ರಜತ ರಶ್ಮಿ ; ಪ್ರೊ.ತುಕರಾಮ ಪೂಜಾರಿ

ಗರಡಿ-ಇತಿಹಾಸ-ಪರಂಪರೆ

ಪೀಠಿಕೆ: ನಾಗರೀಕತೆ ಬೆಳೆಯುವಲ್ಲಿ ಭೌಗೋಳಿಕ, ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಅಂಶಗಳ ಪಾತ್ರ ಗಮನೀಯ. ಅದರಲ್ಲೂ ರಾಜಕೀಯ ಅಂಶ ಅತೀ ಪ್ರಧಾನವಾದುದು. ಏಕೆಂದರೆ ಉಳಿದೆಲ್ಲವುಗಳು ಭದ್ರವಾದ ರಾಜಕೀಯ ರಕ್ಷಣೆಯ ತಳಹದಿಯ ಮೇಲೆಯೇ ಬೆಳೆಯತಕ್ಕಂತವುಗಳು. ಆದುದರಿಂದಲೇ ಪ್ರಾದೇಶಿಕ ಮಟ್ಟದಿಂದ ರಾಜ್ಯ ಸಾಮ್ರಾಜ್ಯದ ಮಟ್ಟದವರೆಗೆ ರಕ್ಷಣಾ ಕಲೆಗೆ ಮನುಷ್ಯ ವಿಶೇಷ ಆದ್ಯತೆ ನೀಡುತ್ತಾ ಬಂದಿರುವುದು. ಮನುಷ್ಯನನ್ನು ಶೂನ್ಯದಿಂದ ಅಸಾಮಾನ್ಯಗೊಳಿಸುವ ಸಾಧನಗಳೇ ಕಲೆಗಳು ಎನ್ನಬಹುದು. ರಕ್ಷಣಾ ಕಲೆ ಇವುಗಳಲ್ಲೊಂದು. ರಾಜ್ಯ ರಾಷ್ಟ್ರದ ಕಲ್ಪನೆಗಳಿಲ್ಲದ ಆ ದಿನಗಳಲ್ಲಿಯೇ ಮಾನವ ತನ್ನ ಜನರ ಮಾನ- ಪ್ರಾಣ, ಆಸ್ತಿ- ಪಾಸ್ತಿಯ ರಕ್ಷಣೆಗಾಗಿ ಸಂಘರ್ಷ ನಡೆಸಿದ್ದ. ಕಾಲಾಂತರದಲ್ಲಿ ನಿರ್ದಿಷ್ಟ ಕುಟುಂಬದ ಕಲ್ಪನೆಯೊಂದಿಗೆ ಸಮಾಜ ನಿರ್ಮಾಣವಾಗಿ, ಗ್ರಾಮಗಳ ಬೆಳವಣಿಗೆಯಾಗಿ ಮುಂದೆ ರಾಜ್ಯ- ಸಾಮ್ರಾಜ್ಯ ನಿರ್ಮಾಣವಾಯಿತು. ಅನೇಕ ಯುದ್ಧ– ವಿದ್ಯೆ ತಂತ್ರಗಳು ಬೆಳೆದು ಬಂದವು.

ಭಾರತ 64 ಕಲೆಗಳ ತವರು ಎಂಬ ಉಲ್ಲೇಖ ಸಾಮಾನ್ಯ. ಕಲೆಗಳ ಜ್ಞಾನಗಳು ಅಥವಾ ಜ್ಞಾನ ಮಾರ್ಗಗಳು ಬೇರೆ ಬೇರೆ. ಆದರೆ, ಅವೆಲ್ಲವುಗಳ ಗುರಿ ಒಂದೇ. ಅದು ಸತ್ಯಶೋಧ. ಶರೀರ ಮತ್ತು ಮನಸ್ಸು ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತದೆ. ಇವುಗಳ ಸಂಯುಕ್ತ ವಿಕಾಸಕ್ಕೆ ದೊರಕುವ ಶಿಕ್ಷಣ ಕೇಂದ್ರಗಳೇ ಗರಡಿಗಳು. ಈ ’ಗರಡಿ’ ಪದ ಪ್ರಾಚೀನ ಕಾವ್ಯ ಕುಮಾರವ್ಯಾಸ ಭಾರತದಲ್ಲೇ ಉಲ್ಲೇಖಗೊಂಡಿದೆ. ಇದರಿಂದ ಈ ಗರಡಿಯ ಪ್ರಾಚೀನತೆ ತಿಳಿಯಬಹುದಾಗಿದೆ.

ಗರೋಡಿ ದ್ರಾವಿಡ ಮೂಲದ ತುಳು ಪದ. ಮಲಯಾಳಂನಲ್ಲಿ ಇದಕ್ಕೆ ಸಂವಾದಿಯಾದ ಪದ ಕಳರಿ. ಗರಡಿ ಅಥವಾ ಗರೊಡಿಯ ಸಾಮಾನ್ಯ ಶಬ್ದಾರ್ಥ ಸಾಧಕ ಶಾಲೆ ಅಥವಾ ವ್ಯಾಯಾಮ ಶಾಲೆ. ಮನೆಯ ಮುಂಭಾಗದ ವಿಶಾಲವಾದ ಚಾವಡಿಯನ್ನೂ ಗರಡಿ ಎನ್ನುವುದಿದೆ. ಬಂಟ ಅಥವಾ ಬಿಲ್ಲವರ ಮನೆಯ ಪಕ್ಕದಲ್ಲಿ ಗರೊಡಿ ಕೊಟ್ಯಾ ಎಂಬ ಪ್ರತ್ಯೇಕವಾದ ಮುಳಿಹುಲ್ಲಿನ ಸಾಮಾನ್ಯ ಕಟ್ಟಡವು ಇರುವುದಿದೆ. ವಿಶೇಷಾರ್ಥದಲ್ಲಿ ಹೇಳುವುದಿದ್ದರೆ ಕೋಟಿ- ಚೆನ್ನಯರೆಂಬ ಅವಳಿ ವೀರರ ಹಾಗೂ ಇತರ ದೈವಗಳ ಆರಾಧನಾ ಸ್ಥಳವೇ ಗರಡಿ. ತುಳುನಾಡನ್ನು ದೃಷ್ಟಿಯಲ್ಲಿರಿಸಿ ಕೊಂಡು ಹೇಳುವುದಿದ್ದರೆ, ಈ ಸಣ್ಣ ಭೂ- ಪ್ರದೇಶದಲ್ಲಿ ಬಂಗ, ಅಜಿಲ, ಚೌಟ. ಸಾವಂತ ಮುಂತಾದ ಹದಿನಾಲ್ಕು ಪ್ರಮುಖ ತುಂಡರಸರು ಆಡಳಿತ ನಡೆಸಿರುವುದನ್ನು ಕಾಣಬಹುದು. ಹೀಗಿರುವಲ್ಲಿ ಇವರೊಳಗೆ ಗಡಿ ವಿವಾದಗಳು, ಸಂಘರ್ಷಗಳು ಸಾಮಾನ್ಯ. ಈ ಕಾರಣದಿಂದಲೇ ಬೀಡು ಬರ್ಕೆಗಳಲ್ಲಿಯೇ ಯುದ್ಧ ವಿದ್ಯೆಗಳಲ್ಲಿ ತರಬೇತುಗೊಂಡ ನಿಷ್ಟ ಯುವಕರ ದಂಡಿನ ಅಗತ್ಯವನ್ನು ಕಂಡುಕೊಂಡು ಅವರಿಗೆ ಯುದ್ಧ ವಿದ್ಯೆಯ ತರಬೇತು ನೀಡಲಾಗುತ್ತಿತ್ತು. ಅಲ್ಲದೆ, ದೈಹಿಕ ಕಸರತ್ತುಗಳನ್ನು ಈ ಗರಡಿಗಳಲ್ಲಿ ನೀಡಲಾಗುತ್ತಿತ್ತು. ವಿಶಾಲಾರ್ಥದಲ್ಲಿ ನೋಡಿದರೆ, ಗರಡಿಗಳು ತುಳುನಾಡಿಗೆ ಮಾತ್ರ ಸೀಮಿತವಾದುದಲ್ಲ. ಮೂಲಸ್ವರೂಪದಲ್ಲಿ ಇದು ಅಂಗಸಾಧನೆಯ ಕೇಂದ್ರವೆನ್ನುವುದು ನಿರ್ವಿವಾದ.

ಅಂಗಸಾಧನೆ ಮತ್ತು ಯುದ್ಧ ಕೌಶಲ್ಯದೊಂದಿಗೆ ವ್ಯಕ್ತಿಯಲ್ಲಿ ಬಲಿದಾನದ ಮನೋಭಾವನೆಯನ್ನು ಇಲ್ಲಿ ಬೆಳೆಸಲಾಗುತ್ತಿತ್ತು. ಅರಸರ ರಕ್ಷಣಾರ್ಥಿಯಾಗಿ ತನ್ನ ಪ್ರಾಣವನ್ನೇ ಮುಡಿಪಾಗಿಟ್ಟು ಆತ್ಮಾರ್ಪಣೆಗೈಯ್ಯುವವನಿಗೆ ಗರುಡರೆಂದು ಕರೆಯುತ್ತಿದ್ದರು. ಹೊಯ್ಸಳ ರಾಜ್ಯಾಡಳಿತದಲ್ಲಿ ಗರುಡರು ಎಂಬ ಹೆಸರಿನಲ್ಲಿ ಊಳಿಗ ಯೋಧ ವರ್ಗವೊಂದಿತ್ತೆಂದು ಬಹು ಸ್ಪಷ್ಟವಾಗಿ ಶಾಸನಗಳು ಹೇಳುತ್ತಿವೆ. ಸುಮಾರು ಕ್ರಿ. ಶ. 1200ಕ್ಕೆ ಸೇರಿದ ಒಂದು ಶಾಸನದಲ್ಲಿ ರಾಜ ವೀರ ಬಲ್ಲಾಳನಿಗೆ ಗರುಡನಾಗಿದ್ದ ಕುವರ ಲಕ್ಷ್ಮಣನೆಂಬವನು ಮೃತನಾದಾಗ ಅವನಿಗೆ ನಿಷ್ಠರಾಗಿದ್ದ ಒಂದು ಸಾವಿರ ಜನ ಲೆಂಕರು(ಗರುಡನಿಗೆ ಅಧೀನರಾಗಿ ರುವವರು ಲೆಂಕರು) ತಮ್ಮ ಪ್ರಾಣವನ್ನೇ ಅರ್ಪಿಸಿ ಬಲಿದಾನ ಮಾಡಿದರೆಂದು ಹೇಳಿದೆ.

ಪಾಡ್ದನಗಳಲ್ಲೂ ಈ ಗರಡಿಯ ಉಲ್ಲೇಖವಿದೆ. ಕೋಟಿ- ಚೆನ್ನಯರ ಪಾಡ್ದನದಲ್ಲೊಂದೆಡೆ- ಏರ್ ಬಾಲೆಲೆ ಕೋಟಿ ಚೆನ್ನಯ ಮೂಡಾಯಿ ಪಕ್ಕೊಡು ಪೇರ್ ಪೆರ್ಮುಂಡೆ ಅದನೆಡ್ ಪಡ್ಡಾಯಿ ಪಕ್ಕೊಡು ಉಂಡು ಕಟ್ಟಾಡಿ ನಾನಾರೆ ಗರೊಡಿದ ಅದನೆ ಎಂಬ ಉಲ್ಲೇಖವಿದೆ.

ಪುತ್ತೂರಿನ ಪೇರ್ ಪೆರ್ಮುಂಡೆ ಗರಡಿ ಹಾಗೂ ಪಾಂಗಾಳದ ನಾನಾಯರ ಗರಡಿ ಇವೆರಡೂ ಯುದ್ಧ ವಿದ್ಯೆ ಕಲಿಯಲು ಯೋಗ್ಯ ಸ್ಥಳ ಎಂಬುದಾಗಿ ಕೋಟಿ ಚೆನ್ನಯರ ಮಾವ ಸಾಯನ ಬೈದ್ಯ ಹೇಳುವ ಮಾತಿದು. ಗರಡಿ ಕೇವಲ ಜಾನಪದೀಯ ಹಿನ್ನೆಲೆಯನ್ನಷ್ಟೇ ಹೊಂದಿರದೆ ಐತಿಹಾಸಿಕವಾಗಿಯೂ ಯುದ್ಧ ತರಬೇತಿ ಕೇಂದ್ರವೆಂದು ಗುರುತಿಸಿಕೊಂಡಿದೆ.

ಗರಡಿ ಮತ್ತು ಕಳರಿ: ಐತಿಹಾಸಿಕ ಹಿನ್ನೆಲೆ: ತುಳುನಾಡಿನ ಗರೊಡಿಗೂ ಕೇರಳದ ಕಳರಿಗೂ ನಿಕಟವಾದ ಸಂಬಂಧ. ಕೇರಳದ ಯುದ್ಧ ವಿದ್ಯೆಯಾದ ’ಕಳರಿಪಯಟ್ಟು’ ವನ್ನು ಕಲಿಸುವ ವ್ಯಾಯಾಮ ಶಾಲೆಯನ್ನು ’ಕಳರಿ’ ಎನ್ನುತ್ತಾರೆ. ತುಳುವಿನ ’ಗರೊಡಿ’ ಮಲಯಾಳಂನಲ್ಲಿ ’ಕಳರಿ’ ಯಾಗಿದೆ. ಎಂದು ಕೇರಳ ಜಾನಪದದಲ್ಲಿರುವ ಉಲ್ಲೇಖವೊಂದು ತಿಳಿಸುತ್ತದೆ. ಮೂಲತಃ ಕಳರಿ ಅಪ್ಪಟ ದಕ್ಷಿಣ ಭಾರತದ ಅದರಲ್ಲೂ ಪಶ್ಚಿಮ ಕರಾವಳಿಯಲ್ಲಿ ಹುಟ್ಟಿದ ಕಲೆ. ಪ್ರಾದೇಶಿಕತೆಯ ಆಧಾರದಲ್ಲಿ ಕಳರಿಯನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ- 1. ತುಳುನಾಡ ಶೈಲಿ 2. ಕರತನಾಡು ಶೈಲಿ.

ವಡಗರ, ಕಣ್ಣೂರು, ಕಾಸರಗೋಡು, ಮಂಗಳಾಪುರಂ (ಮಂಗಳೂರು) ಪ್ರದೇಶಗಳು ಅಂದರೆ ಕಲ್ಲಿಕೋಟೆಯ ಉತ್ತರಕ್ಕಿರುವುದು ತುಳುನಾಡ ಶೈಲಿಯಾದರೆ, ದಕ್ಷಿಣಕ್ಕಿರುವುದು ಕರತನಾಡು ಶೈಲಿ. ಯಾವುದೇ ವಿದ್ಯೆಯನ್ನು ಕರಗತ ಮಾಡಿಕೊಳ್ಳುವಲ್ಲಿ ದೈಹಿಕ ಹಾಗೂ ಮಾನಸಿಕ ಸ್ಥಿರತೆ ಅತ್ಯಗತ್ಯ. ಮೊದಲು ಈ ನಿಟ್ಟಿನಲ್ಲಿ ಕಳರಿ ಪಟುವನ್ನು ಗಟ್ಟಿಗೊಳಿಸಲಾಗುತ್ತದೆ. ಕಳರಿಯಲ್ಲಿ ಒಂಬತ್ತು ಅಸ್ತ್ರಗಳ ಬಳಕೆಯ ತರಬೇತಿಯನ್ನು ನೀಡಲಾಗುತ್ತದೆ. ಅವುಗಳೆಂದರೆ:

1. ವಡಿ(ಅಂದಾಜು 5 ರಿಂದ 5.5 ಅಡಿ ಉದ್ದದ ಬಾಗುವ ಬೆತ್ತ)
2. ಚೆರುವಡಿ (ಅಂದಾಜು 2.5 ಅಡಿಯ ಬೆತ್ತ)
3. ಕಠಾರ (ಓರೆಕೋರೆ ವಿನ್ಯಾಸವುಳ್ಳ ಕತ್ತಿ)
4. ವಾಳ್ ಪರಿಜ (ಕತ್ತಿ ಮತ್ತು ಗುರಾಣಿ)
5. ಕುಂದಂ ಪರಿಜ (ಈಟಿ ಮತ್ತು ಗುರಾಣಿ)
6. ಉರ್ಮಿ (ಬ್ಲೇಡುಗಳಿಂದ ಜೊಡಿಸಲ್ಪಟ್ಟಿದ್ದು ಅಥವಾ ಈಗಿನ ಫೆನ್ಸಿಂಗ್ ಮಾದರಿಯ ಆಯುಧ)
7. ಪರಶು (ಕೊಡಲಿ)
8. ಗದಾ
9. ವಟ್ಟಂ (ಜಿಂಕೆಯ ಕೊಂಬನ್ನು ಹೋಲುವ ಮರದ ಆಯುಧ)

ಈ ಒಂಬತ್ತು ಆಯುಧಗಳು ಒಂದರ ನಂತರ ಒಂದರಂತೆ ಕಲಿಸಲಾಗುವ ಈ ವಿದ್ಯೆಯಲ್ಲಿ ಒಂದರಲ್ಲಿ ಪರಿಣತನಾಗದೇ ಇನ್ನೊಂದನ್ನು ಕಲಿಯುವಂತಿಲ್ಲ. ಇದರ ಕಲಿಕೆಯ ಸಂದರ್ಭದಲ್ಲಿ ಅಪಘಾತವಾಗಿ ಗಾಯಗೊಂಡವನನ್ನು ಗುಣಪಡಿಸುವ ವಿಧಾನ ಅತ್ಯಪೂರ್ವ. ಐದು ಹಂತಗಳಲ್ಲಿ ಕಲಿಸಲಾಗುವ ಈ ವಿದ್ಯೆಯನ್ನು ಜೀವನ ಪರ್ಯಂತ ಕಲಿತರೂ ಪೂರ್ಣ ಸಿದ್ಧಿ ಅಸಾಧ್ಯವೆಂಬುವುದು ಕಳರಿಯ ಬಗ್ಗೆ ಅಧ್ಯಯನ ನಡೆಸಿದವರ ಅಭಿಪ್ರಾಯ.

ಕೇರಳದ ವಡಕ್ಕನ್ ಪಾಟುಗಳಲ್ಲಿ ತುಳುನಾಡಿನ ಗರೊಡಿಗಳ ಬಗ್ಗೆ ಉಲ್ಲೇಖವಿದೆ. ತುಳುನಾಡಿನಲ್ಲಿ ಕಲಿತ ವಿದ್ಯಾರ್ಥಿ ಒಳ್ಳೆಯ ಚೇಗವನಾಗುತ್ತಾನೆ. ಚೇಗವನೆಂದರೆ ತುಳುನಾಡಿಗೆ ಹೋಗಿ ಗರೊಡಿ ವಿದ್ಯೆಯನ್ನು ಕಲಿತು ಬಂದ ಪರಿಣಿತರು ಎಂಬ ವರ್ಣನೆ ಕೇರಳದ ವಲಯ ಅರೋಮಲ್ ಚೇಗವರ್ ಎಂಬ ಇನ್ನೊಂದು ಜಾನಪದ ಗೀತೆಯಲ್ಲಿ ಉಲ್ಲೇಖವಾಗಿದೆ. ಹಿಂದೆ ವೀರ ಯೋಧರು ತಮ್ಮ ಬಾಲ್ಯ ಕಾಲದ ಅಕ್ಷರ ವಿದ್ಯಾಭ್ಯಾಸ ಮುಗಿಸಿದ ನಂತರ ಗರೊಡಿಗೆ ಸಂಬಂಧಿಸಿದ ಹೆಚ್ಚಿನ ಶಿಕ್ಷಣಕ್ಕಾಗಿ ತುಳುನಾಡಿಗೆ ಬರುತ್ತಿದ್ದರು ಅಥವಾ ತುಳುನಾಡಿನಿಂದ ಗರಡಿಯಾಚಾರ್‍ಯರುಗಳನ್ನು ಆಮಂತ್ರಿಸಿ ಶಿಕ್ಷಣ ಕೊಡಿಸುತ್ತಿದ್ದರು. ಎಂದು ಈ ಹಾಡುಗಳಲ್ಲಿ ವರ್ಣಿಸಲಾಗಿದೆ. 17ನೇಯ ಶತಮಾನದ ಜಾನಪದ ಕವಿ ತುಂಜನ್ ನಂಬಿಯಾರರು ತುಳುನಾಡಿನ ದ್ರೋಣಂ ಪಳ್ಳಿ ಆಚಾರ್‍ಯರ ಮೂಲಕ ಗರಡಿ ವಿದ್ಯೆಯನ್ನು ಅಭ್ಯಾಸ ಮಾಡಿದರೆಂದು ಕವಿಚರಿತ್ರೆಗಳಿಂದ ತಿಳಿದು ಬರುತ್ತದೆ.

ಚೆರಿಯ ಆರೋಮಣ್ಣಿ ಎಂಬ ಹಾಡಿನಲ್ಲಿ ೧೬ನೇಯ ಶತಮಾನದಲ್ಲಿ ಉಣ್ಣಿಯಾರ್ಚಿ ಎಂಬಾಕೆಯು ಮಲಬಾರಿನ ಪ್ರತಿಷ್ಠಿತ ಪುತರಂ ವೀಡಿನ ತೀಯಾ ಸಮಾಜದ ಕುಟುಂಬದವಳಾಗಿದ್ದು, ಅವಳು ಸ್ವತಃ ಕಳರಿಯ ಉರ್ಮಿ ಪರಿಣತಳಾಗಿದ್ದಳು. ಆದರೂ, ತನ್ನ ಮಗನಿಗೆ, ಮಗನೇ ನಾನು ನಿನಗೆ ಯುದ್ಧ ವಿದ್ಯೆ ಕಲಿಸಿದೆ, ಆದರೆ ಅದು ಪರಿಪೂರ್ಣವಲ್ಲ. ಅದು ನಿನಗೆ ಸಾಲದೆಂದು ಹೇಳುತ್ತಾ

ತುಳುನಾಟ್ಟಿಲ್ ನಲ್ಲ ತುಳುಕ್ಕುರುಕ್ಕಳ್
ಗುರುಕ್ಕಳೇತ್ತನ್ನೆ ಪರುತ್ತಿಞನಂ
ಮುವ್ವಾಂಡಿರುತ್ತೀ ಞನಭ್ಯಸಿಚ್ಚು
ತುಳುನಾಡನ್ ವಿದ್ಯೆ ಗ್ರಹಿಚ್ಚುತಾನುಂ

ಎಂಬ ಉಲ್ಲೇಖವಿದೆ. ಇದರ ಭಾವಾರ್ಥ ಇಂತಿದೆ- ತುಳುನಾಡಿನಲ್ಲಿ ಉತ್ತಮ ತುಳುವ ಗುರುಗಳಿದ್ದಾರೆ. ತುಳುವ ಗುರುಗಳನ್ನು ನಾನು ತರಿಸಿದೆ. ಮೂರು ವರ್ಷ ಅಬ್ಯಾಸ ಮಾಡಿಸಿದೆ. ತುಳುನಾಡಿನ ವಿದ್ಯೆ ಕಲಿತೆ ಅಂದರೆ ತುಳುನಾಡಿನ ಗರೊಡಿಗಳು ಹಾಗೂ ಇಲ್ಲಿ ಕಲಿಸಲಾಗುತ್ತಿದ್ದ ಕಾಳಗ ವಿದ್ಯೆ ಶ್ರೇಷ್ಠತೆಯನ್ನು ಸಾರುತ್ತದೆ. ಸುರಿಯವೆಂಬುವುದು ಕೋಟಿ ಚೆನ್ನಯರ ವಿಶೇಷ ಅಸ್ತ್ರ. ಉಣ್ಣಿಯಾರ್ಚಿಯು ಉರ್ಮಿಯಲ್ಲಿ ಪರಿಣಿತಳಾಗಿದ್ದುದರಿಂದ ಇದು ಅವರ ವಿಶೇಷ ಅಸ್ತ್ರವಾಗಿ ಗುರುತಿಸಲ್ಪಟ್ಟಿರಬಹುದಾದ ಸಾಧ್ಯತೆ ಇದೆ.

ಒಂದು ಅಂದಾಜಿನ ಪ್ರಕಾರ ಕಳರಿ 12ನೇಯ ಶತಮಾನದಲ್ಲಿ ಉಗಮವಾಗಿರಬೇಕು. ಚೇರಾ ಮತ್ತು ಚೋಳರ ದೀರ್ಘಯುದ್ಧ ಸಂದರ್ಭದಲ್ಲಿ ಈ ಕಲೆಯು ಹುಟ್ಟಿರ ಬಹುದೆಂದು ಅಂದಾಜಿಸಲಾಗಿದೆ. ಆದರೆ ಆ ವಾದವು ಸಂಪೂರ್ಣವಾಗಿ ನಂಬರ್ಲಹವಲ್ಲ. 12ನೇಯ ಶತಮಾನದ ಪೂರ್ವಾರ್ಧದಲ್ಲಿ ಕೊಡರಿಂಗಲ್ಲೂರಿನ ಪೆರುಮಾಳರ ಪತನಾ ನಂತರ ಕಳರಿಗಳು ಆರಂಭಗೊಂಡಿರಬೇಕು. ಮಧ್ಯಯುಗೀನ ಕೇರಳದ ಒಂದು ಸಾಮಾಜಿಕ, ರಾಜಕೀಯ ವ್ಯವಸ್ಥೆಯ ಭಾಗವಾಗಿ ಹುಟ್ಟಿಕೊಂಡಿರುವಂತಹದು ಗಮನಾರ್ಹ. ರಾಜಕೀಯವಾಗಿ ಕೇರಳವು ಸಣ್ಣ ಪುಟ್ಟ ಪ್ರಾಂತ್ಯಗಳಾಗಿ ವಿಭಜನೆಗೊಂಡಿದ್ದು ಅಧಿಕಾರಕ್ಕಾಗಿ ಪ್ರಾಂತ್ಯಾಧಿಕಾರಿಗಳೊಳಗೆ ಸಂಘರ್ಷ, ಹೋರಾಟ ನಿರಂತರವಾಗಿ ನಡೆಯುತ್ತಿದ್ದವು. ಅನಿವಾರ್ಯವಾಗಿ, ಯುದ್ಧ ಕೌಶಲ್ಯ ತಿಳಿದಿರುವ ಸೈನ್ಯವರ್ಗವನ್ನು ಪೋಷಿಸಿ ಅವರಿಗೆ ಯುದ್ಧ ಕಲೆಗಳನ್ನು ಹಾಗೂ ದೈಹಿಕ ಕಸರತ್ತುಗಳ ಕುರಿತಂತೆ ನಿಯಮಿತವಾಗಿ ತರಬೇತು ನೀಡಲಾಗುತ್ತಿತ್ತು. ಹೀಗೆ ಹುಟ್ಟಿಕೊಂಡಂತಹ ಸಂಸ್ಥೆಗಳನ್ನು ವ್ಯಾಯಾಮ ಶಾಲೆ ಅಥವಾ ಕಳರಿಯೆಂದು ಕರೆಯಲಾಯಿತು.

ಮಧ್ಯಯುಗದಲ್ಲಿ ತುಳುನಾಡಿನಲ್ಲಿಯೂ ಇದೇ ರೀತಿಯ ರಾಜಕೀಯ ಸ್ಥಿತ್ಯಂತರವಿದ್ದು ಪ್ರಾಂತೀಯ ತುಂಡರಸರುಗಳ ಮಧ್ಯೆ ನಿರಂತರವಾಗಿ ಸಂಘರ್ಷವೇರ್ಪಟ್ಟಿರಬೇಕು. ಇಲ್ಲಿನ ಪ್ರಮುಖ ತುಂಡರಸರುಗಳಾದ ಬಂಗಾಡಿಯ ಬಂಗರು, ವೇಣೂರಿನ ಅಜಿಲರು, ಪುತ್ತಿಗೆಯ ಚೌಟರು, ಕಾರ್ಕಳದ ಬೈರರಸರು ಹೀಗೆ ಎಲ್ಲಾ ಅರಸರು ಸುಮಾರು 11-12ನೇಯ ಶತಮಾನದ ಹೊತ್ತಿಗೆ ಅಧಿಕಾರಕ್ಕೇರಿ ತಮ್ಮ ಅಸ್ತಿತ್ವಕ್ಕಾಗಿ ಸಂಘರ್ಷ ನಡೆಸಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ಬಹುಶಃ ಈ ಕಾಲಘಟ್ಟದಲ್ಲಿಯೇ ಗರಡಿಗಳು ರಾಜಾಶ್ರಯವನ್ನು ಹೊಂದಿ ತನ್ನ ಉತ್ಕೃಷ್ಟತೆಯನ್ನು ಕಾಪಾಡಿಕೊಂಡು ಬೆಳೆದು ಬಂದಿರಬೇಕು. ಸಂಶೋಧನೆಯ ಪ್ರಕಾರ ಉಡುಪಿ ತಾಲೂಕಿನ ನಾನಾಯರ ಗರೊಡಿ ಹಾಗೂ ಬ್ರಹ್ಮಾವರದ ಮೂಡು ಮತ್ತು ಪಡು ಗರೊಡಿಗಳು (ವಾರಂಬಳ್ಳಿ ಗರೊಡಿ) ಪ್ರಾಚೀನ ಕಾಲದಿಂದಲೂ ಯುದ್ಧ ತರಬೇತಿ ನೀಡುವ ಕೇಂದ್ರಗಳಾಗಿದ್ದವೆಂದು ಇತಿಹಾಸ ಸಂಶೋಧಕರಾದ ಡಾ| ವಸಂತ ಶೆಟ್ಟಿಯವರು ಅಭಿಪ್ರಾಯ ಪಡುತ್ತಾರೆ. ವಿಜಯನಗರ ಕಾಲದ ತುಳುನಾಡಿನಲ್ಲಿ ಬಳಕೆಯಲ್ಲಿದ್ದ ಸೈನ್ಯಾಡಳಿತ ಪದ್ಧತಿಯ ಬಗೆಗೆ ಆ ಕಾಲದ ಶಾಸನಗಳಿಂದ ಸಾಕಷ್ಟು ವಿವರಗಳನ್ನು ಡಾ. ಕೆ.ವಿ. ರಮೇಶ್‌ರವರು ತಮ್ಮ ’ತುಳುನಾಡಿನ ಇತಿಹಾಸ’ ವೆಂಬ ಗ್ರಂಥದಲ್ಲಿ ತಿಳಿಸಿರುತ್ತಾರೆ. ಈ ಸೈನಿಕರನ್ನೆಲ್ಲಾ ಯುದ್ಧ ವಿದ್ಯಾ ಪರಿಣತರನ್ನಾಗಿ ಮಾಡುವ ಹಲವಾರು ಕೇಂದ್ರಗಳು ತುಳುನಾಡಿನಾದ್ಯಂತ ಹರಡಿಕೊಂಡಿರುವುದಕ್ಕೆ ಇಲ್ಲಿನ ಸುವ್ಯವಸ್ಥಿತ ಸೈನ್ಯಾಡಳಿತ ಪದ್ಧತಿಯೇ ಸಾಕ್ಷಿ.

ಅವಳಿ ವೀರರಾದ ಕೋಟಿಚೆನ್ನಯರು ಎಣ್ಮೂರು ಬಾಕಿಮಾರು ಕಾಳಗದ ಗದ್ದೆಯಲ್ಲಿ ನಿರ್ಣಾಯಕ ಯುದ್ಧದ ಅಂತಿಮ ಘಟ್ಟದಲ್ಲಿರುವಾಗ ಪಡುಮಲೆಯ ಬಲ್ಲಾಳರು ಪ್ರಯೋಗಿಸಿದ ಬಾಣವು ಕೋಟಿಯ ಮರ್ಮಕ್ಕೆ ನಾಟಿಕೊಂಡಿತು. ಪ್ರಾಣಾಂತಿಕ ಸ್ಥಿತಿಯಲ್ಲಿದ್ದ ಕೋಟಿ ಪಡುಮಲೆ ಬಲ್ಲಾಳರಿಂದಲೇ ಈ ಕೃತ್ಯ ನಡೆದಿರುವುದನ್ನು ಗಮನಿಸಿ ಅತೀವ ದುಃಖಿತನಾದನು. ಸಾವಿನ ದುಃಖಕ್ಕಿಂತಲೂ ಹಾಲುಣಿಸಿ ಬೆಳೆಸಿದ ತಂದೆಯ ಸಮಾನರಾದ ಪಡುಮಲೆಯ ಬಲ್ಲಾಳರು ತನ್ನ ಸಾವಿಗೆ ಕಾರಣರಾದರೇ ಎಂದು ಶೋಕ ತಪ್ತನಾಗುತ್ತಾನೆ. ಕೋಟಿಯ ಸ್ಥಿತಿಯನ್ನು ಕಂಡ ಚೆನ್ನಯ, ಹೆತ್ತ ಸೂತಕ ಒಂದಾಗಿರುವಾಗ ಸತ್ತ ಸೂತಕ ಎರಡಾಗುವುದೇ ಎಂದು ಉದ್ಗರಿಸುತ್ತಾನೆ. ತಮ್ಮ ಅವಸಾನವನ್ನು ಅರ್ಥೈಸಿಕೊಂಡ ಕೋಟಿ- ಚೆನ್ನಯರು ನಮಗೆ ಸ್ಮಾರಕವಾದ ಆಯುಧ ಶಾಲೆ(ಗರಡಿ) ಕಟ್ಟಿಸಿ, ಈ ದೇಹದಲ್ಲಿರುವ ನಾವು ದೇಹ ತ್ಯಜಿಸಿ ಬೆರ್ಮರ ಪಾದ ಸೇರಿದಾಗ ನಮಗೆ ನೇಮ ನೆರಿ ಕೊಡುತ್ತಾ ಬನ್ನಿ, ನಿಮ್ಮ ಇಷ್ಟಾರ್ಥವನ್ನು ನೆರವೇರಿಸುತ್ತೇವೆ, ನೆನೆಸಿದಲ್ಲಿ ನೆಲೆಯಾಗುತ್ತೇವೆ, ನ್ಯಾಯಕ್ಕೆ ಗೆಲುವು ತಂದು ಕೊಡುತ್ತೇವೆ, ನುಡಿದ ನ್ಯಾಯಕ್ಕೆ ಸಾರಥಿಯಾಗುತ್ತೇವೆ, ಕಾರಣಿಕದಲ್ಲಿ ಅದೃಶ್ಯರಾಗಿ ರಕ್ಷಣೆ ಇಂಬು ಕೊಡುತ್ತೇವೆ, ಬೆಳೆ ಭಾಗ್ಯಕ್ಕೆ ದಯೆ ರಕ್ಷಣೆ ನೀಡುತ್ತೇವೆ ಎಂದು ಹೇಳಿ ವೀರಾವಸಾನ ಹೊಂದುತ್ತಾರೆ ಎಂಬ ಅಂಶ ಕೋಟಿ- ಚೆನ್ನಯ ಪಾಡ್ದನದಿಂದ ನಮಗೆ ತಿಳಿದು ಬರುತ್ತದೆ. ಈ ವೀರ ಮರಣದೊಂದಿಗೆ ಶತ್ರುಗಳಾಗಿದ್ದ ಮೂವರು ಬಲ್ಲಾಳರು ಒಂದಾಗುತ್ತಾರೆ. ಅವಳಿ ಸೋದರರ ಆಶಯದಂತೆ ಗರಡಿ ಕಟ್ಟಬೇಕು. ಮಾಯಾ ರೂಪದಲ್ಲಿರುವ ಅವರಿಗೆ ನೇಮನೆರಿ ಸಲ್ಲಿಸುತ್ತಾ ಬರಬೇಕೆಂದು ತೀರ್ಮಾನಿಸುತ್ತಾರೆ. ಎಣ್ಮೂರಿನಲ್ಲಿ ಕೋಟಿ- ಚೆನ್ನಯರ ಅಂತ್ಯ ಸಂಸ್ಕಾರಾಧಿಗಳನ್ನು ವಿಧಿವತ್ತಾಗಿ ನೆರವೇರಿಸಿ ಈ ವೀರ ಪುರುಷರಿಗೆ ಗೋರಿ ಕಟ್ಟಿದರು. ಗರಡಿ ನಿರ್ಮಿಸಿದರು. ಅವರ ಆಶಯದಂತೆ ಅರ್‍ವತ್ತಾರು ಗರಡಿ ಮೂವತ್ತಾರು ತಾವು(ತಾಣ) ನಿರ್ಮಾಣ ಪ್ರಾರಂಭವಾಯಿತು.

ಕೋಟಿ-ಚೆನ್ನಯರ ಜೀವನದ ಆದರ್ಶವನ್ನು ಸ್ವೀಕರಿಸಿ ತುಳುನಾಡಿನ ಜನರು ಗರೋಡಿಗಳ ನಿರ್ಮಾಣಗೊಳಿಸಿ ಆರಾಧನೆಗೆ ಮುಂದಾದರು. ಈ ಗರಡಿ ರಚನೆ, ಆರಾಧನೆಯಲ್ಲಿ ಪ್ರಾದೇಶಿಕ ವ್ಯತ್ಯಾಸವಿದ್ದರೂ ಜೊತೆಗೆ ಸಾಮ್ಯತೆಯೂ ಕಂಡು ಬರುತ್ತದೆ. ಇಂದು ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು, ಮಡಿಕೇರಿ, ಮುಂಬೈ ಸೇರಿದಂತೆ ಒಟ್ಟು 230 ಗರೋಡಿಗಳಿವೆ.

ಈ ಗರೋಡಿಗಳನ್ನು ಆಯದ ಗರೋಡಿ, ಆಯ ಪ್ರಭೇದ ಗರೊಡಿ ಮತ್ತು ಮನೆಗರೊಡಿಗಳಾಗಿ ವಿಂಗಡಿಸಲಾಗಿದೆ. ಕೋಟಿ ಚೆನ್ನಯರು ತಮ್ಮ ಜೀವಿತ ಕಾಲದಲ್ಲಿ ಅಂಗ ಸಾಧನೆಗೈದ ಗರೊಡಿ ಉಡುಪಿಯ ಕಟ್ಟಾಡಿಯ ನಾನಾಯರ ಗರೊಡಿ. ಈ ಗರೊಡಿಯ ಆಯ: ಉದ್ದ- ಉತ್ತರ ದಕ್ಷಿಣಕ್ಕೆ 16 ಕೋಲು, ಅಗಲ- ಪೂರ್ವ, ಪಶ್ಚಿಮಕ್ಕೆ ೮ ಕೋಲು, ಎತ್ತರ- 4 ಕೋಲು. ಈ ಆಯದಲ್ಲಿ ಕೋಟಿ ಚೆನ್ನಯರು ಪಳಗಿದ್ದು ಮುಂದೆ ಕೋಟಿ ಚೆನ್ನಯರ ಪ್ರತೀಕವಾಗಿಯೇ ಗರಡಿಗಳನ್ನು ಕಟ್ಟುವಾಗ ಈ ಆಯವನ್ನೇ ಅನುಸರಿಸಿಕೊಂಡು ಬರಲಾಗಿದೆ. ತಮ್ಮ ಕುಲದೈವರಾದ ಬೆರ್ಮರೊಂದಿಗೆ ಆರಾಧನೆಗೊಳ್ಳುತ್ತಿರುವ ಬೈದ್ಯರು ನಂಬಿದವರಿಗೆ ಇಂಬು ನೀಡುವ ಅಭಯದೊಂದಿಗೆ, ಜಾತಿ ಮತವೆಂಬ ಬೇಧವಿಲ್ಲದೆ ತುಳುವರ ಇಷ್ಟದೇವತೆಯಾಗಿ ಮೆರೆಯುತ್ತಿದ್ದಾರೆ. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಹೆಚ್ಚಿನ ದೈವಾರಾಧನೆಯಲ್ಲಿ ’ಅಸುರ ಕ್ರಿಯೆ’ ಪ್ರಕಾರ ನಡೆಯುತ್ತಿದ್ದರೆ, ಬೈದ್ಯರ ಆರಾಧನೆಯಲ್ಲಿ ಮಾತ್ರ ಸಾತ್ವಿಕ ಕ್ರಿಯೆಯನ್ನು ಅಳವಡಿಸಿಕೊಂಡಿರುವುದು ಗಮನಾರ್ಹ. ತಮ್ಮ ಕಲೆ ಕಾರಣಿಕದಿಂದ ಜನಮಾನಸದಲ್ಲಿ ನೆಲೆನಿಂತ ಕೋಟಿ ಚೆನ್ನಯರ ಆರಾಧ್ಯ ಕೇಂದ್ರಗಳಾದ ಗರೊಡಿಗಳ ಸಂಖ್ಯೆ ಬೆಳೆಯುತ್ತಲೇ ಇದೆ. ಒಟ್ಟಿನಲ್ಲಿ ಹೇಳುವುದಾದರೆ ಪರಿವರ್ತನೆ ಸಹಜ ಕ್ರಿಯೆ 16-17ನೇ ಶತಮಾನದ ಹೊತ್ತಿಗಿನ ಐರೋಪ್ಯರ ಪ್ರವೇಶ, ಅವರ ಆಧುನಿಕ ಶಸ್ತ್ರಾಸ್ತ್ರಗಳ ಪ್ರಯೋಗ ಪರಂಪರಾಗತ ವ್ಯವಸ್ಥೆಯ ಬದಲಾವಣೆಗೆ ಹೇತುವಾಯಿತು. ಮುಗ್ಧ ಸಮಾಜ ತಾನು ಕಂಡರಿಯದ ಬದುಕಿಗೆ ಕ್ರಮೇಣ ತೆರೆದುಕೊಳ್ಳಲಾಯಿತು. ಅಂದು ಯುದ್ಧ ವಿದ್ಯೆ ತರಬೇತು ನೀಡಲಾಗುತ್ತಿದ್ದ ಗರಡಿಗಳು ಇಂದು ಆರಾಧನಾ ಕೇಂದ್ರವಾಗಿ ಪರಿವರ್ತನೆಗೊಂಡಿದೆ. ಆ ಕಾಲಘಟ್ಟದಲ್ಲಿ ಶಸ್ತ್ರ ವಿದ್ಯಾಪಾರಂಗತ ಯೋಧರ ಅನಿವಾರ್ಯತೆ ಇತ್ತು. ಯುದ್ಧ, ಸಂಘರ್ಷ ಬದುಕಿನ ಅವಿಭಾಜ್ಯ ಅಂಗವೇ ಆಗಿತ್ತು. ಆದರೆ ಇದು ಎಂದಿಗೂ ಸುಖ- ಶಾಂತಿ ನೆಮ್ಮದಿಗೆ ನಾಂದಿಯಾಗದು. ಅನ್ಯಾಯ- ಅಧರ್ಮದ ವಿರುದ್ಧ ಹೋರಾಟ ನಡೆಸಿ ಸಂಘರ್ಷದ ದಾರಿ ಹಿಡಿದ ಕೋಟಿ ಚೆನ್ನಯರು ಕೊನೆಗೂ ದುಷ್ಟ ನಿಗ್ರಹ ಶಿಷ್ಟ ಪರಿಪಾಲನೆಯಲ್ಲಿ ಯಶಸ್ವಿಗೊಂಡು ದೈವತ್ವಕ್ಕೇರಿದರು. ತಾವು ಗರಡಿಗಳಿಂದ ಪಡೆದ ಮನೋಬಲ, ದೈಹಿಕ ಬಲ ಹೇಗೆ ಧರ್ಮ ಕರ್ಮಗಳನ್ನು ಸಮನ್ವಯಗೊಳಿಸಲು ಸಾಧ್ಯವಾಯಿತೊ ಅದು ಸಮಾಜಕ್ಕೆ ಮಾರ್ಗದರ್ಶಕವಾಗಲಿ ಎಂಬುದೇ ಅವರ ಆಶಯವಾಗಿತ್ತು. ಇದುವೇ ಗರಡಿಗಳು ಆರಾಧನಾ ಕೇಂದ್ರಗಳಾಗಿ ಪರಿವರ್ತನೆಗೊಳ್ಳಲು ಕಾರಣವೂ ಆಯಿತು.

ಆಕರ ಗ್ರಂಥಗಳು :
1. ದಾಮೋದರ ಕಲ್ಮಾಡಿ(2002), ’ಕೋಟಿ ಚೆನ್ನಯ ಪಾರ್ದನ ಸಂಪುಟ’, ಕನ್ನಡ ಪುಸ್ತಕ ಪ್ರಾಧಿಕಾರ
2. ದಾಮೋದರ ಕಲ್ಮಾಡಿ ಮತ್ತು ಚೆಲುವರಾಜ್ ಪೆರಂಪಳ್ಳಿ(ಸಂ)(2003), ’ಬೈದ್ಯ ದರ್ಶನ’, ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಪ್ರತಿಷ್ಠಾನ, ಆದಿ ಉಡುಪಿ.
3. ಬನ್ನಂಜೆ ಬಾಬು ಅಮೀನ್ ಮತ್ತು ಮೋಹನ್ ಕೋಟ್ಯಾನ್(೧೯೯೦), ’ತುಳುನಾಡ ಗರೊಡಿಗಳ ಸಾಂಸ್ಕೃತಿಕ ಅಧ್ಯಯನ’, ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಪ್ರತಿಷ್ಠಾನ, ಆದಿ ಉಡುಪಿ.
4. ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್(2009), ’ನಾಗಬೆರ್ಮ’ ಸುಪ್ರಿಯ ಪ್ರಕಾಶನ, ಪುತ್ತೂರು.
5. ಹೆರಂಜೆ ಕೃಷ್ಣ ಭಟ್ಟ ಮತ್ತು ಡಾ. ಎಸ್.ಡಿ. ಶೆಟ್ಟಿ(2000), ’ತುಳು ಕರ್ನಾಟಕ ಅರಸು ಮನೆತನಗಳು’, ಕನ್ನಡ ವಿ.ವಿ, ಹಂಪಿ.
6. ಪಡೆವೀರ(2008) ’ಸಮರ ಕಲೆಗಳ ಮಾತೆ ಕಳರಿ’, ಅಸೀಮಾ ಮಂಗಳೂರು
7. Website Wikipedia

ವಿಳಾಸ: ಪ್ರೊ. ತುಕರಾಂ ಪೂಜಾರಿ, ಅಧ್ಯಕ್ಷರು, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ, ಬಂಟ್ವಾಳ.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 16-11-2024
ಸ್ಥಳ : ಯುವವಾಹಿನಿ ಸಭಾಂಗಣ 3ನೇ ಮಹಡಿ, ರಘು ಬಿಲ್ಡಿಂಗ್ ಊರ್ವ ಸ್ಟೋರ್, ಮಂಗಳೂರು

ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕ

ದಿನಾಂಕ : 15-11-2024
ಸ್ಥಳ : ಸಿ. ಎಸ್. ಐ. ಬಾಲಿಕಾಶ್ರಮ, ಮೂಲ್ಕಿ

ಯುವವಾಹಿನಿ (ರಿ.) ಮೂಲ್ಕಿ ಘಟಕ

ದಿನಾಂಕ : 23-11-2024
ಸ್ಥಳ : ಸಂಪಿಗೆ ನಗರ, ಉದ್ಯಾವರ ಉಡುಪಿ

ಯುವವಾಹಿನಿ (ರಿ) ಉಡುಪಿ ಘಟಕ

ದಿನಾಂಕ : 24-11-2024
ಸ್ಥಳ : ನಾಗಪ್ಪ ಕಾಂಪ್ಲೆಕ್ಸ್ , ಎನ್ .ಹೆಚ್-66, ಬಲಾಯಿಪಾದೆ, ಉಡುಪಿ

ಯುವವಾಹಿನಿ (ರಿ) ಉಡುಪಿ ಘಟಕ

ದಿನಾಂಕ : 17-11-2024
ಸ್ಥಳ : ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ಹೆಜಮಾಡಿ

ಯುವವಾಹಿನಿ (ರಿ) ಪಡುಬಿದ್ರಿ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
error: Content is protected !!