ಮಂಗಳೂರಿನ ಬಿಜೈ ನಿವಾಸಿಯಾಗಿರುವ ಕೆ. ಮೋನಪ್ಪ ಸುವರ್ಣ ಮತ್ತು ಶ್ರೀಮತಿ ಕೆ. ಜಲಜಾಕ್ಷಿ ಇವರ ಸುಪುತ್ರನಾಗಿರುವ ಕಿಶೋರ್ ಕೆ. ಬಿಜೈ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸಂತ ಕ್ಸೇವಿಯರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿ ಪ್ರೌಢ ಶಿಕ್ಷಣವನ್ನು ಕೆನರಾ ಹೈಸ್ಕೂಲ್ ಡೊಂಗರಕೇರಿ ಇಲ್ಲಿ ಪೂರೈಸಿ, ಕೆನರಾ ಪದವಿ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದಿರುತ್ತಾರೆ. ಇದೇ ವೇಳೆ ಇವರಿಗೆ ಎಸ್ .ಕೆ ಗೋಲ್ಡ್ ಸ್ಮಿತ್ ಇಂಡಸ್ಟ್ರೀಯಲ್ ಕೋ ಆಪರೇಟೀವ್ ಸೊಸೈಟಿಯಲ್ಲಿ ಉದ್ಯೋಗ ಲಭಿಸಿದ್ದು, ಉದ್ಯೋಗವನ್ನು ಮಾಡುತ್ತಲೇ ಶಿಕ್ಷಣವನ್ನು ಮುಂದುವರಿಸಿರುತ್ತಾರೆ. ಸಂತ ಅಲೋಶಿಯಸ್ ಸಂಜೆ ಕಾಲೇಜಿಗೆ ಸೇರಿ ಬಿ.ಎ ಪದವಿಯನ್ನು ಪಡೆದ ಬಳಿಕ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. 1996 ರ ಸಾಲಿನಲ್ಲಿ ಯುವವಾಹಿನಿಯ ಸಂಪರ್ಕ ಬಂದ ಇವರು 1997 ರಲ್ಲಿ ಮಂಗಳೂರು ಘಟಕ ಹಾಗೂ 1998-99 ರಲ್ಲಿ ಕೇಂದ್ರ ಸಮಿತಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 2003 ರಲ್ಲಿ ಮಂಗಳೂರು ಘಟಕದ ಅಧ್ಯಕ್ಷರಾಗಿ, ಕೇಂದ್ರ ಸಮಿತಿಯ ಸಮಾವೇಶದ ಸಂಚಾಲಕನಾಗಿ, 2001-2003 ರ ಸಾಲಿನ ಸಿಂಚನ ಪತ್ರಿಕೆಯ ಸಂಪಾಕದರಾಗಿ, 2009 ರಲ್ಲಿ ಕೇಂದ್ರ ಸಮಿತಿಯ ಸಮಾವೇಶದ ನಿರ್ದೇಶಕರಾಗಿ ಪ್ರಸ್ತುತ ವರುಷ ಯುವವಾಹಿನಿ (ರಿ)ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪಣಂಬೂರು ನಾಗಬನ ಸೇವಾ ಸಮಿತಿ ಇಲ್ಲಿ ಕಳೆದ ಐದು ವರ್ಷಗಳಿಂದ ಆಂತರಿಕ ಲೆಕ್ಕ ಪರಿಶೋಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸರಕಾರಿ ಪ್ರೌಢಶಾಲೆ ನೆಲ್ಯಾಡಿ ಇಲ್ಲಿ ಸಹ ಶಿಕ್ಷಕಿಯಾಗಿರುವ ಪತ್ನಿ ಶ್ರೀಮತಿ ಲತಾ ಹಾಗೂ ಮಕ್ಕಳಾದ ಹೃಷಿತಾ ಕೆ. ಅಮೀನ್ ಮತ್ತು ಹಿಮಾಂಶು ಕೆ. ಅಮೀನ್ ಜೊತೆ ಸುಖ ಸಂಸಾರ ನಡೆಸುತ್ತಿದ್ದಾರೆ.
ದಿನಾಂಕ 14-8-2011 ರಂದು ನಡೆದ 24 ನೇ ವಾರ್ಷಿಕ ಸಮಾವೇಶದಲ್ಲಿ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ರಜತ ಮಹೋತ್ಸವವನ್ನು ಯಾವ ರೀತಿಯಲ್ಲಿ ಆಚರಿಸಬೇಕೆಂದು ಸಲಹೆಗಾರರು, ಮಾಜಿ ಅಧ್ಯಕ್ಷರುಗಳು, ಕಾರ್ಯಕಾರಿ ಸಮಿತಿಯ ಸದಸ್ಯರೊಡನೆ ಚರ್ಚಿಸಿ, ರಜತ ಮಹೋತ್ಸವ ಸಮಿತಿಯನ್ನು ರಚಿಸಿ, ದಿನಾಂಕ 25-12-2012 ರಂದು ರಜತ ಮಹೋತ್ಸವದ ಲಾಂಛನ ಬಿಡುಗಡೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಯುವವಾಹಿನಿಯ ರಜತ ಮಹೋತ್ಸವದ ಸಂದರ್ಭದಲ್ಲಿ 2 ಹೊಸ ಘಟಕಗಳ ಸೇರ್ಪಡೆಯಾಗಿರುತ್ತದೆ. ದಿನಾಂಕ 1-1-2012 ರಂದು ಬೆಳ್ವಾಯಿ ಘಟಕ, 14-1-2012 ರಂದು ನಿಡ್ಡೋಡಿ ಘಟಕವು ಯುವವಾಹಿನಿಯ ಸಂಪರ್ಕಕ್ಕೆ ಬಂದಿರುತ್ತದೆ. ವಿದ್ಯಾನಿಧಿಯ ವತಿಯಿಂದ ದಿನಾಂಕ 25-12-2012 ರಂದು 48 ವಿದ್ಯಾರ್ಥಿಗಳಿಗೆ ರೂಪಾಯಿ 1,30,000 ಹಾಗೂ 29-1-2012 ರಂದು 65 ವಿದ್ಯಾರ್ಥಿಗಳಿಗೆ ರೂಪಾಯಿ 1,60,000/- ವಿದ್ಯಾರ್ಥಿ ವೇತನ ವಿತರಿಸಲಾಗಿದೆ.
2011 ನೇ ಸಾಲಿನಲ್ಲಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅನ್ನದಾನ ನಿಧಿಗೆ ರೂಪಾಯಿ 25,000/-, 2012 ನೇ ಸಾಲಿನಲ್ಲಿ ರೂಪಾಯಿ 1,00,000/- ನೀಡಿ ಸಹಕರಿಸಿದ್ದೇವೆ.
ಅಂತರಾಷ್ಟ್ರೀಯ ಪವರ್ ಲಿಪ್ಟಿಂಗ್ ಸ್ಪರ್ಧೆಗೆ ಭಾಗವಹಿಸಲು ವಿದೇಶಕ್ಕೆ ತೆರಳಿದ ಕು. ಸುಪ್ರೀತಾಳಿಗೆ ರೂಪಾಯಿ 10,000/- ನೀಡಿ ಸಹಕರಿಸಿದ್ದೇವೆ. ಕು.ದಿಶಾ ವೈದ್ಯಕೀಯ ಚಿಕಿತ್ಸೆಗೆ ರೂಪಾಯಿ 11,000/- ನೀಡಿರುತ್ತೇವೆ. ದಿನಾಂಕ 21-1-2012 ರಂದು ಉಡುಪಿ ಘಟಕದ ವತಿಯಿಂದ ಅಂತರಘಟಕ ಹಾಗೂ ಸ್ಥಳೀಯ ಬಿಲ್ಲವರ ಸಂಘಗಳ ಸದಸ್ಯರಿಗೆ ತುಳುನಾಡ ಜಾನಪದ ಕ್ರೀಡೆಗಳ ಸ್ಪರ್ಧೆ ವಿನೂತನ ಕಾರ್ಯಕ್ರಮ. ದಿನಾಂಕ 5-2-2012 ರಂದು ಬೊಳ್ಳಿ ಬೊಲ್ಪು- 2012 ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಯಶಸ್ವಿಯಾಗಿ ಜರಗಿದೆ.
ದಿನಾಂಕ 1-4-2012 ರಂದು ಅಂತರ್ ಘಟಕ ’ನಾಯಕತ್ವ ಮತ್ತು ಸಭಾ ನಡಾವಳಿ’ ಯಶಸ್ವಿ ಕಾರ್ಯಕ್ರಮ. ಇವರ ಅವಧಿಯಲ್ಲಿ ಕೇಂದ್ರ ಸಮಿತಿಯ ಕುಟುಂಬ ಸದಸ್ಯರೊಂದಿಗೆ ದಿನಾಂಕ 11-5-2012 ರಿಂದ 13-5-2012 ರ ವರೆಗೆ ಶಿವಗಿರಿ ಪ್ರವಾಸ ಗೈದಿರುವುದು ಒಂದು ಅವಿಸ್ಮರಣೀಯ ಯಾತ್ರೆಯಾಗಿರುತ್ತದೆ. ಯುವವಾಹಿನಿಯ ಸದಸ್ಯರಿಗೆ ಯುವವಾಹಿನಿಯ ಪಿನ್ ವಿತರಿಸಲಾಗಿದೆ. ಯುವವಾಹಿನಿಯ ಹೆಚ್ಚಿನ ಎಲ್ಲಾ ಘಟಕಗಳು ಘಟಕ ಮಟ್ಟದಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದರಿಂದಲೇ ರಜತ ವರ್ಷಾಚರಣೆಯು ಯಶಸ್ವಿಯಾಗಿರುತ್ತದೆ.