ತುಕಾರಾಮ ಎನ್. ಇವರು ಯುವವಾಹಿನಿ(ರಿ) ಕೇಂದ್ರ ಸಮಿತಿಯ 2002-03 ನೇ ಸಾಲಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. 2-5-1962 ರಲ್ಲಿ ಜನಿಸಿದ ಇವರು 1997-98 ರಲ್ಲಿ ಯುವವಾಹಿನಿ ಮಂಗಳೂರು ಘಟಕದ ಅಧ್ಯಕ್ಷರಾಗಿ ಬಳಿಕ ’ಸಿಂಚನ ಪತ್ರಿಕೆಯ ಸಂಪಾದಕರಾಗಿ, 2001-02 ರಲ್ಲಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಶಾಲಿಯಾಗಿರುತ್ತಾರೆ.
ಇವರು ಕೇಂದ್ರ ಸಮಿತಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ’ಕೋಟಿ-ಚೆನ್ನಯ್ಯ’ ರಾಷ್ಟ್ರೀಯ ಕ್ರೀಡಾಕೂಟವನ್ನು ಬಿಲ್ಲವ ಮಹಾಮಂಡಲದ ಸಹಯೋಗದೊಂದಿಗೆ ದಿನಾಂಕ 12-5-2002 ರಂದು ನಡೆಸಲಾಗಿದ್ದು, ಹಲವಾರು ಯುವ ಪ್ರತಿಭೆಗಳು ಇದರಿಂದ ಬೆಳಕಿಗೆ ಬರುವಂತೆ ಆಗಿರುತ್ತದೆ.
ನಮ್ಮ ಸಮಾಜದ ಹಿರಿಯ ಸಾಹಿತಿ, ಸಾಹಿತ್ಯ ಕ್ಷೇತ್ರದ ದಿಗ್ಗಜ, ನಾಡಿನ ಕಣ್ಮಣಿ, ನಟ, ನಾಟಕಕರ್ತರಾಗಿ, ಕಾದಂಬರಿ ಕಾರರಾಗಿ ಹೆಸರುವಾಸಿಯಾದ ದಿ| ವಿಶುಕುಮಾರ್‌ರವರ ಸವಿ ನೆನಪಿಗಾಗಿ ಹಾಗೂ ಸಮಾಜದ ಯುವ ಬರಹಗಾರರನ್ನು ಬೆಳಕಿಗೆ ತರುವುದಕ್ಕೋಸ್ಕರ ವಿಶುಕುಮಾರ್ ಕಾರ್ಯಕ್ರಮ ದಿನಾಂಕ 3-11-2002 ರಂದು ಬಹಳ ಯಶಸ್ವಿಯಾಗಿ ಮೂಡಿಬಂದಿದ್ದು ಜಾತಿ ಚೌಕಟ್ಟಿನ ಹೊರಗಿರುವ ಸಾಹಿತ್ಯ ಲೋಕಕ್ಕೆ ಹಾಗೂ ಇತರ ಬರಹಗಾರರಿಗೆ ವಿಶುಕುಮಾರ್ ರವರನ್ನು ಮತ್ತೆ ನೆನಪಿಸಿಕೊಡುವಲ್ಲಿ ಸಹಕಾರಿಯಾಗಿದೆ. ಈ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ, ಕಾರ್ಯದರ್ಶಿ ಶ್ರೀ ವಿ.ಗ. ನಾಯಕ, ಡಾ| ನಾ. ಮೊಗಸಾಲೆ, ಪ್ರೊ. ಪಾ. ಸಂಜೀವ ಬೋಳಾರ್, ಶ್ರೀಮತಿ ಸಾರಾ ಅಬೂಬಕ್ಕರ್, ಶ್ರೀ ಬಿ. ಜನಾರ್ಧನ ಭಟ್, ಡಾ| ಸಬೀಹಾ ಭೂಮೇಗೌಡ, ಅಂತರಾಷ್ಟ್ರೀಯ ಖ್ಯಾತಿಯ ಚಲನಚಿತ್ರ ನಿರ್ದೇಶಕ ಶ್ರೀ ಸದಾನಂದ ಸುವರ್ಣ ಹಾಗೂ ಇನ್ನಿತರ ನೂರಾರು ಸಾಹಿತಿಗಳು, ಸಾಹಿತ್ಯಾಸಕ್ತರು ಬಹು ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಸಾರ್ವಜನಿಕ ವಲಯದಿಂದ ಉತ್ತಮ ಪ್ರತಿಕ್ರಿಯೆ ದೊರೆತಿರುವುದರಿಂದ ಹಾಗೂ ಹಿರಿಯ ಸಾಹಿತಿಗಳ ಅಭಿಪ್ರಾಯ ಪಡೆದು ವಿಶುಕುಮಾರ್ ನೆನಪಿನಲ್ಲಿ ಸಾಹಿತ್ಯ ಪ್ರಶಸ್ತಿಯೊಂದನ್ನು ಹುಟ್ಟುಹಾಕಿ ಪ್ರತಿ ವರ್ಷ ನೀಡಲು ಮುಂದಾಗಿದೆ. ಅದೇ ರೀತಿ 28-4-2003 ರಂದು ನಡೆದ ಯುವವಾಹಿನಿಯ ವಾರ್ಷಿಕ ಸಮಾವೇಶದಂದು ಡಾ| ನಾ.ಮೊಗಸಾಲೆ ಅವರ ಪಂಥ ಕಾದಂಬರಿಗೆ ಪ್ರಥಮ ವಿಶುಕುಮಾರ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
’ವಿಶುಕುಮಾರ್ ದತ್ತಿ ನಿಧಿ’ ಸಂಚಾಲಕರಾಗಿ, ವಿದ್ಯಾನಿಧಿಯ ಸಂಚಾಲಕರಾಗಿ, ಕೇಂದ್ರ ಸಮಿತಿಗಳಲ್ಲಿ ವಿವಿಧ, ಪದಾಧಿಕಾರಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಉದ್ಯೋಗಿಯಾಗಿರುತ್ತಾರೆ. ಇವರ ಧರ್ಮಪತ್ನಿ ಶ್ರೀಮತಿ ಸೌಮ್ಯಲತಾರವರು ಅಧ್ಯಾಪಕಿಯಾಗಿದ್ದು, ಪುತ್ರ ತುಷಾರ್ ಇವರು ಬಿ.ಸಿ.ಎ. ವಿದ್ಯಾರ್ಥಿ ಇವರೊಂದಿಗೆ ಸಂತೃಪ್ತಿಯ ಜೀವನ ನಡೆಸಿಕೊಂಡಿರುತ್ತಾರೆ.
ವಿಳಾಸ : ತುಷಾರ, ನೆಕ್ಕಿಲಗುಡ್ಡೆ, ಪ್ರಶಾಂತ್ ನಗರ, ದೇರೇಬೈಲ್ ಕೊಂಚಾಡಿ, ಮಂಗಳೂರು-575 006
ಸೆಲ್: 9448696942