ವೈಚಾರಿಕ
– ಅಮಿತಾಂಜಲಿ ಕೆ., ಉಡುಪಿ
ಬಾಲ್ಯವೆಲ್ಲಾ ಕ್ರಿಶ್ಚಿಯನ್ ಒಡನಾಡಿಗಳೊಂದಿಗೇ ಆಡಿ ಬೆಳೆದವಳು ನಾನು. ಮುಸ್ಲಿಂ ಬಾಂಧವರ ಜೊತೆ ಬಾಂಧವ್ಯದ ಸುಖವನ್ನು ಕಂಡವಳು ನಾನು. ಅಪ್ಪ ಸ್ವಂತ ಮನೆ ಕಟ್ಟುವವರೆಗೂ ಕ್ರಿಶ್ಚಿಯನ್ನರ ಒಕ್ಕಲು ಮನೆಗಳಲ್ಲೇ ಬಾಡಿಗೆಗಿದ್ದೆವು. ಅಜ್ಜಿ ಮನೆಗೆ ಹೋದಾಗಲೆಲ್ಲ ಅಜ್ಜಿಯ ಒಡಹುಟ್ಟಿದಂತಿದ್ದ ನೆರೆಮನೆಯ ನಮ್ಮ ’ಸಣ್ಣಜ್ಜಿ’ ಜಾಕಿಯಾಬಿ ನಮ್ಮ ಮೇಲೆ ಪ್ರೀತಿಯ ಮಳೆಯನ್ನೇ ಹರಿಸುತ್ತಿದ್ದರು. ಯಾವತ್ತೂ ಅವರಲ್ಲಿ ಯಾರೂ ನಮ್ಮನ್ನು ಹಿಂದೂಗಳೆಂದು ಹಂಗಿಸಿದ್ದಿಲ್ಲ. ಅವರು ಬೇರೆ ಧರ್ಮೀಯರೆಂಬ ಕಾರಣಕ್ಕೆ ನಾವವರನ್ನು ದ್ವೇಷಿಸಿದ್ದಿಲ್ಲ. ಆತ್ಮೀಯ ಬಾಂಧವ್ಯ ನಮ್ಮೊಳಗಿತ್ತು. ’ದನಿಯವರು’ – ’ಬಾಡಿಗೆದಾರರು’ ಎಂಬ ತಾರತಮ್ಯ ಇರಲಿಲ್ಲ. ನಾಯಿ ಸಾಕುವವರು – ದನದ ಮಾಂಸ ತಿನ್ನುವವರು ಎಂಬ ಅಸಹ್ಯ ಭಾವನೆಯೂ ಇರಲಿಲ್ಲ. ಕಷ್ಟ-ಸುಖಗಳಲ್ಲಿ ಒಬ್ಬರಿಗೊಬ್ಬರು ಜೊತೆಯಾದವರು ನಾವು. ಈ ಮನೆಯ ಹಪ್ಪಳ ಆ ಮನೆಯಲ್ಲೂ ಆ ಮನೆಯ ಸಂಡಿಗೆ ಈ ಮನೆಯಲ್ಲೂ ತಯಾರಾಗುತ್ತಿತ್ತು. ಜೋಸೆಫ್ ಅಂಕಲ್ ಊರಲ್ಲಿಲ್ಲದೆ ಇದ್ದಾಗ ಮೇರಿ ಆಂಟಿಯ ಮನೆಗೆ ಮಲಗಲು ಓಡುತ್ತಿದ್ದೆವು. ಅಮ್ಮ ಸೊಂಟನೋವೆಂದು ಮಲಗಿದಾಗ ಕೌಸುರಾಬಿ ಸುಲೇಮಾನ್ ಸಾಬಿಯವರು ತಂದು ಕೊಡುತ್ತಿದ್ದ ಬೇರಿನ ಕಷಾಯ ಮಾಡಿ ಕುಡಿಸುತ್ತಿದ್ದರು.
ಬಾಡಿಗೆ ಮನೆಗಳಲ್ಲಿ ಎಲ್ಲಾ ಮತ-ಧರ್ಮದವರಿದ್ದರು. ನಮ್ಮೆಲ್ಲಾ ಮನೆಗಳಲ್ಲಿ ವರ್ಷವಿಡೀ ಹಬ್ಬ. ಹಿಂದೂಗಳ ಹಬ್ಬ ಬಂದಾಗ ನಮ್ಮ ಮನೆಗಳಲ್ಲಿ ತಯಾರಾಗುತ್ತಿದ್ದ ಅಡುಗೆ ಅವರ ಮನೆಗೂ ಕ್ರಿಶ್ಚಿಯನ್-ಮುಸ್ಲಿಂ ಹಬ್ಬಗಳು ಬಂದಾಗ ಅವರ ಮನೆಯ ಅಡುಗೆ ನಮ್ಮ ಮನೆಗೂ ಬರುತ್ತಿತ್ತು.
ನಮ್ಮೂರ ದೇವಸ್ಥಾನದಲ್ಲಿ ಜಾತ್ರೆ ನಡೆದಾಗ ನಮ್ಮೊಂದಿಗೆ ಅವರ ಮನೆ ಮಕ್ಕಳು ಬಂದು ಜಾತ್ರೆಯ ಸಂಭ್ರಮದಲ್ಲಿ ಪಾಲು ಪಡೆಯುತ್ತಿದ್ದರು. ನಾವೂ ಅಷ್ಟೇ, ಕ್ರಿಸ್‌ಮಸ್ ಹಬ್ಬದ ದಿನಗಳಲ್ಲಿ ನಮ್ಮೂರ ಚರ್ಚ್‌ನಲ್ಲಿ ನಡೆಯುವ ಕಾರ್ಯಕ್ರಮಗಳಿಗೆ, ತೆನೆಹಬ್ಬಕ್ಕೆ- ಎಲ್ಲದಕ್ಕೂ ಅವರೊಂದಿಗೆ ಹೋಗಿ ಖುಷಿ ಹಂಚಿಕೊಳ್ಳುತ್ತಿದ್ದೆವು. ಏಸುವಿನ ಬಗ್ಗೆ ಅವರಷ್ಟು ಅಲ್ಲದಿದ್ದರೂ ಕೆಲವಷ್ಟು ತಿಳಕೊಂಡಿದ್ದೆವು.
ಕಾನ್ವೆಂಟ್ ಶಾಲೆಯಲ್ಲಿ ಓದಿದವಳು ನಾನು. ಅವರ ಶಿಸ್ತಿಗೆ ನನ್ನ ಗೌರವವಿದೆ. ನಮ್ಮ ಮನೆಯಲ್ಲಿ ಭಗವದ್ಗೀತೆಯೊಂದಿಗೆ ಬೈಬಲ್ಲೂ ಇದೆ. ದೇವರ ಪೀಠದಲ್ಲಿ ಕೊಳಲು ಹಿಡಿದ ವಾಸುವಿನೊಂದಿಗೆ ಶಿಲುಬೆಯೇರಿದ ಏಸುವು ಇದ್ದಾನೆ. ಟಿ.ವಿ.ಯಲ್ಲಿ ಗುಡ್‌ಫ್ರೈಡೆಯಂದು ಏಸುವಿನ ಸಿನಿಮಾ ಬಂದರೆ ಮಕ್ಕಳಿಗೆ ಎಲ್ಲಾ ಕೆಲಸ ಬಿಟ್ಟು ಅ ಸಿನಿಮಾ ನೋಡುವಂತೆ ಹೇಳುತ್ತೇನೆ. ವಾರಕ್ಕೊಮ್ಮೆ ಕುಳಿತು ಭಗವದ್ಗೀತೆಯ ಶ್ಲೋಕಗಳನ್ನು ಓದಿಸುತ್ತೇನೆ. ಸಂಕಟದ ಸಮಯದಲ್ಲಿ ಶ್ರೀ ಕೃಷ್ಣಾಯ ನಮಃ ಎನ್ನಿ ಎನ್ನುತ್ತೇನೆ. ಆದರೆ ಈಗ ಸಂಕಟ ಬಂದಾಗ ವೆಂಕಟರಮಣ ಎಂದರೆ ಏಸು ಇದ್ದಲ್ಲೇ ಕೂತು ನೋಡುತ್ತಾನೋ ಏಸುವೇ ಎಂದು ಕರೆದರೆ ಕೃಷ್ಣ ಬಳಿ ಬಾರದೇ ಹೋದಾನೋ ’ರಾಮಾ’ ಎಂದರೆ ’ರಹೀಮ’ ಬಾರದಿರನೋ ಎಂಬ ಭಯ.
ಇತ್ತೀಚೆಗೆ ಸಮಾಜದಲ್ಲಿ ನಡೆಯುವ ಆಗುಹೋಗುಗಳನ್ನು ನೋಡುವಾಗ ನಾವು ಇಷ್ಟರವರೆಗೂ ಮಾಡಿದ್ದು ತಪ್ಪು ಕೆಲಸವೇ ಅಥವಾ ಈಗ ಯಾರಿಂದಲೋ ತಪ್ಪಾಗುತ್ತಿದೆಯೇ ಎನ್ನುವ ಸಂಶಯ ಕಾಡುತ್ತದೆ. ನಮ್ಮದು ಜಾತ್ಯಾತೀತ ರಾಷ್ಟ್ರ ಎಂದು ಕರೆದುಕೊಂಡವರೂ ನಾವೇ, ’ಒಂದೇ ಜಾತಿ, ಒಂದೇ ಮತ, ಒಂದೇ ದೇವರು’ ಎಂದು ಹೇಳುತ್ತಾ ಬಂದವರೂ ನಾವೆ. ಆದರೀಗ ’ಏಸುವೊಬ್ಬನೇ ಜಗತ್ರಕ್ಷಕ’ ಎಂಬರ್ಥದಲ್ಲಿ ವರ್ತಿಸುವವರೂ ನಮ್ಮವರೇ, ’ಕೃಷ್ಣನೊಬ್ಬನೇ ಸಾಕ್ಷಾತ್ ಭಗವಂತನ ಅವತಾರ’ ಎಂಬುದನ್ನು ಸಾರಿ ಸಾರಿ ಹೇಳಲು ಕಷ್ಟ ಪಡುವವರೂ ನಾವೇ, ’ಅಲ್ಲಾನೇ ಎಲ್ಲಾ’ ಎನ್ನುವವರನ್ನು ದಬ್ಬವವರೂ ನಮ್ಮವರೇ.
ಈ ರೀತಿಯ ಬೆಳವಣಿಗೆಗಳನ್ನು ನೋಡುವಾಗ ಮನಸ್ಸಿನ ಮೂಲೆ ಮೂಲೆಗಳಲ್ಲಿ ಚುಚ್ಚಿ ಚುಚ್ಚಿ ನೋವು ಆವರಿಸಿದ ಅನುಭವ. ನನ್ನಮ್ಮ ನಿನ್ನಮ್ಮನಿಗಿಂತ ಒಳ್ಳೆಯವಳು ಎಂದೋ ಜಗಳಾಡಿಕೊಂಡಂತಾಯಿತು ನಮ್ಮ ಪರಿಸ್ಥಿತಿ. ನಮ್ಮೊಳಗಿನ ಅಪನಂಬಿಕೆ, ಮತಾಂತರ ಇತ್ಯಾದಿಗಳು ನಾವು ನಂಬಿದ ಏಸುವನ್ನು ನಾವೇ ಸಂಶಯ ಪಡುವಂತಾಗಿದೆ. ಅಪ್ಪನ ಜೊತೆ ಬಿಟ್ಟಿರಲಾರೆ-ಅಮ್ಮನ ಸಖ್ಯ ಬಿಟ್ಟಿರಲಾರೆ ಎಂಬಂತಾಗಿದೆ. ಈಗಿನ ಪರಿಸ್ಥಿತಿ. ಇದು ಎಲ್ಲಿಂದ ಆರಂಭವಾಯಿತು ಯಾರಿಂದ ಆರಂಭವಾಯಿತು. ಯಾರಿಗೂ ತಿಳಿದಿರಲಿಕ್ಕಿಲ್ಲ. ಅಂತೂ ಮತಭೇದ ಶುರುವಾಗಿಬಿಟ್ಟಿದೆ. ಇತ್ತೀಚೆಗೆ ಮನೆಗಳು ಹತ್ತಿರವಿದ್ದರೂ ಮನಸ್ಸು ದೂರವಾಗುತ್ತಿದೆ.
ನಮ್ಮ ಬಾಲ್ಯದಲ್ಲಿ ಸ್ನೇಹ, ವಾತ್ಸಲ್ಯ, ಪ್ರೀತಿ, ಗೆಳೆತನದ ಕತೆಗಳನ್ನು ಹೇಳುತ್ತಿದ್ದ ನಮ್ಮ ತಾಯಂದಿರ ಹಾಗೆಯೇ ನಾವಾಗಲು ಮನಸ್ಸು ತೀರಾ ಬಯಸುತ್ತಿದ್ದರೂ ನಾಲಗೆ ಹಿಂದೇಟು ಹಾಕುವಂತಿದೆ. ಅವನ ಸಂಗ ಗೆಳೆತನ ಬೇಡ, ಇವನ ಜೊತೆ ಹೋಗಬೇಡ. ಅವರೊಂದಿಗೆ ಮಾತು ಬೇಡ- ಇವನ ಮನೆಗೆ ಹೋಗಬೇಡ ಎಂದು ಹೇಳುವಾಗ ಎಲ್ಲೋ ಒಂದೆಡೆ ಅಪರಾಧಿ ಭಾವನೆ – ಕೂಡಲೇ ನಮ್ಮ ಮಕ್ಕಳ ಕಾಳಜಿ ನಮಗೆ ಎಂದು ನಮಗೆ ನಾವೇ ಹೇಳಿಕೊಳ್ಳುವ ಸಮಜಾಯಿಸಿಕೆ. ಯಾಕೆ ಈ ಭಯ-ಆತಂಕ ಎಲ್ಲ. ಎಲ್ಲಿಂದ ಆರಂಭವಾದುವು ಇವೆಲ್ಲ. ಎಲ್ಲೋ ಯಾವುದೋ ಕಾರಣಕ್ಕೆ ಹುಟ್ಟಿಕೊಂಡ ದ್ವೇಷದ ಹೊಗೆ ದಟ್ಟವಾಗಿ ಉಸಿರುಗಟ್ಟುವಷ್ಟು ಹಬ್ಬುತ್ತಲೇ ಇದೆ. ಒಂದೇ ಜಾತಿ-ಒಂದೇ ಮತ-ಒಂದೇ ದೇವರು ಎಂದು ಸಾರಿ ಸಾರಿ ಹೇಳುವ ನಾವು, ಅದೇ ದೇವರನ್ನು ಬೇರೊಬ್ಬ ಅವನದೇ ಹೆಸರಿನಲ್ಲಿ ಕರೆದು ಪೂಜಿಸಿದರೆ ಒಪ್ಪಿಕೊಳ್ಳಲಾಗದ ಸ್ಥಿತಿ ನಮ್ಮದು. ಹಿರಿಯರಾಗಿ, ಹೆತ್ತವರಾಗಿ, ಶಿಕ್ಷಕರಾಗಿ ಮಕ್ಕಳಿಗೆ ದ್ವೇಷ ಸಲ್ಲದೆಂಬ ಬುದ್ಧಿ ಮಾತನ್ನು ಪ್ರೀತಿಯ ನೀತಿ ಪಾಠವನ್ನು ಹೇಳುತ್ತಲೇ ಆವರಣದೊಳಗೆ ಎಚ್ಚರಿಕೆಯ ಪಿಸುಮಾತನ್ನು ಆಡುತ್ತೇವೆ. ಆಕಸ್ಮಾತ್ ಪರಸ್ಪರರು ಜೊತೆಗಿರುವ ಸಂದರ್ಭ ಬಂದರೆ ಯಾರಾದರೂ ನಮ್ಮನ್ನು ಕಂಡರೇನೋ ಎಂಬ ಅಳುಕು. ನಮ್ಮವರ ನಡುವೆಯೇ ನಾವು ಕಳೆದು ಹೋಗುವ ಭೀತಿ. ಹಾಗಾಗಿಯೇ ಹಬ್ಬ ಹರಿದಿನಗಳಲ್ಲಿ ಒಬ್ಬರನ್ನೊಬ್ಬರು ತಬ್ಬಿಕೊಳ್ಳುವ, ಪರಸ್ಪರ ಪ್ರೀತಿ ಹಂಚಿಕೊಳ್ಳುವ ದಿನಗಳು ಅದೆಲ್ಲಿ ಹೋದವೋ ಹುಡುಕಬೇಕಾಗಿದೆ.
Ellellu kandakagalu……..nirmisidavararu
………! ?