ಬಂಟ್ವಾಳ ತಾಲೂಕಿನ ಪುದು ಗ್ರಾಮದ ಸುಜೀರು ದೈಯಡ್ಕ ಮನೆ, ತಿಮ್ಮಪ್ಪ ಪೂಜಾರಿ ಹಾಗೂ ಶ್ರೀಮತಿ ಪುಷ್ಪಾರವರ ಸುಪುತ್ರಿಯಾದ ರಮ್ಯ ಸುಜೀರ್‌ರವರು ತನ್ನ ವಿದ್ಯಾಭ್ಯಾಸದ ಜೊತೆಯಲ್ಲಿಯೇ ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿದವರು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ತುಳು ಅಧ್ಯಯನ ವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದ್ದಾರೆ. ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎ. ಬಿ.ಎಡ್. ಪದವಿಯನ್ನು ಪಡೆದಿರುತ್ತಾರೆ.
ಸೈಂಟ್ ಜೋನ್ಸ್ ಪದವಿ ಪೂರ್ವ ಕಾಲೇಜು ಗಂಡಸಿ ಹಾಸನ ಇಲ್ಲಿ 1 ವರ್ಷ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿರುತ್ತಾರೆ.
ಸೈಂಟ್ ಆನ್ಸ್ ಆಂಗ್ಲಮಾಧ್ಯಮ ಪ್ರೌಢಶಾಲೆ ಇಲ್ಲಿ 3 ವರ್ಷಗಳ ಕಾಲ ಸೇವೆ ಸಲ್ಲಿಸಿ, ಪ್ರಸ್ತುತ 2 ವರ್ಷಗಳಿಂದ ಸೈಂಟ್ ಆಗ್ನೇಸ್ ಆಂಗ್ಲಮಾಧ್ಯಮ (ಸಿಬಿಎಸ್‌ಇ) ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶ್ರೀಕ್ಷೇತ್ರ ಮಂದಾರಬೈಲು ಕೊಂಚಾಡಿ ದೇರೆಬೈಲು ಇಲ್ಲಿ ನಡೆದ ’ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ-2012’ರಲ್ಲಿ ಇವರ ’ಭಾವಬಿಂಭ’ (ಕನ್ನಡ) ಕವನ ಸಂಕಲನ ಬಿಡುಗಡೆಯಾಗಿದೆ.
ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಅಡ್ಯಾರ್ ಇಲ್ಲಿ ನಡೆದ ವಿಶ್ವ ತುಳುವೆರೆ ಪರ್ಬ-2014ರಲ್ಲಿ ಡಾ| ವೀರೇಂದ್ರ ಹೆಗ್ಗಡೆಯವರಿಂದ ಇವರ ತುಳು ಕವನ ಸಂಕಲನ ದಿಬ್ಬಣ ಬಿಡುಗಡೆ ಗೊಂಡಿದೆ. ಬೇಲಿಯ ಹೂ (ಕನ್ನಡ ಕವನ ಸಂಕಲನ) ಅಚ್ಚಿನಲ್ಲಿದೆ.
* ಅಖಿಲ ಭಾರತ ತುಳು ಒಕ್ಕೂಟ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ಸಹ್ಯಾದ್ರಿ ಕಾಲೇಜಿನಲ್ಲಿ ನಡೆದ ’ವಿಶ್ವ ತುಳುವೆರೆ ಪರ್ಬ-2014’ರಲ್ಲಿ ಕವನ ವಾಚನ.
* ದ.ಕ. ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಕವನವಾಚನ
* ಸರ್ವೋದಯ ಸಾಹಿತ್ಯ ಸಮ್ಮೇಳನ-೨೦೧೨ರಲ್ಲಿ ಕವನವಾಚನ
* ತಾಲೂಕು ಮಟ್ಟದ ತುಳು ಕವಿಗೋಷ್ಠಿ – ೨೦೧೬ರಲ್ಲಿ ಕವನವಾಚನ
* ಆಕಾಶವಾಣಿ ಮಂಗಳೂರು ಇದರ ’ತುಳು ಯುವವಾಣಿ’ಯಲ್ಲಿ ಕವನವಾಚನ
* ಅಂತರ್ ರಾಜ್ಯಮಟ್ಟದ ಕವಿಗೋಷ್ಠಿಗೆ ಆಯ್ಕೆ ಇವು ಅವರ ಪ್ರತಿಭೆಯ ದ್ಯೋತಕಗಳು.
ರಮ್ಯ ಸುಜೀರ್‌ರವರ ಲೇಖನಿಯಿಂದ ಪ್ರಕಟಗೊಂಡ ಲೇಖನಗಳು ’ಮಿತ್ತ ಮೊಗರಾಯನ ಚಾವಡಿ’ – ಸಂತ ಅಲೋಶಿಯಸ್ ಕಾಲೇಜಿನ ವಾರ್ಷಿಕ ಸಂಚಿಕೆ – 2007 ರಲ್ಲಿ ಪ್ರಕಟಿತವಾಗಿದೆ.
ನಿನ್ನ ನೆನಪಾಗುವುದು (ಕವನ) ವಿಜಯ ಕರ್ನಾಟಕದಲ್ಲಿ 2006 ಪ್ರಕಟವಾಗಿದೆ.
ಸ್ಪಂದನ ವಾಹಿನಿಯಲ್ಲಿ ಪ್ರತೀ ಆದಿತ್ಯವಾರ ಪ್ರಸಾರವಾಗುತ್ತಿದ್ದಂತಹ ತೆಲಿಕೆದ ಗಮ್ಮತ್ತ್ ಎಂಬ ಹಾಸ್ಯ ಕಾರ್ಯಕ್ರಮದಲ್ಲಿ ಹಾಸ್ಯನಟಿಯಾಗಿ ನಟಿಸಿದ ಅನುಭವ. ’ಗಾಳಿಗ್ ತೆಕ್ಕ್ಂಡಾ ತುಡರ್ ಎಂಬ ತುಳು ಕಿರು ಚಲನಚಿತ್ರಕ್ಕೆ ಕಂಠದಾನವನ್ನು ಮಾಡಿರುತ್ತಾರೆ.
ಶ್ರೀ ವೀರ ಹನುಮಾನ್ ದತ್ತನಗರ ಸುಜೀರು (ರಿ) ಇದರ, ಸಾಂಸ್ಕೃತಿಕ ಸಂಚಾಲಕಿಯಾಗಿ ಕಳೆದ 4 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸಂಗೀತ ಗುರುಗಳಾದ ವಿದ್ವಾನ್ ಶ್ರೀಯುತ ಕೃಷ್ಣಾಚಾರ್ ನರಿಕೊಂಬು ಇವರ ಬಳಿಕ ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸದ ಜೊತೆಗೆ ಸುಗಮ ಸಂಗೀತ ಕಾರ್‍ಯಕ್ರಮಗನ್ನು ನೀಡಿದ ಅನುಭವ. ಕು| ಯಶಸ್ವಿನಿ ಬಳ್ಳಾಲ್ ಇವರ ಬಳಿ ಜೂನಿಯರ್ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತದ ಅಭ್ಯಾಸ ಮಾಡಿ ಕಾರ್ಯಕ್ರಮ ನೀಡಿರುತ್ತಾರೆ.
ಕರಾವಳಿ ಕರ್ನಾಟಕ ನಂ.1 ರಿಯಾಲಿಟಿ ಶೋ ಬಲೆ ತೆಲಿಪಾಲೆಯಲ್ಲಿ ಟ್ಯಾಲೆಂಟ್ ಅವಾರ್ಡ್ ಪಡೆದಂತಹ ಪ್ರವೀಣ್ ತುಕರಾಮ್ ಇವರ ತಂಡದಲ್ಲಿ ಹಿನ್ನಲೆ ಗಾಯನ ಮತ್ತು ಸಾಹಿತ್ಯ, ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಹಲವಾರು ನೃತ್ಯ ಮತ್ತು ಸಂಗೀತ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ನಿರ್ಣಾಯಕರಾಗಿ, ನಿರೂಪಕಿಯಾಗಿ ಕಾರ್ಯಕ್ರಮಗಳನ್ನು ನಿರ್ವಹಿಸಿರುತ್ತಾರೆ. ಇವರಿಗೆ ಈ ಬಾರಿಯ ಪ್ರಭಾಕರ ನೀರ್‌ಮಾರ್ಗ ಯುವವಾಹಿನಿ ಯುವಸಾಹಿತ್ಯ ಪ್ರಶಸ್ತಿ ನೀಡಿ ಅಭಿನಂದಿಸಲು ಯುವವಾಹಿನಿ ಹೆಮ್ಮೆ ಪಡುತ್ತದೆ.