ಮಂಗಳೂರು : ತುಳುನಾಡು ಮೂಲತಃ ಮಾತೃಮೂಲ ಸಂಸ್ಕ್ರತಿಯ ನಾಡು. ಇಲ್ಲಿ ಮಹಿಳೆಗೆ ಉನ್ನತ ಸ್ಥಾನವಿದೆ. ಹೆಣ್ಣು ತುಳುನಾಡಿನ ಸಂಸ್ಕ್ರತಿಯ ಗುರಿಕಾರ್ತಿಯಾಗಿದ್ದಾಳೆ ಎಂದರಲ್ಲದೆ, ತುಳು ಹಬ್ಬಗಳನ್ನು ಸಾಮೂಹಿಕ ನೆಲೆಯಲ್ಲಿ ಆಚರಿಸುವ ಅಗತ್ಯವಿದೆ ಎಂದು ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಸುಧಾಕರ ಸುವರ್ಣ ಹೇಳಿದರು.
ಮಂಗಳೂರು ಉರ್ವಾಸ್ಟೋರ್‍ನಲ್ಲಿರುವ ತುಳು ಭವನದಲ್ಲಿ ದಿನಾಂಕ 21.04.2019 ರಂದು ನಡೆದ ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ 2019-20ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.
ಬಹುಸಂಸ್ಕ್ರತಿಗಳು ಸೇರಿ ಭಾರತೀಯ ಸಂಸ್ಕ್ರತಿ ರೂಪಗೊಂಡಿದೆ. ಈ ಬಹುಸಂಸ್ಕತಿ ಉಳಿದರೆ ಮಾತ್ರ ಭಾರತೀಯ ಸಂಸ್ಕ್ರತಿ ಉಳಿಯುತ್ತದೆ ಮತ್ತು ಭಾರತೀಯ ಸಂಸ್ಕ್ರತಿಯ ಮೌಲ್ಯ ಉಳಿಯುತ್ತದೆ. ನಮ್ಮ ಸಂಸ್ಕ್ರತಿ ಉಳಿಸಬೇಕು ಎಂಬ ಕೂಗು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಇದು ಉತ್ತಮ ಬೆಳವಣಿಗೆಯಾದರೂ, ನಮ್ಮ ಸಂಸ್ಕ್ರತಿ ಯಾವುದು ಎಂಬುದನ್ನು ವಿಂಗಡಣೆ ಮಾಡಿಕೊಳ್ಳುವಲ್ಲಿ ನಾವು ಸೋತಿರುವುದು ಕಾಣುತ್ತಿದೆ. ತುಳುನಾಡಿನಲ್ಲಿ ಸಾವಿರಾರು ವರ್ಷಗಳಿಂದ ಸಮೃದ್ಧವಾದ ತೌಳವ ಸಂಸ್ಕ್ರತಿ ಬೆಳೆದು ಬಂದಿದೆ. ಇದನ್ನು ಆಧುನಿಕತೆಯ ಭರಾಟೆಯಲ್ಲಿ ನಾವು ಮರೆಯುತ್ತಿದ್ದೇವೆ. ಇದರ ಬದಲಾಗಿ ಶಾಸ್ತ್ರೀಯ ರೂಪದಲ್ಲಿ ಉಳಿದು ಬಂದುದನ್ನೇ ನಮ್ಮ ಸಂಸ್ಕ್ರತಿ ಎಂದು ಭಾವಿಸಿಕೊಂಡು ಅದನ್ನು ಅನುಸರಿಸುತ್ತಾ ನಾವು ನಮ್ಮ ಸಂಸ್ಕ್ರತಿ ಉಳಿಸುತ್ತಿದ್ದೇವೆ ಎಂಬ ಭ್ರಮೆಯಲ್ಲಿ ತೇಲಾಡುತ್ತಿದ್ದೇವೆ. ತುಳುವರು ತುಳು ಸಂಸ್ಕ್ರತಿ ಉಳಿಸುವ ಬದಲು, ಇನ್ನಾವುದೋ ಶಾಸ್ತ್ರೀಯ ಚೌಕಟ್ಟಿನ ಸಂಸ್ಕ್ರತಿಯ ವ್ಯಾಮೋಹ ಹಚ್ಚಿಕೊಂಡರೆ ತುಳು ಸಂಸ್ಕ್ರತಿ ಉಳಿಸುವವರು ಯಾರು? ಈ ಕೆಲಸವನ್ನು ನಾವು ಮಾಡಬೇಕಲ್ಲದೆ, ಇನ್ನಾರಾದರೂ ಮಾಡಲು ಸಾಧ್ಯವೇ? ತುಳು ಸಂಸ್ಕ್ರತಿ ಎಂದರೆ ಬೇರೇನೂ ಅಲ್ಲ. ನಮ್ಮ ಹಿರಿಯರು ಬದುಕಿದ ರೀತಿ. ಅವರ ಆಚಾರ, ವಿಚಾರ, ಭಾಷೆ, ಪದ್ಧತಿ, ಪರಂಪರೆ ಇವೆಲ್ಲವೂ ತುಳು ಸಂಸ್ಕ್ರತಿ. ಇವುಗಳನ್ನು ಮೂಲ ರೂಪದಲ್ಲಿ ಉಳಿಸಿಕೊಂಡರೆ ತುಳು ಸಂಸ್ಕ್ರತಿ ರಕ್ಷಣೆಯಾಗುತ್ತದೆ. ಆಗ ಭಾರತೀಯ ಸಂಸ್ಕ್ರತಿಯ ರಕ್ಷಣೆಯಾದಂತೆ. ತುಳು ಸಂಸ್ಕ್ರತಿಯನ್ನು ಬಲಿಕೊಟ್ಟು ನಾವು ಇನ್ನಾವುದೋ ಸಂಸ್ಕ್ರತಿಯ ವಾರೀಸುದಾರರಂತೆ ವರ್ತಿಸಿದರೆ ಅದರಿಂದ ಭಾರತೀಯ ಸಂಸ್ಕ್ರತಿಯ ಬಹುತ್ವಕ್ಕೂ ನಷ್ಟ, ತುಳು ಸಂಸ್ಕ್ರತಿಗೂ ನಷ್ಟ. ಯುವವಾಹಿನಿಯಂತಹ ಸಂಸ್ಥೆಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದವರು ನುಡಿದರು.
ಕುದ್ರೋಳಿ ನಾರಾಯಣಗುರು ಕಾಲೇಜಿನ ಉಪನ್ಯಾಸಕಿ, ಲಯನ್ಸ್ ಪ್ರಾಂತ್ಯಾಧ್ಯಕ್ಷರಾದ ಶಕೀಲಾ ರಾಜ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಗೆ ಅವಕಾಶಗಳು ಸಿಗುವುದು ಹಿಂದೆ ಕಡಿಮೆಯಿದ್ದರೂ ಈಗ ಹಾಗಿಲ್ಲ. ಮಹಿಳೆ ಪ್ರಸ್ತುತ ಸಮಾಜದಲ್ಲಿ ಉನ್ನತ ಸಾಧನೆ ಮಾಡುತ್ತಿದ್ದಾಳೆ. ಮಹಿಳಾ ಯುವವಾಹಿನಿ ಘಟಕ ಕಳೆದ 23 ವರ್ಷಗಳಿಂದ ಮಾಡುತ್ತಿರುವ ಸಾಧನೆ ನಿಜಕ್ಕೂ ಶ್ಲಾಘನೀಯ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕ್ಯಾಟರಿಂಗ್ ಮಾಲಕರ ಅಸೋಸಿಯೇಶನ್ ಅಧ್ಯಕ್ಷ ಸತೀಶ್ ಬೋಳಾರ್ ಮಾತನಾಡಿ, ಮಹಿಳೆ ಸಂಸಾರದ ಕಣ್ಣು ಮಾತ್ರವಲ್ಲ ಸಮಾಜದ ಬೆಳಕು. ಮಹಿಳೆಯ ಕೊಡುಗೆ, ಆಕೆಯ ತ್ಯಾಗ, ಸಹನೆ ಶೀಲತೆಯಿಂದಾಗಿಯೇ ಪುರುಷ ಸಮಾಜ ಸಾಧನೆ ಮಾಡಲು ಸಾಧ್ಯವಾಗಿದೆ. ಯುವವಾಹಿನಿ ಸಂಸ್ಥೆ ಕಳೆದ ಮೂರು ದಶಕಗಳಿಂದ ಸಚ್ಚಾರಿತ್ರ್ಯವಂತ ಯುವ ಪಡೆಯನ್ನು ನಿರ್ಮಿಸುತ್ತಾ ಬಂದಿದೆ ಎಂದರು.
ಯುವವಾಹಿನಿ ಮಹಿಳಾ ಘಟಕದ ಸಲಹೆಗಾರರಾದ ಜಿತೇಂದ್ರ ಸುವರ್ಣ ಗೌರವ ಉಪಸ್ಥಿತರಿದ್ದರು.
ಮಹಿಳಾ ಘಟಕದ 2018-19ನೇ ಸಾಲಿನ ಅಧ್ಯಕ್ಷೆ ರಶ್ಮಿ ಸಿ. ಕರ್ಕೆರಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಒಂದು ವರ್ಷದಲ್ಲಿ ನಮ್ಮ ತಂಡ ಹತ್ತು ಹಲವು ಅತ್ಯುತ್ತಮ ಕೆಲಸಗಳನ್ನು ಮಾಡಿದೆ. ಈ ಮೂಲಕ ಯುವವಾಹಿನಿಯ ಧ್ಯೇಯವಾಕ್ಯವನ್ನು ಇನ್ನಷ್ಟು ಅರ್ಥಪೂರ್ಣಗೊಳಿಸುವ ಕೆಲಸ ಮಾಡಿದ್ದೇವೆ. ಇದಕ್ಕೆ ಸಹಕರಿಸಿದ ಎಲ್ಲ ಪದಾಧಿಕಾರಿಗಳು, ಸದಸ್ಯರು ಅಭಿನಂದನಾರ್ಹರು ಎಂದರು.
ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ 2019-20 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಘಟಕದ ಮಾಜಿ ಅದ್ಯಕ್ಷರಾದ ಸುಪ್ರೀತಾ ಪೂಜಾರಿ ಪರಿಚಯಿಸಿದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ ನಡುಬೈಲ್ ಅವರು ಮಹಿಳಾ ಘಟಕದ 2019-20ನೇ ಸಾಲಿನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
2019-20 ನೇ ಸಾಲಿನ ನೂತನ ಅಧ್ಯಕ್ಷರಾಗಿ ಉಮಾ ಶ್ರೀಕಾಂತ್ ನೇತ್ರತ್ವದ ತಂಡವು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಸರ್ವರ ಸಲಹೆ, ಸೂಚನೆ , ಮಾರ್ಗದರ್ಶನದಲ್ಲಿ ಯುವವಾಹಿನಿ ಮಂಗಳೂರು ಮಹಿಳಾ ಘಟಕವನ್ನು ಯಶಸ್ಸಿನ ಪಥದತ್ತ ಮುನ್ನಡೆಸುವ ಆಶಯವನ್ನು ನೂತನ ಅಧ್ಯಕ್ಷರಾದ ಉಮಾ ಶ್ರೀಕಾಂತ್ ವ್ಯಕ್ತಪಡಿಸಿದರು.
ಯುವವಾಹಿನಿ ಪ್ರಸ್ತುತ 34 ಘಟಕಗಳನ್ನು ಹೊಂದಿದೆ. ಅದರಲ್ಲಿ ಏಕೈಕ ಮಹಿಳಾ ಘಟಕ ಇದಾಗಿದ್ದು, ಅತ್ಯುತ್ತಮ ಸೇವೆ ಸಲ್ಲಿಸುತ್ತಾ ಬಂದಿದೆ. ಈ ಬಾರಿ ಇತರ ಘಟಕಗಳಲ್ಲೂ ಮಹಿಳಾ ಅಧ್ಯಕ್ಷರು ಆಯ್ಕೆಯಾಗಿದ್ದಾರೆ. ಇದು ಮೆಚ್ಚಬೇಕಾಗ ಸಂಗತಿ ಎಂದು ಜಯಂತ ನಡುಬೈಲ್ ಹೇಳಿದರು.
ಸೌಭಾಗ್ಯ ನಿಧಿ ಹಾಗೂ ವಿದ್ಯಾನಿದಿ ಹಸ್ತಾಂತರ
ಯುವವಾಹಿನಿ ಮಹಿಳಾ ಘಟಕದ ಸೌಭಾಗ್ಯ ನಿಧಿಯಿಂದ ಹೊಸ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಬಡ ಕುಟುಂಬದ ಮಮತಾ ಅವರಿಗೆ ನಿಧಿ ಹಸ್ತಾಂತರಿಸಲಾಯಿತು.
ಬಡತನ ಅಡ್ಡಿಯಾದರೂ ಅದನ್ನು ಮೆಟ್ಟಿ ನಿಂತು ಇತ್ತೀಚೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 90 ಕ್ಕಿಂತಲೂ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಾದ ಲಿಖಿತಾ ನಾರಾಯಣ ಪೂಜಾರಿ , ಸೈಲಿ ವಿಠಲ್ ಸುವರ್ಣ, ಶಮಿತ್. ಕರ್ಕೇರ, ದಿವ್ಯಶ್ರೀ ಪೂಜಾರಿ ಹಾಗೂ ಶ್ವೇತಾ ಇವರಿಗೆ ರೂಪಾಯಿ 25,000/- ಮೊತ್ತದ ವಿದ್ಯಾನಿಧಿ ಹಸ್ತಾಂತರ ಮತ್ತು ಅಭಿನಂದನೆ ಕಾರ್ಯಕ್ರಮ ನಡೆಯಿತು.
2018-19ನೇ ಸಾಲಿನಲ್ಲಿ ಕಾರ್ಯ ನಿರ್ವಹಿಸಿದ ಎಲ್ಲ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಅಧ್ಯಕ್ಷೆ ರಶ್ಮೀ ಸಿ. ಕರ್ಕೆರಾ ಸ್ಮರಣಿಕೆ ನೀಡಿ ಗೌರವಿಸಿದರು. ಕಳೆದ ಸಾಲಿನಲ್ಲಿ ಸಲಹೆಗಾರರಾಗಿ ಸೇವೆ ಸಲ್ಲಿಸಿದ ಪರಮೇಶ್ವರ ಪೂಜಾರಿ, ನಿರ್ಗಮನ ಅಧ್ಯಕ್ಷೆ ರಶ್ಮೀ ಸಿ. ಕರ್ಕೆರಾ ಅವರನ್ನು ಮಹಿಳಾ ಘಟಕದ ಸರ್ವ ಸದಸ್ಯರ ವತಿಯಿಂದ ದಂಪತಿ ಸಹಿತ ಸನ್ಮಾನಿಸಲಾಯಿತು.
ಯುವವಾಹಿನಿಯ ವಿವಿಧ ಘಟಕಗಳ ಅಧ್ಯಕ್ಷರು ಮಹಿಳಾ ಘಟಕದ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಯುವವಾಹಿನಿ ಮಂಗಳೂರು ಮಹಿಳಾ ಘಟಕದ 2018-19 ನೇ ಸಾಲಿನ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ರವಿಕಲಾ.ವೈ.ಅಮೀನ್ ಸಾಕ್ಷ್ಯ ಚಿತ್ರಗಳ ಮೂಲಕ ಮಂಡಿಸಿದರು. ಘಟಕದ ಕೋಶಾಧಿಕಾರಿ ಕುಶಾಲಾಕ್ಷಿ ಯಶವಂತ್ ಸ್ವಾಗತಿಸಿದರು, ನೂತನ ಉಪಾಧ್ಯಕ್ಷರಾದ ಶುಭಾ ರಾಜೇಂದ್ರ ಪ್ರಸ್ತಾವನೆ ಮಾಡಿದರು, ನೂತನ ಕಾರ್ಯದರ್ಶಿ ನೈನಾ ವಿಶ್ವನಾಥ್ ಧನ್ಯವಾದ ನೀಡಿದರು, ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.