ಅಧ್ಯಯನ
ಪೀಠಿಕೆ: ಯಾವುದೆ ದೇಶದ ಸಂಪತ್ತು ನಿಷ್ಕರ್ಷೆಯಾಗುವುದು ಎರಡು ಮೂಲಗಳಿಂದ- ಒಂದು ಅಲ್ಲಿನ ನೈಸರ್ಗಿಕ ಸಂಪತ್ತಿನಿಂದ, ಎರಡು, ಆ ದೇಶದ ಮಾನವ ಸಂಪತ್ತಿನಿಂದ. ಮಾನವ ಸಂಪತ್ತು ಇತರೆಲ್ಲಾ ಸಂಪತ್ತಿಗಿಂತ ಶ್ರೇಷ್ಟವಾದುದು. ಆದರೆ, ಮಾನವ ಸಂಪತ್ತಿನ ಅಸಮರ್ಪಕ ಬೆಳವಣಿಗೆ ಇಡೀ ವ್ಯವಸ್ಥೆಯ ಮೇಲೆ ಎರಡೂ ನಿಟ್ಟಿನಲ್ಲಿ ಅಂದರೆ, ಗುಣಾತ್ಮಕವಾಗಿಯೂ, ಪರಿಮಾಣಾತ್ಮಕವಾಗಿಯೂ ಪ್ರಭಾವ ಬೀರುವುದು. ಆಹಾರ, ನೀರು, ಬಟ್ಟೆ, ನೆಲ, ವಸತಿ ಹಾಗೂ ಖನಿಜಗಳ ಕೊರತೆ ಉಂಟಾಗುವುದಲ್ಲದೆ, ಶಿಕ್ಷಣ, ಆರೋಗ್ಯ, ಹಾಗೂ ಸಂಪನ್ಮೂಲಗಳ ಮೇಲೆ ಪರಿಣಾಮ, ಅಲ್ಲದೆ ನಿರುದ್ಯೋಗ, ಬಡತನ ಹೆಚ್ಚಳವಾಗಿ ಸಾಮಾಜಿಕ ಅಸಮಾನತೆಯುಂಟಾಗುವುದು. ಮಾನವ ಸಂಪನ್ಮೂಲ ದೇಶದ ಆಸ್ತಿಯಾಗಬೇಕಾದರೆ, ಅಲ್ಲಿನ ಜನರು ಸುಶಿಕ್ಷಿತರು, ಆರೋಗ್ಯವಂತರು ಮತ್ತು ವರ್ಧಿಷ್ಣುವಾಗಿದ್ದಾಗ ಮಾತ್ರ ಸಾಧ್ಯವಾಗುತ್ತದೆ.
ಜಗತ್ತಿನಾದ್ಯಂತ ಜನಸಂಖ್ಯೆಯು, ನಿರೀಕ್ಷೆಗೂ ಮೀರಿ ಮತ್ತು ನಿಯಂತ್ರಣಕ್ಕೂ ಮೀರಿ ವೃದ್ಧಿಸುತ್ತಿರುವುದು ವಾಸ್ತವ. ಒಂದೆಡೆ ದೇಶದ ಜನಸಂಖ್ಯೆ ಹೆಚ್ಚಳದ ಸಮಸ್ಯೆಯಾದರೆ, ಇನ್ನೊಂದೆಡೆ ಕೆಲವು ಕ್ಷೇತ್ರಗಳು ಮಾನವ ಸಂಪನ್ಮೂಲಗಳ ಕೊರತೆ ಎದುರಿಸುತ್ತಿರುವುದು ಸೋಜಿಗದ ವಿಚಾರ. ಕ್ರಿ.ಸ. 1950 ರ ಹೊತ್ತಿಗೆ 2.52 ಬಿಲಿಯನ್ ಇದ್ದ ವಿಶ್ವದ ಜನಸಂಖ್ಯೆ 2010 ರ ಹೊತ್ತಿಗೆ 6.08 ಬಿಲಿಯನ್ ಆಗಿದ್ದು, 2030ಕ್ಕೆ 8.3 ಬಿಲಿಯನ್ ಆಗಲಿದೆ ಅಂದರೆ ಎಷ್ಟು ಪಟ್ಟು ಹೆಚ್ಚಳವಾಗಲಿದೆಯೆಂದು ಊಹಿಸಬಹುದು. ಸಮೀಕ್ಷೆಯಂತೆ ಅತೀ ಹೆಚ್ಚು ಜನಸಂಖ್ಯೆಯುಳ್ಳ ದೇಶಗಳೆಂದರೆ ಚೀನಾ, ಭಾರತ, ಅಮೇರಿಕ, ಇಂಡೋನೇಶ್ಯಾ, ಬ್ರೆಜಿಲ್, ಪಾಕಿಸ್ಥಾನ್, ಬಾಂಗ್ಲಾದೇಶ, ನೈಜಿರಿಯಾ, ಮುಂತಾದವು. ಭಾರತದ ಜನಸಂಖ್ಯೆ 2001 ರ ಹೊತ್ತಿಗೆ 1.03 ಬಿಲಿಯನ್ ಇದ್ದಿದ್ದು 2011ರಲ್ಲಿ 1.21 ಬಿಲಿಯನ್ ಆಗಿದ್ದು ಇದೇ ರೀತಿ ಮುಂದುವರಿದರೆ 2030 ಕ್ಕೆ ಭಾರತವು ಚೀನಾವನ್ನೂ ಹಿಮ್ಮೆಟ್ಟಿ ವಿಶ್ವದ ಅತೀ ಹೆಚ್ಚು ಜನಸಂಖ್ಯೆಯುಳ್ಳ ದೇಶವಾಗಲಿದೆಯೆಂದು ಪರಿಗಣಿಸಲಾಗಿದೆ. ಕೇವಲ 2.4 ಶೇಕಡ ಭೂಪ್ರದೇಶವನ್ನು ಹೊಂದಿದ ಭಾರತ, ಸುಮಾರು 17 ಶೇಕಡ ಜನಸಂಖ್ಯೆಯನ್ನು ಜಗತ್ತಿಗೆ ನೀಡುತ್ತಿದೆ ಎಂದರೆ, ಎಂತಹ ಅಸಮರ್ಪಕ ಕೊಡುಗೆಯಾಗಿದೆ! ಈ ಜನಸಂಖ್ಯೆಯಿಂದಾಗಿ, ಭಾರತವು ಅನೇಕ ಕ್ಷೇತ್ರಗಳಲ್ಲಿ ಅಸಮರ್ಪಕ ಬೆಳವಣಿಗೆಯನ್ನು ತೋರಿಸುತ್ತಿದೆ. ಉದಾಹರಣೆಗೆ ಶಿಕ್ಷಣ, ಆರೋಗ್ಯ, ಆಹಾರ, ಪೌಷ್ಟಿಕಾಂಶ, ಮೂಲಭೂತ ಸೌಕರ್ಯ ಮುಂತಾದ ಕ್ಷೇತ್ರಗಳಲ್ಲಿ, ಸ್ವಾತಂತ್ರ್ಯ ಲಭಿಸಿ 65 ವರ್ಷ ಕಳೆದರೂ ಕೊರತೆಗಳು ಮುಂದುವರಿಯುತ್ತಿವೆ.
ಅಲ್ಲದೆ, ಭಾರತದಲ್ಲಿ ಜನಿಸುವ ಮಕ್ಕಳ ಆರೋಗ್ಯ ಹಾಗೂ ಇತರ ವಿಚಾರಗಳತ್ತ ಗಮನ ಹರಿಸಿದರೆ, ಕೆಲವೊಂದು ಕುತೂಹಲಕಾರಿ ಹಾಗೂ ಕಳವಳಕಾರಿ ಅಂಶಗಳು ತಿಳಿದು ಬರುವುದು:
ಪ್ರತಿ ದಿನ ಭಾರತದಲ್ಲಿ 55000 ಶಿಶುಗಳು ಜನಿಸುವವು.
ಪ್ರತಿ 11 ಮಕ್ಕಳಲ್ಲಿ 1 ಮಗು 5 ವರ್ಷ ತಲುಪುವ ಮುಂಚೆ ಮರಣವನ್ನಪ್ಪುವುದು. ಅದರಲ್ಲಿಯೂ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಶೇಕಡ 50 ಸಾಯುವ ಪ್ರಮಾಣ ಹೆಚ್ಚು.
ಪ್ರತಿ ವರ್ಷ ದೇಶದಲ್ಲಿ 2.5 ಮಿಲಿಯ ಮಕ್ಕಳು ಸಾಯುವರಲ್ಲದೆ ಇವರಲ್ಲಿ ಅರ್ಧದಷ್ಟು ಮಕ್ಕಳು ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರಪ್ರದೇಶಗಳಲ್ಲೆ ಸಂಭವಿಸುವುದು.
ದೇಶದ ಸರಿಸುಮಾರು 50 ಶೇಕಡ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವರು.
ಮಕ್ಕಳ ಆರೋಗ್ಯ ನಿರ್ಧರಿಸುವ ಮಾನದಂಡ ಯಾವುದು? ಮುಖ್ಯವಾಗಿ, ಶಿಶು ಮರಣ ಪ್ರಮಾಣ (IMR). ನಮ್ಮ ದೇಶದಲ್ಲಿ ಹುಟ್ಟುವ ಒಂದು ಸಾವಿರ ಮಕ್ಕಳಲ್ಲಿ 54 ಮಕ್ಕಳು ಮೊದಲ ವರ್ಷದ ಹುಟ್ಟು ಹಬ್ಬವನ್ನು ಕಾಣುವುದಿಲ್ಲ. ಆದರಲ್ಲಿಯೂ ಗ್ರಾಮೀಣ ಪರಿಸರದಲ್ಲಿ ಈ ಶಿಶು ಮರಣ ದರ ಹೆಚ್ಚಾಗಿದ್ದು, ಇದು ಮಕ್ಕಳ ಜನನದ ನಡುವೆ ಎರಡು ವರ್ಷಕ್ಕಿಂತ ಅಂತರವಿದ್ದಾಗ ಇನ್ನಷ್ಟು ಹೆಚ್ಚಾಗುವುದೆಂದು ತಿಳಿದು ಬಂದಿದೆ.
ಮಕ್ಕಳ ಆರೋಗ್ಯ ಸೂಚ್ಯಂಕ(ಶೇಕಡವಾರು) 2005-06 | |||
ಸೂಚ್ಯಂಕ |
ಗ್ರಾಮೀಣ | ನಗರ |
ಒಟ್ಟು |
ಶಿಶು ಮರಣ ಪ್ರಮಾಣ |
62.0 |
42.0 |
57.0 |
ಒಟ್ಟು ಫಲವತ್ತತೆ ಪ್ರಮಾಣ |
2.98 |
2.07 | 2.68 |
ಭಾರತದ ಶಿಶು ಮರಣ ಪ್ರಮಾಣವನ್ನು ಇತರ ನೆರೆಯ ದೇಶದೊಂದಿಗೆ ಹೋಲಿಸಿ ನೋಡಿದಾಗ ಸ್ವಲ್ಪ ಸುಧಾರಿಕೆ ಕಂಡರೂ, ಈ ಕೆಳಗೆ ನೀಡಿರುವ ಮಾಹಿತಿಯನ್ನು ಅವಲೋಕಿಸಿದಾಗ, ಅಷ್ಟೇನು ಗಮನಾರ್ಹ ಬದಲಾವಣೆ ಕಾಣುವುದಿಲ್ಲ:
ಶಿಶು ಮರಣ ಪ್ರಮಾಣದಲ್ಲಿನ ಸುಧಾರಣೆ ಎರಡು ಅವಧಿಗೆ-1990 ಮತ್ತು 2007ಕ್ಕೆ |
||
ರಾಷ್ಟ್ರ |
ವರ್ಷ- 1990 (ಪ್ರತಿ 1000ಕ್ಕೆ) |
2007 (ಪ್ರತಿ 1000ಕ್ಕೆ) |
ಬಾಂಗ್ಲದೇಶ |
105 | 47 |
ಭಾರತ |
83 |
54 |
ಥಾಯ್‌ಲ್ಯಾಂಡ್ |
26 |
6 |
ಚೀನಾ |
36 |
19 |
ಶ್ರೀಲಂಕಾ | 26 |
17 |
ಈ ಎರಡು ಅವಧಿಯಲ್ಲಿ ಸ್ವಲ್ಪ ಸುಧಾರಣೆಯನ್ನು ಕಾಣಬಹುದಾದರೂ, ಇತರ ದೇಶಕ್ಕೆ ಹೋಲಿಸಿದರೆ ಭಾರತವು ಅಗ್ರ ಸ್ಥಾನದಲ್ಲಿದೆ. ಅದೇ ರೀತಿ, ಭಾರತವು ಮಕ್ಕಳ ಅಪೌಷ್ಟಿಕತೆಯಲ್ಲಿ ಕೂಡಾ ವಿಶ್ವದಲ್ಲಿ ಎರಡನೇಯ ಸ್ಥಾನದಲ್ಲಿದೆ. ಅಲ್ಲದೆ, 3 ವರ್ಷಕ್ಕಿಂತ ಕೆಳಗಿನವರಲ್ಲಿ ಸುಮಾರು 46 ಶೇಕಡ ಕಡಿಮೆ ತೂಕದವರಿದ್ದಾರೆ. ಹುಟ್ಟಿದ ಮಗುವಿನಲ್ಲಿ ಈ ಸಮಸ್ಯೆಗಳು ಕಂಡು ಬಂದಾಗ ಅದು ವಂಶಪಾರಂಪರ್ಯವಾಗಿ ಮುಂದುವರಿಯಲಿರುವುದರಿಂದ, ಮುಂದಿನ ಪೀಳಿಗೆಯ ಮೇಲೂ ಪರಿಣಾಮ ಬೀರುವುದೆಂದು ಅಧ್ಯಯನದಿಂದ ತಿಳಿದು ಬಂದಿದೆ. ಮೇಲೆ ಹೇಳಿರುವಂತಹ ಎಲ್ಲಾ ಅಂಶಗಳನ್ನು ಗಮನಿಸುವಾಗ, ನಮ್ಮ ದೇಶದ ಸಮಸ್ಯೆಗಳಿಗೆ ಮೂಲ ಕಾರಣ ನಮ್ಮ ಜನಸಂಖ್ಯೆ. ಯಾವುದೆ ಪರಿವಾರದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾದಂತೆ, ಮಹಿಳೆಯ ಹಾಗೂ ಮಗುವಿನ ಆರೋಗ್ಯದ ಮೇಲೆ ನೇರ ಹೊಡೆತ ಬೀಳುವುದು. ಮಾನವ ಸಂಪನ್ಮೂಲ ಗುಣಾತ್ಮಕವಾಗಿರಬೇಕಾದರೆ, ಮೊದಲು ಜನಸಂಖ್ಯೆ ನಿಯಂತ್ರಣದಲ್ಲಿರಬೇಕಾದದ್ದು ಅವಶ್ಯಕ. ಕುಟುಂಬ ಯೋಜನೆಯೊಂದೇ ಇದಕ್ಕೆ ಪರಿಹಾರ.
ಕುಟುಂಬ ಯೋಜನೆಯೆಂದರೆ, ದೇಶದ ಸಂಪನ್ಮೂಲಗಳಿಗನುಗುಣವಾಗಿ ಒಂದು ಕುಟುಂಬದಲ್ಲಿ ಇರಬೇಕಾದ ಮಕ್ಕಳ ಸಂಖ್ಯೆಯನ್ನು ಮಿತಿಗೊಳಿಸುವುದು. ಇದು ಕೇವಲ ಜನಸಂಖ್ಯಾ ನಿಯಂತ್ರಣಕ್ಕೆ ಸೀಮಿತವಾಗಿರದೆ, ಇಡೀ ಕುಟುಂಬದ ಆರೋಗ್ಯವನ್ನು ಕಾಪಾಡುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಒಂದು ಆರೋಗ್ಯವಂತ ಮಗು ದೇಶದ ಬಹು ದೊಡ್ಡ ಆಸ್ತಿಯೆಂದು ತಿಳಿದು, ಒಂದೆರಡು ಮಕ್ಕಳಿಗೆ ಸೀಮಿತಗೊಳಿಸಿದರೆ ಕುಟುಂಬದ ಸುದೃಢ ಬೆಳವಣಿಗೆಗೆ ಸಹಕಾರಿಯಾಗುವುದು. ವಿಪರ್ಯಾಸವೆಂದರೆ, ಬಡವರಲ್ಲಿ ಹೆಚ್ಚಿನ ಮಕ್ಕಳು, ಉಳ್ಳವರಲ್ಲಿ ಕಡಿಮೆ ಮಕ್ಕಳನ್ನು ಕಾಣುತ್ತೇವೆ! ಇಂದಿಗೂ, ಹೆಣ್ಣು-ಗಂಡೆಂಬ ಲಿಂಗ ತಾರತಮ್ಯ ನೋಡುತ್ತಿದ್ದೇವೆ! ಗಂಡು ಮಗುವಿನಿಂದಲೇ ಮೋಕ್ಷ, ಮಕ್ಕಳು ದೇವರು ಕೊಟ್ಟದ್ದು ಎನ್ನುವ ವಿಚಾರಗಳು ಇನ್ನೂ ಅಳಿಸಿ ಹೋಗಿಲ್ಲ.
ಚೀನಾ ದೇಶವು ಕುಟುಂಬಕ್ಕೊಂದೇ ಮಗು ಎನ್ನುವ ಕಡ್ಡಾಯ ಕಾಯಿದೆ ತಂದು, ಇದೀಗ ಅಲ್ಲಿನ ಜನಸಂಖ್ಯೆ ನಿಯಂತ್ರಣದಲ್ಲಿದೆ. ಇತರೆಲ್ಲಾ ದೇಶಗಳಿಗಿಂತ ಮೊತ್ತ ಮೊದಲು ಕುಟುಂಬ ಯೋಜನೆ ನೀತಿಯನ್ನು 1951 ರಲ್ಲಿ ಜಾರಿಗೊಳಿಸಿದ್ದು ಭಾರತ ಸರಕಾರವಾದರೂ, ಜನಸಂಖ್ಯೆ ನಿಯಂತ್ರಣದಲ್ಲಿ ಮಾತ್ರ ಹಿಂದುಳಿದಿರುವುದು ಖೇದಕರ ಸಂಗತಿ. ಭಾರತ ಸರಕಾರವು ತನ್ನ ಪ್ರತಿ ಪಂಚವಾರ್ಷಿಕ ಯೋಜನೆಯಲ್ಲಿ ನಿರಂತರವಾಗಿ ಸಾಕಷ್ಟು ವಿತ್ತವನ್ನು ಮೀಸಲಾಗಿಟ್ಟರೂ, ಸಾಧನೆ ನಿರೀಕ್ಷಿತವಾಗಿಲ್ಲ. 11 ನೇಯ ಪಂಚವಾರ್ಷಿಕ ಯೋಜನೆಯಡಿಯಲ್ಲಿ ಮೀಸಲಿಟ್ಟ 1.20.374 ಕೋಟಿ ರೂಪಾಯಿ 10 ನೇಯ ಪಂಚವಾರ್ಷಿಕ ಯೋಜನೆಗಿಂತ 4 ಪಟ್ಟು ಹೆಚ್ಚಾಗಿತ್ತು. ಪ್ರಾಥಮಿಕ ಆರೋಗ್ಯ ಕೇಂದ್ರ, ಕಮ್ಯುನಿಟಿ ಹಾಗೂ ಉಪಕೇಂದ್ರಗಳ ಸಂಖ್ಯೆಯಲ್ಲೂ ವೃದ್ದಿಯಾಗಿವೆ. ಕುಟುಂಬ ಕಲ್ಯಾಣಕ್ಕಾಗಿ ಭಾರತವು ಬಹಳ ಉತ್ತಮ ಯೋಜನೆಗಳಾದ ರಿಪ್ರೊಡಕ್ಟಿವ್ ಆಂಡ್ ಚೈಲ್ಡ್ ಹೆಲ್ತ್, ಸಮಗ್ರ ಮಕ್ಕಳ ಅಭಿವೃದ್ದಿ ಸೇವೆ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನಗಳನ್ನು ರೂಪಿಸಿ ಕಾರ್ಯೋ ನ್ಮುಖವಾಗಿದ್ದರೂ, ಶಿಶು ಮರಣ ಪ್ರಮಾಣ ಹಾಗೂ ತಾಯಂದಿರ ಮರಣ ಪ್ರಮಾಣದಲ್ಲಿ, ವಿಶ್ವದಲ್ಲಿಯೇ ಅಗ್ರಸ್ಥಾನ ಗಿಟ್ಟಿಸಿದ್ದೇವೆ.
ಭಾರತದಲ್ಲಿ ಅರ್ಧದಷ್ಟು ಜನ ಸಂತಾನೋತ್ಪತ್ತಿಯ ಪ್ರಾಯದಲ್ಲಿದ್ದು, ಅವರಲ್ಲಿ ಕೇವಲ ಅರ್ಧದಷ್ಟು ಜನ ಗರ್ಭನಿಯಂತ್ರಣಕ್ಕೆ ಬೇಕಾದ ಕಾಂಟ್ರಸೆಪ್ಟಿವ್ಸ್ ಉಪ ಯೋಗಿಸುತ್ತಿರುವುದನ್ನು ಗಮನಿಸಿದಾಗ ನಮ್ಮ ಕುಟುಂಬ ಯೋಜನಾ ಕಾರ್ಯಕ್ರಮಗಳಲ್ಲೇನೊ ಲೋಪದೋಷ ಗಳಿವೆಯೆಂದು ಗೋಚರಿಸುತ್ತದೆ. ಆಶ್ಚರ್ಯವೆಂದರೆ, ಈ ನಿಟ್ಟಿನಲ್ಲಿ ನಮ್ಮ ನೆರೆಯ ರಾಷ್ಟ್ರಗಳಾದ ಇಂಡೋನೆಷ್ಯಾ, ಶ್ರೀಲಂಕಾ ಮತ್ತು ಥಾಯ್‌ಲ್ಯಾಂಡ್‌ಗಿಂತಲೂ ನಾವು ಹಿಂದಿದ್ದೇವೆ! ಗರ್ಭನಿರೋಧಕ ಬಳಕೆ ದರ (CPR) ಅಧಿಕವಿರುವ ರಾಜ್ಯಗಳಲ್ಲಿ ಪ್ರಸವ ಸಮಯದಲ್ಲಿ ಸಂಭವಿಸುವ ತಾಯಂದಿರ ಮರಣ ಪ್ರಮಾಣ ಕಡಿಮೆ ಇದೆಯೆಂದು ಹಲವು ರಾಜ್ಯಗಳ ದತ್ತಾಂಶ ಸೂಚಿಸುತ್ತದೆ. ಜನ್ಮ ನೀಡಿದ ನಂತರ, ಮಕ್ಕಳ ಜನನದ ನಡುವೆ ಅಂತರ ಇಡಲು ಮಹಿಳೆಗೆ ಕುಟುಂಬ ಯೋಜನೆ ಸಹಾಯ ಮಾಡುತ್ತದೆ ಮತ್ತು ಇದರಿಂದಾಗಿ ಭ್ರೂಣಾವಸ್ಥೆಯಲ್ಲಿನ ಮರಣ, ನವಜಾತ ಮತ್ತು ಮಹಿಳೆಗೆ ಜನಿಸಿದ ಮಕ್ಕಳ ಸಂಖ್ಯೆಯ ನಡುವಿನ ಸ್ಪಷ್ಟ ಸಂಭಂದವನ್ನು ಕೂಡಾ ಜನಗಣತಿ ದತ್ತಾಂಶ ತೋರಿಸುತ್ತದೆ ಅಂದರೆ, ಒಟ್ಟಾರೆ ಫಲವತ್ತತೆ ಪ್ರಮಾಣ ಕಡಿಮೆಯಾದಂತೆಲ್ಲಾ, ಶಿಶು ಮರಣದ ಪ್ರಮಾಣ ಕೂಡಾ ಇಳಿಕೆ ಪ್ರಮಾಣವನ್ನು ತೋರಿಸುತ್ತದೆ.
ಮಹಿಳೆಯರು ತಾಯ್ತನವನ್ನು ಮುಂದೂಡುವುದರಿಂದ, ಮಕ್ಕಳ ಜನನದಲ್ಲಿ ಅಂತರವಿಡುವುದರಿಂದ, ಅವಾಂಛಿತ ಗರ್ಭಪಾತಗಳನ್ನು ತಪ್ಪಿಸುವುದರಿಂದ ಮತ್ತು ತಮ್ಮ ಕುಟುಂಬದಲ್ಲಿ ಮಕ್ಕಳು ಸಾಕೆಂದು ಗರ್ಭ ಧರಿಸದೆ ಇರುವುದರಿಂದ ಪ್ರಸವ ಸಮಯದಲ್ಲಿ ಸಂಭವಿಸುವ ಪ್ರತಿ ಮೂರು ಸಾವುಗಳಲ್ಲಿ ಒಂದನ್ನು ತಪ್ಪಿಸಬಹುದಾಗಿದೆ. ಭಾರತದಲ್ಲಿ ಪ್ರತಿ ವರ್ಷ 78 ಸಾವಿರ ಮಹಿಳೆಯರು ಗರ್ಭವತಿಯಾದಾಗ ಮತ್ತು ಹೆರಿಗೆ ಸಂದರ್ಭದಲ್ಲಿ ಮರಣವಪ್ಪುವರು. ಸರಿಯಾದ ತಿಳುವಳಿಕೆಯಿಂದ ಕುಟುಂಬ ಯೋಜನೆಯ ವಿಧಾನಗಳನ್ನು ಅನುಸರಿಸಿದರೆ, ತಾಯಂದಿರ ಮರಣ ಪ್ರಮಾಣವನ್ನು ತಪ್ಪಿಸಬಹುದಾಗಿದೆ.
ಹಾಗಾದರೆ, ಕುಟುಂಬ ಕಲ್ಯಾಣ ಕಾರ್ಯಕ್ರಮಗಳು ವಿಫಲಗೊಂಡಿದ್ದೆಲ್ಲಿ?
ಕುಟುಂಬ ಕಲ್ಯಾಣದ ವಿಧಾನಗಳ ಸರಿಯಾದ ಮಾಹಿತಿಯಿಲ್ಲದಿರುವುದು, ಮೂಢನಂಬಿಕೆಗಳು, ಶಿಕ್ಷಣದ ಕೊರತೆ, ಸೂಕ್ತ ವಯಸ್ಸಿಗೆ ಮೊದಲು ಮದುವೆ, ಗಂಡು, ಹೆಣ್ಣೆಂಬ ತಾರತಮ್ಯ, ಸರಕಾರದ ನಿರ್ಲಿಪ್ತ ದೋರಣೆ, ಕೆಲವೊಂದು ಸಂದರ್ಭಗಳಲ್ಲಿ ಆರೋಗ್ಯಾಧಿಕಾರಿಗಳ ಬೇಜವಾಬ್ದಾರಿತನ, ಆಶಾ, ಎ.ಯನ್.ಯಮ್ ಕಾರ್ಯಕರ್ತರ ಅಸಮರ್ಪಕ ನಿರ್ವಹಣೆ, ಸಂತಾನೋತ್ಪತ್ತಿಯ ಕುರಿತಾಗಿ ಜಾತಿ, ಧರ್ಮಗಳಲ್ಲಿನ ಅಭಿಪ್ರಾಯಗಳು ಕುಟುಂಬ ಕಲ್ಯಾಣ ಕಾರ್ಯಕ್ರಮಗಳು ವಿಫಲಗೊಳ್ಳುವಲ್ಲಿ ಪ್ರಮುಖ ಕಾರಣವಾಗಿದೆ. ಆದುದರಿಂದ ಈ ಕೆಳಗೆ ನೀಡಲಾಗಿರುವ ಪರಿಹಾರೋಪಾ ಯಗಳನ್ನು ಕಡ್ಡಾಯವಾಗಿ ಎಲ್ಲಾ ಅರ್ಹ ದಂಪತಿಗಳು ಅನುಸರಿಸುವಂತಾಗಬೇಕು:
ಸೂಕ್ತ ವಯಸ್ಸಿಗೆ ಮದುವೆ- ಗಂಡಿಗೆ 21 ಮತ್ತು ಹೆಣ್ಣಿಗೆ 18 ವರ್ಷ ಆಗಿರಲೇಬೇಕು.
ಮದುವೆಗೆ ಮುನ್ನ (ಕೆಲವೊಂದು ಧರ್ಮಗಳಲ್ಲಿರುವಂತೆ) ಸರಿಯಾದ ಲೈಂಗಿಕ ಶಿಕ್ಷಣ ನೀಡುವುದು.
ಜನನಗಳ ನಡುವೆ ಅಂತರವಿರಬೇಕು. ಮದುವೆಯಾದ ನಂತರ ಕನಿಷ್ಟ ಮೂರು ವರ್ಷ ಮೊದಲನೆಯ ಮಗುವನ್ನು ಪಡೆಯಬಾರದು.ಆವಾಗ ಹುಟ್ಟುವ ಮಗು ಸುದೃಢವಾಗಿರಲು ಸಾಧ್ಯ.
ಎಲ್ಲಾ ಅರ್ಹ ದಂಪತಿಗಳು ಕುಟುಂಬ ಕಲ್ಯಾಣದ ವಿಧಾನಗಳನ್ನು ಅನುಸರಿಸಿ ಚಿಕ್ಕ ಕುಟುಂಬವನ್ನು ರೂಪಿಸಿಕೊಳ್ಳುವುದು.
ಚಿಕ್ಕ ಕುಟುಂಬ ಹಾಗೂ ಜನನಗಳ ನಡುವೆ ಅಂತರ ರೂಪಿಸಿಕೊಳ್ಳುವುದರಿಂದ ತಾಯಿ ಮಗುವಿನ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಸರಿಯಾದ ಮಾಹಿತಿ ನೀಡಿಕೆ.
ಪುರುಷ ಸಂತಾನಹರಣಕ್ಕೂ ಒತ್ತು ನೀಡುವುದು.
ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು.
ಆಸ್ಪತ್ರೆಗಳಲ್ಲಿಯೆ ಹೆರಿಗೆಗೆ ಪ್ರೇರಣೆ.
ಸಂತಾನಹರಣ\ ಶಿಶು ಆರೋಗ್ಯ ಕಾರ್ಯಕ್ರಮಗಳಾದ ಜನನಿ ಸುರಕ್ಷಾ, ಪ್ರಸೂತಿ ಆರೈಕೆ, ಭಾಗ್ಯಲಕ್ಷ್ಮಿ, ಮಡಿಲು, ಆರೋಗ್ಯ ದಿನಾಚರಣೆ, ಪೌಷ್ಟಿಕ ದಿನಾಚರಣೆಗಳಲ್ಲದೆ, ಸಂತಾನಹರಣ ಶಸ್ತ್ರಚಿಕಿತ್ಸೆಗೆ ನೀಡುವ ಪ್ರೋತ್ಸಾಹ ಧನದ ಕುರಿತಾದ ಸರಿಯಾದ ಮಾಹಿತಿ ನೀಡುವಿಕೆ, ಇವುಗಳಿಂದ ದೊರಕುವ ಸೌಲಭ್ಯಗಳ ಸಂಪೂರ್ಣ ಮಾಹಿತಿ ಒದಗಿಸುವಿಕೆ ಯಾಗಬೇಕು.
ಈ ಎಲ್ಲಾ ವಿಚಾರಗಳನ್ನು ಆದ್ಯತೆಯಿಂದ ಪರಿಗಣಿಸಿ ಸರಕಾರಿ ಹಾಗೂ ಖಾಸಗಿ ವಲಯಗಳ ಆರೋಗ್ಯ ಇಲಾಖೆಗಳು, ಇಲ್ಲಿ ಕಾರ್ಯನಿರ್ವಹಿಸುವ ಮೆಡಿಕಲ್ ಆಫೀಸರ್ಸ್, ಎ.ಯನ್.ಎಮ್‌ಗಳು, ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು ಚಾಕಚಕ್ಯತೆಯಿಂದ ಅರ್ಹ ದಂಪತಿಗಳ ಮನ ಪರಿವರ್ತಿಸಬೇಕು. ಅದಕ್ಕಾಗಿ ಅವರಿಗೆ ಬೇಕಾದ, ಸಂವಹನದ ನಿಪುಣತೆ, ವಿಷಯದ ಜ್ಞಾನ, ಕೌಶಲ್ಯಗಳ ತರಬೇತಿ ನೀಡಿ ಅವರನ್ನು ಪಕ್ವಗೊಳಿಸಬೇಕು. ಮಾಧ್ಯಮಗಳಲ್ಲಿ ಹೆಚ್ಚಿನ ಪ್ರಚಾರ ನೀಡುವ ಮುಖಾಂತರ, ಸಣ್ಣ ಕುಟುಂಬದ ಪ್ರಯೋಜನಗಳನ್ನು ಬಿತ್ತರಿಸಬೇಕು. ಪ್ರತಿಯೊಬ್ಬನು ಜವಾಬ್ದಾರಿಯಿಂದ ವರ್ತಿಸಿದರೆ ಕುಟುಂಬ ಯೋಜನೆ ಸಾಫಲ್ಯತೆಯನ್ನು ಪಡೆಯುವುದರ ಜೊತೆ ಜೊತೆಗೆ, ಶಿಶು ಆರೋಗ್ಯವು ವರ್ಧಿಸುವುದರಲ್ಲಿ ಸಂಶಯವಿಲ್ಲ. ಚಿಕ್ಕ ಚಿಕ್ಕ ಸಂಸಾರದಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯದಲ್ಲಿ ಗಮನಾರ್ಹ ಬದಲಾವಣೆ ಸಾಧ್ಯವೆಂದು ಅಧ್ಯಯನದಿಂದಲೂ ತಿಳಿದು ಬಂದಿದೆ. ಆದುದರಿಂದ, ಒಂದು ಅಥವಾ ಎರಡು, ಹೆಣ್ಣು ಯಾ ಗಂಡು, ಸುದೃಢ ಕುಟುಂಬಕ್ಕೆ ನಾಂದಿಯಾಗಿ ಸಮಾಜದ ಆಸ್ತಿಯಾಗಲಿ.
– ಡಾ. ಆಶಾಲತಾ ಎಸ್. ಸುವರ್ಣ
ಅಸೋಸಿಯೆಟ್ ಪ್ರೊಫೆಸರ್, ವಾಣಿಜ್ಯ ವಿಭಾಗ,
ಶ್ರೀ ಗೋಕರ್ಣನಾಥೇಶ್ವರ ಕಾಲೇಜು, ಮಂಗಳೂರು.