ಯುವವಾಹಿನಿಯ ಸ್ಥಾಪಕ ಸದಸ್ಯರಲ್ಲಿ ಓರ್ವರಾದ ಶ್ರೀ ಎಂ. ಸಂಜೀವ ಪೂಜಾರಿಯವರು ಬಿಲ್ಲವ ಸಮಾಜಕ್ಕೆ ಯುವವಾಹಿನಿಯಂತಹ ಒಂದು ಯುವಸಂಘಟನೆಯ ಕನಸ್ಸನ್ನು ಮೊದಲಾಗಿ ಕಂಡವರು. ತನ್ನ ಕನಸ್ಸನ್ನು ಹಿರಿಯರಾದ ಶ್ರೀ ಮಂಜುನಾಥ ಸುವರ್ಣ, ಶ್ರೀ ಆದಿಶ್, ಶ್ರೀ ಅಣ್ಣು ಪೂಜಾರಿ, ಶ್ರೀ ದಿನೇಶ್ ಅಮೀನ್ ಮಟ್ಟು ಮುಂತಾದವರಲ್ಲಿ ತಿಳಿಸಿ ಅದರ ಸಾಕಾರಕ್ಕಾಗಿ ಹಗಲಿರುಳು ದುಡಿದವರು. ಡಾನ್ ಬಾಸ್ಕೋ ಕಟ್ಟಡದ ಒಂದು ಕೋಣೆಯಲ್ಲಿ ವಾಸವಾಗಿದ್ದ ಇವರ ಕೋಣೆಯಲ್ಲಿಯೇ ಸಂಘಟನೆಯ ಆರಂಭಿಕ ಸಮಾಲೋಚನೆಗಳು ನಡೆಯುತ್ತಿದ್ದವು.
ಬಳಿಕ ಈ ಸಮಾಲೋಚನಾ ಸಭೆಗಳು ಬಾವುಟಗುಡ್ಡೆಯ ಟಾಗೋರ್ ಪಾರ್ಕ್, ಅನಂತರ ಮಂಗಳ ಕ್ರೀಡಾಂಗಣಕ್ಕೆ ಸ್ಥಳಾಂತರಗೊಂಡು ಸಂಘಟನೆಯ ಸ್ಥಾಪನೆಯ ಬಳಿಕ ಡಾನ್ ಬಾಸ್ಕೋ ಮಿನಿಹಾಲ್‌ನಲ್ಲಿ ಸಭೆಗಳು ನಡೆಯತೊಡಗಿದವು.
ಜಿಲ್ಲೆಯ ವಿವಿಧೆಡೆ ಸಂಘಟನೆಯ ಘಟಕಗಳು ಸ್ಥಾಪನೆಯಾಗುವುದರೊಂದಿಗೆ 1988 ರ ಜನವರಿ 24ರಂದು ಯುವವಾಹಿನಿಯ ಸಮಾವೇಶ ನಡೆದು ಕೇಂದ್ರ ಸಮಿತಿಯ ರಚನೆಯಾಯಿತು. ಶ್ರೀ ಸಂಜೀವ ಪೂಜಾರಿಯವರು ಕೇಂದ್ರ ಸಮಿತಿಯ ಪ್ರಥಮ ಅಧ್ಯಕ್ಷರಾಗಿ ಆಯ್ಕೆಗೊಂಡರು.
1988-89 ನೇ ಸಾಲಿನ ಅಧ್ಯಕ್ಷರಾಗಿದ್ದ ಶ್ರೀ ಸಂಜೀವ ಪೂಜಾರಿಯವರು ತಮ್ಮ ಅಧಿಕಾರವಧಿಯಲ್ಲಿ ಯುವವಾಹಿನಿಗೆ ಮೂಲಭೂತ ಚೌಕಟ್ಟನ್ನು ಒದಗಿಸಿ ಕೊಡುವುದರೊಂದಿಗೆ ಸಂಘಟನೆಗೆ ನಿಯಮ ನಿಬಂಧನೆಗಳ ರಚನೆಯನ್ನು ಪ್ರಥಮವಾಗಿ ರೂಪಿಸಿದವರು. ಅಲ್ಲದೆ ಜಿಲ್ಲೆಯಾದ್ಯಂತ ಓಡಾಡಿ 13 ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಂಡವರು. ಯುವವಾಹಿನಿಯಂತಹ ಸಮುದಾಯ ಸಂಘಟನೆಯಲ್ಲಿ ’ವ್ಯಕ್ತಿತ್ವ ವಿಕಸನ’ ದಂತಹ ತರಬೇತಿ ಕಾರ್ಯಕ್ರಮಗಳ ಕಲ್ಪನೆಯನ್ನು ಇರಿಸಿಕೊಂಡು ಅದನ್ನು ಕಾರ್ಯ ರೂಪದಲ್ಲಿ ತಂದವರು. ಯುವವಾಹಿನಿಗೆ ಒಂದು ಮುಖವಾಣಿ ಪತ್ರಿಕೆಯ ಅಗತ್ಯವನ್ನು ಮನಗಂಡು ತನ್ನ ಮಿತ್ರರ ಸಹಕಾರದೊಂದಿಗೆ ಯುವವಾಹಿನಿ ಮಾಸಿಕ ಪತ್ರಿಕೆಯನ್ನು ಆರಂಭಿಸಿದವರು.
ಬಿ.ಕಾಂ. ಪದವಿಯೊಂದಿಗೆ ಶ್ರೀ ಸಂಜೀವ ಪೂಜಾರಿ ಯವರು ಮಂಗಳೂರು ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆಯಲ್ಲಿ ಉದ್ಯೋಗಕ್ಕೆ ಸೇರಿ ಹಂತ ಹಂತವಾಗಿ ಮೇಲೆ ಬಂದವರು. ದಣಿವರಿಯದ, ಅದಮ್ಯ ಉತ್ಸಾಹದ ಯುವಕ ಸಂಜೀವ ಪೂಜಾರಿಯವರು ತನ್ನ ವಿದ್ಯಾಭ್ಯಾಸವನ್ನೂ ಮುಂದುವರಿಸಿ ಕಾನೂನು ಪದವಿಯನ್ನು ಪಡೆದರು. ಕೆಲವು ಸಮಯ ತನ್ನ ಬಿಡುವಿನ ವೇಳೆಯಲ್ಲಿ ಮಂಗಳೂರಿನ ಖ್ಯಾತ ವಕೀಲರಾದ ಎಲ್.ಡಿ. ಬಲ್ಲಾಳ್‌ರವರ ಬಳಿ ಕಾನೂನು ಅಭ್ಯಾಸವನ್ನು ನಡೆಸಿದ್ದರು. ಮಾತ್ರವಲ್ಲದೆ ಸ್ನಾತಕೋತ್ತರ ಪದವಿಯಾದ ಎಲ್.ಎಲ್.ಎಂ.ನ್ನು ಪಡೆದರು. ಅಂತರಾಷ್ಟ್ರೀಯ ನೌಕೋದ್ಯಮ ವೃತ್ತಿಪರ ಸಂಸ್ಥೆ Institute of Charterd Ship workers, London ಇದರ ಸದಸ್ಯತ್ವವನ್ನು ಪಡೆಯಲು ನಡೆಸಲ್ಪಡುವ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಪ್ರಸಕ್ತ ಎಂ.ಸಿ.ಎಫ್.ನಲ್ಲಿ ಅಧಿಕಾರಿ (Executive) ಯಾಗಿರುವ ಸಂಜೀವ ಪೂಜಾರಿಯವರ ಪತ್ನಿ ಶ್ರೀಮತಿ ನಿರ್ಮಲ ಶ್ರೀ ಗೋಕರ್ಣನಾಥ ಕೋ-ಆಪರೇಟಿವ್ ಬ್ಯಾಂಕ್‌ನ ಕೂಳೂರು ಶಾಖೆಯ ಶಾಖಾಧಿಕಾರಿ. ಒಬ್ಬಳೇ ಮಗಳು ನಿಖಿತಾ ದಂತ ವೈದ್ಯಕೀಯ ಪದವೀಧರರಾಗಿದ್ದು ಕಳೆದ ನವೆಂಬರ್ 1, 2012 ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದರು.
ವಿಳಾಸ : ’ಓಂಕಾರ’, ಮ.ನಂ. 2-49/11(1), ನವಗಿರಿ ನಗರ, ಹೊಸಬೆಟ್ಟು, ಮಂಗಳೂರು – 575 019
ಫೋನ್: 0824-2400664, 94480571424