನ್ನು ಅನುಕರಿಸಿಕೊಂಡು ತನ್ನ ಯಾವುದೇ ಪ್ರತಿಕೂಲ ಪರಿಸ್ಥಿತಿಗಳನ್ನು ಸಕಾರಾತ್ಮಕವಾಗಿ ಅರ್ಥಮಾಡಿಕೊಂಡು ಮನಸ್ಸಿನ ಮೇಲೆ ಒತ್ತಡ ಹಾಕಿಕೊಳ್ಳದೆ, ಎದೆಗುಂದದೆ ಕಾರ್ಯಗಳನ್ನು ಮಾಡಬೇಕು. ಇದರಿಂದ ಜೀವನದಲ್ಲಿ ಗೆಲುವು ಖಂಡಿತ. ಜೊತೆಗೆ ತನ್ನ ವ್ಯಕ್ತಿತ್ವ ಹಾಗೂ ಪ್ರತಿಭೆ ಬೆಳಗುವುದು. ಆರ್ಥಿಕವಾಗಿ ತೊಂದರೆಯಲ್ಲಿರುವುದು, ನಿರುದ್ಯೋಗ, ಭವಿಷ್ಯದಲ್ಲಿ ತನ್ನ ಬಗ್ಗೆ ಗೊಂದಲ ಮತ್ತು ಇನ್ನು ಹಲವು ಕಾರಣಗಳಿಗಾಗಿ ನಾವು ನಿತ್ಯ ಚಿಂತಿತರಾಗಿರುತ್ತೇವೆ. ಚಿಂತೆ ನಮ್ಮ ಶಕ್ತಿ ಸಾಮರ್ಥ್ಯಗಳ ಜೊತೆಗೆ ನಮ್ಮ ಆರೋಗ್ಯವನ್ನು ಹಾಳುಗೆಡಹುದಲ್ಲದೆ, ನಮ್ಮನ್ನು ನರಕಕ್ಕೆ ತಳ್ಳುತ್ತದೆ. ಸಮಸ್ಯೆಗಳನ್ನು ಎದುರಿಸುವುದೇ ಜೀವನ. ಇವನ್ನೆಲ್ಲಾ ಮೆಟ್ಟಿ ನಿಂತವನೇ ನಿಜವಾದ ಮನುಜ.
ಒಬ್ಬ ಮನುಷ್ಯ ಸಾಧಿಸಲಾಗದ್ದು ಯಾವುದೂ ಇಲ್ಲ. ಯಾವುದೇ ಕೆಲಸ ಪ್ರಾರಂಭ ಮಾಡುವ ಮೊದಲು ಗೆದ್ದೇ ಗೆಲ್ಲುತ್ತೇನೆ ಎಂಬ ದೃಢ ನಂಬಿಕೆ ಬೆಳೆಸಿಕೊಳ್ಳಬೇಕು. ಆಗ ಗೆಲುವು ನಮ್ಮದಾಗುವುದು. ಒಬ್ಬ ಪ್ರತಿಭೆ ಇದ್ದವನು ತಾನು ಯಾವ ವಿಷಯದಲ್ಲಿ ಸಾಮರ್ಥ್ಯ ಹೊಂದಿರುವೆನು ಎಂಬುದನ್ನು ಅರ್ಥೈಸಿಕೊಳ್ಳಬೇಕು. ಆಗ ತನ್ನ ಗೆಲುವಿಗೆ ಅವನು ತುಂಬಾ ಹತ್ತಿರವಾಗುತ್ತಾನೆ. ಒಮ್ಮೆ ಏನನ್ನಾದರೂ ಸಾಧನೆ ಮಾಡಲು ಹೊರಟು ನಿಂತರೆ ಹಿಂತಿರುಗಿ ನೋಡಲೇಬಾರದು. ತನ್ನ ದೃಷ್ಟಿ ಯಾವಾಗಲೂ ಗುರಿ ಸಾಧನೆಯತ್ತಲೇ ಇರಬೇಕು. ಕ್ಷಣ ಹಿಂತಿರುಗಿ ನೋಡಿದರೆ ಮತ್ತೆ ಮುಂದೆ ಹೋಗಿ ಗೆಲ್ಲುವುದು ಬಹಳ ಕಷ್ಟವಾಗುತ್ತದೆ. ಒಮ್ಮೆ ಕೈಹಾಕಿದ ಕೆಲಸವನ್ನು ಗುರಿ ಮುಟ್ಟುವ ತನಕ ಮಾಡಿ ಮುಗಿಸುವವನೇ ನಿಜವಾದ ಗೆಲುವಿನ ಸಾಧಕ. ಈ ಸಾಧನೆಯ ದಾರಿಯಲ್ಲಿ ಯುವವಾಹಿನಿ ಸಂಸ್ಥೆ ಕೂಡಾ ನಡೆಯುತ್ತಿರುವುದು ಒಂದು ಹೆಮ್ಮೆಯ ಸಂಗತಿ. 30 ವರ್ಷ ತುಂಬಿ ಯೌವನಾವಸ್ಥೆಯಲ್ಲಿರುವ ನಮ್ಮ ಸಂಸ್ಥೆ ಇದೀಗ ಅಂತರಾಷ್ಟ್ರೀಯ ಜಾಲ ತಾಣದಲ್ಲಿ ಹರಿದಾಡುತ್ತಿದೆ. ನಮ್ಮ ಸಂಸ್ಥೆಯ ಸಮಾಜಮುಖಿ ಕಾರ್ಯಕ್ರಮಗಳನ್ನು ಇಡೀ ವಿಶ್ವದೆಲ್ಲೆಡೆ ಕ್ಷಣ ಮಾತ್ರದಲ್ಲಿ ತಿಳಿಯುವ ಸುಯೋಗ ಒದಗಿರುವುದು ನಮ್ಮ ನಿಮ್ಮೆಲ್ಲರ ಭಾಗ್ಯ. ಹಾಗಂತ ನಾವು ಕೈಕಟ್ಟಿ ಕೂರುವ ಹಾಗಿಲ್ಲ. ಸಂಸ್ಥೆಯ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ನಮ್ಮಿಂದ ಸಮಾಜವು ಇನ್ನೂ ಹೆಚ್ಚಿನದನ್ನು ನಿರೀಕ್ಷಿಸುತ್ತದೆ. ಈ ನಿಟ್ಟಿನಲ್ಲಿ ನಮ್ಮ ಎಲ್ಲಾ ಘಟಕ ಸದಸ್ಯರು ತಮ್ಮ ತಮ್ಮ ಕರ್ತವ್ಯವನ್ನು ಕಿಂಚಿತ್ತಾದರೂ ಪೂರೈಸಿದಾಗ ಮಾತ್ರ ಯುವವಾಹಿನಿಯು ಶಿಖರದ ತುದಿಯನ್ನು ತಲುಪಿ, ಇತರರಿಗೆ ಪ್ರೇರಣಾ ಶಕ್ತಿಯಾಗಿ ನಿಲ್ಲುವುದು ಖಂಡಿತ.
ಕಳೆದ ಸಂಚಿಕೆಯಲ್ಲಿ ಪ್ರಕಟವಾದ ಕಾರಣಿಕ ಪುರಷರಿಂದ ಸಮಾಜಕ್ಕೆ ಪ್ರೇರಣೆ ಎಂಬ ಆಶಯ ಲೇಖನದ ಮುಖಾಂತರ ಸ್ವಾರ್ಥ ಜೀವನದ ಈ ಸಮಾಜದ ಕಣ್ಣು ತೆರೆಯಿಸಿದ, ಸಮಾಜದ ಚಿಂತಕರೂ, ಹಿರಿಯ ಕವಿ, ಲೇಖಕರೂ ಆಗಿರುವ ಶ್ರೀ ಮುದ್ದು ಮೂಡುಬೆಳ್ಳೆ ಇವರಿಗೆ ಸಿಂಚನ ಬಳಗದ ನಮನಗಳು. ಈ ಸಂಚಿಕೆಯಲ್ಲಿ ’ನಾವು ನೀವೆಲ್ಲರೂ ಮಾನವರಾಗೋಣ’ ಆಶಯ ಲೇಖನದೊಂದಿಗೆ ನಮ್ಮ ವಿವಿಧ ಘಟಕಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಸಂಪೂರ್ಣ ಚಿತ್ರಣ ನಿಮ್ಮ ಮುಂದೆ ಇಡುತ್ತಿದ್ದೇವೆ. ನಿಮ್ಮ ಅಭಿಪ್ರಾಯ ಸೂಕ್ತ ಸಲಹೆಗಳೇ ನಮಗೆ ಪ್ರೇರಣೆ. ದಯವಿಟ್ಟು ಸ್ಪಂದಿಸಿ.