ತಾನು ಪ್ರತಿನಿಧಿಸುವ ಕ್ಷೇತ್ರದಲ್ಲಿ ಕಿರಿಯರು ಮುಂದೆ ಬರಲು ಅವಕಾಶ ಕಲ್ಪಿಸಬೇಕು, ಇದ್ದಷ್ಟು ಸಮಯ ತಾನೇ ಇರಬೇಕು ಎಂಬ ನಿಯಮ ಸರಿಯಲ್ಲ, ಹಾಗೂ ಯುವಕರು ಯುವ ಬಿಲ್ಲವ ಸಮಾವೇಶ ಅತ್ಯಂತ ಯಶಸ್ವಿಯಾಗಿ ಸಂಘಟಿಸಿರುವುದು ಬಂಟ್ವಾಳ ಯುವವಾಹಿನಿಯ ಶಕ್ತಿಯನ್ನು ಅನಾವರಣಗೊಳಿಸಿದೆ ಎಂದು ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮೀನ್ ಮಟ್ಟು ತಿಳಿಸಿದರು.
ಅವರು ದಿನಾಂಕ 19.01.2014ನೇ ಆದಿತ್ಯವಾರ ಬಿ.ಸಿ.ರೋಡ್ ಗಾಣದಪಡ್ಪು ನಾರಾಯಣಗುರು ನಗರದ ಕಾಂತಬಾರೆ ಬೂದಬಾರೆ ಸಭಾಂಗಣದ ಕೋಟಿ ಚೆನ್ನಯ ವೇದಿಕೆಯಲ್ಲಿ ಜರುಗಿದ ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಜರುಗಿದ ಯುವ ಬಿಲ್ಲವ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಬೇಡಿಕೆಗಳು :
1.ರಾಷ್ರೀಯ ಹೆದ್ದಾರಿ ಬಿ.ಸಿ.ರೋಡಿನ ಮುಖ್ಯ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಎಂದು ನಾಮಕರಣ.
2. ಬಿ.ಸಿ.ರೋಡ್ ಗಾಣದಪಡ್ಪು ನಾರಾಯಣಗುರು ಸಭಾಭವನದಲ್ಲಿ ಎದುರುಗಡೆ ರಸ್ತೆಗೆ ನಾರಾಯಣಗುರು ರಸ್ತೆ ಎಂದು ನಾಮಕರಣ.
3.ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆ.
4. ಅವಳಿ ವೀರರಾದ ಕೋಟಿ ಚೆನ್ನಯ,ಕಾಂತಬಾರೆ ಬೂದಬಾರೆ ಸಾಹಸ ಕಥೆಗಳನ್ನು ಶಾಲಾ ಪಠ್ಯದಲ್ಲಿ ಸೇರ್ಪಡೆ.
5. 60 ವರ್ಷ ದಾಟಿದ ಮೂರ್ತೆದಾರರಿಗೆ ಮಾಸಿಕ ಪಿಂಚಣಿ ಯೋಜನೆ.
ಮುಂತಾದ ಬೇಡಿಕೆಗಳ ಮನವಿಯನ್ನು ಹತ್ತು ಸಹಸ್ರಕ್ಕೂ ಮಿಕ್ಕಿದ ಜನಸ್ತೋಮದ ಮುಂದೆ ಕರ್ನಾಟಕ ಸರಕಾರದ ನಗರಾಭಿವೃದ್ದಿ ಸಚಿವರಾದ ವಿನಯ ಕುಮಾರ್ ಸೊರಕೆ ಇವರಿಗೆ ನೀಡಲಾಯಿತು.
ಕೇಂದ್ರ ಸರಕಾರದ ಮಾಜಿ ವಿತ್ತ ಸಚಿವರಾದ ಬಿ.ಜನಾರ್ಧನ ಪೂಜಾರಿ ಸಮಾವೇಶ ಉದ್ಘಾಟಿಸಿದರು. ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ರಜತ ವರ್ಷದ ಅದ್ಯಕ್ಷ ಭುವನೇಶ್ ಪಚ್ಚಿನಡ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೇರಳ ವರ್ಕಳದ ಶಿವಗಿರಿ ಮಠಾಧೀಶರಾದ ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಕಳೆದ 25 ವರ್ಷಗಳಿಂದ ಬಂಟ್ವಾಳ ಯುವವಾಹಿನಿಯನ್ನು ಮುನ್ನಡೆಸಿದ 25 ಅದ್ಯಕ್ಷರನ್ನು ಸನ್ಮಾನಿಸಲಾಯಿತು.
ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅದ್ಯಕ್ಷರಾದ ಜೆ.ಪಿ.ನಾರಾಯಣ ಸ್ವಾಮೀ ಬಿರ್ವೆರೆ ತುಡರ್ ರಜತ ಸಂಭ್ರಮ ವಿಶೇಷಾಂಕ ಬಿಡುಗಡೆಗೊಳಿಸಿದರು.
ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಕರ್ನಾಟಕ ಸರಕಾರದ ರಾಷ್ಷ್ರೀಯ ಬಿಲ್ಲವರ ಮಹಾ ಮಂಡಲದ ಅದ್ಯಕ್ಷ ಜಯ ಸಿ ಸುವರ್ಣ, ಸೊರಬ ಶಾಸಕರಾದ ಮಧು ಬಂಗಾರಪ್ಪ, ಉದ್ಯಮಿ ರಮೇಶ್ ಕುಮಾರ್, ಉದ್ಯಮಿ ಸೀತಾರಾಮ ಪೂಜಾರಿ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಕೆ.ಸೇಸಪ್ಪ ಕೋಟ್ಯಾನ್, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯದರ್ಶಿ ನಾಗೇಶ್ ಪೂಜಾರಿ ಎಲಬೆ, ಸಂಚಾಲಕರಾದ ಟಿ.ಶಂಕರ ಸುವರ್ಣ, ಸಲಹೆಗಾರರಾದ ಬಿ.ತಮ್ಮಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಜತ ಸಂಭ್ರಮ ಸಂಚಾಲಕರಾದ ಜಿತೇಂದ್ರ ಜೆ.ಸುವರ್ಣ ಸ್ವಾಗತಿಸಿದರು, ಉಪಾಧ್ಯಕ್ಷ ರಾಜೇಶ್ ಸುವರ್ಣ ಪ್ರಾಸ್ತಾವಿಕ ಮಾತನಾಡಿದರು, ಬಿ.ಶ್ರೀಧರ ಅಮೀನ್ ಧನ್ಯವಾದ ನೀಡಿದರು.
ಯುವ ಬಿಲ್ಲವ ಸಮಾವೇಶ ಯುವವಾಹಿನಿಯ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಿತು.