ವೇಣೂರು: ಹುಟ್ಟಿನಿಂದ ಸಾವಿನವರೆಗೂ ಕಾನೂನಿನ ಚೌಕಟ್ಟಿನಲ್ಲಿ ಬದುಕಬೇಕು. ಈಗಾಗಿ ಕಾನೂನಿನ ಸಾಮಾನ್ಯ ಜ್ಞಾನ ಎಲ್ಲರಿಗೂ ಅವಶ್ಯಕವಾಗಿದೆ. ನಿತ್ಯ ಜೀವನದಲ್ಲಿ ಕಾನೂನನ್ನು ಪಾಲಿಸುತ್ತಾ ಪ್ರಜ್ಞಾವಂತ ನಾಗರಿಕರಾಗೋಣ ಎಂದು ಬೆಳ್ತಂಗಡಿ ಪ್ರಧಾನ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ಬಿ.ಕೆ. ನಾಗೇಶ್‌ಮೂರ್ತಿ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ ಬೆಳ್ತಂಗಡಿ, ವಕೀಲರ ಸಂಘ ಬೆಳ್ತಂಗಡಿ, ಯುವವಾಹಿನಿ ಘಟಕ ವೇಣೂರು ಹಾಗೂ ವೇಣೂರು ಸ.ಪ.ಪೂ. ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಜು. 09 ರಂದು ವೇಣೂರು ಸ.ಪ.ಪೂ. ಕಾಲೇಜಿನ ಸಭಾಂಗಣದಲ್ಲಿ ಜರಗಿದ ಕಾನೂನು ಮಾಹಿತಿ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಬೆಳ್ತಂಗಡಿಯ ವಕೀಲ ಬಿ.ಕೆ. ಧನಂಜಯ ರಾವ್ ಅವರು ಮಾತನಾಡಿ, ಹಕ್ಕುಗಳನ್ನು ಹೇಳುವಾಗ ನಮಗಿರುವ ಆತ್ಮಸ್ಥೈರ್ಯ ಕರ್ತವ್ಯಗಳನ್ನು ಹೇಳುವಾಗ ಇರುವುದಿಲ್ಲ. ಹಕ್ಕುಗಳ ಜತೆಗೆ ನಮ್ಮ ಕರ್ತವ್ಯಗಳನ್ನು ಪಾಲಿಸಬೇಕು. ಕಾನೂನನ್ನು ರೂಪಿಸುವ ನಾವೇ ಕಾನೂನನ್ನು ಮುರಿಯುವವರಾಗುತ್ತಿದ್ದೇವೆ. ಕಾನೂನಿನಡಿ ಬದುಕು ಮತ್ತು ಕರ್ತವ್ಯ ಪ್ರಜ್ಞೆ ನಮ್ಮ ಕರ್ತವ್ಯ ಆಗಬೇಕು ಎಂದರು. ವೇಣೂರು ಯುವವಾಹಿನಿ ಘಟಕದ ಅಧ್ಯಕ್ಷ ನವೀನ್ ಪೂಜಾರಿ ಪಚ್ಚೇರಿ ಅಧ್ಯಕ್ಷತೆ ವಹಿಸಿದ್ದರು.
ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾದೀಶ ಸತೀಶ್ ಕೆ.ಜಿ., ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಸೇವಿಯರ್ ಪಾಲೇಲಿ, ಸರಕಾರಿ ಅಭಿಯೋಜಕ ಜಿ.ಕೆ. ಕಿರಣ್ ಕುಮಾರ್, ವೇಣೂರು ಸ.ಪ.ಪೂ. ಕಾಲೇಜಿನ ಪ್ರಾಚಾರ್ಯ ಗಂಗಾಧರ್ ಉಪಸ್ಥಿತರಿದ್ದರು.
ಬೆಳ್ತಂಗಡಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಮನೋಹರ ಕುಮಾರ್ ಎ. ಸ್ವಾಗತಿಸಿ, ವೇಣೂರು ಯುವವಾಹಿನಿ ಘಟಕದ ಕಾರ್ಯದರ್ಶಿ ಶಿವಪ್ರಕಾಶ್ ಅಂಭಾಶ್ರೀ ವಂದಿಸಿದರು. ಉಪನ್ಯಾಸಕ ಸಂತೋಷ್ ಎ. ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ವೃಂದ, ಯುವವಾಹಿನಿ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಸಹಕರಿಸಿದರು.