ಮಾನವ ಜೀವನವನ್ನು ನಾಲ್ಕು ಭಾಗಗಳನ್ನಾಗಿ ನಮ್ಮ ಹಿರಿಯರು ಗುರುತಿಸಿದ್ದಾರೆ. ಅದೇ ಬಾಲ್ಯ, ಯೌವ್ವನ ಮತ್ತು ಗೃಹಸ್ಥಾಶ್ರಮ – ಆಯಾಯ ವಯಸ್ಸಿನಲ್ಲಿ ಮಾನವ ಮಾಡಬೇಕಾದ ಕೆಲಸವನ್ನು ಹೇಳಿದ್ದಾರೆ. ಬಾಲ್ಯದಲ್ಲಿ ಬ್ರಹ್ಮಚರ್ಯ, ಶಿಕ್ಷಣ, ಸಂಸ್ಕೃತಿ, ನಯ-ವಿನಯ ಮತ್ತು ಯಾವುದಾದರು ಒಂದು ವಿಚಾರದಲ್ಲಿ ಕುಶಲತೆ ಇರಲೇಬೇಕು. ಆಗ ಯೌವ್ವನ ಯಶಸ್ವಿಯಾಗುತ್ತದೆ. ಯೌವ್ವನದಲ್ಲಿ ಆತನು ಕಲಿತ ವಿದ್ಯೆಯಿಂದ ಕುಶಲತೆ ಹೊಂದಿರುವ ಒಂದು ಉದ್ಯೋಗ ಹೊಂದಿ ಗೃಹಸ್ಥಾಶ್ರಮ ಪಡೆದು, ಕುಟುಂಬದ ಹೊರೆಯನ್ನು ಹೊರಬೇಕಾಗಿದೆ. ಬಾಲ್ಯದ ಶಿಕ್ಷಣದ ತಯಾರಿ ಯೌವ್ವನದ ಕೆಲಸಕ್ಕೆ ಅನುಕೂಲ ಮಾಡಿ ಕೊಡುತ್ತದೆ.
ಯೌವ್ವನ ಒಬ್ಬ ವ್ಯಕ್ತಿಯ ಜೀವನದ ಅತೀ ಮುಖ್ಯವಾದ ಭಾಗವಾಗಿದೆ. ಯೌವ್ವನ ಕುಟುಂಬ, ರಾಜ್ಯ, ದೇಶವನ್ನು ರಕ್ಷಣೆ ಮಾಡುವ ಕಾಲವಾಗಿದೆ. ಅದಕ್ಕಾಗಿಯೇ ಸ್ವಾಮಿ ವಿವೇಕಾನಂದರು ನನಗೆ ನೂರು ಆರೋಗ್ಯವಂತ, ಸ್ವಸ್ಥ ಮನಸಿನ ಯುವಕರನ್ನು ಕೊಡಿ ನಾನು ಈ ದೇಶದ ಭವಿಷ್ಯವನ್ನು ಬದಲಾಯಿಸುತ್ತೇನೆ ಎಂದು ಹೇಳಿದರು. ಡಿ.ವಿ.ಜಿ.ಯವರು ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು, ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ, ಎಲ್ಲರೊಳು ಒಂದಾಗು ಮಂಕುತಿಮ್ಮ ಎಂದು ಹಾಡಿದ್ದು ಯುವಕರಿಗಾಗಿಯೇ. ಬೆಟ್ಟದಲ್ಲಿ ಹುಟ್ಟಿದರೆ ಮುಳ್ಳಾಗಬೇಡ, ಹುಲ್ಲಾಗು. ಮನೆಯಲ್ಲಿ ಹುಟ್ಟಿದರೆ ಮಲ್ಲಿಗೆಯಾಗು ಎಲ್ಲರಿಗೂ ಸುವಾಸನೆ ಕೊಡು, ದುರ್ಗಂಧ ಕೊಡಬೇಡ. ದೀನರಿಗೆ ಬೆಲ್ಲ ಸಕ್ಕರೆಯಾಗು ಎಲ್ಲರೊಳು ಒಂದಾಗು ಎಂದು ಯುವಕರು ಹೇಗಿರಬೇಕು ಎಂದು ಹೇಳಿದ್ದಾರೆ. ಒಂದು ಸಮಾಜದ, ಒಂದು ದೇಶದ ಶಕ್ತಿ ಯುವಕರು. ಆ ಶಕ್ತಿಯನ್ನು ಸದುಪಯೋಗ ಪಡಿಸಬೇಕಾದ ಅಗತ್ಯವನ್ನು ಈ ಸಮಾಜ, ದೇಶ ತಿಳಿದು ಕೊಳ್ಳಬೇಕಾಗಿದೆ. ಯುವಶಕ್ತಿಯನ್ನು ಸದುಪಯೋಗಗೊಳಿಸುವ ಕೆಲಸ ಸಮಾಜದಲ್ಲಿ ನಿರಂತರ ನಡೆಯಬೇಕು. ಆಗ ಸಮಾಜ ಬಲಿಷ್ಠವಾಗಿ ಬೆಳೆಯುತ್ತದೆ.
ಯುವಶಕ್ತಿ ಅದೊಂದು ಪ್ರಬಲವಾಹಿನಿ, ಅದನ್ನು ತಡೆಯಲಾಗದು. ಅದು ಹರಿಯಬೇಕು. ಎಲ್ಲಿ ಹರಿಯಬೇಕು, ಹೇಗೆ ಹರಿಯಬೇಕು ಎಂದು ಹಿರಿಯರು ಆ ವಾಹಿನಿಗೆ ಹರಿಯಲು ದಾರಿ ಮಾಡಿಕೊಡಬೇಕು. ಆಗ ಅದು ಹರಿದಲ್ಲೆಲ್ಲ ಉತ್ತಮ ಬೆಳೆಯಾಗುತ್ತದೆ. ಸನ್ಮಾರ್ಗದಲ್ಲಿ ಗಳಿಸಬೇಕು. ಗಳಿಸಿದ್ದನ್ನು ಉಳಿಸಬೇಕು. ಉಳಿಸಿದ್ದನ್ನು ಸದುದ್ದೇಶಕ್ಕೆ ಬಳಸಬೇಕು. ಆಗ ಬದುಕು ಬಂಗಾರ ನೋಡ ತಮ್ಮ ಎಂಬ ವಚನದಲ್ಲಿ ಯುವಕರು, ಸನ್ಮಾರ್ಗದಿಂದ ಸಂಪಾದಿಸಿ, ಸಂಪಾದನೆಯಲ್ಲಿ ಉಳಿಸಿ, ಉಳಿಸಿದ್ದನ್ನು ಸದುದ್ದೇಶಕ್ಕೆ ಬಳಸಬೇಕೆಂದು, ಆಗ ಬದುಕು ಬಂಗಾರವಾಗುತ್ತದೆ ಎಂದು ತಿಳಿಸಿದೆ. ಸ್ವಸ್ಥ ಮನಸಿನ ಯುವಕರಿಂದ ಸ್ವಸ್ಥ ಸಮಾಜ ನಿರ್ಮಾಣ ಆಗುತ್ತದೆ. ನಮ್ಮ ಯುವಕರು ಸಮಾಜವನ್ನು ಕಟ್ಟಬೇಕಾದರೆ ಅವರು ಸುಜ್ಞಾನಿಗಳಾಗಬೇಕು. ಮೂಡನಂಬಿಕೆಯಿಂದ ಹೊರ ಬರಬೇಕು.
ಅಳಿಸಿ ಯುವಕರೇ ಅಜ್ಞಾನದ ದೀಪ, ಹಚ್ಚಿ ಯುವಕರೇ ಸುಜ್ಞಾನದ ದೀಪ, ಕಿತ್ತೆಸೆದು ಮೂಡನಂಬಿಕೆ ಕಟ್ಟಬೇಕು- ಗಟ್ಟಿ ಸಮಾಜ ನೋಡ ತಮ್ಮ. ವಚನದಲ್ಲಿ ಅಜ್ಞಾನ, ಮೂಡನಂಬಿಕೆಯಿಂದ ಹೊರಬರದಿದ್ದರೆ ಸ್ವಸ್ಥ ಮನಸಿನ ಬಲಿಷ್ಠ ಸಮಾಜ ಕಟ್ಟಲು ಸಾಧ್ಯವೇ ಇಲ್ಲ. ಕಳಚಬೇಕಿದೆ ಮೂಡನಂಬಿಕೆ| ಬೆಳೆಸಬೇಕಿದೆ ಸುಜ್ಞಾನ| ಯುವಕರು ಜಾಣ್ಮೆಯಿಂದ ನಡೆಯಬೇಕು| ಪ್ರಗತಿ ಪಥದಿ ನೋಡ ತಮ್ಮ| ಎಂಬ ವಚನದಲ್ಲಿ ಮೂಡನಂಬಿಕೆ ಹೋಗಲಾಡಿಸಬೇಕೆಂದು ಹೇಳಿದೆ.
ಒಂದು ಸಮಾಜದ ಅವನತಿ ಮೂಡನಂಬಿಕೆ. ಅದೆಷ್ಟೋ ಮೂಡನಂಬಿಕೆಯಿಂದ ನಮ್ಮ ಸಮಾಜದ ಹಿರಿಯರು ಆಸ್ತಿ ಕಳೆದುಕೊಂಡರು. ಸ್ಥಾನಮಾನ ಕಳೆದುಕೊಂಡರು ಎಂಬುದು ಎಲ್ಲಾ ಪ್ರಜ್ಞಾವಂತ ಯುವಕರಿಗೆ ಗೊತ್ತು. ಎಲ್ಲಿವರೆಗೆ ನಾವು ಜ್ಞಾನಿಗಳಾಗುವುದಿಲ್ಲವೋ ಅಲ್ಲಿವರೆಗೆ ನಾವು ಶೋಷಣೆಗೆ ಒಳಪಡುತ್ತೇವೆ. ಶೋಷಣೆ ರಹಿತ ಸಮಾಜ ಆಗಬೇಕಾದರೆ ಸಮಾಜದ ಜನ ಸಜ್ಞಾನವಂತರಾಗಬೇಕು. ಆದುದರಿಂದ ಯುವಕರು ಜ್ಞಾನವಂತರಾಗಬೇಕು. ಜ್ಞಾನವಂತ ಯುವಕರು ಸಮಾಜದ ಆಸ್ತಿಯಾಗುತ್ತಾರೆ. ಅಪಾರ ಶಕ್ತಿಕೇಂದ್ರವಾದ ನಮ್ಮ ಯುವಕರು ಈ ಸಮಾಜದ ಶಕ್ತಿಯಾಗಬೇಕು. ಆ ಮೂಲಕ ಸಮಾಜವನ್ನು ಕಟ್ಟಿ ಬೆಳೆಸಬೇಕು. ಆ ಕೆಲಸವನ್ನು ಕಳೆದ ೨೫ ವರ್ಷಗಳಿಂದ ನಿರಂತರ ಮಾಡುತ್ತಾ ಬಂದ ಯುವವಾಹಿನಿ ಮುಂದೆಯೂ ಹೆಚ್ಚು ಉತ್ಸಾಹ ಹುರುಪಿನಿಂದ ಮಾಡಲೆಂದು ಹಾರೈಸುತ್ತೇನೆ.
ಉತ್ತಮ ಬರಹ