ದಿನಾಂಕ 20.08.2019 ರಂದು ಯುವವಾಹಿನಿ ಸಭಾಂಗಣ ದಲ್ಲಿ ನಮ್ಮ ಘಟಕದಿಂದ ಕರ್ನಾಟಕ ರಾಜ್ಯದ ಪ್ರಸಿದ್ಧ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ರವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. 20.08.1815 ರಂದು ಜನಿಸಿ ಮೈಸೂರು ಮಹಾರಾಜರ ಆಸ್ಥಾನದಲ್ಲಿ ಅಧಿಕಾರಿಯಾಗಿ, ನಿಜಲಿಂಗಪ್ಪನವರ ಸಂಪುಟದಲ್ಲಿ ಸಚಿವರಾಗಿ, ಸಿನಿಮಾ ನಟನಾಗಿ, ಎಂಟು ವರ್ಷಗಳ ತನ್ನ ಕಾಲಾವಧಿಯಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೆ ತಂದಿರುವ ಕರ್ನಾಟಕದ ಪ್ರಸಿದ್ಧ ಮುಖ್ಯಮಂತ್ರಿಯಾಗಿರುವ ದೇವರಾಜ್ ಅರಸು ರವರ ಭಾವಚಿತ್ರಕ್ಕೆ ಘಟಕದ ಮಾಜಿ ಸಲಹೆಗಾರರಾದ ಶ್ರೀಯುತ ಪರಮೇಶ್ವರ ಪೂಜಾರಿಯವರು ಹಾರ ಹಾಕಿ ಪುಷ್ಪ ಸಮರ್ಪಿಸುವುದರ ಮೂಲಕ ದೇವರಾಜ ಅರಸು ಜನ್ಮ ದಿನಾಚರಣೆ ಆಚರಿಸಲಾಯಿತು. ಉಳುವವನೇ ಹೊಲದೊಡೆಯ, ದಕ್ಷಿಣ ಕನ್ನಡದಲ್ಲಿ ಬಿಲ್ಲವ ಜನಾಂಗಕ್ಕೆ ಸಹಕಾರ, ಮಲಹೊರುವ ಪದ್ಧತಿ ನಿರ್ಮೂಲನೆ, ಜೀತದಾಳು ಪದ್ಧತಿ ನಿರ್ಮೂಲನೆ, ವ್ರದ್ದಾಪ್ಯವೇತನ, ಒಂದು ಮನೆ ಒಂದು ದೀಪ, ಮೀಸಲಾತಿ ಯೋಜನೆ ಹೀಗೆ ಸುಮಾರು 150ಕ್ಕೂ ಅಧಿಕ ಯೋಜನೆಗಳನ್ನು ಜಾರಿಗೆ ತಂದು ದೇವರಾಜ್ ಅರಸು ಯುಗ ಎಂದು ಪ್ರಸಿದ್ಧರಾಗಿರುವ ದೇವರಾಜ ಅರಸುರವರು ತನ್ನ ಕೊನೆಯ ಜೀವಿತದ ಅವಧಿಯಲ್ಲಿ ತನ್ನ ಹೊಲದಲ್ಲಿ ಕೃಷಿಕನಾಗಿ ಜೀವಿಸುತ್ತಾ ಎಲ್ಲರಿಗೂ ಮಾದರಿಯಾಗಿದ್ದರು ಎಂದು ಪರಮೇಶ್ವರ ಪೂಜಾರಿಯವರು ತಿಳಿಸಿದರು.ಮಾಜಿ ಅಧ್ಯಕ್ಷರಾದ ಸಾಧು ಪೂಜಾರಿಯವರು ಶ್ರೀಗುರು ಚಿಂತನ-ಮಂಥನ ಕಾರ್ಯಕ್ರಮವನ್ನು ಮುಂದುವರಿಸುತ್ತಾ ಜಾತಿಭೇದ ವರ್ಣಬೇದಗಳ ಬಗ್ಗೆ ಗುರುಗಳ ವಿಚಾರಧಾರೆಯನ್ನು ಪ್ರಸ್ತುತಪಡಿಸಿದರು. ಬೃಹದಾಕಾರದ ಮರದಲ್ಲಿರುವ ವಿವಿಧ ಆಕಾರಗಳ ಎಲೆಗಳ ರಸವನ್ನು ಹಿಂಡಿದರೆ ಬರುವ ರಸವೂ ಹೇಗೆ ಒಂದೇ ಬಣ್ಣದ್ದಾಗಿರುತ್ತದೋ, ಹಾಗೆಯೇ ಜಗತ್ತಿನಲ್ಲಿರುವ ಎಲ್ಲಾ ಪಂಗಡಗಳು ಒಂದೇ ಜಾತಿ ಎಂದು ನಾರಾಯಣ ಗುರುಗಳು ಮಹಾತ್ಮ ಗಾಂಧೀಜಿಯವರಿಗೆ ಮನವರಿಕೆ ಮಾಡಿದ್ದನ್ನು ನೆನಪಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಆರ್. ಲಕ್ಷ್ಮೀ ನಾರಾಯಣ ರವರು ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷರಾದ ನವೀನ್ ಚಂದ್ರ, ಉಪಾಧ್ಯಕ್ಷ ಚಂದ್ರಶೇಖರ್ ಕರ್ಕೇರ, ಸಮಾಜ ಸೇವಾ ನಿರ್ಧೇಶಕರಾದ ಯೋಗೀಶ್ ಕುಮಾರ್ ಡೆಂಟಲ್ ಮತ್ತು ಸದಸ್ಯರು ಪಾಲ್ಗೊಂಡಿದ್ದರು. ಕೊನೆಯಲ್ಲಿ ಕಾರ್ಯದರ್ಶಿ ಗಣೇಶ್ ವಿ ಕೋಡಿಕಲ್ ರವರು ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು.