ಆಶಯ
ಕೆ. ರಾಜೀವ ಪೂಜಾರಿ
ಈ ಸೃಷ್ಟಿಯ ಸೌಂದರ್ಯವೇ ಬದುಕಿನ ಆಂತರ್ಯ. ತೇಲುವ ಮೋಡಗಳಲ್ಲಿ, ಹರಿಯುವ ನದಿಯ ಜಲದಲ್ಲಿ. ಹಸುರಿನ ಸಿರಿಯಲ್ಲಿ, ಹೂಗಳ ವರ್ಣದಲ್ಲಿ…ಮಂದಹಾಸದಲ್ಲಿರುವುದು ಅನಂತ ಚೈತನ್ಯದ ಒಂದು ರೂಪವೇ ಎನ್ನುವುದು ಸನಾತನೀಯ ಸಚ್ಚಿಂತನೆ. ನಮ್ಮದು ಸನಾತನ ಚಿಂತನೆಯನ್ನು ಗೌರವಿಸುವ ದೇಶ. ಮಾನವೀಯ ಮೌಲ್ಯಗಳನ್ನು ಮಾನ್ಯ ಮಾಡುವ ಮಹನೀಯರುಗಳು ಈಗಲೂ ಈ ನೆಲದಲ್ಲಿರುವರು. ಇಲ್ಲಿನ ಮಣ್ಣಿನ ಗುಣವೇ ದೈವಿಕ ಭಾವದಿಂದ ಕೂಡಿರುವುದು. ಅನೇಕ ಸಂತ ಮಹಂತರುಗಳು ಈ ನೆಲದಲ್ಲಿ ಬಾಳಿ ಹೋಗಿದ್ದಾರೆ. ಅವರ ನುಡಿಗಳು ಮನುಕುಲಕ್ಕೆ ದಾರಿದೀಪಗಳಾಗಿವೆ. ಆ ದೀಪದ ಬೆಳಕಿನಲ್ಲಿ ಸಾಗಿದ ಅನೇಕರು ಜನಮಾನಸದಲ್ಲಿ ಜಾಗೃತಿಯನ್ನುಂಟು ಮಾಡಿದ್ದಾರೆ. ಅಂತಹ ಅನುಭವಿಗಳ, ಸದ್ಗುರುಗಳ, ಸಜ್ಜನರೊಡಗೂಡಿದ ಸಾಂಗತ್ಯದಿಂದ ಆತ್ಮಶುದ್ಧಿ, ಆತ್ಮಶಕ್ತಿ-ಶ್ರದ್ಧಾಭಕ್ತಿಗಳು ಚಿಗುರೊಡೆಯುತ್ತವೆ. ಈ ಸಾಂಗತ್ಯವೇ ಸತ್ಸಂಗ. ಇಂತಹ ಸತ್ಸಂಗಗಳು, ಒಡನಾಟ, ಧಾರ್ಮಿಕ ಸಾನಿಧ್ಯಗಳು ಒತ್ತಡ, ಗೊಂದಲ, ಹೊಂದಾಣಿಕೆಯ ಕೊರತೆ ಇತ್ಯಾದಿಗಳಿಂದ ಬೇಸತ್ತ ಮನದ ಬೇಗುದಿಗೆ ಶಾಂತಿ-ನೆಮ್ಮದಿಯನ್ನು ನೀಡುತ್ತದೆ. ಹಾಗೂ ಮುಂದೆ ಸದ್ವಿಚಾರ, ಸದ್ಭಾವನೆ, ಸತ್ಯ-ಪ್ರಾಮಾಣಿಕತೆಯ ವಿಚಾರಗಳ ವಿನಿಮಯವು ಪ್ರಾಮಾಣಿಕತೆಯ ವಿಚಾರಗಳ ಅರಿವು ಜೀವನ ಮೌಲ್ಯಗಳ ತಿಳುವಳಿಕೆಗೆ ತಳಹದಿಯಾಗುತ್ತದೆ.
ಈ ಸಾತ್ವಿಕ ಚಿಂತನೆಯ ತಳಹದಿ ನಮ್ಮ ಪರಂಪರೆಯಲ್ಲಡಗಿದೆ. ಆದುದರಿಂದಲೇ ಇಂದಿಗೂ ಈ ನೆಲದಲ್ಲಿ ಶಾಂತಿ ಸಮಾಧಾನ ಜೀವಂತವಾಗಿದೆ. ಉತ್ತಮ ನಡೆಯ ವ್ಯಕ್ತಿಗಳು ನಮ್ಮ ನಡುವೆ ಇದ್ದಾರೆ. ಅವರ ನಡೆ-ನುಡಿಗಳಿಂದ, ಆಚಾರ-ವಿಚಾರಗಳಿಂದ, ಸರಳತೆ-ಸಜ್ಜನಿಕೆಯಿಂದ, ಸ್ನೇಹ ಸೌಹಾರ್ದದಿಂದ ಬದುಕಲು ಕಲಿಯಬಹುದು. ಕೇವಲ ಬಾಳುವುದೇ ಬದುಕಲ್ಲ. ಬದುಕಿನರ್ಥವ ತಿಳಿದ ಚಿಂತನೆಯೇ ನಿಜ ಬದುಕು ನರಜೀವಿಗೆ – ಖ್ಯಾತ ಕವಿ ನಿಸಾರ್ ಅಹಮದ್‌ರ ಈ ನೈಜ ನುಡಿ ಬದುಕನ್ನು ಸಾಗಿಸಬೇಕೆನ್ನುವವರಿಗೆ ಬೆಳಕು ನೀಡುವ ಕಂದೀಲು.
ನಮ್ಮದು ಶಾಂತಿ ಅಹಿಂಸೆಯ ಭೂಮಿ. ಇಲ್ಲಿನ ಪ್ರತಿ ಗಿಡಮರಗಳು, ಪ್ರಾಣಿ ಪಕ್ಷಿ ಸಂಕುಲಗಳು ಶಾಂತಿ ಮಂತ್ರವನ್ನೇ ಉಸುರುತ್ತವೆ. ಮಹಾಭಾರತಾಂತರ್ಗತ ಭಗವದ್ಗೀತೆಯ ಪರಸ್ಪರ ಪೂರಕತೆಯ ಸಂದೇಶಕ್ಕೆ ವಸ್ತುತಃ ನಮ್ಮ ದೇಶವೇ ಮಹಾನಿದರ್ಶನವಾಗಿದೆ. ಪರಸ್ಪರ ಗೌರವ, ಪರಸ್ಪರ ಸಹಿಷ್ಣುತೆ, ಧರ್ಮ ಸಹಿಷ್ಣುತೆ ನಮ್ಮ ಭಾರತದಲ್ಲಿದ್ದಷ್ಟು ಇನ್ನೆಲ್ಲೂ ಇಲ್ಲ. ಜಗತ್ತಿನ ಇತಿಹಾಸದಲ್ಲಿ ಯಾವ ದೇಶದ ಮೇಲೂ ಎಂದೂ ದಂಡೆತ್ತಿ ಆಕ್ರಮಣ ಮಾಡಿಲ್ಲದ ಒಂದು ಮಹಾದೇಶವೆಂದರೆ ಭಾರತವೇ ಸರಿ. ವಿಶ್ವಭ್ರಾತೃತ್ವ ಸಂದೇಶವನ್ನು ನಮ್ಮ ಪರಂಪರೆ ಈ ಜಗತ್ತಿಗೆ ನೀಡಿದೆ.
ಆದರೆ ಇಂದು ನಾವು ಬದುಕುತ್ತಿರುವ ಕಾಲ ಸ್ಪರ್ಧಾತ್ಮಕ ಜಗತ್ತು. ಈಗ ಏನಿದ್ದರೂ ಸ್ಮಾರ್ಟ್ ಕಾಲ. ಎಲ್ಲವೂ ಸ್ಮಾರ್ಟ್. ಒಬ್ಬರಿಗಿಂತ ಮತ್ತೊಬ್ಬರು ತೀವ್ರತರ ಸ್ಪರ್ಧೆಯಲ್ಲಿ ತೊಡಗಿದ್ದಾರೆ. ಇಲ್ಲಿ ಎಲ್ಲವೂ ಬಹಳ ವೇಗವಾಗಿ ನಡೆಯುತ್ತದೆ. ಕಣ್ಣು ಮಿಟುಕಿಸುವ ಒಳಗೆ ಏನೆಲ್ಲಾ ನಡೆದು ಬಿಡುತ್ತದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಒತ್ತಡವೂ ಬಹಳ ಇರುತ್ತದೆ. ಈಗಿನ ಒತ್ತಡದ, ಧಾವಂತದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಜನತೆ ವೇಗಕ್ಕೆ ತಾಳ ಹಾಕಲು ಕಷ್ಟವಾಗಿ ತಪ್ಪು ದಾರಿ ಹಿಡಿಯುತ್ತಾರೆ. ಅದರಿಂದಾಗಿ ಇಂದಿನ ಜೀವನ ಶೈಲಿಯಲ್ಲಿ ಮೋಜು ಮಸ್ತಿ ತಡರಾತ್ರಿಯ ಪಾರ್ಟಿ ಇತ್ಯಾದಿಗಳು ಮಾಮೂಲಿಯಾಗಿ ಹದಿಹರೆಯದ ಯುವಜನತೆ ದಾರಿ ತಪ್ಪುವುದು ಸಾಮಾನ್ಯವಾಗಿದೆ. ಒತ್ತಡದ ಜೀವನದಲ್ಲಿ ಭೋಗವಸ್ತುಗಳೊಂದಿಗೇ ಅತಿ ಸುಖಲಾಲಸೆಯಲ್ಲಿ ಹಣವೇ ಎಲ್ಲವೂ ಎಂಬ ಭ್ರಮೆಯಲ್ಲಿ ಹಾಗೂ ಅಹಮಿಕೆಯ ಧೋರಣೆಯಲ್ಲಿ ವ್ಯವಹಾರಿಕ ಪ್ರಪಂಚದ ರೀತಿ ನೀತಿಗಳೇ ವಿಚಿತ್ರ ವೈಪರೀತ್ಯವೆನಿಸುತ್ತಿದೆ. ಇಂದಿನ ದಿನಗಳಲ್ಲಿನ ಅತಿಯಾದ ಕೆಲಸದ ಒತ್ತಡ, ಸಂಬಂಧಗಳಲ್ಲಿನ ಭಾವನಾತ್ಮಕ ಕೊರತೆ, ದಿನನಿತ್ಯದ ಯಾಂತ್ರೀಕೃತ ಬದುಕಿನಲ್ಲಿರುವ ನೋವು ಸಂಕಟಗಳು ಮಾನಸಿಕ ಖಿನ್ನತೆಗೆ ಕಾರಣವಾಗುವುದು ನಾಗರಿಕ ಜಗತ್ತಿನ ದುರಂತ. ಅದರಲ್ಲೂ ಕೆಲವು ಯುವಜನರು, ವಿದ್ಯಾರ್ಥಿಗಳು ದುರ್ಮಾರ್ಗಿಗಳ ಸಂಪರ್ಕದಿಂದ ದುರ್ವ್ಯಸನ ಪೀಡಿತರಾಗಿ ಮಾದಕ ದ್ರವ್ಯ ಸೇವನೆಯಂತಹ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಸಮಾಜಕ್ಕೆ ಕಂಟಕಪ್ರಾಯವಾಗಿದೆ.
ಅರಿವಿಲ್ಲದೆ ತಪ್ಪುಗಳಾಗುವುದು ಸಹಜ. ಆದರೆ ಧಾರ್ಮಿಕ, ರಾಜಕೀಯ ಸಿದ್ಧಾಂತಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುವ ಮುಖೇನ ಯುವಜನತೆ ಭಯೋತ್ಪಾದನೆಯಂತಹ ಚಟುವಟಿಕೆಗಳಿಗೆ ಬಲಿಯಾಗುತ್ತಿರುವುದು ದುಃಖಕರ ವಿಚಾರ. ಈ ಜಗತ್ತಿನಲ್ಲಿ ಒಬ್ಬೊಬ್ಬರದ್ದು ಒಂದೊಂದು ತೆರನಾದ ಆಸೆ, ದೃಷ್ಟಿಕೋನ. ಚಂಚಲ ಮನಸ್ಸಿನವರು ಒಂದೊಂದು ದಿನ ಒಬ್ಬೊಬ್ಬರಿಂದ ಸ್ಪೂರ್ತಿ ಪಡೆಯುತ್ತಾರೆ. ಆದರೆ ಅಷ್ಟೇ ಬೇಗ ಮರೆತುಬಿಡುತ್ತಾರೆ. ಯುವಜನತೆ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ದೇಶದ ಸಂಪತ್ತಾಗಿ ಬೆಳೆಯಬೇಕೇ ವಿನಹ ದೇಶದ ಆಪತ್ತು ಎನ್ನಿಸಿಕೊಳ್ಳಬಾರದು.
ಪ್ರೀತಿ ವಿಶ್ವಾಸಗಳು ಬದುಕನ್ನು ಮುನ್ನಡೆಸುವ ಶಕ್ತಿಯಾಗಿದ್ದು ಸಂಕಲ್ಪ ಶುದ್ಧಿಯಿಂದ ಸಂಕಲ್ಪ ಸಿದ್ಧಿ ಎಂಬಂತೆ ಆದರ್ಶಜೀವನ ಮೌಲ್ಯವನ್ನು ಯುವಜನತೆ ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ಭೂಮಿ ಪ್ರತಿಯೊಬ್ಬರ ಅವಶ್ಯಕತೆಯನ್ನು ಪೂರೈಸಬಲ್ಲದು. ಆದರೆ ಮಾನವನ ದುರಾಸೆಯನ್ನಲ್ಲ ಎಂದಿದ್ದಾರೆ. ಮಹಾತ್ಮ ಗಾಂಧೀಜಿಯವರು. ಈ ಪರಿಸರದ ಅಳಿವಿನ ಅಂಚಿನ ಸಂದಿಗ್ಧ ಕಾಲದಲ್ಲಿ ವಿಶ್ವದ ದೇಶಗಳೆಲ್ಲ ಒಟ್ಟಿಗೆ ಸೇರಿ ಸುರಕ್ಷಿತ ಭೂಮಿಯನ್ನು ಜೀವನದ ಭರವಸೆಯನ್ನು ಭವಿಷ್ಯದ ಪೀಳಿಗೆಗೆ ಹಸ್ತಾಂತರಿಸಲು ಪಣತೊಡಬೇಕಾಗಿದೆ.
ಹರಿದ ಮಾನವನನ್ನು ಒಂದುಗೂಡಿಸಿದರೆ ಮಾತ್ರ ಇಡೀ ಪ್ರಪಂಚವನ್ನು ಒಂದಾಗಿಸಬಹುದು. ಮುರಿದ ಮನಗಳು ಒಂದಾದರೆ ಶಾಂತಿ ಸೌಹಾರ್ದತೆ ಹಾಗೂ ಸೌಖ್ಯಗಳಿಗೆ ಕೊರತೆ ಇಲ್ಲ. ತಮ್ಮ ತಮ್ಮಲ್ಲಿನ ವೈರಭಾವನೆಗಳನ್ನು ಮರೆತು ಜಗತ್ತಿನ ರಾಷ್ಟ್ರಗಳು ದ್ವೇಷಾಸೂಯೆಗಳಿಗೆ ಅವಕಾಶ ನೀಡದೇ ಇದ್ದರೆ ಎಲ್ಲ ಕಡೆಗಳಲ್ಲಿ ಶಾಂತಿ ನೆಲೆಸುತ್ತದೆ.
ಯುವಜನರು ಅಂದುಕೊಂಡಿದ್ದನ್ನು ಸಾಧಿಸಲು ಗುರಿ ಮಾತ್ರ ಸಾಲದು. ಹೇಗೆ ಸಾಧಿಸಬೇಕೆಂಬ ದೃಷ್ಟಿಕೋನ ಕೂಡ ಇರಬೇಕು. ಕಮಲಾದೇವಿ ಚಟ್ಟೋಪಾಧ್ಯಾಯರ ಮಾತು ತನ್ನ ಜೀವನವನ್ನು ಬೇರೆಯವರು ಕಟ್ಟಿಕೊಡುವುದು ಸಾಧ್ಯವಿಲ್ಲ. ತಾನು ಮಾತ್ರ ಕಟ್ಟಬಲ್ಲೆ. ತಾನು ಮಾತ್ರ ತನ್ನ ಗೌರವಯುತ ಜೀವನಕ್ಕೆ ಕಾರಣ ಎನ್ನುವುದು ಅಕ್ಷರಶಃ ಸತ್ಯ. ಎಸ್‌ಕ್ಯೂ. 4 ಆರ್ ಸೂತ್ರವಾದ ಸರ್ವೆ ಕ್ವೆಶ್ಚನ್ ರೀಡ್ ರೆಸ್ಪಾಂಡ್, ರೆಕಾರ್ಡ್, ರಿವ್ಯೂ ಎನ್ನುವ ಮಾತು ಸಾರ್ವಕಾಲಿಕ ಸತ್ಯ.
ವಿದ್ಯಾರ್ಥಿಗಳ, ಯುವಜನರ, ಚಿಂತನೆ, ಅಭಿರುಚಿ, ವ್ಯಕ್ತಿತ್ವವನ್ನು ರೂಪಿಸುವುದರಲ್ಲಿ ಹೆತ್ತವರ ಮತ್ತು ಶಿಕ್ಷಕರ ಪಾತ್ರ ಬಹಳ ಪ್ರಾಮುಖ್ಯವಾದುದು. ಮಕ್ಕಳ ಅಭಿರುಚಿ, ಆಸಕ್ತಿಯನ್ನು ಗಮನಿಸುತ್ತ ಅದಕ್ಕೆ ತಕ್ಕಂತೆ ಆತ್ಮಸ್ಥೈರ್ಯ, ಪ್ರೋತ್ಸಾಹ ನೀಡುತ್ತಾ ದುಷ್ಟ ಒತ್ತಡಕ್ಕೆ ಒಳಗಾಗದಂತೆ ರೂಪಿಸುವ ಹೊಣೆ ಹೆತ್ತವರದ್ದು. ಕಾಲ ಬದಲಾಗಿದೆ. ಹೆತ್ತವರು
(i) ತಮ್ಮ ಆಸೆ ಆಮಿಷಗಳನ್ನು ಮಕ್ಕಳ ಮೇಲೆ ಹೇರಿ ಅವರ ಮನ ಕದಡಬಾರದು. ಆದಿಯಿಂದಲೇ ಹರೆಯದ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಾ ಸ್ನೇಹಿತರಂತೆ ನಡೆದುಕೊಳ್ಳಬೇಕು.
(ii) ಅತಿಯಾದ ಒತ್ತಡ, ಅತಿಯಾದ ಮುದ್ದು ಮಾಡದೆ ತಮ್ಮ ನಿರೀಕ್ಷೆಗೂ ಒಂದು ಕಡಿವಾಣ ಹಾಕಬೇಕು.
(iii) ತಮ್ಮ ಮಕ್ಕಳ ಸಾಮರ್ಥ್ಯ ಮತ್ತು ಬುದ್ಧಿವಂತಿಕೆಗಳ ಅರಿವು ಹೆತ್ತವರಿಗಿರಬೇಕು.
(iv) ಅತಿ ಮುದ್ದಿನಿಂದ ಅಗತ್ಯಕ್ಕೆ ಮಿಗಿಲಾಗಿ ಹಣ ನೀಡಬಾರದು.
ಹಾಗೆಯೇ ಇಂದಿನ ವಿದ್ಯಾರ್ಥಿಗಳು ಮುಂದಿನ ಸತ್ಪ್ರಜೆಗಳಾಗುವಲ್ಲಿ ಶಿಕ್ಷಕರೂ ಭಾಗಿಗಳು. ಒಬ್ಬ ಉತ್ತಮ ಶಿಕ್ಷಕನೊಂದಿಗಿನ ಒಂದು ದಿನ ಒಂದು ಸಾವಿರ ದಿನಗಳ ಸತತ ಓದಿಗಿಂತ ಮೇಲು ಎಂಬುದು ಜಪಾನಿನ ಒಂದು ಗಾದೆ. ಶಿಕ್ಷಕನು ತನ್ನ ಜ್ಞಾನದೊಂದಿಗೆ ತನ್ನ ಅನುಭವವನ್ನು ಕೂಡಾ ಶಿಷ್ಯರಿಗೆ ಧಾರ ಎರೆಯುತ್ತಾನೆ. ಅಂದರೆ ಶಿಕ್ಷಕನು ತನ್ನ ವಿದ್ಯಾರ್ಥಿಗಳಲ್ಲಿ ಕಾಳಜಿ, ನಂಬಿಕೆ, ಉಪಕಾರ, ಧೈರ್ಯ, ಪರಿಶ್ರಮ, ವಿನಯ, ಗೌರವ, ಆಸಕ್ತಿ, ಜವಾಬ್ದಾರಿ, ತಾಳ್ಮೆ, ದೊಡ್ಡತನ, ಪ್ರಾಮಾಣಿಕತೆಯ ಬಗ್ಗೆ ಸರಿಯಾದ ಅರಿವು ಮೂಡಿಸಬೇಕು. ಅದೇ ವಿದ್ಯಾರ್ಥಿಗಳ ಬಾಳಿಗೆ ನಂದಾದೀಪ. ಈ ನಂದಾದೀಪದ ಸಹಾಯದಿಂದ ಎಷ್ಟೋ ದೂರ ನಡೆದುಕೊಂಡು ಹೋಗಬಹುದು ಹಾಗೆಯೇ ಈ ಒಂದು ನಂದಾ ದೀಪದ ಸಹಾಯದಿಂದ ಮುಂದೆ ಎಷ್ಟೋ ದೀಪಗಳನ್ನು ಹಚ್ಚಬಹುದು. ಒಬ್ಬ ಉತ್ತಮ ವ್ಯಕ್ತಿಯಾಗಲು ವಿದ್ಯಾರ್ಥಿಯ ವಯಸ್ಸು ಮತ್ತು ಪ್ರಸ್ತುತತೆಯನ್ನು ಗಮನದಲ್ಲಿರಿಸಿಕೊಂಡು ಅವರನ್ನು ತಿದ್ದುವುದು ಅತೀ ಅಗತ್ಯ. ರವೀಂದ್ರನಾಥ ಠಾಗೋರ್‌ರ ಒಂದು ಮಾತು ದೀಪವೊಂದು ತಾನು ಉರಿಯದೆ ಜಗಕೆ ಬೆಳಕನ್ನು ನೀಡಲಾಗುವುದಿಲ್ಲ. ಅಂತೆಯೇ ಶಿಕ್ಷಕನೊಬ್ಬ ತಾನು ಹೊಸ ಹೊಸ ವಿಷಯವನ್ನರಿತು ತನ್ನ ವಿದ್ಯಾರ್ಥಿಗಳಿಗೆ ನೀಡದೆ ಹೋದರೆ ಅವನನ್ನು ಶಿಕ್ಷಕನೆನ್ನಲಾಗುವುದಿಲ್ಲ ಎಂಬಂತೆ ಶಿಕ್ಷಕರು ಆಗಾಗ ಹೊಸ ವಿಷಯ ಅರಿತು ವಿದ್ಯಾರ್ಥಿಗಳಿಗೆ ಹೇಳುವುದರಿಂದ ವಿದ್ಯಾರ್ಥಿಗಳೂ ಅರಿತುಕೊಳ್ಳುತ್ತಾರೆ. ಪರಸ್ಪರ ಪ್ರೀತಿ ಸೌಹಾರ್ದದ ಮನೋಭಾವನೆಯನ್ನು ಎಳವೆಯಲ್ಲಿಯೇ ಬಿತ್ತಿ ಅನಾರೋಗ್ಯಕರ ಸ್ಪರ್ಧೆಗಳಿಂದುಂಟಾಗುವ ಮಾನಸಿಕ ಕ್ಷೆಭೆಗೆ ಮಕ್ಕಳನ್ನು ದೂಡದೆ, ಅಂಕಗಳಿಂದ ಮಾತ್ರ ವ್ಯಕ್ತಿಯ ಸಾಮರ್ಥ್ಯವನ್ನು ಅಳೆಯದೆ ಬದುಕಲು ಕಲಿಸುವ ಜ್ಞಾನವನ್ನು ಸಾವಧಾನವಾಗಿ ನೀಡತೊಡಗಿದರೆ ಪರಿಸ್ಥಿತಿ ಬದಲಾಗಿ, ವಿದ್ಯೆ=ವ್ಯಾಪಾರವೆನ್ನುವ ಸಮೀಕರಣ ಮಾಯವಾಗಿ ನಮ್ಮ ದೇಶದ ಮೂಲ ಸಂಸ್ಕೃತಿ ಮರಳುತ್ತದೆ. ಆದರೆ ಮಾತ್ರ ಮೌಲ್ಯಯುತ ಜೀವನ ನಡೆಸುವುದಕ್ಕೆ ಮನುಷ್ಯ ಸಂಬಂಧಗಳು, ಕೌಟುಂಬಿಕೆ ವಾತ್ಸಲ್ಯ ಬೆಳೆದು ಶಾಂತ ಬದುಕನ್ನು ಕಲಿಸುವ ಜೀವನ ಕೌಶಲ್ಯವನ್ನು ವಿದ್ಯಾರ್ಥಿಗಳಿಗೆ ಕಲಿಸಿದಂತಾಗುತ್ತದೆ. ಇಲ್ಲದೆ ಇದ್ದಲ್ಲಿ ಪ್ರಸ್ತುತ ಪರಿಸ್ಥಿತಿಯಲ್ಲಿರುವಂತೆ ಈ ವಿಜ್ಞಾನ ಯುಗದಲ್ಲಿ ಅಜ್ಞಾನಿಗಳಂತೆ ಬದುಕುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತದೆ. ಹಾಗೆ ಆಗುವುದು ಬೇಡ. ನಂಬಿಕೆ ವಿಶ್ವಾಸಗಳು ಯಶಸ್ಸಿಗೆ ಬುನಾದಿಯಾಗಿ ವಿಶ್ವಾಸದೊಂದಿಗೆ ವಿಶ್ವಪ್ರಜ್ಞೆ ಯುವಜನತೆಯ, ವಿದ್ಯಾರ್ಥಿಗಳ ಕೈಹಿಡಿದು ಮುನ್ನಡೆಸುವಂತಾಗಲಿ.
ಈ ಜೀವನದಲ್ಲಿ ವಾಪಾಸು ಬರದೇ ಇರುವುದು ಮೂರು
1) ಪ್ರಾಣ 2) ಯೌವನ 3) ಕಾಲ
ಬಂದು ಹೋಗುವುದು ಮೂರು
1) ರೋಗ 2) ಆಸ್ತಿ 3) ಕಷ್ಟ
ಬಂದು ಹೋಗದೇ ಇರುವುದು ಮೂರು
1) ವಿದ್ಯೆ 2) ಸಂಬಂಧ 3೩) ಸ್ನೇಹ
ಅದರಂತೆ ಯುವಜನತೆ ವಿದ್ಯೆ, ಸಂಬಂಧ, ಸ್ನೇಹವನ್ನು ಗಳಿಸಿ ಉಳಿಸಿ ಬೆಳೆಸಿಕೊಂಡರೆ ವ್ಯಕ್ತಿತ್ವ ವಿಕಸನವಾಗಿ ವಿಜ್ಞಾನ ಯುಗದಲ್ಲಿ ವಿಜ್ಞಾನಿಗಳಾಗಿಯೇ ಬದುಕಬಹುದು, ಅಜ್ಞಾನಿಗಳಾಗಬೇಕಿಲ್ಲ ಎನ್ನುವುದು ಆಶಯ.