ವೇಣೂರು: ಆರೋಗ್ಯ ಮತ್ತು ಶಿಕ್ಷಣಕ್ಕೆ ಉತ್ತೇಜನ ನೀಡುವ ವೇಣೂರು ಯುವವಾಹಿನಿ ಘಟಕದ ಕಾರ್ಯವೈಖರಿಯೇ ವಿಶಿಷ್ಟ. ಯುವ ಮನಸ್ಸುಗಳಿಂದ ನಿಶ್ವಾರ್ಥವಾಗಿ ನಡೆಯುವ ಇಂತಹ ಸೇವೆಯಿಂದ ಸಂಘಟನೆ ಜನಸಾಮಾನ್ಯರಿಗೆ ಹತ್ತಿರವಾಗುತ್ತಿದೆ. ಇಂತಹ ಸಮಾಜಸೇವೆಯ ಪರಿಕಲ್ಪನೆ ಎಲ್ಲೆಡೆ ಫಸರಿಸಲಿ ಎಂದು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಜಯಂತ ನಡುಬೈಲು ಹೇಳಿದರು.
ಯುವವಾಹಿನಿ ವೇಣೂರು ಘಟಕದ ವತಿಯಿಂದ ರವಿವಾರ ವೇಣೂರು ಲಯನ್ಸ್ ಕ್ಲಬ್ ಸಭಾಭವನದಲ್ಲಿ ಜರಗಿದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಆಸರೆ ಎಂಬ ಸೇವಾ ಯೋಜನೆ ಮೂಲಕ ವೇಣೂರು ಘಟಕ ಅವಿಭಜಿತ ಜಿಲ್ಲೆಗೆ ಮಾದರಿ ಆಗಿದೆ, ಇಂತಹ ಕಾರ್ಯ ನಿರಂತರ ನಡೆಯಲಿ ಎಂದರು.
ವೇಣೂರು ಯುವವಾಹಿನಿ ಘಟಕದ ಅಧ್ಯಕ್ಷ ನವೀನ್ ಪಚ್ಚೇರಿ ಅಧ್ಯಕ್ಷತೆ ವಹಿಸಿ, ಸುಮಾರು 120 ಮಂದಿ ಸದಸ್ಯರಿಂದ ಪ್ರತೀ ತಿಂಗಳು ರೂ. ೧೦೦ನ್ನು ಸಂಗ್ರಹಿಸಿ ಓರ್ವ ಫಲಾನುಭವಿಗೆ ನೀಡಲಾಗುತ್ತಿದೆ. ಮುಂದಿನ ದಿನಗಳಿಂದ ಸದಸ್ಯರನ್ನು ಹೆಚ್ಚು ಮಾಡುವ ಚಿಂತನೆ ಇದೆ. ಆರೋಗ್ಯ, ಕಾನೂನು, ಪರಿಸರ ಸಂರಕ್ಷಣೆ, ಸ್ನೇಹ ಮಿಲನ ಮುಂತಾದ ಕಾರ್ಯಕ್ರಮಗಳ ಆಯೋಜನೆಗೆ ಚಿಂತನೆ ನಡೆಸುತ್ತಿದ್ದೇವೆ ಎಂದರು.
ಯುವವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಪ್ರೇಮನಾಥ ಕೆ., ಮೂಡಬಿದಿರೆ ಯುವವಾಹಿನಿ ಘಟಕದ ಅಧ್ಯಕ್ಷ ಜಗದೀಶ್ಚಂದ್ರ ಡಿ.ಕೆ., ಯುವವಾಹಿನಿ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ರಾಕೇಶ್ ಕುಮಾರ್ ಮೂಡುಕೋಡಿ, ನಾಮ ನಿರ್ದೇಶಿತ ಸದಸ್ಯ ಯೋಗೀಶ್ ಬಿಕ್ರೊಟ್ಟು, ವೇಣೂರು ಘಟಕದ ಕೋಶಾಧಿಕಾರಿ ಹರೀಶ್ ಪಿ.ಎಸ್. ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಬದುಕು ಅನ್ನುವುದು ಸ್ವಲ್ಪದರಲ್ಲೇ ಮುಗಿದುಹೋಗುತ್ತದೆ. ವಿದ್ಯಾರ್ಥಿಗಳು ಈಗಿನಿಂದಲೇ ಕನಸು ಕಾಣಬೇಕು. ಆ ಗುರಿಯನ್ನು ಮುಟ್ಟಲು ನಿರಂತರ ಶ್ರಮಿಸಬೇಕು. ಆಗ ನೀವು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಸಾಧ್ಯ.
ಜಯಂತ ನಡುಬೈಲು, ಅಧ್ಯಕ್ಷ, ಯುವವಾಹಿನಿ ಕೇಂದ್ರ ಸಮಿತಿ
ಪ್ರತಿಭಾ ಪುರಸ್ಕಾರ-ಸಹಾಯನಿಧಿ ವಿತರಣೆ
ಕಳೆದ ಸಾಲಿನಲ್ಲಿ ಶೈಕ್ಷಣಿಕವಾಗಿ ಸಾಧನೆ ಮಾಡಿದ ಸುಜ್ಞಾನ್, ದೀಕ್ಷಾ, ಸುಶಾಂತ್ ಹಾಗೂ ಸುವಿಧ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಜಾತಿಬೇಧವಿಲ್ಲದೆ ಬಡ ಅರ್ಹ ಫಲಾನುಭವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಘಟಕದ ಆಸರೆ ಸೇವಾ ಯೋಜನೆಯ ೧೧ನೇ ಕಂತನ್ನು ಅನಾರೋಗ್ಯದಿಂದ ಬಳಲುತ್ತಿರುವ ಕುಶಾನ್ ಅವರಿಗೆ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಘಟಕದಿಂದ ಕೇಂದ್ರ ಸಮಿತಿಗೆ ವಿದ್ಯಾರ್ಥಿವೇತನ ಸಹಾಯನಿಧಿಗಾಗಿ ರೂ. ೧೦ ಸಾವಿರ ಮೊತ್ತದ ಚೆಕ್ಕನ್ನು ಕೇಂದ್ರ ಸಮಿತಿಗೆ ಹಸ್ತಾಂತರಿಸಿದರು. ಘಟಕಕ್ಕೆ ಸಹಾಯಧನ ನೀಡಿದವರನ್ನು ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಘಟಕದ ಮಾಜಿ ಅಧ್ಯಕ್ಷ ನಿತೀಶ್ ಎಚ್. ಪ್ರಾಸ್ತಾವಿಸಿ, ಸ್ವಾಗತಿಸಿದರು. ಘಟಕದ ಉಪಾಧ್ಯಕ್ಷ ಅರುಣ್ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿ, ಕಾರ್ಯದರ್ಶಿ ಶಿವಪ್ರಕಾಶ್ ಅಂಬಾಶ್ರೀ ವಂದಿಸಿದರು.