ಕೂಳೂರು : ಯುವವಾಹಿನಿಯಂತಹ ಸಂಘಟನೆ ಇರುವುದರಿಂದ ದೇಶಕ್ಕಾಗಿ ಪ್ರಾಣ ಕೊಟ್ಟ ಯೋಧರು ಅಮರರಾಗುತ್ತಾರೆ. ನಾನು ಸತ್ತರೆ ಸೈನಿಕನಾಗಿಯೇ ಸಾಯುತ್ತೇನೆ ಎಂದು ಲೆಫ್ಟಿನೆಂಟ್ ಕರ್ನಲ್ ಗ್ರೇಶಿಯಸ್ ಸಿಕ್ವೇರ ಹೇಳಿದರು.
ಅವರು ದಿನಾಂಕ 31.07.19 ರಂದು ಯುವವಾಹಿನಿ (ರಿ) ಕೂಳೂರು ಘಟಕದ ವತಿಯಿಂದ ನಡೆದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾಡಿದರು. ಇನ್ನೋರ್ವ ಅತಿಥಿ ಸುಬೇದಾರ್ ಜೋಧಾ ಸಿಂಗ್ ಕಾರ್ಯಕ್ರಮ ಉದ್ಘಾಟಿಸಿದರು. ಯುವವಾಹಿನಿ ಕೂಳೂರು ಘಟಕದ ಅಧ್ಯಕ್ಷರಾದ ಭಾಸ್ಕರ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಾದ ಉದಯ್ ಕುಮಾರ್ ಹಾಗೂ ಮನೋಜ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ವೀರ ಮರಣ ಹೊಂದಿದ ಯೋಧ ಉದಯ್ ಕುಮಾರ್ ಅವರ ಪತ್ನಿ ವಸಂತಿ ಇವರನ್ನು ಅಭಿನಂದಿಸಿ, ವಿದ್ಯಾ ನಿಧಿ ನೆಲೆಯಲ್ಲಿ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಘಟಕದ ವತಿಯಿಂದ 10,000 ರೂ ಮೊತ್ತದ ಚೆಕ್ ನ್ನು ಹಸ್ತಾಂತರಿಸಿದರು. ಮುಖ್ಯ ಅತಿಥಿಗಳು ಅಮರ್ ಜವಾನ್ ಗೆ ದೀಪ ಹಚ್ಚಿ, ಹೂ ಹಾಕುವ ಮೂಲಕ ಹುತಾತ್ಮ ಯೋಧರಿಗೆ ಗೌರವ ಅರ್ಪಿಸಿದರು. ಸದಸ್ಯರೆಲ್ಲರೂ ಯೋಧರ ಭಾವಚಿತ್ರಕ್ಕೆ ದೀಪ ಹಚ್ಚಿ, ಹೂ ಹಾಕಿ ಗೌರವಿಸಿದರು. ಎಲ್ಲರೂ ಸೇರಿ ಹುತಾತ್ಮ ಯೋಧರೆಲ್ಲರಿಗೂ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಘಟಕದ ಗೌರವ ಸಲಹೆಗಾರರಾದ ನೇಮಿರಾಜ್, ಮಾಜಿ ಅಧ್ಯಕ್ಷರು ಹಾಗೂ ನಿವೃತ್ತ ಯೋಧರಾದ ಪುಷ್ಪರಾಜ್ ಕುಮಾರ್, ಕಾರ್ಯಕ್ರಮದ ಸಂಚಾಲಕರಾದ ಲತೀಶ್ ಪೂಜಾರಿ, ಘಟಕದ ಮಾರ್ಗದರ್ಶಕರಾದ ಜಯಾನಂದ ಅಮೀನ್, ಸಂಘಟನಾ ಕಾರ್ಯದರ್ಶಿ ನಿಶಿತ್ ಉಪಸ್ಥಿತರಿದ್ದರು.
ಅಧ್ಯಕ್ಷರು ಸ್ವಾಗತಿಸಿದರು. ಘಟಕದ ಸ್ಥಾಪಕ ಅಧ್ಯಕ್ಷರಾದ ಸುಜಿತ್ ರಾಜ್ ನಿರೂಪಿಸಿದರು. ಘಟಕದ ಸದಸ್ಯ ಹೇಮಂತ್ ಪ್ರಾರ್ಥಿಸಿದರು. ಕಾರ್ಯದರ್ಶಿ ಮಧುಶ್ರೀ ಪ್ರಶಾಂತ್ ವಂದಿಸಿದರು.