“ಓಂ ನಮೋಃ ನಾರಾಯಣ ಪರಮ ಗುರುವೇ ನಮಃ”.
ಬ್ರಹ್ಮಶ್ರೀ ನಾರಾಯಣ ಗುರುಗಳ ಈ ನಾಮ ಸ್ಮರಣೆ ಮುಗಿಲು ಮುಟ್ಟುವಂತಿದ್ದುದು ಶಿವಗಿರಿಯ ಮಹಾತೀರ್ಥಾಟನಾ ಉತ್ಸವದಲ್ಲಿ.
ಬ್ರಹ್ಮಶ್ರೀ ನಾರಾಯಣ ಗುರುಗಳ ಮಹಾಸಮಾಧಿಯ ಪವಿತ್ರ ಭೂಮಿ ವರ್ಕಳದ ಶಿವಗಿರಿಯ ವೈಭವದ ದೃಶ್ಯ ಕಣ್ಮನ ಸೆಳೆಯುವುದು, ಭಕ್ತಸಾಗರವೇ ಹರಿದುಬರುವ ಶಿವಗಿರಿಯ ತಿರ್ಥಾಟನಾ ಸಂದರ್ಭದಲ್ಲಿ.
ಇದಕ್ಕೆ ಸಾಕ್ಷೀಭೂತವಾಗಿದ್ದು ಇತ್ತೀಚೆಗೆ ನಡೆದ 84 ನೇ ಶಿವಗಿರಿ ತಿರ್ಥಾಟನೆಯಲ್ಲಿ ಪಾಲ್ಗೊಂಡ ಮಂಗಳೂರು ಯುವವಾಹಿನಿ ಘಟಕದ ತಂಡ. ಹೌದು, ಸೇವಾ ಮನೋಭಾವನೆಯ ಮನಸಂಕಲ್ಪದಿಂದ ಹಾಗೂ ಶಿವಗಿರಿಯ ತೀರ್ಥಾಟನಾ ಉತ್ಸವವನ್ನು ನೋಡಿ ಕಣ್ತುಂಬಿಕೊಳ್ಳಬೇಕೆಂಬ ಮಹದಾಸೆಯಿಂದ ಡಿಸೆಂಬರ್ 30, 31 ಹಾಗೂ ಜನವರಿ 1 ರಂದು ನಡೆದ ಶಿವಗಿರಿಯ 84 ನೇ ತೀರ್ಥಾಟನೆಗೆ ಯುವವಾಹಿನಿ ಮಂಗಳೂರು ಘಟಕದಿಂದ 13 ಜನರನ್ನೊಳಗೊಂಡ ತಂಡ ಹೊರಟು ನಿಂತಿತು. ಘಟಕದ ಈ ಸಾಲಿನ ನಾರಾಯಣಗುರು ತತ್ವ ಪ್ರಚಾರ ನಿರ್ದೇಶಕ ಹಾಗೂ ನಮ್ಮ ಶಿವಗಿರಿ ಯಾತ್ರೆಯ ತಂಡದ ಉಪಾಧ್ಯಕ್ಷರು ಮಾರ್ಗದರ್ಶಕರಾದ ರಾಮಚಂದ್ರ ದೇರೆಬೈಲ್‌ರವರು ಹಾಗೂ ನಿಕಟಪೂರ್ವ ಅಧ್ಯಕ್ಷರು ಮತ್ತು ತಂಡದ ಸಂಚಾಲಕ ಹರೀಶ್ ಕೆ. ಪೂಜಾರಿಯವರ ನೇತೃತ್ವದಲ್ಲಿ ಡಿಸೆಂಬರ್ 29 ರಂದು ದೇವರನಾಡು ಕೇರಳದ ವರ್ಕಳದೆಡೆಗೆ ಪ್ರಯಾಣ ಬೆಳೆಸಿ ಶಿವಗಿರಿ ನೆಲದಲ್ಲಿ ಅದ್ದೂರಿಯಾಗಿ ನಡೆದ 3 ದಿನಗಳ ಮಹಾತೀರ್ಥಾಟನಾ ಉತ್ಸವದಲ್ಲಿ ಪಾಲ್ಗೊಂಡು ಭಾವಪರವಶರಾದೆವು.
ಇಡೀ ವರ್ಕಳ ಪರಿಸರ ಎಲ್ಲೆಲ್ಲೂ ತ್ಯಾಗ ಹಾಗೂ ಪರಿಶುದ್ಧತೆಯ ಸಂಕೇತದ ಹಳದಿವರ್ಣಭರಿತ ಅಲಂಕಾರದಿಂದ ಕಂಗೊಳಿಸಿ ಭಕ್ತ ವೃಂದವನ್ನು ಶಿವಗಿರಿ ಮಣ್ಣಿಗೆ ಕೈ ಬೀಸಿ ಸ್ವಾಗತಿಸುವಂತಿತ್ತು. ಡಿಸೆಂಬರ್ 30 ರಿಂದ ಮೊದಲ್ಗೊಂಡ ಉತ್ಸವಕ್ಕೆ ಸ್ವತಹ ಕೇರಳ ಸರಕಾರದ ಅನೇಕ ಸಚಿವರನ್ನೊಳಗೊಂಡಂತೆ ಗೌರವಾನ್ವಿತ ಮುಖ್ಯಮಂತ್ರಿಗಳೇ ಬಂದು ಚಾಲನೆ ನೀಡಿ, ಕೆಳ, ಶೋಷಿತ ವರ್ಗದವರ ಏಳ್ಗೆಗಾಗಿನ ನಾರಾಯಣ ಗುರುಗಳ ತ್ಯಾಗ ಹಾಗೂ ತತ್ವಾದರ್ಶಗಳ ಪ್ರಸ್ತುತತೆಯನ್ನು ನೆರೆದ ಸಹಸ್ರಾರು ಜನರಿಗೆ ಒತ್ತಿಹೇಳಿದರು. ಹೀಗೆ ಚಾಲನೆ ಪಡೆದ ಪ್ರಧಾನ ವೇದಿಕೆಯಲ್ಲಿ ಮನುಕುಲದ ಭೌತಿಕ ಅಭಿವೃದ್ದಿಗೆ ನಾರಾಯಣ ಗುರುಗಳ ದೂರದರ್ಶಿತ್ವದ 8 ವಿಚಾರಗಳಾದ- ವಿದ್ಯಾಭ್ಯಾಸ, ಈಶ್ವರಭಕ್ತಿ, ಸಂಘಟನೆ, ಕೃಷಿ, ಕೈಗಾರಿಕೆ, ಉದ್ಯೋಗ, ಮಾಹಿತಿ ತಂತ್ರಜ್ಞಾನ, ಶುಚಿತ್ವ ಇವುಗಳ ಕುರಿತಂತೆ ವಿಷಯ ಪರಿಣತರಿಂದ ಸುದೀರ್ಘ ಚರ್ಚಾಗೋಷ್ಠಿಗಳು 3 ದಿನಗಳ ಕಾಲ ಅವಿರತವಾಗಿ ನಡೆದವು. ವಿಶೇಷವೆಂದರೆ ಪ್ರತಿಯೊಂದು ಗೋಷ್ಠಿಗಳಲ್ಲೂ ಸಹಸ್ರಾರು ಸಂಖ್ಯೆಯಲ್ಲಿ ಜನಸಾಗರದ ಉಪಸ್ಥಿತಿ ಹಾಗೂ ಶ್ರದ್ಧೆಯಿಂದ ಆಲಿಸುವಿಕೆಯನ್ನು ಕಂಡು ನಾವು ಬೆರಗಾಗಿದ್ದಂತು ಸತ್ಯ. ಹಗಲುಹೊತ್ತು ಚರ್ಚಾಗೋಷ್ಟಿಗಳಿಗೆ ಸೀಮಿತವಾದರೆ, ಸಂಜೆಯಿಂದ ನಮ್ಮ ಸಂಸ್ಕೃತಿಯ ಸೊಗಡಾದ-ಯಕ್ಷಗಾನ, ಜನಪದ ಕಲೆ, ಸಾಮಾಜಿಕ ನಾಟಕ ಸೇರಿದಂತೆ ಅನೇಕ ಮನರಂಜನಾ ಕಾರ್ಯಕ್ರಮಗಳು ನೆರೆದವರಿಗೆ ರಸದೌತಣ ವನ್ನೀಡಿದವು. ದಿನದ 24 ಘಂಟೆಯೂ ಒಂದಾದರೊಂದರಂತೆ ಕಾರ್ಯ ಕ್ರಮಕ್ಕೆ ವೇದಿಕೆ ಅಣಿಯಾಗುತ್ತಿದ್ದರೆ, ಇತ್ತ ನಾರಾಯಣ ಗುರು ಭಕ್ತವೃಂದದ ಮಹಾಸಮಾಗಮ ಎಂಬಂತೆ ಇಡೀ ಶಿವಗಿರಿ ಪ್ರದೇಶ ಜನಜಂಗುಳಿಯಿಂದ ತುಂಬಿ ತುಳುಕಿಹೋಗಿತ್ತು. ಮಂಗಳೂರು ವಿಶ್ವವಿದ್ಯಾನಿಲಯದ ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕರು, ಆಕಾಶವಾಣಿಯ ನಿವೃತ್ತ ಉದ್ಘೋಷಕರಾದ ಮುದ್ದು ಮೂಡುಬೆಳ್ಳೆಯವರು ಭಾಗವಹಿಸಿ ಕರ್ನಾಟಕದಲ್ಲಿ ನಾರಾಯಣ ಗುರುಗಳ ಸಂದೇಶ ಅನುಷ್ಠಾನದ ಕುರಿತು ಗೋಷ್ಠಿಯನ್ನು ಮಂಡಿಸಿರುವಂತಹದ್ದು ನಮಗೆಲ್ಲರಿಗೂ ಹೆಮ್ಮೆಯೇ ಸರಿ. ಕರ್ನಾಟಕದ ಇತಿಹಾಸದಲ್ಲೇ ಮೊದಲೆನ್ನುವಂತೆ ರಾಜ್ಯದವರನ್ನು ಹೊರತುಪಡಿಸಿ ನೆರೆಯ ರಾಜ್ಯದಲ್ಲಿ ಜನ್ಮತಾಳಿದ ಮಹಾನ್ ಸಂತರೊಬ್ಬರ ದಿನಾಚರಣೆಯನ್ನು ಸರಕಾರದ ಮಟ್ಟದಲ್ಲಿ ಆಚರಿಸಲಾಗುತ್ತಿರುವುದಾದರೆ ಅದು ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಎಂದಾಗ ವೇದಿಕೆಯಲ್ಲಿದ್ದ ಗಣ್ಯರು, ಮಂತ್ರಿಗಳು ಸೇರಿದಂತೆ ನೆರೆದ ಸಭಿಕರಿಂದ ಅಭಿನಂದನೆಯ ಚಪ್ಪಾಳೆ ಮೊಳಗಿತು.
ಡಿಸೆಂಬರ್ರ 31 ಮುಂಜಾನೆ ಸುಮಾರು 3 ಗಂಟೆಯಿಂದಲೇ ಜನಸಮೂಹ ಸಂಪೂರ್ಣ ಪಿತಾಂಬರಹಳದಿ ವಸ್ತ್ರಧಾರಿಗಳಾಗಿ ಗುರುವರ್ಯರ ಭೌತಿಕ ಶರೀರವನ್ನಿಟ್ಟ ಮಹಾಸಮಾಧಿಯೆಡೆಗೆ ಹರಿದುಬರಲು ಪ್ರಾರಂಭವಾಯಿತು. ಸರಿಯಾಗಿ 5 ಗಂಟೆಗೆ ಗುರುವರ್ಯರಿಗೆ ಮಹಾಪೂಜೆಯ ತರುವಾಯ 84ನೇ ತೀರ್ಥಾಟನಾ ಮೆರವಣಿಗೆಗೆ ಚಾಲನೆ ದೊರೆಯಿತು. ಲೋಕಾದ್ಯಂತ ಹರಡಿರುವ ನಾರಾಯಣ ಗುರು ಸಂಘಟನೆಗಳ ಸದಸ್ಯರುಗಳು ಗುರುಗಳು ಬೋಧಿಸಿದಂತ ಪಂಚಧರ್ಮ-ಅಹಿಂಸಾ, ಸತ್ಯ, ಆಸ್ತೇಯ, ಅವ್ಯಭಿಚಾರ, ಮದ್ಯವರ್ಜನೆ, ಪಂಚಶುದ್ದಿ-ಇಂದ್ರ, ವಾಕ್, ಶರೀರ, ಆಹಾರ, ಮನಃಶುದ್ದಿಯ ಸಂಕಲ್ಪಹೊಂದಿ ಹತ್ತು ದಿನಗಳ ವ್ರತವನ್ನು ಕೈಗೊಂಡು ಪಿತಾಂಬರಹಳದಿ ವಸ್ತ್ರಧಾರಿಗಳಾಗಿ ಇದರಲ್ಲಿ ಭಾಗವಹಿಸುವುದು ವಿಶೇಷತೆ. ಶ್ರೀ ನಾರಾಯಣಗುರು ಮೆಡಿಕಲ್ ಕಾಲೇಜಿನ ಸುಮಾರು ಐನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹಾಗೂ ಅವರ ಶಿಕ್ಷಕರನ್ನೊಳಗೊಂಡ ತಂಡ ಅಂಗೈಯಲ್ಲಿ ಕಳಶವನ್ನಿಡಿದು ಮೆರವಣಿಗೆಯ ಮುಂಚೂಣಿಯಲ್ಲಿದ್ದು, ತರುವಾಯ ನಾರಾಯಣ ಗುರುಗಳನ್ನು ಮಾದವಾನಂದ ಸ್ವಾಮೀಜಿಗಳು ಹಾಗೂ ಇತರ ಶಿಷ್ಯರು ಸಂಜೆಯ ವೇಳೆಗೆ ಧ್ಯಾನ ಹಾಗೂ ವಾಯುವಿಹಾರಕ್ಕಾಗಿ ಕಡಲ ತಡಿಗೆ ಕರೆದುಕೊಂಡು ಹೋಗಲು ಬಳಸುತ್ತಿದ್ದ ಜರ್ಮನಿಯಿಂದ ತರಿಸಿದ್ದರೆನ್ನಲಾ ಗುವ ಅಂದಿನ ಕಾಲದ ಸುಂದರ ರಚನೆಯ ರಿಕ್ಷಾ ಮಂಟಪದಲ್ಲಿ ಗುರುಗಳ ವಿಗ್ರಹವನ್ನಿರಿಸಿ ಅಲಂಕರಿಸಿರುವುದು ಶೋಭಿಸುತಿತ್ತು. ಆ ಬಳಿಕ ನಾನಾ ಭಾಗಗಳಲ್ಲಿರುವ ನಾರಾಯಣ ಗುರುಸಂಘಟನೆಯ ತಂಡಗಳೊಂದಿಗೆ ಜೊತೆಗೂಡಿದ ಗುರುಗಳ ಜನ್ಮಸ್ಥಳ ಚೆಂಬಳಂತಿಯ ತೆಂಗಿನ ಮಡಲಿನ ಮನೆಯ ಮಾದರಿ, ಗುರುಗಳ ಸಂದೇಶಗಳನ್ನೊಳಗೊಂಡ ಅನೇಕ ದೃಶ್ಯರೂಪಕಗಳು, ಸೇರಿದಂತೆ ಸಹಸ್ರಾರು ಸಂಖ್ಯೆಯ ಭಕ್ತರು ಗುರುಗಳ ನಾಮಸ್ಮರಣೆಯ ಧ್ಯಾನದೊಂದಿಗೆ ಶಿಸ್ತುಬದ್ಧವಾಗಿ ಕಾಲ್ನಡಿಗೆಯಲ್ಲಿಯೇ ವರ್ಕಳದುದ್ದಕ್ಕೂ ಸುಮಾರು ನಾಲ್ಕು ಕೀ.ಮಿ. ಸಾಗಿಬಂದಿದ್ದು, ಮಾರ್ಗದುದ್ದಕ್ಕೂ ಅಲ್ಲಲ್ಲಿ ಗುರುಗಳ ಭಾವಚಿತ್ರವನ್ನಲಂಕರಿಸಿ, ಅಂಗಡಿ ಮುಂಗಟ್ಟುಗಳನ್ನು ಮುಂಜಾನೆಯೇ ತೆರೆದು ಪೂಜಿಸುತ್ತಿದ್ದುದ್ದು, ಪಾನೀಯ, ಹಣ್ಣು ಹಂಪಲುಗಳನ್ನು ಸ್ವಯಂ ಪ್ರೇರಿತವಾಗಿ ವಿತರಿಸುತ್ತಿದ್ದುದು ಕಾಣಸಿಗುತ್ತಿತ್ತು. ಜಾತಿ, ಮತ ಬೇಧವಿಲ್ಲದೆ ರಸ್ತೆಯ ಇಕ್ಕೆಲಗಳಲ್ಲಿ ಜನರು ಗುರುವರ್ಯರ ವಿಗ್ರಹವನ್ನಿರಿಸಿದ ರಥಕ್ಕೆ ನಮಿಸುತ್ತಿರುದನ್ನು ಕಂಡ ನಮಗೆ ಗುರುಗಳ ಸಂದೇಶಪಾಲನೆಯ ಅರಿವಾಯಿತು. ಹೀಗೆ ಸಾಗಿಬಂದಂತಹ ಶೋಭಾಯಾತ್ರೆಯ ಮೆರವಣಿಗೆ ಪುನಃ ಮಹಾಸಮಾದಿಯಲ್ಲಿ ಪೂಜೆಯೊಂದಿಗೆ ಸಮಾಪನಗೊಂಡಾಗ ನಮ್ಮಲ್ಲಿ ಧನ್ಯತೆಯ ಭಾವಮೂಡಿತು.
ಡಿಸೆಂಬರ್ 31 ರ ರಾತ್ರಿ ಹನ್ನೆರಡು ಘಂಟೆಗೆ ಮಹಾಸಮಾದಿ ಸ್ಥಳದಲ್ಲಿ ಅಸಂಖ್ಯಾತ ಭಕ್ತವೃಂದ ಸೇರಿದ್ದು ಪೂಜೆಯಲ್ಲಿ ಪಾಲ್ಗೊಂಡು ಹೊಸವರ್ಷಾಚರಣೆಗೆ ಅಡಿ ಇಟ್ಟಿದ್ದು ಸಂಭ್ರಮವೆನಿಸಿತು. ನಾನೂ ಸೇರಿದಂತೆ ನಮ್ಮ ತಂಡದ ಅನೇಕರಿಗೆ ಇದುವರೆಗಿನ ನಮ್ಮ ಕಾಲಚಕ್ರದಲ್ಲೇ ಪ್ರಥಮ ಬಾರಿಗೆ ಎನ್ನುವಂತೆ ಹೊಸ ವರುಷದ ಪ್ರಾರಂಭದ ಗಳಿಗೆಯ ಕ್ಷಣಗಳನ್ನು ಆನುಭವಿಸಲು ಶ್ರದ್ಧಾಕೇಂದ್ರದಲ್ಲಿ ಅವಕಾಶ ಮಿಸಲಾಗಿದ್ದುದು ಅತೀವ ಸಂತಸ, ನವೊಲ್ಲಾಸದ ಮುದನೀಡಿತು.
ತೀರ್ಥಾಟನೆಯ ಹಿನ್ನೆಲೆಯ ಬಗ್ಗೆ ಶಿವಗಿರಿ ಮಠದ ಪೂಜ್ಯ ಶ್ರೀ ಸತ್ಯಾನಂದ ತೀರ್ಥ ಸ್ವಾಮಿಗಳನ್ನು ಸಂದರ್ಶಿಸಿದಾಗ ಅವರು ಹೇಳುವಂತೆ ಅದು 1928 ರ ಸಂದರ್ಭ, ನಾರಾಯಣ ಗುರುಗಳ ಭಕ್ತ ವೃಂದ ಪಟ್ಟನತಿಟ್ಟ ಜಿಲ್ಲೆಯ ಇಲಮಂತಿ ಗ್ರಾಮ ಮಾಲೂರು ಭವನದ, ಗುರುಗಳಿಂದ ಸಾರಸ ಕವಿ ಬಿರುದಾಂಕಿತ ಪದ್ಮನಾಭ ಪಣಿಕ್ಕರ್‌ರವರ ಮನೆಯಲ್ಲಿ ಸಮಾಗಮಗೊಂಡು ಇತರ ಧರ್ಮ ಹಾಗೂ ವರ್ಗದವರು ತಮ್ಮ ಶ್ರದ್ಧಾಕೇಂದ್ರಗಳಿಗೆ ಹೋಗುವಂತೆ ಕೆಳವರ್ಗದವರಾದ ತಮಗೂ ಅವಕಾಶಕ್ಕಾಗಿ ಇಚ್ಛೆಯನ್ನು ವ್ಯಕ್ತಪಡಿಸಿದಾಗ, ಭಕ್ತರ ಅಭಿಪ್ರಾಯದಂತೆ ಗುರುಗಳು ಸಮ್ಮತಿಸಿ ಪಂಚಧರ್ಮ, ಪಂಚಶುದ್ದಿಗಳಾಗಿ ೧೦ದಿನದ ವ್ರತವನ್ನು ಕೈಗೊಂಡು ತ್ಯಾಗ, ಪರಿಶುದ್ಧತೆಯ ಸಂಕೇತವಾದ ಪಿತಾಂಬರಹಳದಿ ವಸ್ತ್ರಧಾರಿಗಳಾಗಿ ಶ್ರೀ ಶಿವಗಿರಿ ಕ್ಷೇತ್ರಕ್ಕೆ ತಿರ್ಥಾಟನೆ ಕೈಗೊಳ್ಳುವ ಬಗ್ಗೆ, ಮನುಕುಲದ ಧಾರ್ಮಿಕತೆಯ ಅಭಿವೃದ್ದಿಗೆ ಮಂದಿರಗಳಿರುವಂತೆ ಭೌತಿಕ ಅಭಿವೃದ್ದಿಗೆ ಅಗತ್ಯವಾದ 8 ವಿಚಾರಗಳನ್ನು ತಿಳಿಸಿ, ಅದರ ಬಗ್ಗೆ ಅಲ್ಲಿ ಸಮಗ್ರ ಮನ್ವಂತರವಾಗಬೇಕೆನ್ನುವ ಬಗ್ಗೆ ಹಾಗೂ ವರ್ಷದ ಕೊನೆಯ ದಿನ ಅದಕ್ಕೆ ಸೂಕ್ತ ಕಾಲವೆಂದು ಗುರುಗಳು ತಿಳಿಸಿದರು. ಕಾರಣಾಂತರದಿಂದ ಪ್ರಥಮ ತಿರ್ಥಾಟನೆಗೆ 1928 ನೇ ಇಸವಿಯಲ್ಲಿ ಮುಂದಡಿಯಿಟ್ಟು ಅಂದು ಕೇವಲ 5 ಜನ ಶಿಷ್ಯವೃಂದ ಹಳದಿ ವಸ್ತ್ರದಾರಿಗಳಾಗಿ ಕಾಲ್ನಡಿಗೆಯಲ್ಲಿ ಶಿವಗಿರಿ ತೀರ್ಥಾಟನೆ ಕೈಗೊಂಡಾಗ ಮೇಲ್ವರ್ಗದವರಿಂದ ಅಪಹಾಸ್ಯ ಹಾಗೂ ತೀರಾ ಅವಮಾನವು ಎದುರಾಯಿತು.
ಆದರೆ ಇಂದು ಹಾಗಿಲ್ಲ ಶಿವಗಿರಿಯ ತೀರ್ಥಾಟನೆಗೆ ಲಕ್ಷೋಪಾದಿಯಲ್ಲಿ ಜಾತಿ, ಮತ, ಭೇದವಿಲ್ಲದೆ ಜನಸಾಗರವೇ ಹರಿದುಬರುವಂತ ಉತ್ಸವವಾಗಿ ರೂಪಗೊಂಡಿದೆ. ದುಬಾ, ಶ್ರೀಲಂಕಾ ಸೇರಿದಂತೆ ದೇಶವಿದೇಶಗಳಲ್ಲಿ ನೆಲೆಸಿರುವ ಹಲವಾರು ನಾರಾಯಣ ಗುರುಸಂಘಟನೆಯ ಸದಸ್ಯರುಗಳು ತೀರ್ಥಾಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದು ನಮ್ಮ ಗಮನಕ್ಕೆ ಬಂತು. ತಮ್ಮ ಸಂಕಷ್ಟಗಳ ನಿವಾರಣೆಗಾಗಿ ಹರಕೆ ಹೊತ್ತು ಅನೇಕ ಗುರುಭಕ್ತರು ಬಹುದೂರ ದೂರದ ಸ್ಥಳದಿಂದ ವ್ರತಧಾರಿಗಳಾಗಿ ಕಾಲ್ನಡಿಗೆಯಲ್ಲೇ ದಿನಗಟ್ಟಲೆ ಕ್ರಮಿಸಿಬಂದು ಶಿವಗಿರಿ ತೀರ್ಥಾಟನೆಗೆ ಆಗಮಿಸಿರುವುದನ್ನು ನೋಡಿದೆವು, ಹಲವಷ್ಟು ಭಕ್ತರು ಗುರುಗಳ ಅನುಗ್ರಹ ಪ್ರಾಪ್ತಿಗಾಗಿ ಒಂದಲ್ಲಾ ಒಂದು ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಬಂದಂತಹ ಭಕ್ತರಿಗೆ ಊಟೋಪಚಾರಕ್ಕೇನೂ ಕೊರತೆ ಇರಲಿಲ್ಲ. ಪೂಜ್ಯ ಶ್ರೀ ಸತ್ಯಾನಂದ ಸ್ವಾಮಿಗಳ ಅಣತಿಯಂತೆ ನಮ್ಮ ತಂಡ ಬಹಳ ಶ್ರದ್ಧೆ ಹಾಗೂ ನಿಷ್ಟೆಯಿಂದ ಅನ್ನಸಂತರ್ಪಣ ಸೇವೆಯಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿ ನಿರ್ವಹಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮಂಗಳೂರು, ಉಳಾಯಿಬೆಟ್ಟು ಪೆರ್ಮಂಕಿಯ ನಾರಾಯಣ ಗುರುಸಂಘಟನೆಯ ಸದಸ್ಯರು ಸಹ ಸೇವೆಯಲ್ಲಿ ಭಾಗಿಯಾಗಿದ್ದರು. ಇನ್ನು ಭಾಷೆಯ ವಿಷಯಕ್ಕೆ ಬಂದರೆ, ಕೇರಳ ಅಂದಮೇಲೆ ಕೇಳಬೇಕೆ, ಸೇರಿದಂತಹ ಬಹುತೇಕರು ಮಲಯಾಳಿ ಭಾಷಿಗರೇ ಆಗಿರುವುದರಿಂದ ಮಾತನಾಡಲು ತುಸು ತಡವರಿಸಬೇಕಾಗಿ, ಅವರಿವರಿಂದ ಕೇಳಿ ತಿಳಿದ ಕೆಲವೊಂದು ಪದಗಳು-ಅಂಗಡಪೊವಾ, ಇಂಗಡಪೊವಾ, ಚೋರಾಯ, ಕಾಫಿಕುಡ್ಚೊ, ವಾಂಗಾ ಪದಗಳ ನಮ್ಮ ಸಂವಹನದ ಉಚ್ಛಾರಣೆಯ ವ್ಯತ್ಯಾಸ ಹಾಗೂ ಅವನ್ನೇ ಪುನಃ ಪುನಹ ಬಳಕೆಯಿಂದ ನಗೆಪಾಟಲಿಗೀಡಾಗಿದ್ದು ಉಂಟು.
ನಮ್ಮೊಂದಿಗೆ ಜೊತೆಗಿದ್ದ ಮಂಗಳೂರಿನ ಜನಪ್ರಿಯ ಸುದ್ದಿ ವಾಹಿನಿಯ ಛಾಯಾಗ್ರಾಹಕರು ತೀರ್ಥಾಟನೆಯ ಸಂಪೂರ್ಣ ದೃಶ್ಯಾವಳಿಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿದು ತಮ್ಮ ವಾಹಿನಿಯ ಮುಖೇನ ಕರ್ನಾಟಕದ ಜನತೆಗೆ ಶಿವಗಿರಿ ಹಾಗೂ ತೀರ್ಥಾಟನೆಯ ಆಸ್ವಾದವನ್ನು ತಲುಪಿಸುವ ನಿಟ್ಟಿನಲ್ಲಿ ಭಾಗಿಯಾಗಿರುವುದು ನಿಜಕ್ಕೂ ಅಭಿನಂದನಾರ್ಹ.
ಒಟ್ಟಿನಲ್ಲಿ ಒಂದು ಅತ್ಯಪೂರ್ವ ಧಾರ್ಮಿಕ-ಸಾಮಾಜಿಕ ಕಾರ್ಯಕ್ರಮವಾದ ಶಿವಗಿರಿಯ ತೀರ್ಥಾಟನೆಯಲ್ಲಿ ಪಾಲ್ಗೊಳ್ಳುವ ಸೌಭಾಗ್ಯ ನಮ್ಮದಾಯಿತು. ಒಂದು ಬಗೆಯ ವಿಶೇಷ, ವಿಶಿಷ್ಟ ಅನುಭವಗಳ ನೆನಪಿನ ಪ್ರಸಾದದ ಗಂಟಿನೊಡನೆ ಮತ್ತೆ ನಮ್ಮ ನಿತ್ಯದ ಬದುಕಿನ, ದೈನಂದಿನ ಜೀವನದಲ್ಲಿ ತೊಡಗಿಸಿಕೊಳ್ಳುವರೇ ಮಂಗಳಾಪುರಂನತ್ತ ಪ್ರಯಾಣಿಸಿದೆವು. ನಾರಾಯಣ ಗುರುಗಳ ಸರ್ವ ಅನುಯಾಯಿಗಳಿಗೂ ಇಂತಹದ್ದೊಂದು ಸುಸಂದರ್ಭ ದೊರೆಯುವಂತಾಗಲಿ, ಗುರುಗಳು ಸರ್ವರನ್ನು ಹರಸಲಿ ಎಂಬ ಹಾರೈಕೆ ನನ್ನದು.
– ಮಹೇಂದ್ರ ಬಿಲ್ಲವ
HR &ADMIN, BANDO (INDIA) PVT. LTD., BANGALORE
Cell : 09901732482
Thank you