ಮಾಣಿ : ಅದು ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ಬಾಕಿಲಗುತ್ತು ಮನೆತನದ ಕಂಬಳಗದ್ದೆ . ಯುವವಾಹಿನಿಯ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯಬಲ್ಲ ಒಂದು ಯಶಸ್ಸಿನ ಚಟುವಟಿಕೆಯ ಸಾಕ್ಷಾತ್ಕಾರಕ್ಕೆ ಆ ಕಂಬಳ ಗದ್ದೆ ಸಾಕ್ಷಿಯಾಗಿತ್ತು. 2018 ರ ಡಿಸೆಂಬರ್ ತಿಂಗಳ 23 ರಂದು ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ) ಕೇಂದ್ರ ಸಮಿತಿ ಹಾಗೂ ಮಾಣಿ ಘಟಕದ ಸಹಯೋಗದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಗುರು ಸೇವಾ ಸಂಘ(ರಿ) ಮಾಣಿ ಇದರ ಸಹಕಾರದೊಂದಿಗೆ ಅಂತರ್ ಘಟಕ ಒಡಗೂಡುವಿಕೆಯ ಕೋಟಿ ಚೆನ್ನಯ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ದಕ್ಷಿಣ ಕನ್ನಡ ಉಡುಪಿ ಬೆಂಗಳೂರು ಸೇರಿದಂತೆ ಒಟ್ಟು 33 ಯುವವಾಹಿನಿ ಘಟಕಗಳ ಸದಸ್ಯರು ಸಂಭ್ರಮದ ಕೆಸರುಗದ್ದೆ ಕ್ರೀಡಾಕೂಟವನ್ನು ಆಡಿ ನಲಿದು ಕುಣಿದು ಕುಪ್ಪಳಿಸಿದರು. ಇಂಥದ್ದೊಂದು ಯಶಸ್ಸಿನ ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಧನ್ಯತೆಗೆ ಯುವವಾಹಿನಿ (ರಿ)ಮಾಣಿ ಘಟಕವು ಪಾತ್ರವಾಗಿತ್ತು.
ಒಂದು ದಿನದ ಕ್ರೀಡಾಕೂಟವನ್ನು ಆಯೋಜಿಸಿದ ನಂತರ ಯುವವಾಹಿನಿಯ ಮಾಣಿ ಘಟಕವು ಬಾಕಿಲದ ಕಂಬಳ ಗದ್ದೆಯ ನಂಟನ್ನು ಕಳೆದುಕೊಳ್ಳಲಿಲ್ಲ. ಘಟಕದ ಅಧ್ಯಕ್ಷರಾದ ಹರೀಶ್ ಪೂಜಾರಿ ಬಾಕಿಲ ಹಾಗೂ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಕಂಬಳ ಗದ್ದೆಯಲ್ಲಿ ಭತ್ತದ ಕೃಷಿಯನ್ನು ಕೈಗೊಳ್ಳುವ ಬಗ್ಗೆ ತೀರ್ಮಾನಿಸಿದರು. ಅದರಂತೆ ಬಾಕಿಲ ಕುಟುಂಬದ ಹಿರಿಯರ ಅನುಮತಿಯೊಂದಿಗೆ ಕಂಬಳ ಗದ್ದೆಯಲ್ಲಿ ಸುಗ್ಗಿಯ ಸಾಗುವಳಿ ಉತ್ಸಾಹದಿಂದ ನಡೆಯಿತು.
ಕಂಬಳ ಗದ್ದೆಯಲ್ಲಿ ಬಿತ್ತಿದ ಬೀಜಗಳು ಊರ ಹಾಗೂ ದೈವ-ದೇವರುಗಳ ಆಶೀರ್ವಾದದೊಂದಿಗೆ ಯುವವಾಹಿನಿಯ ಸದಸ್ಯರ ಉತ್ಸಾಹದಂತೆ ಪುಟಿದು, ಮೊಳೆತು ಸಸಿಗಳಾದವು. ನೋಡನೋಡುತ್ತಿದ್ದಂತೆ ಬಯಲಾಗಿದ್ದ ಕಂಬಳ ಗದ್ದೆಯು ಹಚ್ಚ ಹಸಿರಿನಿಂದ ನಳನಲಿಸಲಾರಂಭಿಸಿತು. ಭತ್ತದ ಸಸಿಗಳು ಯುವವಾಹಿನಿಯ ಸದಸ್ಯರ ಕನಸಿನಂತೆ ತೆನೆ ಕಟ್ಟಿ ಭತ್ತದ ತೆನೆಗಳು ತೂಗಿ ನೋಡುಗರ ಕಣ್ಮನ ಸೆಳೆಯುವಂತೆ ಸೊಂಪಾಗಿ ಬೆಳೆದು ನಿಂತವು.
ಇಂತಹ ಕೃಷಿ ಕಾರ್ಯವನ್ನು ನಡೆಸಿದ ಯುವವಾಹಿನಿ (ರಿ) ಮಾಣಿ ಘಟಕದ ಸದಸ್ಯರು ಮತ್ತೆ ಒಂದುಗೂಡಿದಲ್ಲಿ ಬಾಕಿಲ ಕಂಬಳ ಗದ್ದೆಯ ಭತ್ತದ ಕೊಯ್ಲಿ ಗಾಗಿ.
ದಿನಾಂಕ 28-04-2019ರ ಆದಿತ್ಯವಾರದಂದು ಬೆಳಿಗ್ಗೆ ಗಂಟೆ 7ರಿಂದ ಆರಂಭಗೊಂಡ ಕೊಯ್ಲು ಕಾರ್ಯವು ಯುವವಾಹಿನಿಯ ಸದಸ್ಯರು ಉತ್ಸಾಹದೊಂದಿಗೆ ಮುಂದುವರೆಯಿತು. ಸುಮಾರು 45 ಮಂದಿ ಸದಸ್ಯರು ಈ ಅನನ್ಯ ಅವಕಾಶದಲ್ಲಿ ಸಾಕ್ಷಿಗಳಾದರು.
ಯುವವಾಹಿನಿ(ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲುಕೊಯ್ಲು ಕಾರ್ಯಕ್ಕೆ ಕತ್ತಿ ಮುಟ್ಟಾಳೆ ಧರಿಸಿ ಕಟಾವು ಮಾಡುವ ಮೂಲಕ ಚಾಲನೆ ನೀಡಿದರು ಜೊತೆಯಲ್ಲಿ ಶಶಿಧರ್ ಕಿನ್ನಿಮಜಲು,ಬಂಟ್ವಾಳ ಘಟಕದ ಉಪಾಧ್ಯಕ್ಷರಾದ ಸತೀಶ್ ಬಾಯಿಲ ಹಾಗೂ ಬಾಕಿಲ ಕುಟುಂಬದ ಜನಾರ್ದನ ಪೂಜಾರಿ, ವಸಂತ ಪೂಜಾರಿ ಜಲ್ಲಿ ಗುಡ್ಡೆ ,ಹರೀಶ್ NMPT ಉಪಸ್ಥಿತರಿದ್ದರು.ಮಾಣಿ ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ರಾಜೇಶ್ ಬಾಬನಕಟ್ಟೆ,ಕಾರ್ಯದರ್ಶಿ ಸುಜಿತ್ ಅಂಚನ್,ಉಪಾಧ್ಯಕ್ಷರಾದ ರಮೇಶ್ ಮುಜಲ,ಪ್ರಶಾಂತ್ ಪುಂಜಾವು, ಕೋಶಾಧಿಕಾರಿ ಶಿವರಾಜ್ P.R ಇದ್ದರು.ಸಂಚಾಲಕರಾಗಿ ರಾಜೇಶ್ ಪರಾಜೆ ಮತ್ತು ಮಹಾಬಲ ಪೂಜಾರಿ ಬಾಕಿಲ ಅಯ್ಕೆ ಮಾಡಲಾಗಿತ್ತು.
ಕೊಯ್ಲಿನ ನಂತರ ದೊರೆತ ಭತ್ತದ ಸಮಾಜದ ಬಡವರಿಗೆ ದಾನ ಮಾಡುವುದೆಂದು,ಉಳಿದ ಭತ್ತವನ್ನು ಬಾಕಿಲ ಕೋಟಿ ಚೆನ್ನಯ ಗರಡಿ,ಶ್ರೀ ಉಳ್ಳಾಲ್ತಿ ವೈದ್ಯನಾಥ ಮತ್ತು ಸ್ಥಳ ದೈವ ದೇವರುಗಳ ಬ್ರಹ್ಮಕಲಶೊತ್ಸವದ ಆನ್ನದಾನಕ್ಕೆ ಬಳಸಿಕೊಳ್ಳುವ ನಿರ್ಧಾರವನ್ನು ಯುವವಾಹಿನಿ(ರಿ.)ಮಾಣಿ ಘಟಕ ಹಾಕಿಕೊಂಡಿದೆ.