ಕಣ್ಣು ಸರಿಯಾಗಿದ್ದಲ್ಲಿ ಜಗತ್ತನ್ನು ಪ್ರೀತಿಸಬಹುದು, ಆದರೆ ನಾಲಿಗೆ ಸರಿಯಾಗಿದ್ದಲ್ಲಿ ಜಗತ್ತು ನಮ್ಮನ್ನು ಪ್ರೀತಿಸುತ್ತದೆ. ದುಶ್ಚಟಗಳನ್ನು ತೊರೆದು ಜ್ಞಾನದ ಮಾರ್ಗದಲ್ಲಿ ನಡೆದಾಗ ಮನೆ ಮನೆಯಲ್ಲೂ ದೇವಸ್ಥಾನದ ನಿರ್ಮಾಣ ಸಾಧ್ಯ. ಅವಮಾನಗಳ ಹಿಂದಿರುವ ನೋವಿನಿಂದ ನಮ್ಮ ಹಿರಿಯರು ಸಂಘಟನೆಗಳ ರಚನೆ ಮಾಡಿದರು. ಮನಸ್ಸು ಮನಸ್ಸುಗಳನ್ನು ಬೆಸೆಯುವ ಆದರ್ಶ, ಸಂವಿಧಾನ ಬದ್ದ ಸಂಘಟನೆ ಯುವವಾಹಿನಿ ಎಂದು ಮಂಗಳೂರು ಸಂತ ಎಲೋಶಿಯಸ್ ಕಾಲೇಜ್ ಉಪನ್ಯಾಸಕ ಡಾ. ಗಣೇಶ್ ಅಮೀನ್ ಸಂಕಮಾರ್ ತಿಳಿಸಿದರು.
ಅವರು ದಿನಾಂಕ 12.03.2017 ನೇ ಆದಿತ್ಯವಾರ ಮಂಗಳೂರು ಕೊಟ್ಟಾರ ಚೌಕಿಯಲ್ಲಿರುವ ಮೆ.ಐಡಿಯಲ್ ಎರೇಂಜರ್ಸ್ ವಠಾರದಲ್ಲಿ ಜರುಗಿದ ಯುವವಾಹಿನಿ(ರಿ) ಮಂಗಳೂರು ಘಟಕದ 2017-18ನೇ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಉದ್ಯಮಿಗಳು, ಸಮಾಜ ಸೇವಕರು, ಕಾಪು ಬಿಲ್ಲವರ ಸಹಾಯಕ ಸಂಘದ ಗೌರವ ಅದ್ಯಕ್ಷರು ಪ್ರಭಾಕರ್ ಎಸ್ ಪೂಜಾರಿ ದೀಪ ಬೆಳಗುವುದರ ಮೂಲಕ ಸಮಾರಂಭ ಉದ್ಘಾಟನೆ ಮಾಡಿದರು.
ಕಾರ್ಯದರ್ಶಿ ನವೀನ್ ಚಂದ್ತ. 2016-17ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು.
ಯುವವಾಹಿನಿಯ ಶಿಸ್ತು ಬದ್ದ ಕಾರ್ಯಕ್ರಮಗಳು ಹೊಸ ಹೊಸ ಚಿಂತನೆಗಳು ಸಮಾಜದ ಪರಿವರ್ತನೆಗೆ ನಾಂದಿಯಾಗಿದೆ. ವಿಶ್ವ ಬಿಲ್ಲವರು ಒಂದೇ ಸೂರಿನಡಿ ಸೇರಿ ಬೃಹತ್ ಸಮಾವೇಶ ಸಡೆಸುವುದಕ್ಕೆ ಸೂಕ್ತ ಕಾಲ ಎಂದು ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಮ್ಮ ಕುಡ್ಲ ದೃಶ್ಯ ಮಾಧ್ಯಮದ ನಿರ್ದೇಶಕ ಲೀಲಾಕ್ಷ ಬಿ. ಕರ್ಕೆರಾ ತಿಳಿಸಿದರು.
ವಿಶೇಷ ಸಾಧಕರಾದ ಹಾಗೂ ಮಂಗಳೂರು ಯುವವಾಹಿನಿ ಸದಸ್ಯರುಗಳಾದ ಸಮಾಜ ಸೇವಕ, ಸಂಘಟಕ ದೇವೇಂದ್ರ ಕೋಟ್ಯಾನ್, ಉದ್ಯಮಿ, ಸಂಘಟಕ ಉಮಾನಾಥ, ನಿಸ್ವಾರ್ಥ ಸೇವಕ ಶ್ರೀಕಾಂತ್ ಇವರುಗಳನ್ನು ಗಣ್ಯ ಅತಿಥಿಗಳು ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಸನ್ಮಾನಕ್ಕೆ ಉತ್ತರಿಸಿದ ಉಮಾನಾಥರವರು ಯುವವಾಹಿನಿ ಸದಸ್ಯನಾಗಿರುವುದಕ್ಕೆ ಹೆಮ್ಮೆ ಇದೆ, ಇದು ನನ್ನ ಮನೆಯ ಸನ್ಮಾನ ಮತ್ತು ಹೃದಯಕ್ಕೆ ಹತ್ತಿರವಾದ ಸನ್ಮಾನ ಎಂದು ತಿಳಿಸಿದರು.
ಚುನಾವಣಾಧಿಕಾರಿ ಹರೀಶ್ ಕೆ. ಪೂಜಾರಿ 2017-18 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ ಪ್ರಕಟಿಸಿದರು. ಯುವವಾಹಿನಿ(ರಿ) ಕೇಂದ್ರ ಸಮಿತಿಯ ಅದ್ಯಕ್ಷ ಪದ್ಮನಾಭ ಮರೋಳಿ ನೂತನ ಪದಾಧಿಕಾರಿಗಳಿಗೆ ಪದಪ್ರಧಾನ ಮಾಡಿದರು ಮತ್ತು ಘಟಕ ಘಟಕಗಳ ಮಧ್ಯೆ ಸಂಬಂಧ ಬೆಸೆಯುವ ಕಾರ್ಯ ಮಂಗಳೂರು ಯುವವಾಹಿನಿ ಮಾಡುತ್ತಿರುವುದು ಸಂತಸದ ವಿಚಾರ ಎಂದು ತಿಳಿಸಿದರು.
ರವೀಶ್ ಕುಮಾರ್ ನೇತೃತ್ವದ 18 ಸದಸ್ಯರ ನೂತನ ತಂಡ ಮಂಗಳೂರು ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸುವ ಬಗ್ಗೆ ಪ್ರಮಾಣ ವಚನ ಸ್ವೀಕರಿಸಿತು.
ಪ್ರಮಾಣಿಕ ಪ್ರೀತಿ ಯುವವಾಹಿನಿಯಲ್ಲಿ ತನಗೆ ದೊರೆತಿದೆ. ಸೇವಾ ಕೈಂಕರ್ಯದ ಹಗ್ಗವನ್ನು ತನಗೆ ನೀಡಿದ್ದಾರೆ. ಸರ್ವರ ಸಹಕಾರದಿಂದ ಸಂಘಟನೆಯನ್ನು ಸಮರ್ಥವಾಗಿ ಮುನ್ನಡೆಸುವ ವಿಶ್ವಾಸ ತನಗಿದೆ ಎಂದು ನೂತನ ಅದ್ಯಕ್ಷ ರವೀಶ್ ಕುಮಾರ್ ಅಭಿಪ್ರಾಯಪಟ್ಟರು.
ಸಭೆ ಅಧ್ಯಕ್ಷತೆ ವಹಿಸಿದ್ದ ನಿರ್ಗಮನ ಅದ್ಯಕ್ಷ ಸುನೀಲ್ ಕೆ ಅಂಚನ್ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ತಿಳಿಸಿದರು. ನಿರ್ಗಮನ ಅದ್ಯಕ್ಷ ಸುನೀಲ್ ಕೆ ಅಂಚನ್ ನೂತನ ಅದ್ಯಕ್ಷ ರವೀಶ್ ಕುಮಾರ್ ಗೆ ಸಾಂಕೇತಿಕವಾಗಿ ಅಧಿಕಾರ ಹಸ್ತಾಂತರ ಮಾಡಿದರು. ಯುವವಾಹಿನಿಯ ವಿವಿಧ ಘಟಕಗಳ ಪದಾದಿಕಾರಿಗಳು ಶುಭ ಹಾರೈಕೆ ಮಾಡಿದರು. ಸುನೀಲ್ ಕೆ. ಅಂಚನ್ ಸ್ವಾಗತಿಸಿದರು ಮಂಗಳೂರು ಘಟಕದ ಮಾಜಿ ಅದ್ಯಕ್ಷ ಯಶವಂತ ಪೂಜಾರಿ ಪ್ರಸ್ತಾವನೆ ಮಾಡಿದರು. ನೂತನ ಕಾರ್ಯದರ್ಶಿ ಪ್ರವೀಣ್ ಸಾಲ್ಯಾನ್ ಕಿರೋಡಿ ಧನ್ಯವಾದ ನೀಡಿದರು. ರಾಕೇಶ್ ಕುಮಾರ್ ಹಾಗೂ ಜಯಕುಮಾರ್ ಕೊಲ್ಯ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಮೊದಲು ಯುವವಾಹಿನಿ ಬಜಪೆ, ಯುವವಾಹಿನಿ ಕೊಲ್ಯ, ಯುವವಾಹಿನಿ ಕೂಳೂರು ಹಾಗೂ ಯುವವಾಹಿನಿ ಕಂಕನಾಡಿ ಘಟಕಗಳ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.