ಮಂಗಳೂರು: ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಈ ವರ್ಷದ ಎರಡನೆಯ ಶಿವಗಿರಿ ಯಾತ್ರೆಯು ತುಂತುರು ಮಳೆಹನಿಗಳ ನಡುವೆ ಆಹ್ಲಾದಕರವಾಗಿ ಆರಂಭಗೊಂಡಿತು. ಯುವವಾಹಿನಿ(ರಿ.) ಕೇಂದ್ರ ಸಮಿತಿಯ ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕರಾದ ಶ್ರೀ ಮೋಹನ್ ಮಾಡೂರು ಹಾಗೂ ಕೇಂದ್ರ ಸಮಿತಿಯ ಪದಾಧಿಕಾರಿಗಳ ಸಾರಥ್ಯದಲ್ಲಿ, ರಾಮಚಂದ್ರ ಪೂಜಾರಿ ಮಂಗಳೂರು ಇವರ ಸಹಕಾರದಲ್ಲಿ ದಿನಾಂಕ 10-05-2024 ನೇ ಶುಕ್ರವಾರ ಸಂಜೆ ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಹಲವು ಘಟಕಗಳ ಸದಸ್ಯರುಗಳು, ಸದಸ್ಯ ಬಂಧುಗಳು ಶಿವಗಿರಿ ಕ್ಷೇತ್ರ ದರ್ಶನಕ್ಕೆ ಮಂಗಳೂರಿನ ಕೇಂದ್ರ ರೈಲು ನಿಲ್ದಾಣದಿಂದ ಪ್ರಯಾಣ ಆರಂಭಿಸಿದರು.
ಪೂರ್ವನಿಗದಿಯಂತೆ, ವರ್ಕಳ ನಿಲ್ದಾಣದಿಂದ ಶಿವಗಿರಿಯ ಕ್ಷೇತ್ರಕ್ಕೆ ಯಾತ್ರಾರ್ಥಿಗಳನ್ನು ಕೊಂಡೊಯ್ಯಲು ಸುವ್ಯವಸ್ಥಿತ ಬಸ್ಸಿನ ವ್ಯವಸ್ಥೆ ಇತ್ತು. ಬಸ್ಸಿನಲ್ಲಿ ಒಂದಷ್ಟು ದೂರ ಕ್ರಮಿಸಿದ ನಂತರ ಶಿವಗಿರಿ ಕ್ಷೇತ್ರದಲ್ಲಿ ನಮ್ಮನ್ನೆಲ್ಲ ಬಂದಿಳಿಸಿತು. ಮಾರ್ಗದರ್ಶಕರಾದ ಶ್ರೀ ನಾರಾಯಣ ಪೂಜಾರಿಯವರ ಸಲಹೆ ಸೂಚನೆ ಮಾರ್ಗದರ್ಶನದಂತೆ ನಾವೆಲ್ಲರೂ ನಿತ್ಯ ಕರ್ಮಾದಿಗಳನ್ನು ಮುಗಿಸಿಕೊಂಡು ಯಾತ್ರೆಯ ಮೊದಲ ಸ್ಥಳ ಶಾರದಾ ಪೀಠಕ್ಕೆ ತೆರಳಿದರು.
ನಾರಾಯಣ ಗುರುಗಳ ರಿಕ್ಷಾ ಮಂಟಪವನ್ನು ವೀಕ್ಷಿಸಿದ ನಂತರ, ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವರ ಇಚ್ಛೆಯಂತೆ ಸಮಾಧಿ ಕಟ್ಟಿಸಿದ ಸ್ಥಳವನ್ನು ವೀಕ್ಷಿಸಿ, ಎಲ್ಲರ ಪರವಾಗಿ ಗುರುಪೂಜೆಯನ್ನು ಸಲ್ಲಿಸಿದರು.
ಪಕ್ಕದಲ್ಲಿದ್ದ ಗತಕಾಲದ ಹಲಸಿನ ಮರ ಗುರುಗಳ ಮಹಿಮೆಯ ದ್ಯೋತಕದ ಹೆಗ್ಗುರುತಾಗಿ ಈಗಲೂ ಹಚ್ಚ ಹಸಿರಿನಿಂದ ನಳನಳಿಸುತ್ತಿದೆ. ತದನಂತರ ಮುಂದೆ ಗುರುಕುಲ ಮತ್ತು ನಾರಾಯಣ ಗುರುಗಳ ಶಿಷ್ಯರು ಗಣಪತಿ ದೇವರ ಪ್ರತಿರೂಪರು ಆದಂತಹ ಬೋದಾನಂದ ಗುರುಗಳ ಸಮಾಧಿಯತ್ತ ಸಾಗಿದರು.
ನಂತರ ಮಠದಲ್ಲಿ ಬೆಳಗಿನ ಉಪಹಾರವನ್ನು ಮುಗಿಸಿಕೊಂಡು, ಹತ್ತಿರದಲ್ಲೆ ಇರುವ ನಾರಾಯಣ ಗುರುಗಳ ಶಿಷ್ಯರಾದ ನಟರಾಜ ಗುರುಗಳ ಸಮಾಧಿ ಹಾಗು ಗುರುಕುಲವನ್ನು ವೀಕ್ಷಿಸಿದರು. ಗುರುಕುಲದಲ್ಲಿದ್ದ ಸ್ವಾಮಿಗಳು ನಮ್ಮೆಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸಿ, ಗುರುಕುಲದ ಇತಿಹಾಸವನ್ನು ಸಂಕ್ಷಿಪ್ತವಾಗಿ ತಿಳಿಯಪಡಿಸಿದರು. ಆದಿ ಶಂಕರಾಚಾರ್ಯರು ಸಂಸ್ಕೃತದಲ್ಲಿ ರಚಿಸಿರುವ ಗ್ರಂಥಗಳನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿರುವ, ಅದರಲ್ಲೂ ವಿಶೇಷವಾಗಿ ಸೌಂದರ್ಯ ಲಹರಿಯನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿದ ನಟರಾಜ ಗುರುಗಳ ಅಪರಿಮಿತ ಪಾಂಡಿತ್ಯದ ಪರಿಚಯವನ್ನು ನೀಡಿದರು. ಗುರುಕುಲದೊಳಗೆ ತೇಜೋಮಯವಾಗಿ ಪ್ರಕಾಶಿಸುತ್ತಿದ್ದ ಶ್ರೀ ಚಕ್ರದ ಮಹತ್ವವನ್ನು ಸ್ವಾಮಿಗಳು ತಿಳಿಸಿದರು. ನಂತರ ಬ್ರಹ್ಮಶ್ರೀ ನಾರಾಯಣ ಗುರುಗಳು ಜನಿಸಿದ ಚೆಂಬಳಾಂತಿ ಜಾಗಕ್ಕೆ ಮುಂದಡಿಯಿಟ್ಟರು.
ಚೆಂಬಳಾತಿಯಲ್ಲಿ ಮಣಕ್ಕಲ್ ಭಗವತಿಯ ದರ್ಶನಗೈದು, ಗುರುಗಳ ಮೂಲ ಮನೆಯತ್ತ ಸಾಗಿದೆವು.
ಗುರುಗಳು ಜನಿಸಿ ಅದೆಷ್ಟು ದಶಕಗಳೆ ಕಳೆದರೂ ಇಂದಿಗೂ ಅಲ್ಲಿರುವ ತೆಂಗಿನ ಸೋಗೆಯಿಂದ ಆವೃತವಾಗಿರುವ ಸೆಗಣಿ ಸಾರಿಸಿದ ಪ್ರಸೂತಿ ಗೃಹ ತನ್ನ ಮೂಲ ಸ್ವರೂಪವನ್ನು ಕಾಯ್ದುಕೊಂಡು , ದಿವ್ಯ ಜ್ಞಾನಿಯ ತೇಜೋಮಯ ಮೂರ್ತಿಯಿಂದ ಅಪಾರ ಭಕ್ತಾದಿಗಳನ್ನು ಈಗಲೂ ತನ್ನತ್ತ ಸೆಳೆಯುತ್ತಿದೆ. ಪಕ್ಕದಲ್ಲಿ ಇದ್ದ ಗಣಪತಿ ಗುಡಿ ಮತ್ತು ಬ್ರಹ್ಮಶ್ರೀ ನಾರಾಯಣಗುರುಗಳ ಮೂರ್ತಿ ಇರುವ ಮಂದಿರದ ದರ್ಶನ ಪಡೆದು, ವಯಲ್ ವಾರ್ ಮನೆತನದ ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮಸ್ಥಳದಿಂದ ಒಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ಮುಂದೆ ಸಾಗಲೇಬೇಕಾಯಿತು.
ಪ್ರತಿಯೊಂದು ಸ್ಥಳವನ್ನು ಸಂದರ್ಶಿಸಿದ ನಂತರ, ಆ ಸ್ಥಳದ ಮಹತ್ವವನ್ನು ಗುರುಗಳ ಮಹಿಮೆಯನ್ನು ನಿರರ್ಗಳವಾಗಿ, ಸುಲಲಿತವಾಗಿ ನಮ್ಮೆದುರು ಬಿಚ್ಚಿಡುತ್ತಿದ್ದರು ನಮ್ಮ ಮಾರ್ಗದರ್ಶಕರಾದ ಶ್ರೀ ನಾರಾಯಣ ಪೂಜಾರಿಯವರು.
ಮುಂದಕ್ಕೆ ಕುನ್ನುಂಪಾರ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೊರಟ ನಮ್ಮ ತಂಡ, ಅಲ್ಲಿನ ಸ್ಥಳದ ವಿಶೇಷತೆಯನ್ನು, ಪವಾಡವನ್ನು ಮಾರ್ಗದರ್ಶಕರಿಂದ ತಿಳಿದುಕೊಂಡು ಸರ್ವರ ಪರವಾಗಿ ಪೂಜೆಯನ್ನು ಸಲ್ಲಿಸಲಾಯಿತು. ಪೂಜೆಯ ನಂತರ ಸಭಾಂಗಣದಲ್ಲಿ ಮಧ್ಯಾಹ್ನದ ಭೋಜನವನ್ನು ಸವಿಯಲಾಯಿತು. ಸ್ವಲ್ಪ ಹೊತ್ತಿನ ವಿಶ್ರಾಂತಿಯ ನಂತರ ಕೋವಲಂ ಬೀಚಿಗೆ ತೆರಳಿದರು. ಮುಂದೆ ಬ್ರಹ್ಮಶ್ರೀ ನಾರಾಯಣ ಗುರುಗಳು ಮೊತ್ತ ಮೊದಲು ಪ್ರತಿಷ್ಠಾಪಿಸಿದ ಶಿವಲಿಂಗ ಅರವೀಪುರಂ ಮಂದಿರಕ್ಕೆ ತೆರಳಿದೆವು. ಅಲ್ಲಿಯ ಶಿವಲಿಂಗದ ದರುಶನ ಪಡೆಯುತ್ತಿದ್ದಂತೆ ಒಮ್ಮೆಲೆ ಗುಡುಗು ಸಿಡಿಲಿನ ಆರ್ಭಟ ಉಂಟಾಯಿತು. ಅಂದಿನ ಕಾಲಘಟ್ಟದಲ್ಲಿ ಶೂದ್ರರಿಗಾಗಿ ಶೂದ್ರ ಶಿವಲಿಂಗವನ್ನು ಇದೇ ನೆಯ್ಯರ್ ನದಿ ಕಿನಾರೆಯ ಶಂಕರಕೊಳದಲ್ಲಿ ಮುಳುಗಿ ಸ್ವಲ್ಪ ಸಮಯ ಕಣ್ಮರೆಯಾಗಿ ಶಿವಲಿಂಗದೊಂದಿಗೆ ಎದ್ದು ಬಂದ ನಾರಾಯಣ ಗುರುಗಳು ಇಲ್ಲಿ ಮೊತ್ತ ಮೊದಲ ಶಿವಲಿಂಗವನ್ನು ಪ್ರತಿಷ್ಠೆ ಮಾಡುವಾಗ ಇದೇ ರೀತಿಯ ಚಿತ್ರಣ ಇತ್ತೆಂದು ಇತಿಹಾಸ ಹೇಳುವಾಗ ಒಂದು ಕ್ಷಣ ನಾವು ಆಶ್ಚರ್ಯ ಚಕಿತರಾದೆವು. ನಂತರ ಅಲ್ಲಿರುವ ವಿಶಾಲವಾದ ಕೊಠಡಿಯಲ್ಲಿ ಸಂಜೆಯ ಉಪಹಾರವನ್ನು ಸೇವಿಸೆದೆವು. ಈ ಕೊಠಡಿಯು ಅಂದು ಸಂಸ್ಕೃತ ಕಲಿಸುವ ಪಾಠಶಾಲೆಯಾಗಿತ್ತು ಎನ್ನುವುದು ನಂಬಲೇಬೇಕಾದ ಕಹಿಸತ್ಯವಾಗಿತ್ತು.
ಅರವೀಪುರಂ ಕ್ಷೇತ್ರ ದರ್ಶನದ ನಂತರ ನಾವು ಮುಸ್ಸಂಜೆಯಲ್ಲಿ ಕನ್ಯಾಕುಮಾರಿ ದರುಶನಕ್ಕೆ ಹೊರಟೆವು. ರಮಣೀಯವಾದ ಕಡಲ ತಡಿಯಲ್ಲಿ ಕಣ್ಣು ಕೋರೈಸುವ ವಜ್ರದ ನಾಸಿಕದ ನತ್ತಿನಲ್ಲಿ ಪ್ರಕಾಶಿಸುತ್ತಿದ್ದ ಕನ್ಯಾಕುಮಾರಿಯ ಭಗವತಿ ಅಮ್ಮನ ದರುಶನವನ್ನು ಪಡೆದು ಧನ್ಯರಾದೆವು. ಸೂರ್ಯಾಸ್ತವಾಗುತ್ತಿದ್ದಂತೆ ಆ ದಿನದ ಯಾತ್ರೆಗೆ ಪೂರ್ಣ ವಿರಾಮ ನೀಡಿ ಗುರುಗಳ ಮರುತಮಲೆ ಆಶ್ರಮದಲ್ಲಿ ವಿಶ್ರಮಿಸಿದೆವು. ದಿನವಿಡೀ ಸುತ್ತಾಡಿ ದಣಿದಿದ್ದ ದೇಹಕ್ಕೆ ಜಳಕದ ಅಭಿಷೇಕ ಮಾಡಿ ರಾತ್ರಿಯಲ್ಲಿ ಸಂತೋಷದಿಂದ ಸಹಭೋಜನ ನಡೆಸಿದೆವು. ಅದರ ನಂತರ ಒಬ್ಬೊಬ್ಬರು ನಿದ್ರಾದೇವಿಯ ಮಡಿಲಿಗೆ ನಿಧಾನವಾಗಿ ಜಾರಿಕೊಂಡರು.
ದಿನಾಂಕ 12-05-2024 ರವಿವಾರ ಮುಂಜಾನೆಯ ನಿತ್ಯ ಕರ್ಮಾದಿಗಳನ್ನು ಮುಗಿಸಿಕೊಂಡು, ಎರಡನೆಯ ದಿನದ ಯಾತ್ರೆಗೆ ನಾವೆಲ್ಲ ಸಜ್ಜಾದೆವು. ಶುಚಿರ್ಭೂತರಾಗಿ ಬೆಳಿಗ್ಗೆ 5.00 ಗಂಟೆಯಿಂದ 6.15 ರವರೆಗೆ ಆಶ್ರಮದಲ್ಲಿ ನಡೆಯುತ್ತಿರುವ ಸತ್ಸಂಗದಲ್ಲಿ ಪಾಲ್ಗೊಂಡೆವು. ತದನಂತರ ಮರುತ್ವ ಮಲೆ ಬೆಟ್ಟದತ್ತ ಪ್ರಯಾಣ ಬೆಳೆಸಿದೆವು.
ಮರುತ್ವ ಮಲೆ ಬೆಟ್ಟ
ಸಮುದ್ರ ಮಟ್ಟದಿಂದ ಸುಮಾರು ಎರಡು ಕಿಲೋಮೀಟರ್ ಎತ್ತರದಲ್ಲಿರುವ, ಕಡಿದಾದ ಕಲ್ಲುಬಂಡೆಗಳಿಂದ ಆವೃತವಾಗಿತ್ತು ಮರುತ್ವಮಲೆ ಬೆಟ್ಟ. ಬ್ರಹ್ಮಶ್ರೀ ನಾರಾಯಣಗುರುಗಳು ಸುಮಾರು ಏಳು ವರ್ಷಗಳ ಕಾಲ ತಪಸ್ಸುಗೈದು ದಿವ್ಯ ಜ್ಞಾನವನ್ನು ಸಿದ್ಧಿಸಿದ ಜಾಗವಿದು. ಇದೇ ಮೊದಲ ಬಾರಿಗೆ ಬೆಟ್ಟ ಹತ್ತುವವರಲ್ಲಿ ಒಂದಿಷ್ಟು ಆತಂಕವಿದ್ದರೂ, ಹೊಸ ಹುರುಪು ಎದ್ದು ಕಾಣುತ್ತಿತ್ತು.
ಐವತ್ತ ನಾಲ್ಕು ಯಾತ್ರಾರ್ಥಿಗಳ ನಮ್ಮ ತಂಡ ಮರುತ್ವ ಮಲೆಯ ಬೆಟ್ಟವನ್ನು ಹತ್ತಲು ಆರಂಭಿಸಿತು. ದಾರಿ ಮಧ್ಯೆ ಬಳಲಿಕೆ ಉಂಟಾದಾಗ, ಒಂದಿಷ್ಟು ವಿಶ್ರಾಂತಿಯನ್ನು ತೆಗೆದುಕೊಂಡು ಮತ್ತೆ ಪಯಣವನ್ನು ಮುಂದುವರಿಸಿ, ಹರಸಾಹಸ ಪಟ್ಟು ಬೆಟ್ಟದ ತುದಿಯನ್ನು ಮುಟ್ಟಿದೆವು. ಬೆಟ್ಟದಲ್ಲಿರುವ ಕಡಿದಾದ ಗುಹೆಯೊಳಗೆ ಹೋಗಿ ಅವರ್ಣನೀಯ ಸಂತಸ ಪಡೆದೆವು. ನಂತರ ಹತ್ತಿರದಲ್ಲಿರುವ ಮಾರುತಿ ಗುಡಿಯಲ್ಲಿ ದರ್ಶನ ಪಡೆದು ಒಬ್ಬೊಬ್ಬರಾಗಿ ಬೆಟ್ಟ ಇಳಿಯಲು ಆರಂಭಿಸಿದೆವು.
ಸುಮಾರು ಒಂದು ಗಂಟೆಯ ನಂತರ ಬೆಟ್ಟವನ್ನು ಇಳಿದು ಬೆಟ್ಟದ ಕೆಳಗೆ ತಲುಪುವಾಗ ಎಲ್ಲರಲ್ಲೂ ಒಂದು ರೀತಿಯ ಅವ್ಯಕ್ತ ಖುಷಿಯ ಅನುಭವವಾದಂತಿತ್ತು.
ಮರುತ್ವ ಮಲೆಯ ಬೆಟ್ಟವನ್ನು ಹತ್ತಿ ಇಳಿದ ನಂತರ ಆಶ್ರಮದಲ್ಲಿ ಬೆಳಗ್ಗಿನ ಉಪಹಾರವನ್ನು ಸ್ವೀಕರಿಸಿ ಕನ್ಯಾಕುಮಾರಿಯಲ್ಲಿ ಬೋಟು ಯಾನಕ್ಕೆ ಸಿದ್ಧರಾದೆವು. ವಿಶಾಲವಾದ ಸಾಗರದ ಮಧ್ಯದಲ್ಲಿ ವಿಸ್ತಾರವಾದ ಬೋಟು ಬಹುಸಂಖ್ಯೆಯಲ್ಲಿ ಪ್ರವಾಸಿಗರನ್ನು ತುಂಬಿಸಿಕೊಂಡು ಪ್ರಶಾಂತ ಸಮುದ್ರದಲ್ಲಿ ಸಾಗುತ್ತಿದ್ದಾಗ ಹೇಳತೀರದ ಸಂತೋಷ ಉಂಟಾಗುತ್ತಿತ್ತು . ಬೋಟಿನಿಂದ ಇಳಿದು ಸಮುದ್ರ ಮಧ್ಯದಲ್ಲಿರುವ ಪಾರ್ವತಿ ದೇವಿಯು ಒಂಟಿ ಕಾಲಿನಲ್ಲಿ ಈಶ್ವರನ ಒಲಿಸಲು ತಪಸ್ಸುಗೈದ ಸ್ಥಳವನ್ನು ವೀಕ್ಷಿಸಿದೆವು.
ಜಗತ್ತು ಕಂಡ ಮಹಾನ್ ಸಂತ ಸ್ವಾಮಿ ವಿವೇಕಾನಂದರ ಏಕಾಶಿಲಾ ಮೂರ್ತಿಯ ದರ್ಶನ ಪಡೆದೆವು. ಸ್ವಾಮಿ ವಿವೇಕಾನಂದರ ಧ್ಯಾನ ಮಂದಿರದಲ್ಲಿ ಸ್ವಲ್ಪ ಹೊತ್ತು ಧ್ಯಾನಿಸಿ ನಂತರ ವಿಶಾಲ ಸಾಗರದ ರುದ್ರ ರಮಣೀಯ ದೃಶ್ಯವನ್ನು ಕಣ್ತುಂಬಿಸಿಕೊಂಡು, ದೂರದಲ್ಲಿದ್ದ ತಮಿಳುನಾಡಿನ ಸರ್ವಜ್ಞನೆಂದು ಪ್ರಸಿದ್ಧರಾಗಿದ್ದ ಕವಿ ತಿರುವಳ್ಳುವರ್ ಪ್ರತಿಮೆಯನ್ನು ನೋಡಿ ಆನಂದಿಸಿದೆವು. ಎಲ್ಲರೂ ಮರಳಿ ಬೋಟಿನಲ್ಲಿ ಯಾನ ಆರಂಭಿಸಿ ಬೋಟಿನಿಂದ ಇಳಿದು ದಣಿವನ್ನು ನಿವಾರಿಸಿಕೊಂಡು ಕೆಲವು ಬಂಧುಗಳು ಸಂತೆಯಲ್ಲಿ ವಸ್ತುಗಳನ್ನು ಖರೀದಿಸಲು ಹೊರಟರೆ ಮತ್ತೆ ಕೆಲವು ಬಂಧುಗಳು ಮೂರು ಸಮುದ್ರಗಳು ಒಂದೆಡೆ ಸೇರುವ ತ್ರಿವೇಣಿ ಸಂಗಮ ಹಾಗು ಗಾಂಧೀಜಿಯವರ ಸ್ಮಾರಕವನ್ನು ವೀಕ್ಷಿಸಲು ಹೊರಟೆವು.
ತ್ರಿವೇಣಿ ಸಂಗಮದ ವೀಕ್ಷಣೆಯ ನಂತರ ಮತ್ತೆ ಆಶ್ರಮಕ್ಕೆ ಹಿಂತಿರುಗಿ ಮಧ್ಯಾಹ್ನದ ಸಹಭೋಜನವನ್ನು ಸ್ವೀಕರಿಸಿದೆವು. ಮಧ್ಯಾಹ್ನದ ಭೋಜನದ ನಂತರ ಶಿವಗಿರಿ ಯಾತ್ರೆಯ ಕೊನೆಯ ಕ್ಷೇತ್ರ ದರ್ಶನ ತಿರುವನಂತಪುರದ ಅನಂತ ಪದ್ಮನಾಭ ದೇಗುಲ ದರ್ಶನಕ್ಕೆ ತೆರಳಿದೆವು. ಸುಮಾರು ಮೂರು ಗಂಟೆಗಳ ಪ್ರಯಾಣದ ನಂತರ ತಿರುವನಂತಪುರದ ಅನಂತ ಪದ್ಮನಾಭ ದೇವಸ್ಥಾನಕ್ಕೆ ತಲುಪಿ ಎಲ್ಲರೂ ಭಕ್ತಿಭಾವದಿಂದ ಸಾಲಾಗಿ ನಿಂತು ದೇವರ ದರುಶನ ಪಡೆದೆವು. ನಂತರ ಮರಳಿ ಗೂಡಿಗೆ ಪಯಣ ಬೆಳೆಸಲು ತಿರುವನಂತಪುರದ ರೈಲು ನಿಲ್ದಾಣಕ್ಕೆ ಬಂದು ತಲುಪಿದೆವು.
ಹೀಗೆ ಎರಡು ದಿನಗಳ ಶಿವಗಿರಿ ಯಾತ್ರೆ ಕೇವಲ ಯಾತ್ರೆಯಾಗಿರದೆ ಅರಿವಿನ ಯಾತ್ರೆಯಾಗಿ, ಯುವವಾಹಿನಿಯ ಹಲವು ಘಟಕದ ಸದಸ್ಯರೆಲ್ಲರನ್ನೂ ಒಂದೇ ಸೂರಿನಡಿ ಸೇರಿಸಿ, ಒಂದೇ ಕುಟುಂಬದ ಸದಸ್ಯರಂತೆ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಬಾಂಧವ್ಯವನ್ನು ಬೆಸೆದ ಯಾತ್ರೆಯಾಗಿ ಸರ್ವರ ಸಹಕಾರದಿಂದ ಯಶಸ್ವಿಯಾಗಿ ಸಂಪನ್ನಗೊಂಡಿತು.