2001-02 ನೇ ಸಾಲಿನಲ್ಲಿ ಯುವವಾಹಿನಿ(ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಯುವವಾಹಿನಿಯನ್ನು ಮುನ್ನಡೆಸಿದವರು ಟಿ. ಶಂಕರ ಸುವರ್ಣರವರು. ಯುವವಾಹಿನಿ ಬಂಟ್ವಾಳ ಘಟಕದ ಸದಸ್ಯರಾಗಿ 1988 ರಲ್ಲಿ ಯುವವಾಹಿನಿಗೆ ಪಾದಾರ್ಪಣೆ ಮಾಡಿದ ಇವರು ಯುವವಾಹಿನಿ ಬಂಟ್ವಾಳ ಘಟಕದಲ್ಲಿ ವಿವಿಧ ಹುದ್ದೆಯನ್ನು ಅಲಂಕರಿಸಿ, ಬಳಿಕ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಕೇಂದ್ರ ಸಮಿತಿಯಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ, ನಿರ್ದೇಶಕರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದ ಇವರು 2001-02ನೇ ಸಾಲಿನಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ ಕೀರ್ತಿಗೆ ಪಾತ್ರರಾಗಿರುತ್ತಾರೆ.
ಇವರ ಅಧ್ಯಕ್ಷೀಯ ಅವಧಿಯಲ್ಲಿ ಯುವವಾಹಿನಿಗೆ ಹೊಸ ಸದಸ್ಯರ ಸೇರ್ಪಡೆಗೆ ಒತ್ತು ಕೊಟ್ಟು ಸದಸ್ಯ ಬಲವನ್ನು ವೃದ್ಧಿಸಿದ್ದೇ ಅಲ್ಲದೆ, ಹಲವು ನಾಯಕತ್ವ ತರಬೇತಿ ಶಿಬಿರಗಳನ್ನು ನಡೆಸಿ, ಸದಸ್ಯರಿಗೆ ನಾಯಕತ್ವದ ಮಹತ್ವವನ್ನು ತಿಳಿಸಿಕೊಟ್ಟಿರುತ್ತಾರೆ. 1999 ರಲ್ಲಿ ಇವರ ಸಂಚಾಲಕತ್ವದಲ್ಲಿ ಬಂಟ್ವಾಳವನ್ನು ಕೇಂದ್ರವಾಗಿರಿಸಿ ನಡೆಸಲಾದ ಗುರು ಸಂದೇಶ ಯಾತ್ರೆಯು ಒಂದು ಅಭೂತಪೂರ್ವ ಕಾರ್ಯಕ್ರಮವೆನಿಸಿದೆ.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸುರತ್ಕಲ್‌ನಲ್ಲಿ ಗುರು ಸಂದೇಶ ಯಾತ್ರೆ, ಬಿಲ್ಲವ ಸಮಾಜದ ವಕೀಲರು, ವೈದ್ಯರು ಮತ್ತು ಇಂಜಿನಿಯರುಗಳ ಸಮಾವೇಶ ನಡೆಸಿ, ಸಮಾಜ ಬಾಂಧವರಿಗೆ ಈ ವರ್ಗದವರಿಂದ ಹಲವಾರು ಪ್ರಯೋಜನಗಳು ಲಭಿಸುವಂತೆ ಶ್ರಮಿಸಿರುತ್ತಾರೆ.
ಮಂಗಳೂರಿನಲ್ಲಿ 24-12-1954 ರಲ್ಲಿ ಜನಿಸಿದ ಇವರು ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ನಿವಾಸಿಯಾಗಿದ್ದು, ಧರ್ಮಪತ್ನಿಯಾದ ಶ್ರೀಮತಿ ಸುರೇಖಾ ಹಾಗೂ ಮಗಳಾದ ದೀಪಾ ಸುವರ್ಣರೊಂದಿಗೆ ಸುಖೀ ಬಾಳ್ವೆ ನಡೆಸುತ್ತಿದ್ದಾರೆ. ಇವರ ಮಗಳು ದೀಪಾ ಸುವರ್ಣರವರು ಸ್ನಾತಕೋತ್ತರ ಪದವಿಯನ್ನು ಪಡೆದು, ಬೆಂಗಳೂರಿನ ಪ್ರತಿಷ್ಠಿತ ಬಯೋಕಾನ್ ಸಂಸ್ಥೆಯಲ್ಲಿ ಹಿರಿಯ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಾಹಿತ್ಯ ಮತ್ತು ರಂಗಭೂಮಿಯ ನಂಟು ಬೆಳೆಸಿಕೊಂಡಿರುವ ಇವರು ಬೀದಿನಾಟಕ, ನಾಟಕಗಳನ್ನು ರಚಿಸಿ, ನಿರ್ದೇಶಿಸಿ, ನಟಿಸಿ ಭೇಷ್ ಎನಿಸಿಕೊಂಡಿರುತ್ತಾರೆ. ಬಡಗು ತಿಟ್ಟಿನ ಯಕ್ಷಗಾನವನ್ನು ಅಭ್ಯಸಿಸಿ, ಬಡಗ ಹಾಗೂ ತೆಂಕು ತಿಟ್ಟಿನ ಯಕ್ಷಗಾನಗಳಲ್ಲಿ ಅಭಿನಯಿಸಿರುವ ಅನುಭವ ಇವರದ್ದು. ವೈಚಾರಿಕ ಲೇಖನಗಳು, ಕವನಗಳನ್ನು ಬರೆಯುವ ಹವ್ಯಾಸವನ್ನು ಬೆಳೆಸಿಕೊಂಡಿದ್ದು, ಮಂಗಳೂರಿನ ಪ್ರತಿಷ್ಠಿತ ಅಭಿವ್ಯಕ್ತ ಬಿ.ಸಿ. ರೋಡಿನ ಅಭಿರುಚಿ ಕುಂದಾಪುರದ ಸಮುದಾಯಗಳ ನಾಟಕಗಳಲ್ಲಿ ಪಾತ್ರಧಾರಿಯಾಗಿ ಅಭಿನಯಿಸಿದ ಅನುಭವಶಾಲಿಯಾಗಿರುತ್ತಾರೆ.
ಜೋಡುಮಾರ್ಗ ನೇತ್ರಾವತಿ ಜೂನಿಯರ್ ಛೇಂಬರ್‌ನಲ್ಲಿ ತರಬೇತುದಾರರಾಗಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಯುವಜನ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿದ್ದು, ಕುಂದಾಪುರದ ವಂಡ್ಸೆಯ ವಾರಾಹಿ ಯುವಕಮಂಡಲದ ಅಧ್ಯಕ್ಷರಾಗಿ, ಯುವಕಮಂಡಲ ತುಂಬೆ ಇದರ ಪ್ರಧಾನ ಕಾರ್ಯದರ್ಶಿಯಾಗಿದ್ದು, ತುಂಬೆ ಗ್ರಾಮಾಭಿವೃದ್ಧಿ ಸಮಿತಿಯ ಜತೆಕಾರ್ಯದರ್ಶಿಯಾಗಿ ದುಡಿದ ಅನುಭವ ಹೊಂದಿರುವ ಇವರು, ಯುವವಾಹಿನಿಯ ಮುಖವಾಣಿ ಸಿಂಚನದ ಸಂಪಾದಕರಾಗಿಯೂ ದುಡಿದಿರುತ್ತಾರೆ. ಯುವವಾಹಿನಿಯ ಪ್ರಾಯೋಜಿತ ವಿಶುಕುಮಾರ್ ದತ್ತಿ ನಿಧಿಯ ಮಹಾಪೋಷಕ ರಾದ ಇವರು ಯುವವಾಹಿನಿಯ ಎಲ್ಲಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿರುತ್ತಾರೆ. ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ದ.ಕ. ಜಿಲ್ಲೆ, ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ದ.ಕ. ಜಿಲ್ಲಾ ಕಂದಾಯ ಸಹಕಾರ ಸಂಘದ ಕೋಶಾಧಿಕಾರಿಯಾಗಿ ದುಡಿಯುತ್ತಿದ್ದಾರೆ.
ವಿಳಾಸ : ’ಸುವರ್ಣ ದೀಪಾ’,
ತುಂಬೆ ಅಂಚೆ ಮತ್ತು ಗ್ರಾಮ, ಬಂಟ್ವಾಳ ತಾಲೂಕು
ಮೊಬೈಲ್: 9945999760