ಕನ್ನಡ ಸಾಹಿತ್ಯ ಲೋಕದಲ್ಲಿ ಶ್ರೇಷ್ಠ ಕತೆಗಾರ, ಕಾದಂಬರಿಕಾರರಾಗಿ, ನಟರಾಗಿ, ನಾಟಕಕಾರರಾಗಿ, ಬರಹಗಾರರಾಗಿ, ಕನ್ನಡ, ತುಳು ಚಲನಚಿತ್ರಗಳ ನಿರ್ದೇಶಕರಾಗಿ, ರಾಜಕಾರಣಿಯಾಗಿ ಹೆಸರು ಮಾಡಿ ತಮ್ಮ ಅಲ್ಪ ಆಯುಷ್ಯದಲ್ಲಿಯೇ ಸಂದುಹೋದ ನಮ್ಮ ನಾಡಿನ ನಡೆ ನುಡಿಯ ಧೀಮಂತ ಸಾಹಿತಿ ದಿ| ವಿಶುಕುಮಾರ್‌ರವರ ಸ್ಮರಣಾರ್ಥ ಯುವವಾಹಿನಿಯ ವಿಶುಕುಮಾರ್ ದತ್ತಿನಿಧಿ ಸಂಚಾಲನಾ ಸಮಿತಿಯು ಕಳೆದ 14 ವರ್ಷಗಳಿಂದ ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ದುಡಿದ, ಗಣನೀಯ ಸಾಧನೆ ಮಾಡಿದ ಮಹನೀಯರನ್ನು ಗುರುತಿಸಿ ವಿಶುಕುಮಾರ್ ಪ್ರಶಸ್ತಿ ನೀಡುತ್ತಾ ಬಂದಿರುತ್ತದೆ.
2016ರ ಸಾಲಿನ ವಿಶುಕುಮಾರ್ ಪ್ರಶಸ್ತಿಯು ದ್ವಿಭಾಷಾ ಕವಿ, ಹಿರಿಯ ಸಾಹಿತಿಯಾದ ಎಂ. ಜಾನಕಿ ಬ್ರಹ್ಮಾವರರವರಿಗೆ ನೀಡಿದ ಹೆಮ್ಮೆ ಯುವವಾಹಿನಿಯದ್ದು.
ತಾ. 31-7-2017 ರಂದು ಯುವವಾಹಿನಿ (ರಿ) ಉಡುಪಿ ಘಟಕದ ಆತಿಥ್ಯದಲ್ಲಿ ಆರೂರು ಲಕ್ಷ್ಮೀನಾರಾಯಣ ರಾವ್ ಸಭಾ ಭವನ (ಪುರಭವನ) ಅಜ್ಜರಕಾಡು, ಉಡುಪಿ ಇಲ್ಲಿ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ ಬಹಳ ಅಚ್ಚುಕಟ್ಟಾಗಿ ನಡೆದಿರುತ್ತದೆ.
ಸಮಾರಂಭದ ಮೊದಲಿಗೆ ನಾಡಗೀತೆಯನ್ನು ಮೂಲ್ಕಿ ಘಟಕದ ಸದಸ್ಯರು ಸುಶ್ರಾವ್ಯವಾಗಿ ಹಾಡಿದರು.
ಬನ್ನಂಜೆ ಬಾಬು ಅಮೀನ್‌ರವರು ಪ್ರಶಸ್ತಿಯನ್ನು ಪ್ರದಾನಿಸಿ ಯುವವಾಹಿನಿ ಸಂಘಟನೆಯ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನೇರ ನಡೆನುಡಿಯ ವಿಶುಕುಮಾರ್‌ರವರ ಕಾರ್ಯದಕ್ಷತೆಯ ಬಗ್ಗೆ ಮಾತನಾಡಿದರು.
ಅತಿಥಿ ಅಭ್ಯಾಗತರನ್ನು ಕೇಂದ್ರ ಸಮಿತಿಯ ಅಧ್ಯಕ್ಷರಾದ ಸಂತೋಷ್ ಕುಮಾರ್‌ರವರು ಸ್ವಾಗತಿಸಿದರು. ವಿಶುಕುಮಾರ್ ದತ್ತಿನಿಧಿಯ ಪ್ರಾಯೋಜಕರಾದ ಟಿ. ಶಂಕರ ಸುವರ್ಣರವರು ಪ್ರಸ್ತಾವನೆ ಗೈದರು.
ಆಯ್ಕೆ ಸಮಿತಿಯ ಸದಸ್ಯರಾದ ಶ್ರೀಮತಿ ಬಿ.ಎಂ. ರೋಹಿಣಿ ಯವರು ವಿಶುಕುಮಾರ್ ಪ್ರಶಸ್ತಿಯ ಆಯ್ಕೆಯ ಬಗ್ಗೆ ತಿಳಿಸಿದರು.
ಪ್ರಶಸ್ತಿ ಪುರಸ್ಕೃತರ ಪರಿಚಯವನ್ನು ಶ್ರೀ ಸಾಧು ಪೂಜಾರಿಯವರು ಸಭೆಗೆ ಓದಿ ತಿಳಿಸಿದರು.
ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಶ್ರೀಮತಿ ಎಂ. ಜಾನಕಿ ಬ್ರಹ್ಮಾವರರವರು ವಿಶುಕುಮಾರ್‌ರವರ ಹೆಸರಿನಲ್ಲಿ ನೀಡಿದ ಈ ಪ್ರಶಸ್ತಿ ತುಂಬಾ ಅಮೂಲ್ಯವಾದುದು. ಈ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ತನ್ನ ಜವಾಬ್ದಾರಿ ಹೆಚ್ಚಿಸಿದಿರಿ ಎಂದರು. ಹಾಗೂ ಯುವವಾಹಿನಿಯ ಸರ್ವಸದಸ್ಯರನ್ನು ಅಭಿನಂದಿಸಿದರು.
ವಿಶುಕುಮಾರ್ ದತ್ತಿನಿಧಿ ಸಂಚಾಲನಾ ಸಮಿತಿಗೆ ಕಳೆದ ಹಲವಾರು ವರ್ಷಗಳಿಂದ ದೇಣಿಗೆ ನೀಡುತ್ತಾ ಬಂದಿರುವ ಪ್ರಸಕ್ತ ಸಾಲಿಗೆ ಪ್ರಾಯೋಜಕರಾದ ಟಿ. ಶಂಕರ ಸುವರ್ಣರವರನ್ನು ಸಮಿತಿಯ ಪರವಾಗಿ ಮುಖ್ಯ ಅತಿಥಿಯಾದ ಶ್ರೀ ಸಂಪತ್ ಬಿ. ಸುವರ್ಣರವರು ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ಫಲಪುಷ್ಪ ನೀಡಿ ಅಭಿನಂದಿಸಿದರು.
ಶ್ರೀ ಸಂಪತ್ ಬಿ. ಸುವರ್ಣರವರು ಸಮಯೋಚಿತವಾಗಿ ಮಾತನಾಡುತ್ತಾ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಪ್ರಭಾಕರ ನೀರುಮಾರ್ಗ ಯುವವಾಹಿನಿ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ಕು| ರಮ್ಯ ಸುಜೀರ್‌ರವರ ಪರಿಚಯವನ್ನು ಕಾರ್ಯದರ್ಶಿಯಾದ ಶ್ರೀ ಸಂಜೀವ ಸುವರ್ಣರವರು ವಾಚಿಸಿದರು. ಮುಖ್ಯ ಅತಿಥಿಯಾದ ಡಾ. ಮಾಧವಿ ಭಂಡಾರಿಯವರು ’ಯುವ ಸಾಹಿತ್ಯ ಪ್ರಶಸ್ತಿ’ಯನ್ನು ವಿತರಿಸಿದರು. ವಿಶುಕುಮಾರ್‌ರವರ ಕೆಲವೊಂದು ಕೃತಿಗಳ ಬಗ್ಗೆ ಮಾತನಾಡಿ ಅಂತರ್ಜಾಲದಲ್ಲಿ ವಿಶುಕುಮಾರ್‌ರವರ ಬಗ್ಗೆ ಮಾಹಿತಿ ನೀಡುವಂತೆ ವಿನಂತಿಸಿದರು. ಸಭಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗರು ಕಾರ್ಯಕ್ರಮದ ಅಚ್ಚುಕಟ್ಟುತನಕ್ಕೆ ಮಾರು ಹೋಗಿ ಯುವವಾಹಿನಿಯನ್ನು ತುಂಬು ಹೃದಯದಿಂದ ಅಭಿನಂದಿಸಿದರು. ಸಾಹಿತ್ಯ ಕಾರ್ಯಕ್ರಮ ಇನ್ನು ಮುಂದಕ್ಕೆ ಉಡುಪಿಯಲ್ಲಿ ಮಾಡುವುದಾದರೆ ಯುವವಾಹಿನಿ ಸಂಘಟನೆಯ ಮಾರ್ಗದರ್ಶನ ಪಡೆಯುವಂತಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ನಾವು ಯಾವ ಭಾಷೆಯಲ್ಲಿ ವಿದ್ಯಾಭ್ಯಾಸ ಮಾಡಿದರೂ ಕನ್ನಡದ ಬಗ್ಗೆ ಅಭಿಮಾನ ಇರಬೇಕೆಂದು ವಿನಂತಿಸಿದರು. ಅತಿಥಿಗಳಿಗೆ ಸ್ಮರಣಿಕೆಯನ್ನು ಅಧ್ಯಕ್ಷರ ನೀಡಿದರು.
ಕೊನೆಯದಾಗಿ ಧನ್ಯವಾದವನ್ನು ಸಂಚಾಲಕರಾದ ಶ್ರೀ ಕಿಶೋರ್ ಕೆ. ಬಿಜೈಯವರು ಸಮರ್ಪಿಸಿದರು. ಕಾರ್ಯಕ್ರಮವನ್ನು ನರೇಂದ್ರ ಕೆರೆಕಾಡು ಹಾಗೂ ಶ್ರೀಮತಿ ಅಮಿತಾಂಜಲಿ ಕಿರಣ್ ನಿರೂಪಿಸಿದರು.