ಟಿ. ನಾರಾಯಣ ಪೂಜಾರಿ -ರಜತ ರಶ್ಮಿ -2012

ಮಾನವ ಹಕ್ಕುಗಳ ರಕ್ಷಣಾ ಕಾನೂನು-1993

ಕಾನೂನು ಮಾಹಿತಿ

ಮಾನವ ಹಕ್ಕುಗಳ ರಕ್ಷಣಾ ಕಾನೂನು – 1993 (Protection of Human Rights Act) 1994 ರಲ್ಲಿ ಜಾರಿಗೆ ಬಂತು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗ ಅನುಷ್ಠಾನಕ್ಕೆ ಬಂದು ಮಾನವ ಹಕ್ಕುಗಳ ರಕ್ಷಣೆ ಹೊಣೆ ಹೊತ್ತು ಕೊಂಡಿತು.

ಮಾನವ ಹಕ್ಕುಗಳು (Human Rights)

ಒಬ್ಬ ಪ್ರಜೆಗೆ ಸಂವಿಧಾನದಲ್ಲಿ ಕೊಡ ಮಾಡಲ್ಪಟ್ಟ ಬದುಕುವ ಹಕ್ಕು, ಸ್ವಾತಂತ್ರ್ಯದ ಹಕ್ಕು, ಸಮಾನತೆಯ ಹಕ್ಕು ಹಾಗೂ ಘನತೆಯ ಹಕ್ಕು ಇದಕ್ಕೆ ಮಾನವ ಹಕ್ಕು ಎನ್ನುತ್ತಾರೆ. ಉದಾಹರಣೆಗೆ ಒಬ್ಬ ಪ್ರಜೆಗೆ ಇರುವಂತಹ ವಾಕ್ ಸ್ವಾತಂತ್ರ್ಯ. ಇದು ಸಂವಿಧಾನದಲ್ಲಿ ಒಬ್ಬ ಪ್ರಜೆಗೆ ಇರುವ ಮಾನವ ಹಕ್ಕು. ಮಾನವನ ಜೀವ ಮತ್ತು ವ್ಯಕ್ತಿ ಸ್ವಾತಂತ್ರ್ಯವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಇದು ಒಬ್ಬ ವ್ಯಕ್ತಿಯ ಸಂವಿಧಾನದ ಹಕ್ಕು.

ಒಬ್ಬ ವ್ಯಕ್ತಿಗೆ ಬದುಕುವ ಹಕ್ಕಿರುವಾಗ ನ್ಯಾಯಯುತವಾಗಿ ಬದುಕಲು ಸಂಪಾದಿಸುವ ಹಕ್ಕು ಇರುತ್ತದೆ. ಯಾಕೆಂದರೆ ಯಾವ ವ್ಯಕ್ತಿಯೂ ಸಂಪಾದನೆ ಇಲ್ಲದೆ ಬದುಕಲು ಸಾಧ್ಯವಿಲ್ಲ. ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಕಾನೂನು ನೆರವು ಹಾಗೂ ಶಿಕ್ಷಣ ಪಡೆಯುವ ಹಕ್ಕು ಇವು ಒಬ್ಬ ಪ್ರಜೆಯ ಮೂಲಭೂತ ಹಕ್ಕುಗಳು.

ದಸ್ತಗಿರಿ ಹಾಗೂ ಬಂಧನದಿಂದ ರಕ್ಷಣೆ ಪಡೆಯುವುದು ಸಹಾ ಮಾನವನ ಮೂಲಭೂತ ಹಕ್ಕು.

ಬಲಾತ್ಕಾರವಾಗಿ ಒಬ್ಬ ವ್ಯಕ್ತಿಯಿಂದ ಕೆಲಸ ಮಾಡಿಸುವುದು ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಈ ಮಾನವ ಹಕ್ಕನ್ನು ರಕ್ಷಣೆ ಮಾಡುವಂತಹ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇರುತ್ತದೆ.

ಬಾಲ ಕಾರ್ಮಿಕರಾಗಿ 14 ವರ್ಷಕ್ಕಿಂತಲೂ ಕೆಳಗಿನ ವಯಸ್ಸಿನ ಮಕ್ಕಳನ್ನು ಕಾರ್ಖಾನೆಗಳಲ್ಲಿ, ಗಣಿಗಳಲ್ಲಿ ಮತ್ತು ಅಪಾಯಕಾರಿ ಸ್ಥಳಗಳಲ್ಲಿ ಕೆಲಸಕ್ಕೆ ತೊಡಗಿಸಿಕೊಳ್ಳುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಇದೂ ಸಹಾ ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ.

ಹಿಂದೂ, ಮುಸಲ್ಮಾನ, ಕ್ರೈಸ್ತ ಅಥವಾ ಬೇರೆ ಯಾವುದೇ ಧರ್ಮದವರಿಗೆ ತಮ್ಮ ಧರ್ಮಕ್ಕೆ ನಿಷ್ಠೆ ತೋರುವುದು ಹಾಗೂ ಅದನ್ನು ಪಾಲಿಸಿಕೊಂಡು ಹೋಗುವುದು ಅವರ ಮಾನವ ಹಕ್ಕು. ಅವರ ಈ ಸ್ವಾತಂತ್ರ್ಯವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ.

ಒಬ್ಬ ಪ್ರಜೆಯ ಮೂಲಭೂತ ಹಕ್ಕನ್ನು ಸರಕಾರ ಅಥವಾ ಸರಕಾರಿ ನೌಕರರು ಉಲ್ಲಂಘಿಸಿದಾಗ ಮೂಲಭೂತ ಹಕ್ಕಿನಿಂದ ವಂಚಿಸಲ್ಪಟ್ಟ ವ್ಯಕ್ತಿಗೆ ನ್ಯಾಯಾಲಯ ಸರಕಾರದಿಂದ ಪರಿಹಾರ ಕೊಡಿಸಬಹುದು.

ಇತ್ತೀಚೆಗೆ ಕಾರಾಗೃಹದ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಉದಾಹರಣೆಗೆ, ಜೈಲಿನ ಅನುಕೂಲತೆಗಿಂತಲೂ ಹೆಚ್ಚಿನ ಸಂಖ್ಯೆಯ ಖೈದಿಗಳ ಸೇರ್ಪಡೆ, ಖೈದಿಗಳ ಕೇಸುಗಳ ವಿಚಾರಣೆಯಲ್ಲಾಗುವ ವಿಳಂಬ, ಕಾರಾಗೃಹದಲ್ಲಿ ಖೈದಿಗಳು ಅನುಭವಿಸುತ್ತಿರುವ ಹಿಂಸೆ, ಕಿರುಕುಳ, ಖೈದಿಗಳ ಆರೋಗ್ಯದ ಬಗ್ಗೆ ಅಸಡ್ಡೆ, ಇತ್ಯಾದಿಗಳು ಮಾನವ ಹಕ್ಕನ್ನು ಕಸಿದುಕೊಂಡಂತೆ. ಇಂತಹ ವಿಚಾರಗಳನ್ನು ರಾಷ್ಟ್ರೀಯ ಮಾನವ ಹಕ್ಕಿನ ಆಯೋಗ (Human Rights Commission) ವಿಚಾರಣೆ ನಡೆಸಿ ಸರಕಾರಕ್ಕೆ ಸೂಕ್ತ ನಿರ್ದೇಶನ ಕೊಡಬಹುದು.

ಒಬ್ಬ ಪ್ರಜೆಗೆ ಬದುಕಲು ಹೇಗೆ ಅಧಿಕಾರವಿರುತ್ತದೋ, ಅದೇ ರೀತಿ ತನ್ನ ಆರೋಗ್ಯವನ್ನು ಕಾಪಾಡಲು ಹಕ್ಕಿರುತ್ತದೆ. ಒಬ್ಬ ಪ್ರಜೆಯ ಆರೋಗ್ಯ ಕಾಪಾಡುವ ಸಲುವಾಗಿ ಮೂಲಭೂತ ಅನುಕೂಲತೆಗಳನ್ನು ಕಲ್ಪಿಸುವುದು ಸರಕಾರದ ಆದ್ಯ ಕರ್ತವ್ಯವಾಗಿರುತ್ತದೆ. ಇಂತಹ ಅನುಕೂಲತೆಯನ್ನು ಪಡೆಯುವುದು ಒಬ್ಬ ವ್ಯಕ್ತಿಯ ಮೂಲಭೂತ ಹಕ್ಕಾಗಿರುವುದರಿಂದ ಈ ಅನುಕೂಲದ ವಂಚನೆ ಒಬ್ಬ ವ್ಯಕ್ತಿಯ ಮೂಲಭೂತ ಹಕ್ಕಿನ ವಂಚನೆ ಆಗುತ್ತದೆ. ಖೈದಿಗಳಿಗೆ, ಕಾರ್ಮಿಕರಿಗೆ ಸರಕಾರವು ಉಚಿತವಾಗಿ ಈ ಅನುಕೂಲತೆಯನ್ನು ಒದಗಿಸಬೇಕು. ಯಾಕೆಂದರೆ, ಇದು ಒಬ್ಬ ವ್ಯಕ್ತಿಯ ಮೂಲಭೂತ ಹಕ್ಕು.

ಪೋಲೀಸರ ಬಂಧನದಲ್ಲಿ ಹಿಂಸೆ, ಕಿರುಕುಳ, ಅತ್ಯಾಚಾರ, ಕೊಲೆ ಇತ್ಯಾದಿ ಸಂಭವಿಸಿದಲ್ಲಿ ಇದು ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಕಾರಾಗೃಹದಲ್ಲಿ ಒಬ್ಬ ವಿಚಾರಣಾ ಖೈದಿ ಅಥವಾ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಯ ಜೀವ ರಕ್ಷಣೆ ಮತ್ತು ಆತನ ಆರೋಗ್ಯ ಕಾಪಾಡುವುದು ಕಾರಾಗೃಹದ ಅಧಿಕಾರಿಗಳ ಕರ್ತವ್ಯ. ಸೂಕ್ತ ಸಮಯದಲ್ಲಿ ಅಂತಹ ಖೈದಿಗಳಿಗೆ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸವಲತ್ತು ಒದಗಿಸದೇ ಇರುವುದು ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ.

ಮಾನವ ಹಕ್ಕು ರಕ್ಷಣಾ ಕಾಯ್ದೆಯನ್ನು ಅನುಷ್ಠಾನಕ್ಕೆ ತರಲು
ಅ) ರಾಷ್ಟ್ರೀಯ ಮಾನವ ಹಕ್ಕು ಆಯೋಗ
ಆ) ರಾಜ್ಯ ಮಾನವ ಹಕ್ಕು ಆಯೋಗ
ಅ) ಮಾನವ ಹಕ್ಕುಗಳ ನ್ಯಾಯಾಲಯಗಳು ಅಸ್ಥಿತ್ವಕ್ಕೆ ಬಂದಿರುತ್ತದೆ.

ರಾಷ್ಟ್ರೀಯ ಮಾನವ ಹಕ್ಕು ಆಯೋಗ

ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ
1. ಒಬ್ಬರು ಅಧ್ಯಕ್ಷರಿದ್ದು, ಅವರು ಸರ್ವೋಚ್ಛ ನ್ಯಾಯಾಲಯದ (Supreme Court) ಮುಖ್ಯ ನ್ಯಾಯಾಧೀಶರು ಅಥವಾ ನಿವೃತ್ತ ಮುಖ್ಯ ನ್ಯಾಯಾಧೀಶರಾಗಿರತಕ್ಕದ್ದು.
2. ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಅಥವಾ ನಿವೃತ್ತ ನ್ಯಾಯಾಧೀಶರು
3. ರಾಜ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಅಥವಾ ನಿವೃತ್ತ ಮುಖ್ಯ ನ್ಯಾಯಾಧೀಶರು ಸದಸ್ಯರುಗಳಾಗಿರುತ್ತಾರೆ.
4. ಅಲ್ಲದೇ ಇನ್ನಿಬ್ಬರು ಸದಸ್ಯರಿದ್ದು, ಅವರು ಮಾನವ ಹಕ್ಕಿನ ಬಗ್ಗೆ ಹೆಚ್ಚಿನ ಪರಿಣತಿ ಉಳ್ಳವರಾಗಿರತಕ್ಕದ್ದು.
5. ಒಬ್ಬ ಮಹಾಕಾರ್ಯದರ್ಶಿ ಇದ್ದು ಅವರು ಆಯೋಗದ ನಡವಳಿಕೆಗಳನ್ನು ನೋಡಿಕೊಳ್ಳುವವರಾಗಿರುತ್ತಾರೆ.

ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ರಾಷ್ಟ್ರಪತಿ, ಪ್ರಧಾನ ಮಂತ್ರಿ, ಲೋಕಸಭಾ ಸ್ಪೀಕರ್, ಗೃಹಮಂತ್ರಿ, ವಿರೋಧ ಪಕ್ಷದ ನಾಯಕರು ಸಮಾಲೋಚನೆ ಮಾಡಿ ನೇಮಕ ಮಾಡುತ್ತಾರೆ. ಆಯೋಗದ ಅವಧಿ ಐದು ವರ್ಷಗಳಿದ್ದು, ಇದರ ಮುಖ್ಯ ಕಛೇರಿ ನವದೆಹಲಿಯಲ್ಲಿರುತ್ತದೆ.

ರಾಜ್ಯ ಮಾನವ ಹಕ್ಕು ಆಯೋಗ:
ಅದೇ ರೀತಿ, ರಾಜ್ಯ ಮಾನವ ಹಕ್ಕು ಆಯೋಗ ಸ್ಥಾಪನೆಯಾಗುತ್ತದೆ. ರಾಜ್ಯ ಮಟ್ಟದ ಆಯೋಗಕ್ಕೆ ಉಚ್ಛ ನ್ಯಾಯಾಲಯದ (High Court) ಮುಖ್ಯ ನ್ಯಾಯಾಧೀಶರು ಅಥವಾ ನಿವೃತ್ತ ಮುಖ್ಯ ನ್ಯಾಯಾಧೀಶರು, ಉಚ್ಛ ನ್ಯಾಯಾಲಯದ ನ್ಯಾಯಾಧೀಶರು ಅಥವಾ ನಿವೃತ್ತ ನ್ಯಾಯಾಧೀಶರು ಹಾಗೂ ಇತರ ಸದಸ್ಯರು ಇರುತ್ತಾರೆ.

ಮಾನವ ಹಕ್ಕು ನ್ಯಾಯಾಲಯ:
ಜಿಲ್ಲೆಗೊಂದರಂತೆ ರಾಜ್ಯ ಸರಕಾರವು ರಾಜ್ಯದ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಒಪ್ಪಿಗೆ ಮೇರೆಗೆ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರನ್ನು ಮಾನವ ಹಕ್ಕಿನ ಪ್ರಕರಣದ ತನಿಖೆಯ ಶೀಘ್ರ ಇತ್ಯರ್ಥಕ್ಕೆ ನೇಮಕ ಮಾಡಬಹುದು. ಮಾನವ ಹಕ್ಕಿನ ಉಲ್ಲಂಘನೆಯ ಪ್ರಕರಣಗಳನ್ನು ಈ ನ್ಯಾಯಾಲಯವು ಕಾನೂನಿನ ಚೌಕಟ್ಟಿನಲ್ಲಿ ತನಿಖೆ ನಡೆಸಿ, ಸೂಕ್ತ ಕಂಡಲ್ಲಿ ತಪ್ಪಿತಸ್ಥರನ್ನು ದಂಡಿಸಲು ಕ್ರಮ ಕೈಗೊಳ್ಳಬಹುದು ಮತ್ತು ನೊಂದವರಿಗೆ ಪರಿಹಾರ ಕೊಡಲು ಆದೇಶಿಸಬಹುದು.

ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಮತೀಯ ಭಾವನೆಗಳನ್ನು ಕದಡಿಸುವ ಪ್ರಕರಣಗಳು ಸಹಾ ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಯಾವನೇ ಒಬ್ಬ ವ್ಯಕ್ತಿ ತನ್ನ ಧರ್ಮದ ಬಗ್ಗೆ ನಿಷ್ಢೆಯಿಂದ ಇದ್ದು ಅದನ್ನು ಪಾಲಿಸಿಕೊಂಡು ಹೋಗುತ್ತಿರುವಾಗ ಆತನನ್ನು ಬಲಾತ್ಕಾರವಾಗಿ ಆಸೆ, ಅಮಿಷ ಒಡ್ಡಿ ಮತಾಂತರ ಗೊಳಿಸುವುದು ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಅದೇ ರೀತಿ, ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ಮಾಡುವುದು, ಮೂರ್ತಿಗಳನ್ನು ಪುಡಿ ಮಾಡುವುದು, ಪವಿತ್ರ ಸ್ಥಳಗಳನ್ನು ಅಪವಿತ್ರ ಮಾಡಿ ಮತೀಯ ಭಾವನೆಗಳಿಗೆ ಧಕ್ಕೆ ತರುವುದು ಸಹಾ ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಇತ್ತೀಚೆಗೆ ನಮ್ಮ ಜಿಲ್ಲೆಯಲ್ಲಿ ನಡೆದ ದುರ್ಘಟನೆಗಳ ಬಗ್ಗೆ ರಾಜ್ಯ ಮಾನವ ಹಕ್ಕಿನ ಅಧ್ಯಕ್ಷರಾದ ನ್ಯಾಯಮೂರ್ತಿ ಎಸ್. ಆರ್. ನಾಯಕ್ ಹಾಗೂ ಸದಸ್ಯರು ಘಟನಾ ಸ್ಥಳಗಳಿಗೆ ಭೇಟಿಯಿತ್ತು ಪರಿಶೀಲಿಸಿದ ಬಗ್ಗೆ ನಮಗೆ ತಿಳಿದಿರುತ್ತದೆ.

ಮಾನವ ಹಕ್ಕು ಆಯೋಗದ ಕಾರ್ಯ ಕಲಾಪ:
1. ಸರಕಾರಿ ಅಧಿಕಾರಿಯಿಂದ ಮಾನವ ಹಕ್ಕಿನ ಉಲ್ಲಂಘನೆಯಿಂದ ನೊಂದ ವ್ಯಕ್ತಿಯ ದೂರಿನ ಮೇರೆಗೆ ಅಥವಾ ಸ್ವಪ್ರೇರಣೆಯಿಂದ (Suo Moto) ಸಂಬಂಧ ಪಟ್ಟ ಮಾನವ ಹಕ್ಕಿನ ಉಲ್ಲಂಘನೆಯ ವಿಚಾರವಾಗಿ ತನಿಖೆ ಮಾಡುವುದು.
2. ಮಾನವ ಹಕ್ಕಿನ ಉಲ್ಲಂಘನೆಯ ಪ್ರಕರಣ ಯಾವುದಾದರೂ ನ್ಯಾಯಾಲಯದಲ್ಲಿ ತನಿಖೆಯಾಗುತ್ತಿದ್ದಲ್ಲಿ ಸದ್ರಿ ನ್ಯಾಯಾಲಯದ ಅನುಮತಿ ಪಡೆದು ತನಿಖೆಯಲ್ಲಿ ಭಾಗಿಯಾಗುವುದು.
3. ಜೈಲುಗಳಲ್ಲಿ ಅಥವಾ ಸರಕಾರಿ ಸ್ವಾಮ್ಯದ ಸಂಘ ಸಂಸ್ಥೆಗಳಲ್ಲಿ ಬಂಧಿಯಾಗಿರುವ ಅಥವಾ ಇರಿಸಲ್ಪಟ್ಟ, ವ ಚಿಕಿತ್ಸೆಗೊಳಪಡುತ್ತಿರುವ ಸ್ಥಳಗಳಿಗೆ ಸರಕಾರಕ್ಕೆ ಮುನ್ಸೂಚನೆ ಕೊಟ್ಟು ಭೇಟಿ ಕೊಡುವುದು. ಮತ್ತು ಸದ್ರಿ ವ್ಯಕ್ತಿಗಳ ಜೀವನ ಕ್ರಮದ ಬಗ್ಗೆ ಅಧ್ಯಯನ ಮಾಡುವುದು ಹಾಗೂ ಆ ಸ್ಥಳಗಳಲ್ಲಿ ಮಾನವ ಹಕ್ಕಿನ ಉಲ್ಲಂಘನೆಯಾಗದಂತೆ ಸರಕಾರಕ್ಕೆ ಸಲಹೆ ಸೂಚನೆ ಕೊಡುವುದು.
4. ಮಾನವ ಹಕ್ಕಿನ ವಿಚಾರಗಳಿಗೆ ಸಂಬಂಧ ಪಟ್ಟಂತೆ ಸಂಶೋಧನೆ ನಡೆಸುವುದು ಹಾಗೂ ಮಾನವ ಹಕ್ಕನ್ನು ಪರಿಪಾಲಿಸಲು ಸೂಕ್ತ ಕ್ರಮ ಕೈಗೊಳ್ಳುವುದು ಹಾಗೂ ಮಾಧ್ಯಮಗಳ ಮುಖಾಂತರ ಜನಸಾಮಾನ್ಯರಿಗೆ ಮಾನವ ಹಕ್ಕಿನ ಬಗ್ಗೆ ಅರಿವು ಮೂಡಿಸುವುದು ಹಾಗೂ ಆ ವಿಚಾರಗಳಲ್ಲಿ ಕಾರ್‍ಯಾಗಾರಗಳನ್ನು ಹಮ್ಮಿಕೊಳ್ಳುವುದು.
5. ಸರಕಾರೇತರ ಸಂಘ ಸಂಸ್ಥೆಗಳಿಗೆ ಮಾನವ ಹಕ್ಕಿನ ಬಗ್ಗೆ ಅರಿವು ಮೂಡಿಸಲು ಪ್ರೋತ್ಸಾಹ ಕೊಡುವುದು ಇತ್ಯಾದಿ.

ಆಯೋಗಕ್ಕೆ ತನಿಖಾ ವಿಚಾರದಲ್ಲಿರುವ ಅಧಿಕಾರಗಳು:
6. ದೂರನ್ನು ವಿಚಾರ ಮಾಡುವ ಕಾಲಕ್ಕೆ ಆಯೋಗಕ್ಕೆ ಸಿವಿಲ್ ನ್ಯಾಯಾಲಯಕ್ಕೆ ವ್ಯಾಜ್ಯ ತನಿಖೆ ಮಾಡಲು ಇರುವ ಎಲ್ಲಾ ಅಧಿಕಾರಗಳು ಇರುತ್ತವೆ. ಅಂದರೆ:-
a) ಸಂಬಂಧ ಪಟ್ಟ ವಿಚಾರದಲ್ಲಿ ತನಿಖೆಗಾಗಿ ಯಾರನ್ನಾದರೂ ಕರೆಸಿ ಪ್ರಮಾಣ ವಚನ ಬೋಧಿಸಿ ವಿಚಾರಣೆ ಮಾಡುವುದು.
b) ವಿಚಾರಣೆಗೆ ಸಂಬಂಧ ಪಟ್ಟ ದಾಖಲೆಗಳನ್ನು ಪತ್ತೆ ಹಚ್ಚಿ ಹಾಜರು ಪಡಿಸುವುದು.
c) ಅಫಿದಾವಿತ್ ಮೂಲಕ ಸಾಕ್ಷ್ಯವನ್ನು ಸ್ವೀಕರಿಸುವುದು.
d) ಸರಕಾರಿ ಕಛೇರಿ ಅಥವಾ ನ್ಯಾಯಾಲಯದಿಂದ ತನಿಖೆಗೆ ಸಂಬಂಧಿತ ಸಾರ್ವಜನಿಕ ದಾಖಲೆ (Public Servant) ಗಳನ್ನು ಆಯೋಗದ ಮುಂದೆ ಹಾಜರು ಪಡಿಸಲು ಕೋರುವುದು.
e) ಸಾಕ್ಷಿಗಳನ್ನು ಅಥವಾ ದಾಖಲೆಗಳನ್ನು ತನಿಖೆ ಮಾಡಲು ಕಮಿಷನ್ ನೇಮಕ ಮಾಡುವುದು.
f) ಒಬ್ಬ ವ್ಯಕ್ತಿಯಿಂದ ತನಿಖೆಗೆ ಅವಶ್ಯಕವಾದ ಮಾಹಿತಿಯನ್ನು ಆಯೋಗದ ಮುಂದೆ ಒದಗಿಸಲು ಆದೇಶಿಸುವುದು.
g) ಯಾವುದೇ ಕಟ್ಟಡ ಅಥವಾ ಸ್ಥಳದಲ್ಲಿ ತನಿಖೆಗೆ ಸಂಬಂಧ ಪಟ್ಟ ದಾಖಲೆಗಳು ಇದ್ದಲ್ಲಿ ಅಂತಹ ಸ್ಥಳಗಳಿಗೆ ಪ್ರವೇಶಿಸಿ ಸದ್ರಿ ದಾಖಲೆಗಳನ್ನು ಪರಿಶೀಲಿಸುವುದು ಅಥವಾ ವಶಪಡಿಸಿಕೊಳ್ಳುವುದು.
h) ಆಯೋಗದ ಸರಹದ್ದಿನಲ್ಲಿ ಅಥವಾ ಸಮ್ಮುಖದಲ್ಲಿ ಅಪರಾಧ ಸಂಭವಿಸಿದ್ದಲ್ಲಿ ಅಪರಾಧ ಸಂಭವಿಸಿದ ಬಗ್ಗೆ ಹೇಳಿಕೆಗಳನ್ನು ಬರೆದುಕೊಂಡು ಸಂಬಂಧಪಟ್ಟ ದಂಡಾಧಿಕಾರಿಯವರಿಗೆ (Judicial Magistrate) ಪ್ರಕರಣ ದಾಖಲಿಸಿ ತನಿಖೆ ಮಾಡುವಂತೆ ನಿರ್ದೇಶನ ಕೊಡುವುದು.
i) ತನಿಖಾ ಕಾಲದಲ್ಲಿ ಅವಶ್ಯಕತೆ ಇದ್ದಲ್ಲಿ ಕೇಂದ್ರ ಅಥವಾ ರಾಜ್ಯ ಸರಕಾರದ ಯಾವುದೇ ಅಧಿಕಾರಿಯನ್ನು ಅನುಮತಿ ಪಡೆದು ತನಿಖೆಗೆ ಬಳಸಿಕೊಳ್ಳುವುದು.

ತನಿಖಾ ಕಾಲದಲ್ಲಿ ಆಯೋಗವು ಬರೆದುಕೊಂಡ ಹೇಳಿಕೆಯನ್ನು ಯಾವುದೇ ವ್ಯಕ್ತಿಯ ವಿರುದ್ಧ ಸಿವಿಲ್ ಅಥವಾ ಕೋರ್ಟಿನಲ್ಲಿ ಆತನ ವಿರುದ್ಧ ಬಳಸಿಕೊಳ್ಳಲು ಬರುವುದಿಲ್ಲ. ಆದರೆ ಸದ್ರಿ ವ್ಯಕ್ತಿ ಉದ್ದೇಶ ಪೂರ್ವಕ ಸುಳ್ಳು ಹೇಳಿಕೆ ನೀಡಿದ್ದಲ್ಲಿ ಆತನ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರವಿರುತ್ತದೆ.

ಆಯೋಗದ ತನಿಖೆಯಿಂದ ಯಾವುದೇ ಒಬ್ಬ ವ್ಯಕ್ತಿಯ ಘನತೆ ಗೌರವಕ್ಕೆ ಧಕ್ಕೆಯಾದಲ್ಲಿ ಅಂತಹ ವ್ಯಕ್ತಿಯಿಂದ ಆಯೋಗವು ವಿವರಣೆಯನ್ನು ಪಡೆಯಬಹುದಾಗಿದೆ ಹಾಗೂ ಆತನಿಗೆ ಆತನ ಪರವಾದ ಸಾಕ್ಷ್ಯಾಧಾರಗಳನ್ನು ಒದಗಿಸಲು ಸಾಕಷ್ಟು ಕಾಲಾವಕಾಶವನ್ನು ಒದಗಿಸಬಹುದಾಗಿದೆ.

ದೂರು ತನಿಕೆ ಮಾಡುವ ಕ್ರಮ:
ಮಾನವ ಹಕ್ಕಿನ ಉಲ್ಲಂಘನೆಯ ಬಗೆಗಿನ ದೂರು ದಾಖಲಾದ ನಂತರ ಆಯೋಗವು ಕೇಂದ್ರ ಅಥವಾ ರಾಜ್ಯ ಸರಕಾರದಿಂದ ಅಥವಾ ಸಂಬಂಧಪಟ್ಟ ಸಂಸ್ಥೆಗಳಿಂದ ಇಂತಿಷ್ಟೇ ಸಮಯದೊಳಗೆ ಈ ಕುರಿತು ವಿವರಣೆಯನ್ನು ಕೊಡತಕ್ಕದ್ದೆಂದು ತಾಖೀತು ಮಾಡತಕ್ಕದ್ದು. ನಿಯಮಿತ ಕಾಲಾವಧಿಯಲ್ಲಿ ವಿವರಣೆ ಬಾರದಿದ್ದಲ್ಲಿ ಆಯೋಗವು ತನಿಖೆಯನ್ನು ಸ್ವತಃ ಮುಂದುವರಿಸಿಕೊಂಡು ಹೋಗಬಹುದು.

ತನಿಖೆಯ ನಂತರದ ಕ್ರಮ:
ತನಿಖೆ ಪೂರ್ಣಗೊಂಡ ನಂತರ ಆಯೋಗವು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳತಕ್ಕದ್ದು.
1. ತನಿಖೆಯಿಂದ ಸರಕಾರಿ ಅಧಿಕಾರಿಯಿಂದ (Public Servant) ಮಾನವ ಹಕ್ಕಿನ ಉಲ್ಲಂಘನೆಯಾಗಿದೆ ಅಥವಾ ಸದ್ರಿ ಅಧಿಕಾರಿಯು ಮಾನವ ಹಕ್ಕಿನ ಉಲ್ಲಂಘನೆಯ ಬಗ್ಗೆ ನಿರ್ಲಕ್ಷ ತೋರಿದ್ದಾನೆ ಎಂಬ ವಿಚಾರ ಸಾಬೀತಾದ ಪಕ್ಷದಲ್ಲಿ ಆಯೋಗವು ಸಂಬಂಧ ಪಟ್ಟ ಅಧಿಕಾರಿಯ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಪ್ರಕರಣ ದಾಖಲಿಸಲು ಶಿಫಾರಸು ಮಾಡತಕ್ಕದ್ದು.
2. ಅವಶ್ಯಕತೆ ಕಂಡುಬಂದಲ್ಲಿ Supreme Court ಅಥವಾ High Court ನ್ನು ಸಂಪರ್ಕಿಸಿ ಈ ವಿಚಾರದಲ್ಲಿ ಸೂಕ್ತ ಆದೇಶವನ್ನು ಪಡೆಯುವುದು.
3. ಸಂಬಂಧಪಟ್ಟ ಸರಕಾರ ಅಥವಾ ಪ್ರಾಧಿಕಾರದಿಂದ ನೊಂದ ವ್ಯಕ್ತಿ ಅಥವಾ ಆತನ ಕುಟುಂಬಕ್ಕೆ ಸೂಕ್ತ ತುರ್ತು ಪರಿಹಾರ ಅಥವಾ ಮಧ್ಯಾವಧಿ (interim) ಪರಿಹಾರ ಒದಗಿಸಲು ಶಿಫಾರಸು ಮಾಡುವುದು.
4. ತನಿಖಾ ವರದಿಯ ನಕಲನ್ನು ನೊಂದ ದೂರುದಾರ ಅಥವಾ ಆತನ ಕುಟುಂಬಕ್ಕೆ ಒದಗಿಸುವುದು.
5. ತನಿಖೆ ಮುಗಿದ ಒಂದು ತಿಂಗಳ ಒಳಗಾಗಿ ತನಿಖಾ ವರದಿ, ಆಯೋಗ ಮಾಡಿದ ಶಿಫಾರಸು ಇತ್ಯಾದಿ ವಿವರಗಳನ್ನು ಸಂಬಂಧ ಪಟ್ಟ ಸರಕಾರ ಅಥವಾ ಪ್ರಾಧಿಕಾರಕ್ಕೆ ಕಳುಹಿಸಿಕೊಟ್ಟು ಅವರ ವಿವರಣೆ ಹಾಗೂ ಅವರು ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ಪಡೆಯುವುದು.
6. ಆಯೋಗ ತನ್ನ ತನಿಖಾ ವರದಿ, ತನ್ನ ಶಿಫಾರಸು, ಸರಕಾರದ ವಿವರಣೆ, ಅವರು ಕೈಗೊಂಡ ಕ್ರಮ ಇತ್ಯಾದಿಗಳನ್ನು ಮಾಧ್ಯಮದ ಮುಖಾಂತರ ಸಾರ್ವಜನಿಕರ ತಿಳುವಳಿಕೆಗಾಗಿ ಪ್ರಕಟಿಸುವುದು,

ಆಯೋಗವು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ತನ್ನ ವಾರ್ಷಿಕ ವರದಿಯನ್ನು ಸಲ್ಲಿಸತಕ್ಕದ್ದು. ಹಾಗೂ ಕೆಲವೊಮ್ಮೆ ತುರ್ತು ಸಂದರ್ಭಗಳಲ್ಲಿ ವಿಶೇಷ ಮಧ್ಯಾವಧಿ ವರದಿಯನ್ನು (interim) ಸಲ್ಲಿಸಬಹುದಾಗಿದೆ.

ಒಂದು ವಿಚಾರವನ್ನು ನಾವು ನೆನಪಿಡಬೇಕಾದದ್ದು ಏನೆಂದರೆ, ಮಾನವ ಹಕ್ಕಿನ ರಕ್ಷಣೆಯಾದಾಗ ಪ್ರಜಾಪ್ರಭುತ್ವ ರಕ್ಷಿಸಲ್ಪಡುತ್ತದೆ. ಜನಸಾಮಾನ್ಯರಿಗೆ ಸಾಮಾಜಿಕ ನ್ಯಾಯ ದೊರಕುತ್ತದೆ. ಮಾನವ ಹಕ್ಕುಗಳು ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳ ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ಮಾನವ ಹಕ್ಕು ವಿಷಯವನ್ನು ಶಿಕ್ಷಣದಲ್ಲಿ ಸೇರ್ಪಡೆಗೊಳಿಸುವುದು ಅಗತ್ಯ ಇದೆ.

ನಮ್ಮ ಸಂವಿಧಾನ ಮಾನವ ಹಕ್ಕುಗಳಿಗೆ ಪ್ರಮುಖ ಆದ್ಯತೆಯನ್ನು ನೀಡಿದೆ. ಉತ್ತಮ ಸಂವಿಧಾನ, ಉತ್ತಮ ನ್ಯಾಯಾಂಗ ವ್ಯವಸ್ಥೆ ಇದ್ದರೂ, ನಮ್ಮಲ್ಲಿ ಇನ್ನೂ ಕೂಡಾ ಒಂದು ವರ್ಗದ ಜನರು ಮೂಲಭೂತ ಹಕ್ಕಿನಿಂದ ಅಥವಾ ಮಾನವ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಸರಕಾರ ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ, ಪ್ರಜಾಪ್ರಭುತ್ವ ದುರ್ಬಲವಾಗುತ್ತದೆ. ಜನರು ಸಾಮಾಜಿಕ ನ್ಯಾಯದಿಂದ ವಂಚಿತರಾಗುತ್ತಾರೆ ಎಂಬುವುದರಲ್ಲಿ ಸಂಶಯವಿಲ್ಲ.

ಸಮಾಜದಲ್ಲಿ ದುರ್ಬಲ ವರ್ಗದವರ ಮೇಲೆ ಆರ್ಥಿಕವಾಗಿ ಸಬಲರಾದವರಿಂದ ಶೋಷಣೆಯಾಗುತ್ತಿರುವ ನಿದರ್ಶನಗಳೆಷ್ಟೋ ಇವೆ. ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಇದು ಇನ್ನಷ್ಟು ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂಬುವುದರಲ್ಲಿ ಸಂಶಯವಿಲ್ಲ.

ಮಾನವ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರಿಗೂ ಸಂಬಂಧಿಸಿದ್ದಾಗಿರುತ್ತದೆ. ಗ್ರಾಮೀಣ ಪ್ರದೇಶ, ಬುಡಕಟ್ಟು ನಿವಾಸಿಗಳು, ಅನಕ್ಷರಸ್ಥರಲ್ಲಿ, ಮಾನವ ಹಕ್ಕಿನ ಬಗ್ಗೆ ಅರಿವು ಮೂಡಿಸಲು ಯುವಜನತೆ ಹಾಗೂ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳಬೇಕು.

ಓರ್ವ ಕಾರ್ಮಿಕ ಮನುಷ್ಯತ್ವದ ನೆಲೆಯಲ್ಲಿ ಮರ್ಯಾದೆಯಿಂದ ಬಾಳ್ವೆ ಮಾಡಬೇಕಿದ್ದಲ್ಲಿ ಆತನಿಗೆ ಮಳೆ, ಗಾಳಿ, ಬಿಸಿಲಿನಿಂದ ರಕ್ಷಣೆ ಪಡೆಯಲು ಒಂದು ಸೂರು, ಎರಡು ಹೊತ್ತಿಗೆ ಊಟ, ಕುಡಿಯಲು ಶುದ್ಧ ನೀರು, ಅರೋಗ್ಯ ಕಾಪಾಡಲು ವೈದ್ಯಕೀಯ ಸೌಲಭ್ಯ, ಆತನ ಮಕ್ಕಳಿಗೆ ಬೆಳೆಯಲು ಆರೋಗ್ಯಕರವಾದ ವಾತಾವರಣ, ವಿದ್ಯಾಭ್ಯಾಸ ಕಲಿಯಲು ಸೂಕ್ತ ಸೌಲಭ್ಯ, ಹೆಂಗಸರಿಗೆ ಹೆರಿಗೆ ಸೌಲಭ್ಯ, ಇತ್ಯಾದಿಗಳು ಒಬ್ಬ ವ್ಯಕ್ತಿ ಮರ್ಯಾದೆಯಿಂದ ಬಾಳಲು ಬೇಕಾಗಿರುವ ಕನಿಷ್ಠ ಸೌಲಭ್ಯಗಳು. ಇವುಗಳು ಆತನ ಮಾನವ ಹಕ್ಕುಗಳು. ಇವುಗಳಿಂದ ಆತ ವಂಚತನಾದಲ್ಲಿ ಅದು ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಆತ ಮಾನವ ಹಕ್ಕಿನ ರಕ್ಷಣಾ ಕಾಯ್ದೆಯಡಿಯಲ್ಲಿ ಮಾನವ ಹಕ್ಕಿನ ಆಯೋಗಕ್ಕೆ ದೂರು ಸಲ್ಲಿಸಿ, ಸೂಕ್ತ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

ಉಚಿತ ಕಾನೂನು ನೆರವು:
ನಮ್ಮ ದೇಶದಲ್ಲಿ ಬಹಳಷ್ಟು ಜನರು ಆರ್ಥಿಕವಾಗಿ ಹಿಂದುಳಿದವರಿದ್ದಾರೆ, ಅನಕ್ಷರಸ್ಥರಿದ್ದಾರೆ. ಅವರು ಕಾನೂನಿನ ಅರಿವಿಲ್ಲದೇ ವಕೀಲರನ್ನು ಸಂಪರ್ಕಿಸಲು ಸಾಧ್ಯವಾಗದೇ ಅವರಿಗೆ ಸಿಗುವ ಸವಲತ್ತಿನಿಂದ ವಂಚಿತರಾಗುತ್ತಿದ್ದಾರೆ. ಉಚಿತ ಕಾನೂನು ನೆರವನ್ನು ಸೂಕ್ತ ವ್ಯಕ್ತಿಗಳಿಗೆ ಒದಗಿಸುವುದು ಸರಕಾರದ ಕರ್ತವ್ಯವಾಗಿರುತ್ತದೆ. ಉಚಿತ ಕಾನೂನು ನೆರವು ಪಡೆಯುವುದು ಒಬ್ಬ ಪ್ರಜೆಯ ಮಾನವ ಹಕ್ಕಾಗಿರುತ್ತದೆ. ನಮ್ಮ ದೇಶದಲ್ಲಿ ಈ ಮಾನವ ಹಕ್ಕಿನಿಂದ ವಂಚಿತರಾದವರು ಎಷ್ಟೋ ಜನರಿದ್ದಾರೆ.

ನ್ಯಾಯಾಲಯದಲ್ಲಿ ವ್ಯಾಜ್ಯಗಳ ಶೀಘ್ರ ವಿಲೇವಾರಿ ಸಹಾ ಮಾನವ ಹಕ್ಕಾಗಿರುತ್ತದೆ.

ಗರ್ಭ ಧರಿಸುವುದು ಮತ್ತು ಮಕ್ಕಳನ್ನು ಹೆರುವುದು ಒಬ್ಬ ಮಹಿಳೆಯ ಮಾನವ ಹಕ್ಕು:
ಒಬ್ಬ ವಿವಾಹಿತ ಮಹಿಳೆ ನ್ಯಾಯ ಸಮ್ಮತವಾಗಿ ಗರ್ಭ ಧರಿಸುವುದು ಮತ್ತು ಮಕ್ಕಳನ್ನು ಹೆರುವುದು ಅವಳ ಮಾನವ ಹಕ್ಕಾಗಿರುತ್ತದೆ. ಒಬ್ಬ ಮಹಿಳೆ ನ್ಯಾಯ ಸಮ್ಮತವಾಗಿ ಗರ್ಭ ಧರಿಸಿ ಮಕ್ಕಳನ್ನು ಹೆರುವುದನ್ನು ತಡೆದರೆ ಅದು ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ.

ಮಾನವ ಹಕ್ಕು ಮತ್ತು ಬಾಲ್ಯ ವಿವಾಹ:
ವಿವಾಹವಾಗಬೇಕಿದ್ದಲ್ಲಿ ಮಹಿಳೆಗೆ 18 ವರ್ಷ ಮತ್ತು ಪುರುಷನಿಗೆ 21 ವರ್ಷ ತುಂಬಿರಬೇಕು. ಬಾಲ್ಯ ವಿವಾಹ ಮಾಡಿಸುವುದು ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಬಾಲ್ಯ ವಿವಾಹ ಒಂದು ಸಾಮಾಜಿಕ ಪಿಡುಗು. ಯಾರು ಇದನ್ನು ಉಲ್ಲಂಘಿಸುತ್ತಾರೋ ಅವರು ಮಾನವ ಹಕ್ಕನ್ನು ಉಲ್ಲಂಘಿಸಿ ಶಿಕ್ಷೆಗೆ ಗುರಿಯಾಗುತ್ತಾರೆ. ಈ ಪಿಡುಗನ್ನು ನಿವಾರಿಸಿದರೆ ಅದು ಸಾಮಾಜಿಕ, ನ್ಯಾಯ ದೊರೆತಂತೆ.

ಬಾಲ ಕಾರ್ಮಿಕರ ಪದ್ಧತಿ:
14 ವರ್ಷಕ್ಕಿಂತಲೂ ಕೆಳಗಿನ ವಯಸ್ಸಿನ ಮಕ್ಕಳನ್ನು ಕಾರ್ಖಾನೆಗಳಲ್ಲಿ, ಗಣಿಗಳಲ್ಲಿ ಮತ್ತು ಅಪಾಯಕಾರಿ ಸ್ಥಳಗಳಲ್ಲಿ ಕೆಲಸಕ್ಕೆ ತೊಡಗಿಸಿಕೊಳ್ಳುವುದು ಸಂವಿಧಾನದಲ್ಲಿ ಅವಕಾಶವಿಲ್ಲ. ಇದು ಸಹಾ ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ.

ಬದುಕುವ ಹಕ್ಕು
ಒಬ್ಬ ವ್ಯಕ್ತಿಗೆ ಬದುಕುವ ಹಕ್ಕು ಮಾನವ ಹಕ್ಕಾದರೆ ಆ ವ್ಯಕ್ತಿಗೆ ಸಾಯುವ ಹಕ್ಕಿದೆಯೇ? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ನಮ್ಮ ಸಂವಿಧಾನದಲ್ಲಿ ಒಬ್ಬ ವ್ಯಕ್ತಿಗೆ ಬದುಕುವ ಹಕ್ಕಿದೆಯೇ ಹೊರತು ಸಾಯುವ ಹಕ್ಕಿರುವುದಿಲ್ಲ. ಒಬ್ಬ ವ್ಯಕ್ತಿ ಸಾಯಲು ಪ್ರಯತ್ನ ಪಟ್ಟಲ್ಲಿ ಆತನ ಮೇಲೆ ಭಾರತೀಯ ದಂಡ ಸಂಹಿತೆ (Indian Penal Code) ಕಲಂ 309ರ ಪ್ರಕಾರ ಕೇಸು ದಾಖಲಿಸಿ ಒಂದು ವರ್ಷದಷ್ಟು ಶಿಕ್ಷಿಸಬಹುದಾಗಿದೆ. Right to Die or Anthamasia ಬಗ್ಗೆ ಕಾನೂನು ಪಂಡಿತರಿಂದ ಚರ್ಚೆ ನಡೆದಿರುತ್ತದೆ. ಕೆಲವು ನ್ಯಾಯಾಲಯಗಳು ಒಬ್ಬ ವ್ಯಕ್ತಿಗೆ ಸಾಯುವ ಹಕ್ಕನ್ನು ಕೊಡಬೇಕು ಹಾಗೂ ಕಲಂ 309ನ್ನು ರದ್ದು ಪಡಿಸಬೇಕೆಂದು ಕಾನೂನು ಆಯೋಗಕ್ಕೆ (Law Commission) ಶಿಫಾರಸು ಮಾಡಿದೆ. ಒಬ್ಬ ಅನಾರೋಗ್ಯ ಪೀಡಿತ ವ್ಯಕ್ತಿ ಬದುಕಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿಯಲ್ಲಿ ನರಳಿ ಯಾತನೆ ಪಡುವುದು, ಉಳಿದವರಿಗೆ ಹೊರೆಯಾಗಿ ಬದುಕುವುದು ನಿಜವಾಗಿಯೂ ವ್ಯರ್ಥ. ಅಂತಹ ಸಂದರ್ಭದಲ್ಲಿ ಆತನು ಸಾಯಬೇಕೆಂದು ಇಚ್ಛೆ ಪಟ್ಟಲ್ಲಿ ಅದು ತಪ್ಪಾಗಲಾರದು. ಆತನ ಇಚ್ಛೆಯಂತೆ ವೈದ್ಯರ ನೆರವಿನಿಂದ ಸಾವನ್ನು ತಂದುಕೊಂಡಲ್ಲಿ ಅದು ತಪ್ಪಾಗಲಾರದು. ನಮ್ಮ ವೇದಗಳ ಕಾಲದಿಂದಲೂ ಇಚ್ಛಾಮರಣ ಚಾಲ್ತಿಯಲ್ಲಿತ್ತು ಎಂಬುದೊಂದು ವಾದ. ಕಾನೂನಿನಲ್ಲಿ ಇಚ್ಛಾ ಮರಣಕ್ಕೆ ಅವಕಾಶ ಕಲ್ಪಿಸಿದಲ್ಲಿ ಬಹಳಷ್ಟು ದುರುಪಯೋಗವಾಗುತ್ತದೆ ಎಂಬ ವಿಚಾರವನ್ನು ಅಲ್ಲಗಳೆಯಲಾಗುವುದಿಲ್ಲ. ಆದುದರಿಂದ ನಮಗೆ ಬದುಕುವ ಹಕ್ಕಿದೆಯೇ ಹೊರತು ಸಾಯುವ ಹಕ್ಕನ್ನು ಕಾನೂನು ಬದ್ಧವಾಗಿಸಿಲ್ಲ.

ಜೀತ ಪದ್ಧತಿ:
ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಜೀತಾದಾಳಾಗಿ ಬದುಕಲು ಕಾನೂನಿನಲ್ಲಿ ಅವಕಾಶವಿಲ್ಲ. ಪ್ರಾಣಿಯಂತೆ ಒಬ್ಬ ವ್ಯಕ್ತಿ ಇನ್ನೊಬ್ಬನ ವಶದಲ್ಲಿ ಬದುಕುವುದು ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಇದೊಂದು ಸಾಮಾಜಿಕ ಪಿಡುಗು. ಜೀತ ಪದ್ಧತಿಯ ನಿರ್ಮೂಲನಕ್ಕಾಗಿ ಕಠಿಣ ಕಾನೂನು ಜಾರಿಯಲ್ಲಿರುತ್ತದೆ.

ಮಾನವ ಹಕ್ಕು ಮತ್ತು ಮಹಿಳಾ ದೌರ್ಜನ್ಯ:
ಮಹಿಳೆಯರ ಮೇಲೆ ಎಸಗುವ ದೌರ್ಜನ್ಯ ಸಹಾ ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಉದಾಹರಣೆಗೆ ಅತ್ಯಾಚಾರ ಎಸಗುವುದು, ವರದಕ್ಷಿಣೆ ಪಿಡುಗು, ವರದಕ್ಷಿಣೆ ಸಾವು ಇತ್ಯಾದಿ ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ.

ದಸ್ತಗಿರಿಯಾದ ವ್ಯಕ್ತಿಯ ಮಾನವ ಹಕ್ಕುಗಳು:
1. ದಸ್ತಗಿರಿ ಮಾಡಿದ ತಕ್ಷಣ ದಸ್ತಗಿರಿ ಮಾಡುವ ಪೋಲೀಸು ಅಧಿಕಾರಿಯು ಆ ವ್ಯಕ್ತಿಗೆ ಯಾವ ಕಾರಣಕ್ಕಾಗಿ ಆತನನ್ನು ದಸ್ತಗಿರಿ ಮಾಡಲಾಗುತ್ತದೆ ಎಂಬ ವಿಚಾರವನ್ನು ತಿಳಿಸತಕ್ಕದ್ದು. ಹಾಗೂ ದಸ್ತಗಿರಿಯಾದ ವಿಚಾರವನ್ನು ಆತನ ಸಂಬಂಧಿಕರಿಗೆ ತಿಳಿಸತಕ್ಕದ್ದು.
2. ದಸ್ತಗಿರಿಯಾದ 24 ಘಂಟೆಗಳ ಒಳಗೆ ನ್ಯಾಯಾಲಯಕ್ಕೆ ಹಾಜರು ಪಡಿಸತಕ್ಕದ್ದು.
3. ದಸ್ತಗಿರಿಯಾದ ವ್ಯಕ್ತಿಗೆ ವೈದ್ಯಕೀಯ ಸೌಲಭ್ಯ ಒದಗಿಸುವುದು.
4. ಒಬ್ಬ ಖೈದಿಗೆ ತನ್ನ ವಿರುದ್ಧವಾಗಿ ಸಾಕ್ಷಿ ನುಡಿಯುವಂತೆ ಒತ್ತಾಯ ಹೇರುವುದು ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಹಾಗೆ ಒತ್ತಾಯ ಮಾಡಲು ಬರುವುದಿಲ್ಲ.
5.ಪ್ರಕರಣದಲ್ಲಿ ತನ್ನ ಪರವಾಗಿ ವಿವರಣೆ ನೀಡಲು ಅವಕಾಶ.
6. ತಪ್ಪಿತಸ್ಥ ಎಂದು ನ್ಯಾಯಾಲಯ ಪ್ರಕಟಿಸಿದ ತಕ್ಷಣ ಶಿಕ್ಷೆಯ ಪ್ರಮಾಣದ ಬಗ್ಗೆ ನ್ಯಾಯಾಲಯಕ್ಕೆ ಮನವಿ ಮಾಡುವ ಅಧಿಕಾರವಿದೆ.
7. ಶಿಕ್ಷೆಗೆ ಒಳಪಟ್ಟಲ್ಲಿ ತೀರ್ಪಿನ ಉಚಿತ ನಕಲನ್ನು ಪಡೆಯುವ ಹಕ್ಕು.
8. ಕೆಳ ನ್ಯಾಯಾಲಯದ ತೀರ್ಪಿನ ವಿರುದ್ಧ ಅಪೀಲು ಮಾಡುವ ಅಧಿಕಾರ.
9. ದಸ್ತಗಿರಿಯಾಗಿ 60 ದಿನಗಳು ಹಾಗೂ 90 ದಿನಗಳು ಕಳೆದರೂ ಅಂತಿಮ ವರದಿ (Charge Sheet) ಹಾಕದಿದ್ದಲ್ಲಿ ಜಾಮೀನಿನಲ್ಲಿ ಬಿಡುಗಡೆ ಹೊಂದುವ ಅಧಿಕಾರ.

ಜೈಲಿನಲ್ಲಿರುವ ವ್ಯಕ್ತಿ ತನ್ನ ಮೂಲಭೂತ ಹಕ್ಕನ್ನು ಕಳೆದುಕೊಳ್ಳುವುದಿಲ್ಲ. ಖೈದಿಯಾದವನಿಗೆ ಬದುಕುವ ಹಕ್ಕಿರುತ್ತದೆ. ಆತನಿಗೆ ಜೈಲಿನಲ್ಲಿ ವೈದ್ಯಕೀಯ ಸೌಲಭ್ಯ ಪಡೆಯುವ ಹಕ್ಕಿದೆ, ಉಚಿತ ಕಾನೂನು ನೆರವು ಪಡೆಯುವ ಹಕ್ಕಿದೆ. ಜೈಲಿನೊಳಗೆ ಕಿರುಕುಳದ ವಿರುದ್ಧ ಧ್ವನಿ ಎತ್ತುವ ಹಕ್ಕಿದೆ, ತನ್ನನ್ನು ಸಂದರ್ಶಿಸಲು ಬರುವ ವ್ಯಕ್ತಿಗಳೊಂದಿಗೆ ಸಂದರ್ಶಿಸುವ ಹಕ್ಕಿದೆ.

ಮಾನವ ಹಕ್ಕಿನ ಬಗ್ಗೆ ಸೂಕ್ತ ಅರಿವನ್ನು ಜನ ಸಾಮಾನ್ಯರಿಗೆ ತಿಳಿಯ ಪಡಿಸುವುದು ಸರಕಾರ ಹಾಗೂ ಮಾನವ ಹಕ್ಕಿನ ಆಯೋಗದ ಆದ್ಯ ಕರ್ತವ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಮಾನವ ಹಕ್ಕಿನ ಆಯೋಗವು ಹಳ್ಳಿ ಪ್ರದೇಶಗಳಲ್ಲಿ ಅರಿವನ್ನು ಮೂಡಿಸಿದರೆ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಜನಸಾಮಾನ್ಯರು ತಮ್ಮ ಮಾನವ ಹಕ್ಕನ್ನು ಉಳಿಸಿಕೊಂಡು ಸಮಾಜದಲ್ಲಿ ಗೌರವಯುತವಾಗಿ ಬಾಳ್ವೆ ಮಾಡಲು ಅವಕಾಶ ಕಲ್ಪಿಸಿದಂತಾಗುತ್ತದೆ.

– ತೋನ್ಸೆ ನಾರಾಯಣ ಪೂಜಾರಿ, ನ್ಯಾಯವಾದಿ
ಮಾಜಿ ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು

4 thoughts on “ಮಾನವ ಹಕ್ಕುಗಳ ರಕ್ಷಣಾ ಕಾನೂನು-1993

  1. ಮಾನ್ಯರೆ,
    ಮಾನವ ಹಕ್ಕುಗಳ ಬಗ್ಗೆ ಹೆಚ್ಚು ಹೆಚ್ಚಿನ ಪ್ರಮಾಣದ ಮಾಹಿತಿಯನ್ನು ನೀಡಿದ್ದಕ್ಕಾಗಿ ನಿಮಗೆ ಸಹಸ್ರ ಧನ್ಯವಾದಗಳು. ಇದು ಲಿಖಿತ ರೂಪದಲ್ಲಿ ಮಾತ್ರವಲ್ಲದೆ, ನಿಜವಾದ ಜೀವನದಲ್ಲಿ ನಡೆಯಲು ಸಾಧ್ಯತೆ ಇದೆಯಾ ಎಂಬ ನನ್ನ ಯಕ್ಷ ಪ್ರಶ್ನೆ ?

  2. ಮಾನವ ಹಕ್ಕುಗಳ ರಕ್ಷಣೆಯ ಮತ್ತು ಹೋರಾಟದ ಬಗ್ಗೆ ಬಹಳ ಸುಲಭವಾಗಿ ಅರ್ಥ ಮಾಡಿಕೊಳ್ಳಲು ಈ ನಿಮ್ಮ ಲೇಖನ ಸಹಕಾರಿಯಾಗಿದೆ, ಧನ್ಯವಾದಗಳು

  3. ಭಾರತದ ಸಂವಿಧಾನವನ್ನು ಅವರವರ ಭಾಷೆಯಲ್ಲಿ ಪ್ರತಿ ಮನೆಮನೆಗೆ ತಲುಪ ಬೇಕಿತ್ತು

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 16-11-2024
ಸ್ಥಳ : ಯುವವಾಹಿನಿ ಸಭಾಂಗಣ 3ನೇ ಮಹಡಿ, ರಘು ಬಿಲ್ಡಿಂಗ್ ಊರ್ವ ಸ್ಟೋರ್, ಮಂಗಳೂರು

ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕ

ದಿನಾಂಕ : 15-11-2024
ಸ್ಥಳ : ಸಿ. ಎಸ್. ಐ. ಬಾಲಿಕಾಶ್ರಮ, ಮೂಲ್ಕಿ

ಯುವವಾಹಿನಿ (ರಿ.) ಮೂಲ್ಕಿ ಘಟಕ

ದಿನಾಂಕ : 23-11-2024
ಸ್ಥಳ : ಸಂಪಿಗೆ ನಗರ, ಉದ್ಯಾವರ ಉಡುಪಿ

ಯುವವಾಹಿನಿ (ರಿ) ಉಡುಪಿ ಘಟಕ

ದಿನಾಂಕ : 24-11-2024
ಸ್ಥಳ : ನಾಗಪ್ಪ ಕಾಂಪ್ಲೆಕ್ಸ್ , ಎನ್ .ಹೆಚ್-66, ಬಲಾಯಿಪಾದೆ, ಉಡುಪಿ

ಯುವವಾಹಿನಿ (ರಿ) ಉಡುಪಿ ಘಟಕ

ದಿನಾಂಕ : 17-11-2024
ಸ್ಥಳ : ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ಹೆಜಮಾಡಿ

ಯುವವಾಹಿನಿ (ರಿ) ಪಡುಬಿದ್ರಿ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
error: Content is protected !!